
ಲಂಡನ್ (ಜುಲೈ 12): ವಿಶ್ವ ಚಾಂಪಿಯನ್ ಇಂಗ್ಲೆಂಡ್ ತಂಡವನ್ನು ಟೀಮ್ ಇಂಡಿಯಾ ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ 10 ವಿಕೆಟ್‌ಗಳಿಂದ ಬಗ್ಗುಬಡಿದಿದೆ. ಇದಕ್ಕೆ ಕಾರಣವಾಗಿದ್ದು ವೇಗಿ ಜಸ್‌ಪ್ರೀತ್ ಬುಮ್ರಾ ಹಾಗೂ ನಾಯಕ ರೋಹಿತ್ ಶರ್ಮ. ಮೊದಲಿಗೆ ಬೌಲಿಂಗ್‌ನಲ್ಲಿ ಮಿಂಚಿದ ಟೀಮ್ ಇಂಡಿಯಾ ಆತಿಥೇಯ ಇಂಗ್ಲೆಂಡ್ ತಂಡವನ್ನು ಕೇವಲ 110 ರನ್‌ಗಳಿಗೆ ಕಟ್ಟಿಹಾಕಿತ್ತು. ಪ್ರತಿಯಾಗಿ ಈ ಮೊತ್ತವನ್ನು 18.4 ಓವರ್‌ಗಳಲ್ಲಿ114 ರನ್ ಸಿಡಿಸುವ ಮೂಲಕ ಭಾರತ ಗೆಲುವು ಕಂಡಿತು. ಕೆನ್ನಿಂಗ್ಟನ್ ಓವಲ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಮಾಡಿದ ನಾಯಕ ರೋಹಿತ್ ಶರ್ಮ ಕೇವಲ 58 ಎಸೆತಗಳಲ್ಲಿ ಆಕರ್ಷಕ ಅಜೇಯ 76 ರನ್ ಬಾರಿಸಿದರು. ಇದರಲ್ಲಿ 6 ಬೌಂಡರಿ ಹಾಗೂ 5 ಭರ್ಜರಿ ಸಿಕ್ಸರ್‌ಗಳು ಸೇರಿದ್ದವು. ಇವರಿಗೆ ಉತ್ತಮ ಸಾಥ್ ನೀಡಿದ ಮತ್ತೊಬ್ಬ ಅನುಭವಿ ಬ್ಯಾಟ್ಸ್ ಮನ್ ಶಿಖರ್ ಧವನ್ ನಿಧಾನಗತಿಯಲ್ಲಿ ಬ್ಯಾಟಿಂಗ್ ಮಾಡಿದರು. 54 ಎಸೆತಗಳನ್ನು ಎದುರಿಸಿದ ಎಡಗೈ ಬ್ಯಾಟ್ಸ್ ಮನ್ 4 ಬೌಂಡರಿಗಳೊಂದಿಗೆ 31 ರನ್ ಬಾರಿಸಿದರು.
ವಿಶ್ವದ ಅಗ್ರ ತಂಡಗಳ ನಡುವಿನ ಏಕದಿನ ಪಂದ್ಯ (ODI Match) ಎರಡೂ ಇನ್ನಿಂಗ್ಸ್‌ಗಳೂ ಸೇರಿ 50 ಓವರ್ ಕಾದಾಟ ನಡೆಯಲಿಲ್ಲ ಎನ್ನುವುದು ಮಾತ್ರ ವಿಪರ್ಯಾಸ. ತಮ್ಮ 5 ಸಿಕ್ಸರ್‌ಗಳ ಹಾದಿಯಲ್ಲಿ ರೋಹಿತ್ ಶರ್ಮ(Rohit Sharma) ಏಕದಿನ ಕ್ರಿಕೆಟ್‌ನಲ್ಲಿ (Cricket) 250 ಸಿಕ್ಸರ್‌ಗಳ ದಾಖಲೆಯನ್ನೂ ಮಾಡಿದರು.
ಹಲವು ದಾಖಲೆಗಳನ್ನು ಮಾಡಿದ ಭಾರತ: ರೋಹಿತ್ ಶರ್ಮ ಹಾಗೂ ಶಿಖರ್ ಧವನ್(Shikhar Dhawan) ಆಡಿದ ಅಜೇಯ 114 ರನ್‌ಗಳ ಜೊತೆಯಾಟ ಕೆನ್ನಿಂಗ್ಟನ್ ಓವಲ್ ಮೈದಾನದಲ್ಲಿ ದಾಖಲಾದ ಇವರ ನಾಲ್ಕನೇ ಶತಕದ (Fourth Hundred Run Partnership) ಜೊತೆಯಾಟವಾಗಿದೆ. ಒಂದೇ ಮೈದಾನದಲ್ಲಿ ನಾಲ್ಕು ಹಾಗೂ ಅದಕ್ಕಿಂತ ಹೆಚ್ಚಿನ ಶತಕದ ಜೊತೆಯಾಟವಾಡಿದ 3ನೇ ಜೋಡಿ ಇದಾಗಿದೆ. ಇದಕ್ಕೂ ಮುನ್ನ ಬುಲವಾಯೋ ಮೈದಾನದಲ್ಲಿ ಜಿಂಬಾಬ್ವೆಯ ಹ್ಯಾಮಿಲ್ಟನ್ ಮಸಕಜ-ಬ್ರೆಂಡನ್ ಟೇಲರ್, ಇದೇ ಮೈದಾನದಲ್ಲಿ ಪಾಕಿಸ್ತಾನದ ಫಖರ್ ಜಮಾನ್ ಹಾಗೂ ಇಮಾಮ್ ಉಲ್ ಹಕ್ ನಾಲ್ಕು ಬಾರಿ ಶತಕದ ಜೊತೆಯಾಟವಾಡಿದ್ದರು.
