IPL Media Rights: ರೇಸ್‌ನಿಂದ ಹಿಂದೆ ಸರಿದ ಅಮೆಜಾನ್

By Naveen KodaseFirst Published Jun 11, 2022, 11:17 AM IST
Highlights

* 2023-27ರ ಅವಧಿಯ ಐಪಿಎಲ್ ಪ್ರಸಾರದ ಹಕ್ಕು ಪಡೆಯಲು ಹಲವು ಸಂಸ್ಥೆಗಳಿಂದ ಪೈಪೋಟಿ
* ಟೆಕ್ನಿಕಲ್ ಬಿಡ್ಡಿಂಗ್‌ನಲ್ಲಿ ಪಾಲ್ಗೊಳ್ಳದೇ ರೇಸ್‌ನಿಂದ ಹಿಂದೆ ಸರಿದ ಅಮೆಜಾನ್
* ಸ್ಟಾರ್ ಇಂಡಿಯಾ, ರಿಲಯನ್ಸ್ ವಿಯಾಕಾಂ 18 ಸೇರಿ 10 ಸಂಸ್ಥೆಗಳಿಂದ ಪೈಪೋಟಿ

ನವದೆಹಲಿ(ಜೂ.11): 2023-27ರ ಅವಧಿಯ ಐಪಿಎಲ್ ಪ್ರಸಾರದ ಹಕ್ಕು (IPL Media Rights) ಪಡೆಯುವ ರೇಸ್‌ನಿಂದ ಜೆಫ್ ಬೆಜೂಸ್ ಮಾಲಿಕತ್ವದ ಅಮೆಜಾನ್ (Amazon) ಸಂಸ್ಥೆ ಹೊರಗುಳಿದಿದೆ. ಈ ಬಗ್ಗೆ ಮಾಹಿತಿ ನೀಡಿರುವ ಬಿಸಿಸಿಐ ಅಧಿಕಾರಿಗಳು, ಅಮೆಜಾನ್ ಪ್ರಸಾರದ ಹಕ್ಕಿಗಾಗಿ ಬಿಡ್ ಡಾಕ್ಯೂಮೆಂಟ್ ಪಡೆದಿತ್ತು. ಆದರೆ ಅದನ್ನು ನಮಗೆ ಸಲ್ಲಿಕೆ ಮಾಡಿಲ್ಲ ಎಂದು  ತಿಳಿಸಿದ್ದಾರೆ. ಐಪಿಎಲ್ ಮಾಧ್ಯಮ ಹಕ್ಕುಗಳ ಹರಾಜು ಪ್ರಕ್ರಿಯೆಯು ಜೂನ್ 12 ಮತ್ತು 13ರಂದು ನಡೆಯಲಿದೆ.

ಹೌದು, ಐಪಿಎಲ್‌ ಪ್ರಸಾರದ ಮಾಧ್ಯಮ ಹಕ್ಕು ಪಡೆಯುವ ರೇಸ್‌ನಿಂದ ಅಮೆಜಾನ್ ಹೊರಬಿದ್ದಿದೆ. ಅವರು ಟೆಕ್ನಿಕಲ್ ಬಿಡ್‌ನಿಂದ ಹೊರಗುಳಿದಿದ್ದಾರೆ. ಇನ್ನು ಗೂಗಲ್‌(ಯೂಟ್ಯೂಬ್) ಕೂಡಾ ಐಪಿಎಲ್ ಪ್ರಸಾರದ ಹಕ್ಕಿಗಾಗಿ ಬಿಡ್ ಡಾಕ್ಯೂಮೆಂಟ್ ಪಡೆದಿತ್ತು, ಅವರು ಕೂಡಾ ಬಿಡ್‌ ಸಲ್ಲಿಕೆ ಮಾಡಿಲ್ಲ. ಹೀಗಾಗಿ ಯೂಟ್ಯೂಬ್ ಕೂಡಾ ರೇಸ್‌ನಿಂದ ಹೊರಬಿದ್ದಿದೆ. ಇಲ್ಲಿಯವರೆಗೆ ಒಟ್ಟು 10 ಕಂಪನಿಗಳು ಐಪಿಎಲ್ ಮಾಧ್ಯಮ ಹಕ್ಕುಗಳ ಹರಾಜು ಪ್ರಕ್ರಿಯೆಯಲ್ಲಿ ರೇಸ್‌ನಲ್ಲಿ ಉಳಿದುಕೊಂಡಿವೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

