
ಒಂದೆಡೆ ಪಾಕಿಸ್ತಾನದ ಮಾಜಿ ಪ್ರಧಾನಿ ಹಾಗೂ ಕ್ರಿಕೆಟ್ ದಿಗ್ಗಜ ಇಮ್ರಾನ್ ಖಾನ್ ಜೈಲಿನಲ್ಲಿದ್ದು, ಅವರ ಆರೋಗ್ಯ ಸ್ಥಿತಿಯ ಕುರಿತು ತೀವ್ರ ಕಳವಳ ವ್ಯಕ್ತವಾಗುತ್ತಿದೆ. ಮತ್ತೊಂದೆಡೆ, ಅವರ ಬಿಡುಗಡೆಗಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಧ್ವನಿ ಎತ್ತಿದ್ದ ಮಾಜಿ ಪತ್ನಿ ಜೆಮಿಮಾ ಗೋಲ್ಡ್ ಸ್ಮಿತ್ ಅವರು ಇದೀಗ ಮರುಮದುವೆಯಾಗುವ ಮೂಲಕ ಹೊಸ ಬಾಳಿಗೆ ಕಾಲಿಟ್ಟಿದ್ದಾರೆ.
ಪಾಕಿಸ್ತಾನದ ಅದ್ಯಾಲ ಜೈಲಿನಲ್ಲಿರುವ ಇಮ್ರಾನ್ ಖಾನ್ ಅವರ ಆರೋಗ್ಯ ಕ್ಷೀಣಿಸುತ್ತಿದ್ದು, ಅವರಿಗೆ ಸೂಕ್ತ ವೈದ್ಯಕೀಯ ಚಿಕಿತ್ಸೆ ನೀಡಬೇಕು ಎಂದು ಒತ್ತಾಯಿಸಿ ವಿಶ್ವದ ಹಲವು ಹಿರಿಯ ಮಾಜಿ ಕ್ರಿಕೆಟಿಗರು ಪಾಕಿಸ್ತಾನ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಈ ನಡುವೆ, ಜೈಲಿನಲ್ಲಿರುವ ಇಮ್ರಾನ್ ಖಾನ್ ಅವರ ಬಿಡುಗಡೆಗಾಗಿ ಅವರ ಮಾಜಿ ಪತ್ನಿ ಜೆಮಿಮಾ ಮತ್ತು ಇವರ ಮಕ್ಕಳಾದ ಸುಲೇಮಾನ್ ಹಾಗೂ ಖಾಸಿಮ್ ನಿರಂತರವಾಗಿ ಜಾಗತಿಕ ಮಟ್ಟದಲ್ಲಿ ಪ್ರಚಾರ ಪ್ರಚಾರ ನಡೆಸುತ್ತಿದ್ದರು. ಆದರೆ, ಈ ಪ್ರಚಾರ ಕಾರ್ಯಗಳು ನಡೆಯುತ್ತಿರುವಾಗಲೇ ಜೆಮಿಮಾ ತಮ್ಮ 52ನೇ ವಯಸ್ಸಿನಲ್ಲಿ ಎರಡನೇ ಬಾರಿಗೆ ವಿವಾಹವಾಗಿದ್ದಾರೆ.
ಜೆಮಿಮಾ ಗೋಲ್ಡ್ ಸ್ಮಿತ್ ಅವರು 62 ವರ್ಷದ ಐರಿಶ್-ಆಸ್ಟ್ರೇಲಿಯನ್ ಮೂಲದ ಖ್ಯಾತ ಫೈನಾನ್ಶಿಯರ್ ಕ್ಯಾಮರೂನ್ ಒ'ರೈಲಿ ಅವರನ್ನು ಮದುವೆಯಾಗಿದ್ದಾರೆ. ಕ್ಯಾಮರೂನ್ ಅವರು ದಿವಂಗತ ಐರಿಶ್ ಮಾಧ್ಯಮ ಉದ್ಯಮಿ ಹಾಗೂ ಮಾಜಿ ಅಂತರರಾಷ್ಟ್ರೀಯ ರಗ್ಬಿ ಆಟಗಾರ ಸರ್ ಆಂಥೋನಿ ಒ'ರೈಲಿ ಅವರ ಪುತ್ರ. ಡೈಲಿ ಮೇಲ್ ವರದಿಯ ಪ್ರಕಾರ, ಕಳೆದೆರಡು ದಿನಗಳ ಹಿಂದೆ ವಾರಾಂತ್ಯದಲ್ಲಿ ಅತ್ಯಂತ ಖಾಸಗಿಯಾಗಿ ಈ ವಿವಾಹ ಮಹೋತ್ಸವ ನಡೆದಿದೆ. ಜೆಮಿಮಾ ಅವರ ಸಹೋದರ ಬೆನ್ ಗೋಲ್ಡ್ ಸ್ಮಿತ್ ಕೂಡ ಈ ಮದುವೆಯ ಸುದ್ದಿಯನ್ನು ಮಾಧ್ಯಮಗಳಿಗೆ ದೃಢಪಡಿಸಿದ್ದಾರೆ.
