ಐಪಿಎಲ್ ಹರಾಜಿನಲ್ಲಿ ಈ 4 ಫಾರಿನ್ ಆಟಗಾರರನ್ನು ಖರೀದಿಸಿದ್ರೆ, ಈ ಸಲ ಕಪ್ ಆರ್‌ಸಿಬಿಯದ್ದೇ!

By Naveen Kodase  |  First Published Nov 17, 2024, 5:13 PM IST

ನವೆಂಬರ್ 24 ಹಾಗೂ 25ರಂದು ನಡೆಯಲಿರುವ ಐಪಿಎಲ್ ಆಟಗಾರರ ಹರಾಜಿನಲ್ಲಿ ಆರ್‌ಸಿಬಿ ಫ್ರಾಂಚೈಸಿಯು ಈ ನಾಲ್ವರು ವಿದೇಶಿ ಆಟಗಾರರನ್ನು ಖರೀದಿಸಿದರೆ ಮತ್ತಷ್ಟು ಬಲಾಢ್ಯವಾಗಿ ಹೊರಹೊಮ್ಮಲಿದೆ. 


ಬೆಂಗಳೂರು: 2025ನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ಆಟಗಾರರ ಹರಾಜಿಗೆ ಕ್ಷಣಗಣನೆ ಆರಂಭವಾಗಿದೆ. ಮುಂಬರುವ ನವೆಂಬರ್ 24 ಹಾಗೂ 25ರಂದು ಸೌದಿ ಅರೇಬಿಯಾದ ಜೆಡ್ಡಾದಲ್ಲಿ ಐಪಿಎಲ್ ಮೆಗಾ ಹರಾಜು ನಡೆಯಲಿದೆ. ಇನ್ನು ಚೊಚ್ಚಲ ಐಪಿಎಲ್ ಟ್ರೋಫಿ ಕನವರಿಕೆಯಲ್ಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು, ಮೆಗಾ ಹರಾಜಿಗೂ ಮುನ್ನ ಸಾಕಷ್ಟು ಅಳೆದು ತೂಗಿ ಮೂರು ಆಟಗಾರರನ್ನು ರೀಟೈನ್ ಮಾಡಿಕೊಂಡಿದ್ದು, ಮೆಗಾ ಹರಾಜಿಗಾಗಿ ಬರೋಬ್ಬರಿ 83 ಕೋಟಿ ರುಪಾಯಿಗಳನ್ನು ಪರ್ಸ್‌ನಲ್ಲಿ ಉಳಿಸಿಕೊಂಡಿದೆ.

ಹೌದು, ಆರ್‌ಸಿಬಿ ಫ್ರಾಂಚೈಸಿಯು ಮೆಗಾ ಹರಾಜಿಗೂ ಮುನ್ನ ವಿರಾಟ್ ಕೊಹ್ಲಿ(21 ಕೋಟಿ ರುಪಾಯಿ), ರಜತ್ ಪಾಟೀದಾರ್(11 ಕೋಟಿ ರುಪಾಯಿ) ಹಾಗೂ ಯಶ್ ದಯಾಳ್(5 ಕೋಟಿ ರುಪಾಯಿ) ಹೀಗೆ 120 ಕೋಟಿಯ ಪೈಕಿ 37 ಕೋಟಿ ರುಪಾಯಿ ರೀಟೈನ್‌ಗೆ ಬಳಸಿದೆ. ಇದೀಗ ಐಪಿಎಲ್ ಮೆಗಾ ಹರಾಜಿನಲ್ಲಿ ಸೂಕ್ತ ಆಟಗಾರರನ್ನು ಖರೀದಿಸಲು ರಣತಂತ್ರ ಹೆಣೆಯಲಾರಂಭಿಸಿದೆ. ಇನ್ನು ಆರ್‌ಸಿಬಿ ತಂಡವು ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಅತ್ಯುತ್ತಮ ಆಟಗಾರರನ್ನು ಖರೀದಿಸಲು ಸುವರ್ಣಾವಕಾಶವಿದೆ. ಇದರ ಜತೆಗೆ ಫ್ರಾಂಚೈಸಿ ಪರ್ಸ್ ಕೂಡಾ ದೊಡ್ಡದಿರುವುದರಿಂದ ಈ ನಾಲ್ವರು ವಿದೇಶಿ ಆಟಗಾರರನ್ನು ಖರೀದಿಸಿದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಹಿಂದೆಂದಿಗಿಂತಲೂ ಬಲಿಷ್ಠವಾಗಲಿದೆ. ಇದರ ಜತೆಗೆ ಚೊಚ್ಚಲ ಐಪಿಎಲ್ ಟ್ರೋಫಿ ಬರ ನೀಗಿಸಿಕೊಳ್ಳಲು ಸಹಕಾರಿಯಾಗಲಿದೆ.