ಇದನ್ನೂ ಓದಿ: Eng vs Ind: ಬಾಲಕಿಯ ಬೆನ್ನಿಗೆ ಬಿದ್ದ ಹಿಟ್ ಮ್ಯಾನ್ ಸಿಕ್ಸ್, ಫಿಸಿಯೋಗಳನ್ನು ಕಳಿಸಿದ ಇಂಗ್ಲೆಂಡ್ ಟೀಮ್!
ತವರಿನಲ್ಲಿ ಮೊದಲ ಬಾರಿಗೆ 10 ವಿಕೆಟ್ ಸೋಲು ಕಂಡ ಇಂಗ್ಲೆಂಡ್: ಇಂಗ್ಲೆಂಡ್ ತವರಿನ ಮೈದಾನದಲ್ಲಿ ನಡೆದ ಏಕದಿನ ಪಂದ್ಯದಲ್ಲಿ 10 ವಿಕೆಟ್‌ಗಳ ಸೋಲು ಕಂಡಿರುವುದು ಇದೇ ಮೊದಲ ಬಾರಿಯಾಗಿದೆ. ಇನ್ನು 2011ರ ವಿಶ್ವಕಪ್‌ನಲ್ಲಿ ಆರ್ ಪ್ರೇಮದಾಸ ಮೈದಾನದಲ್ಲಿ ಶ್ರೀಲಂಕಾ ವಿರುದ್ಧ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಎದುರಾದ 10 ವಿಕೆಟ್ ಸೋಲಿನ ಬಳಿಕ ಇಂಗ್ಲೆಂಡ್, ವಿಶ್ವದ ಯಾವುದೇ ಸ್ಥಳದಲ್ಲಿ ಎದುರಿಸಿದ ಮೊದಲ 10 ವಿಕೆಟ್ ಸೋಲು ಇದಾಗಿದೆ.
ಇದನ್ನೂ ಓದಿ: Commonwealth Games 2022: ಭಾರತ ಮಹಿಳಾ ಕ್ರಿಕೆಟ್ ತಂಡದಲ್ಲಿ ಕನ್ನಡತಿ ರಾಜೇಶ್ವರಿಗೆ ಸ್ಥಾನ
ಭಾರತದ 7ನೇ 10 ವಿಕೆಟ್ ಜಯ: ಇನ್ನು ಭಾರತ ತಂಡಕ್ಕೆ ಏಕದಿನ ಕ್ರಿಕೆಟ್‌ನಲ್ಲಿ ಇದು 7ನೇ ಹತ್ತು ವಿಕೆಟ್ ಗೆಲುವಾಗಿದ್ದರೆ, ಇಂಗ್ಲೆಂಡ್ ವಿರುದ್ಧ ಮೊಟ್ಟಮೊದಲ ಗೆಲುವಾಗಿದೆ. 1975ರಲ್ಲಿ ಈಸ್ಟ್ ಆಫ್ರಿಕಾ ವಿರುದ್ಧ ಲೀಡ್ಸ್ ಮೈದಾನದಲ್ಲಿ ಭಾರತ ಮೊಟ್ಟಮೊದಲ ಬಾರಿಗೆ 10 ವಿಕೆಟ್ ಜಯ ಕಂಡಿತ್ತು. 2016ರಲ್ಲಿ ಜಿಂಬಾಬ್ವೆ ವಿರುದ್ಧ ಹರಾರೆಯಲ್ಲಿ ಕೊನೆಯ ಬಾರಿಗೆ 10 ವಿಕೆಟ್ ಜಯ ಕಂಡಿತ್ತು.
ಗುರುವಾರ 2ನೇ ಏಕದಿನ: ಭರ್ಜರಿ ಬೌಲಿಂಗ್ ಪ್ರದರ್ಶನ ತೋರಿದ ಜಸ್ ಪ್ರೀತ್ ಬುಮ್ರಾ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು. ಉಭಯ ತಂಡಗಳ ನಡುವಿನ 2ನೇ ಏಕದಿನ ಪಂದ್ಯ ಗುರುವಾರ (ಜುಲೈ 14) ಲಂಡನ್‌ನ ಲಾರ್ಡ್ಸ್ ಮೈದಾನದಲ್ಲಿ ನಡೆಯಲಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.