ಮಾಧ್ಯಮ ವರದಿಗಳ ಪ್ರಕಾರ, ಜೆಮಿಮಾ ಮತ್ತು ಕ್ಯಾಮರೂನ್ ಒ'ರೈಲಿ ಅವರು ಚಲನಚಿತ್ರ ಹಾಗೂ ಸಾಕ್ಷ್ಯಚಿತ್ರ ನಿರ್ಮಾಣದ ಯೋಜನೆಗಳಲ್ಲಿ ಒಟ್ಟಿಗೆ ಕೆಲಸ ಮಾಡುತ್ತಿದ್ದಾಗ ಮೊದಲ ಬಾರಿಗೆ ಭೇಟಿಯಾಗಿದ್ದರು. ಆರಂಭದಲ್ಲಿ ಸಹೋದ್ಯೋಗಿಗಳಾಗಿ ಬೆಳೆದ ಈ ಪರಿಚಯ, ನಂತರ ಗಾಢ ಸ್ನೇಹಕ್ಕೆ ತಿರುಗಿ ಕೊನೆಗೆ ಪ್ರೀತಿಯಾಗಿ ಬದಲಾಯಿತು. ಕಳೆದೆರಡು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರೂ ತಮ್ಮ ಸಂಬಂಧವನ್ನು ಬಹಿರಂಗಪಡಿಸದೆ ರಹಸ್ಯವಾಗಿಟ್ಟಿದ್ದರು. ಕಳೆದ ಮೇ ತಿಂಗಳಲ್ಲಿ ಇಬ್ಬರ ನಿಶ್ಚಿತಾರ್ಥದ ಸುದ್ದಿ ಹೊರಬಿದ್ದಿತ್ತು, ಇದೀಗ ಅಧಿಕೃತವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
1995ರಲ್ಲಿ ಇಮ್ರಾನ್ ಖಾನ್ ಮತ್ತು ಜೆಮಿಮಾ ಗೋಲ್ಡ್ ಸ್ಮಿತ್ ವಿವಾಹವಾಗಿದ್ದರು. ಸುಮಾರು 9 ವರ್ಷಗಳ ಕಾಲ ಅನ್ಯೋನ್ಯವಾಗಿ ಬಾಳಿದ ಈ ದಂಪತಿ, 2004-2005ರ ಅವಧಿಯಲ್ಲಿ ತಮ್ಮ ವೈವಾಹಿಕ ಜೀವನಕ್ಕೆ ಅಂತ್ಯ ಹಾಡಿ ವಿಚ್ಛೇದನ ಪಡೆದರು. ಈ ದಂಪತಿಗೆ ಸುಲೇಮಾನ್ ಮತ್ತು ಖಾಸಿಮ್ ಎಂಬ ಇಬ್ಬರು ಗಂಡು ಮಕ್ಕಳಿದ್ದಾರೆ. ವಿಚ್ಛೇದನದ ನಂತರವೂ ಇಬ್ಬರೂ ಒಳ್ಳೆಯ ಸ್ನೇಹಿತರಾಗಿದ್ದರು.
2023 ರಿಂದ ಭ್ರಷ್ಟಾಚಾರ ಸೇರಿದಂತೆ ಹಲವು ಆರೋಪಗಳ ಅಡಿಯಲ್ಲಿ ಇಮ್ರಾನ್ ಖಾನ್ ಪಾಕಿಸ್ತಾನದ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾರೆ. ತಮ್ಮ ಮೇಲಿನ ಎಲ್ಲಾ ಆರೋಪಗಳನ್ನು ಇಮ್ರಾನ್ ನಿರಾಕರಿಸುತ್ತಲೇ ಬಂದಿದ್ದಾರೆ. ಇಮ್ರಾನ್ ಜೈಲು ಪಾಲಾದ ದಿನದಿಂದಲೂ ಜೆಮಿಮಾ ಹಾಗೂ ಅವರ ಮಕ್ಕಳು ಅವರ ಕಾನೂನು ಹೋರಾಟಕ್ಕೆ ಬೆಂಬಲವಾಗಿ ನಿಂತಿದ್ದರು. ಇದೀಗ ಇಮ್ರಾನ್ ಖಾನ್ ಜೈಲಿನಲ್ಲಿದ್ದಾಗ ಹಾಗೂ ಅವರ ಬಿಡುಗಡೆಗೆ ಪ್ರಚಾರ ನಡೆಯುತ್ತಿರುವಾಗಲೇ ಜೆಮಿಮಾ ಅವರ ಈ ಎರಡನೇ ಮದುವೆ ಜಾಗತಿಕ ಮಾಧ್ಯಮಗಳಲ್ಲಿ ಭಾರಿ ಗಮನ ಸೆಳೆದಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.