Latest Videos

undefined

ಐಪಿಎಲ್ ಮೆಗಾ ಹರಾಜಿನಲ್ಲಿ ಈ ಬಿಗ್ ಸ್ಟಾರ್ಸ್‌ ಹೆಸರು ನಾಪತ್ತೆ! ಈ ಪಟ್ಟಿಯಲ್ಲಿದ್ದಾರೆ ಏಕೈಕ RCB ಆಟಗಾರ

ಅಷ್ಟಕ್ಕೂ ಆರ್‌ಸಿಬಿ ಯಾವೆಲ್ಲಾ ವಿದೇಶಿ ಆಟಗಾರರನ್ನು ಖರೀದಿಸಬೇಕು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.

1. ಜೋಸ್ ಬಟ್ಲರ್:

ಇಂಗ್ಲೆಂಡ್ ತಂಡದ ನಾಯಕ ಜೋಸ್ ಬಟ್ಲರ್ ಚುಟುಕು ಕ್ರಿಕೆಟ್‌ನಲ್ಲಿ ಎಷ್ಟು ಅಪಾಯಕಾರಿ ಬ್ಯಾಟರ್ ಎನ್ನುವುದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಬಟ್ಲರ್ ತಮ್ಮ ಸ್ಪೋಟಕ ಬ್ಯಾಟಿಂಗ್ ಮೂಲಕ ಪಂದ್ಯದ ದಿಕ್ಕನ್ನೇ ಬಲಿಸುವ ಸಾಮರ್ಥ್ಯ ಹೊಂದಿದ್ದಾರೆ. ದೊಡ್ಡ ಇನ್ನಿಂಗ್ಸ್ ಆಡುವ ಕ್ಷಮತೆ ಹೊಂದಿರುವ ಬಟ್ಲರ್ ಯಾವುದೇ ಕ್ರಮಾಂಕದಲ್ಲಿ ಬೇಕಿದ್ದರೂ ಲೀಲಾಜಾಲವಾಗಿ ಬ್ಯಾಟ್ ಬೀಸುವ ಸಾಮರ್ಥ್ಯ ಹೊಂದಿದ್ದಾರೆ. ಇದರ ಜತೆಗೆ ವಿಕೆಟ್ ಕೀಪರ್ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತಾರೆ. ಇನ್ನು ಇಂಗ್ಲೆಂಡ್‌ಗೆ ಟಿ20 ವಿಶ್ವಕಪ್ ಗೆದ್ದುಕೊಟ್ಟಿರುವ ನಾಯಕ ಬಟ್ಲರ್, ಆರ್‌ಸಿಬಿ ತಂಡದ ನಾಯಕರಾಗಿಯೂ ಯಶಸ್ವಿಯಾಗಲು ಒಳ್ಳೆಯ ಅವಕಾಶವಿದೆ. ಆದರೆ ಆರ್‌ಸಿಬಿ ಫ್ರಾಂಚೈಸಿ ಬಟ್ಲರ್ ಖರೀದಿಸಲು ಮನಸ್ಸು ಮಾಡಬೇಕಷ್ಟೇ.