ಈ ಮೊದಲು 2018ರಲ್ಲಿ ಸ್ಟಾರ್‌ ಇಂಡಿಯಾ (Star India) 16,347.5 ಕೋಟಿ ರು.ಗೆ ಮಾಧ್ಯಮ ಹಕ್ಕನ್ನು ತನ್ನದಾಗಿಸಿಕೊಂಡಿತ್ತು. ಇದರ ಅವಧಿ 2022 ಐಪಿಎಲ್‌ನೊಂದಿಗೆ ಒಪ್ಪಂದಾವಧಿ ಕೂಡಾ ಮುಕ್ತಾಯವಾಗಿದೆ. ಇನ್ನು 2023-27ರ ಅವಧಿಯ ಐಪಿಎಲ್ ಪ್ರಸಾರದ ಹಕ್ಕು ಪಡೆಯಲು 5 ವರ್ಷಗಳಿಗೆ ಬಿಸಿಸಿಐ (BCCI) 32,890 ಕೋಟಿ ರು. ಮೂಲಬೆಲೆ ನಿಗದಿ ಮಾಡಿದ್ದು, ಇದರ ಪ್ರಕಾರ ಪ್ರತಿ ಪಂದ್ಯದ ಟೀವಿ ಹಕ್ಕು 49 ಕೋಟಿ ರುಪಾಯಿ, ಮತ್ತು ಪ್ರತಿ ಪಂದ್ಯದ ಡಿಜಿಟೆಲ್‌ ಹಕ್ಕು 33 ಕೋಟಿ ರುಪಾಯಿ ಇದೆ. ಟೀವಿ ಹಕ್ಕು ಮೂಲಬೆಲೆಗಿಂತ ಕನಿಷ್ಠ ಶೇ.20ರಿಂದ 25ರಷ್ಟು ಹೆಚ್ಚಿಗೆ ಮೊತ್ತಕ್ಕೆ ಬಿಕರಿಯಾಗುವ ನಿರೀಕ್ಷೆ ಇದ್ದು, ಡಿಜಿಟಲ್‌ ಹಕ್ಕು ಇನ್ನೂ ಹೆಚ್ಚಿಗೆ ಮೊತ್ತಕ್ಕೆ ಹರಾಜಾಗಲಿದೆ ಎಂದು ಅಂದಾಜಿಸಲಾಗಿದೆ. ಎರಡನ್ನೂ ಸೇರಿಸಿದರೆ ಕನಿಷ್ಠ ಒಂದು ಪಂದ್ಯಕ್ಕೆ 115ರಿಂದ 120 ಕೋಟಿ ರು. ಆಗಬಹುದು ಎನ್ನಲಾಗುತ್ತಿದೆ.

IPL ಪಂದ್ಯಗಳ ಸಂಖ್ಯೆ ಹೆಚ್ಚಳಕ್ಕೆ ಬಿಸಿಸಿಐ ಚಿಂತನೆ..!

ಸದ್ಯ ಸ್ಟಾರ್ ಇಂಡಿಯಾ, ರಿಲಯನ್ಸ್ ವಿಯಾಕಾಂ 18, ಸೋನಿ ನೆಟ್‌ವರ್ಕ್‌, ಜೀ ಪ್ರಸಾರದ ಹಕ್ಕು ಪಡೆಯುವ ಸಾಧ್ಯತೆಗಳಿರುವ ಪ್ರಮುಖ ಸಂಸ್ಥೆಗಳೆನಿಸಿಕೊಂಡಿವೆ. ಐಪಿಎಲ್ ಪ್ರಸಾರದ ಹಕ್ಕು ಪಡೆಯಲು ತೀವ್ರ ಪೈಪೋಟಿ ಏರ್ಪಟ್ಟಿದ್ದು, ಇದೇ ಭಾನುವಾರ ಈ ಕುತೂಹಲಕ್ಕೆ ತೆರೆ ಬೀಳಲಿದೆ.

2ನೇ ಟಿ20: ಒಡಿಶಾಗೆ ಬಂದಿಳಿದ ಭಾರತ, ದಕ್ಷಿಣ ಆಫ್ರಿಕಾ ಆಟಗಾರರು

ಭುವನೇಶ್ವರ್‌: ಟೀಂ ಇಂಡಿಯಾ (Team India) ಹಾಗೂ ದಕ್ಷಿಣ ಆಫ್ರಿಕಾ ಆಟಗಾರರು 5 ಪಂದ್ಯಗಳ ಟಿ20 ಸರಣಿಯ 2ನೇ ಪಂದ್ಯವನ್ನಾಡಲು ಶುಕ್ರವಾರ ಒಡಿಶಾಗೆ ಪ್ರಯಾಣಿಸಿದರು. ಮಧ್ಯಾಹ್ನ ವೇಳೆಗೆ ಎರಡೂ ತಂಡಗಳ ಆಟಗಾರರು ಭುವನೇಶ್ವರದ ಬಿಜು ಪ್ರಮಾಣಿಕ್‌ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದರು. 

ಅಲ್ಲಿ ವಿಮಾನ ನಿಲ್ದಾಣ ಅಧಿಕಾರಿಗಳು ಮತ್ತು ಒಡಿಶಾ ಕ್ರಿಕೆಟ್‌ ಸಂಸ್ಥೆಯ ಪದಾಧಿಕಾರಿಗಳು ಆಟಗಾರರನ್ನು ಬರಮಾಡಿಕೊಂಡರು. ಬಳಿಕ ಸಾಂಪ್ರದಾಯಿಕ ನೃತ್ಯಗಳ ಮೂಲಕ ಅವರನ್ನು ಸ್ವಾಗತಿಸಲಾಯಿತು. ರಸ್ತೆಯುದ್ದಕ್ಕೂ ನೆರೆದಿದ್ದ ಅಭಿಮಾನಿಗಳು ಆಟಗಾರರನ್ನು ನೋಡಿ ಸಂತಸಪಟ್ಟರು. ಭಾನುವಾರ ನಡೆಯಲಿರುವ ಪಂದ್ಯಕ್ಕೆ ಬಾರಬತಿ ಕ್ರೀಡಾಂಗಣ ಆತಿಥ್ಯ ವಹಿಸಲಿದೆ. ನವದೆಹಲಿಯಲ್ಲಿ ನಡೆದಿದ್ದ ಮೊದಲ ಪಂದ್ಯದಲ್ಲಿ ದ.ಆಫ್ರಿಕಾ ಗೆಲುವು ಸಾಧಿಸಿದ್ದು, 1-0 ಮುನ್ನಡೆಯಲ್ಲಿದೆ. ಮುಂಬರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ ಪೂರ್ವಭಾವಿ ತಯಾರಿ ಎನಿಸಿಕೊಂಡಿರುವ ಈ 5 ಪಂದ್ಯಗಳ ಟಿ20 ಸರಣಿಯು ಹಲವು ಆಟಗಾರರ ಪಾಲಿಗೆ ಸಾಕಷ್ಟು ಮಹತ್ವದ್ದೆನಿಸಿದೆ.

click me!