2. ವಿಲ್ ಜ್ಯಾಕ್ಸ್‌:

ಇಂಗ್ಲೆಂಡ್ ಮೂಲದ ಮತ್ತೋರ್ವ ಸ್ಪೋಟಕ ಬ್ಯಾಟರ್ ಆಗಿರುವ ವಿಲ್ ಜ್ಯಾಕ್ಸ್ ಅವರನ್ನು ಆರ್‌ಸಿಬಿ ಫ್ರಾಂಚೈಸಿಯು ಅಚ್ಚರಿಯ ರೀತಿಯಲ್ಲಿ ಬಿಡುಗಡೆ ಮಾಡಿದೆ. ಕಳೆದ ಆವೃತ್ತಿಯಲ್ಲಿ ಗುಜರಾತ್ ಟೈಟಾನ್ಸ್ ಎದುರು ಜ್ಯಾಕ್ಸ್ ಸ್ಪೋಟಕ ಬ್ಯಾಟಿಂಗ್ ಯಾರೂ ಮರೆಯಲು ಸಾಧ್ಯವಿಲ್ಲ. ಅಪಾಯಕಾರಿ ಬ್ಯಾಟರ್ ಹಾಗೂ ಉಪಯುಕ್ತ ಸ್ಪಿನ್ನರ್ ಆಗಿಯು ತಂಡಕ್ಕೆ ನೆರವಾಗಬಲ್ಲ ವಿಲ್ ಜ್ಯಾಕ್ಸ್ ಅವರನ್ನು ಆರ್‌ಟಿಎಂ ಕಾರ್ಡ್ ಬಳಸಿ ರೀಟೈನ್ ಮಾಡಿಕೊಂಡರೇ ಆರ್‌ಸಿಬಿ ಅಗ್ರ ಕ್ರಮಾಂಕ ಇನ್ನಷ್ಟು ಬಲಶಾಲಿಯಾಗಲಿದೆ.

ಐಪಿಎಲ್‌ ಹರಾಜಿನ ಫೈನಲ್ ಲಿಸ್ಟ್ ಔಟ್; ಕರ್ನಾಟಕದ 24 ಮಂದಿ ಸೇರಿ 574 ಆಟಗಾರರು ಭಾಗಿ!

3. ಲಿಯಾಮ್‌ ಲಿವಿಂಗ್‌ಸ್ಟೋನ್:

ಇಂಗ್ಲೆಂಡ್ ಮೂಲದ ಇನ್ನೋರ್ವ ಸ್ಟಾರ್ ಆಲ್ರೌಂಡರ್ ಲಿಯಾಮ್ ಲಿವಿಂಗ್‌ಸ್ಟೋನ್ ಕಳೆದ ಆವೃತ್ತಿಯ ಐಪಿಎಲ್‌ನಲ್ಲಿ ಪಂಜಾಬ್ ಕಿಂಗ್ಸ್ ಪರ ನಿರಾಶಾದಾಯಕ ಪ್ರದರ್ಶನ ತೋರಿದ್ದರು. ಹೀಗಾಗಿ ಪಂಜಾಬ್ ಫ್ರಾಂಚೈಸಿಯು ಲಿವಿಂಗ್‌ಸ್ಟೋನ್ ಅವರನ್ನು ರಿಲೀಸ್ ಮಾಡಿದೆ. ಆದರೆ ಲಿವಿಂಗ್‌ಸ್ಟೋನ್ ಅತ್ಯುತ್ತಮ ಮ್ಯಾಚ್ ಫಿನಿಶರ್ ಆಗಿ ಗುರುತಿಸಿಕೊಂಡಿದ್ದು, ಆರ್‌ಸಿಬಿ ತಂಡ ಕೂಡಿಕೊಂಡರೇ ಮಧ್ಯಮ ಕ್ರಮಾಂಕ ಮತ್ತಷ್ಟು ಬಲಾಢ್ಯಗೊಳ್ಳಲಿದೆ. ಇನ್ನು ಲಿವಿಂಗ್‌ಸ್ಟೋನ್ ಪಾರ್ಟ್‌ಟೈಮ್ ಸ್ಪಿನ್ನರ್ ಆಗಿಯೂ ತಂಡಕ್ಕೆ ಆಸರೆಯಾಗಬಲ್ಲರು. ಹೀಗಾಗಿ ಲಿವಿಂಗ್‌ಸ್ಟೋನ್ ಖರೀದಿಸಲು ಆರ್‌ಸಿಬಿ ಮನಸ್ಸು ಮಾಡಬೇಕಿದೆ.

4. ಟ್ರೆಂಟ್‌ ಬೌಲ್ಟ್‌:

ನ್ಯೂಜಿಲೆಂಡ್ ಮೂಲದ ಎಡಗೈ ಮಾರಕ ವೇಗಿ ಟ್ರೆಂಟ್ ಬೌಲ್ಟ್, ಚುಟುಕು ಕ್ರಿಕೆಟ್‌ಗೆ ಹೇಳಿ ಮಾಡಿಸಿದ ಬೌಲರ್ ಆಗಿದ್ದಾರೆ. ಸ್ವಿಂಗ್ ಹಾಗೂ ಕರಾರುವಕ್ಕಾದ ದಾಳಿಗೆ ಹೆಸರುವಾಸಿಯಾಗಿರುವ ಬೌಲ್ಟ್‌ ಪವರ್‌ ಪ್ಲೇನಲ್ಲೇ ಎದುರಾಳಿ ಬ್ಯಾಟರ್ ಎದೆಯಲ್ಲಿ ನಡುಕ ಹುಟ್ಟಿಸಬಲ್ಲ ಆಟಗಾರನಾಗಿದ್ದಾರೆ. ಕಳೆದ ಆವೃತ್ತಿಯಲ್ಲಿ ರಾಜಸ್ಥಾನ ರಾಯಲ್ಸ್ ತಂಡವನ್ನು ಪ್ರತಿನಿಧಿಸಿದ್ದ ಬೌಲ್ಟ್, ಈ ಬಾರಿ ಆರ್‌ಸಿಬಿ ತಂಡ ಕೂಡಿಕೊಳ್ಳಲು ಅವಕಾಶವಿದೆ. ಯಾಕೆಂದರೆ ರಾಜಸ್ಥಾನ ಬೌಲ್ಟ್‌ಗೆ ಆರ್‌ಟಿಎಂ ಬಳಸಲು ಅವಕಾಶವಿಲ್ಲ.

ಒಂದು ವೇಳೆ ಬೌಲ್ಟ್ ಹರಾಜಿನಲ್ಲಿ ಖರೀದಿಸಲು ಸಾಧ್ಯವಾಗದೇ ಹೋದರೇ ಜೋಶ್ ಹೇಜಲ್‌ವುಡ್ ಇಲ್ಲವೇ ಮಿಚೆಲ್ ಸ್ಟಾರ್ಕ್ ಅವರನ್ನು ಖರೀದಿಸಿದರೂ ಆರ್‌ಸಿಬಿ ಮತ್ತಷ್ಟು ಬಲಾಢ್ಯವಾಗಲಿದೆ. ಆದರೆ ಅಲ್ಜಾರಿ ಜೋಸೆಫ್ ಅವರಂತಹ ಬೌಲರ್‌ಗೆ 11.5 ಕೋಟಿ ನೀಡಿ ಖರೀದಿಸುವ ಆರ್‌ಸಿಬಿ ಫ್ರಾಂಚೈಸಿ, ಈ ಮೇಲಿನ ಆಟಗಾರರನ್ನು ಖರೀದಿಸಲು ಮನಸ್ಸು ಮಾಡುತ್ತಾ ಎನ್ನುವ ಪ್ರಶ್ನೆಗೆ ನವೆಂಬರ್ 24-25ರ ವರೆಗೆ ಕಾಯಲೇಬೇಕಾಗುತ್ತದೆ.
 

click me!