
ನವದೆಹಲಿ(ಫೆ.01): ಟೀಂ ಇಂಡಿಯಾ ವಿಕೆಟ್ ಕೀಪರ್ ಬ್ಯಾಟರ್. ಇಶಾನ್ ಕಿಶನ್(Ishan Kishan), ಮುಂಬರುವ ಐಪಿಎಲ್ ಆಟಗಾರರ ಮೆಗಾ ಹರಾಜಿನಲ್ಲಿ (IPL Mega Auction) ಗರಿಷ್ಠ ಮೊತ್ತ ಪಡೆಯಬಲ್ಲ ಆರಂಭಿಕ ಆಟಗಾರ ಎನಿಸಿಕೊಳ್ಳಲಿದ್ದಾರೆ ಎಂದು ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ (Ishan Kishan) ಅಭಿಪ್ರಾಯಪಟ್ಟಿದ್ದಾರೆ. 2022ನೇ ಸಾಲಿನ ಐಪಿಎಲ್ ಟೂರ್ನಿ ಆರಂಭಕ್ಕೂ ಮುನ್ನ ಇದೇ ಫೆಬ್ರವರಿ 12 ಹಾಗೂ 13ರಂದು ಬೆಂಗಳೂರಿನಲ್ಲಿ ಐಪಿಎಲ್ ಮೆಗಾ ಹರಾಜು ನಡೆಯಲಿದೆ.
2021ನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ (Indian Premier League) ಟಿ20 ಟೂರ್ನಿಯಲ್ಲಿ ಇಶಾನ್ ಕಿಶನ್ ನಿರೀಕ್ಷಿತ ಪ್ರದರ್ಶನ ತೋರುವಲ್ಲಿ ವಿಫಲರಾಗಿದ್ದರು. ಆದರೆ 2020ರ ಐಪಿಎಲ್ ಟೂರ್ನಿಯಲ್ಲಿ ಇಶಾನ್ ಕಿಶನ್ ಅದ್ಭುತ ಪ್ರದರ್ಶನ ತೋರುವ ಮೂಲಕ ಮುಂಬೈ ಇಂಡಿಯನ್ಸ್ (Mumbai Indians) ತಂಡವು 5ನೇ ಬಾರಿಗೆ ಐಪಿಎಲ್ ಚಾಂಪಿಯನ್ ಪಟ್ಟ ಅಲಂಕರಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಹೀಗಿದ್ದು, ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯು ಇಶಾನ್ ಕಿಶನ್ ಅವರನ್ನು ಮೆಗಾ ಹರಾಜಿಗೂ ಮುನ್ನ ರೀಟೈನ್ ಮಾಡಿಕೊಳ್ಳುವ ಮನಸ್ಸು ಮಾಡಿರಲಿಲ್ಲ.
2022ರ ಐಪಿಎಲ್ ಆಟಗಾರರ ಹರಾಜಿನಲ್ಲಿ ಇಶಾನ್ ಕಿಶನ್ ಇಲ್ಲವೇ ಶ್ರೇಯಸ್ ಅಯ್ಯರ್ ಅತಿಹೆಚ್ಚಿನ ಮೊತ್ತಕ್ಕೆ ಹರಾಜಾಗುವ ಸಾಧ್ಯತೆಯಿದೆ ಎಂದು ಆಕಾಶ್ ಚೋಪ್ರಾ (Aakash Chopra) ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಅಭಿಪ್ರಾಯಪಟ್ಟಿದ್ದಾರೆ. ನನ್ನ ಅಭಿಪ್ರಾಯದ ಪ್ರಕಾರ, ಇಶಾನ್ ಕಿಶನ್ ಐಪಿಎಲ್ ಆಟಗಾರರ ಹರಾಜಿನಲ್ಲಿ ಅತಿಹೆಚ್ಚು ಸಂಭಾವನೆ ಪಡೆಯಬಲ್ಲ ಆರಂಭಿಕ ಆಟಗಾರ ಎನಿಸಿಕೊಳ್ಳಲಿದ್ದಾರೆ. ಇದನ್ನು ಹೊರತುಪಡಿಸಿದರೆ, ಶ್ರೇಯಸ್ ಅಯ್ಯರ್, ಆಟಗಾರರ ಹರಾಜಿನಲ್ಲಿ ಅತಿಹೆಚ್ಚು ಮೊತ್ತಕ್ಕೆ ಹರಾಜಾಗುವ ಸಾಧ್ಯತೆಯಿದೆ ಎಂದು ಆಕಾಶ್ ಚೋಪ್ರಾ ಅಭಿಪ್ರಾಯಪಟ್ಟಿದ್ದಾರೆ.
ಪಂದ್ಯಕ್ಕೆ ಉತ್ತಮ ಆರಂಭವನ್ನು ಪಡೆಯಬೇಕಾದರೆ, ಆರಂಭಿಕ ಬ್ಯಾಟರ್‌ಗಳು ಒಳ್ಳೆಯ ಇನಿಂಗ್ಸ್ ಆಡಬೇಕು. ಆರಂಭಿಕ ಬ್ಯಾಟರ್‌ಗಳಿಗೆ ಸಾಕಷ್ಟು ಸಮಯಾವಕಾಶಗಳಿರುತ್ತದೆ. ಆದರೆ ಟಿ20 ಕ್ರಿಕೆಟ್‌ನಲ್ಲಿ ಹೆಚ್ಚಿನ ಕಾಲಾವಕಾಶಗಳಿರುವುದಿಲ್ಲ. ಹೀಗಾಗಿ ಟಿ20 ಕ್ರಿಕೆಟ್‌ನಲ್ಲಿ ಆರಂಭಿಕ ಬ್ಯಾಟರ್‌ಗಳು ಪಂದ್ಯದ ದಿಕ್ಕನ್ನು ನಿರ್ಧರಿಸುವವರಾಗಿರಬೇಕು. ಕೆ.ಎಲ್. ರಾಹುಲ್, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಕ್ವಿಂಟನ್ ಡಿ ಕಾಕ್, ಶಿಖರ್ ಧವನ್ ಟಿ20 ಕ್ರಿಕೆಟ್‌ನಲ್ಲಿ ಆರಂಭಿಕರಾಗಿ ಯಶಸ್ಸು ಕಂಡಿದ್ದಾರೆ ಎಂದು ಆಕಾಶ್ ಚೋಪ್ರಾ ಹೇಳಿದ್ದಾರೆ.
IPL 2022: ಮಹಾರಾಷ್ಟ್ರದಲ್ಲಿ ಐಪಿಎಲ್ ಲೀಗ್ ಪಂದ್ಯಗಳಿಗೆ ಆತಿಥ್ಯ..?
ಟಿ20 ಕ್ರಿಕೆಟ್‌ನಲ್ಲಿ ಆರಂಭಿಕರ ಪಾತ್ರ ಸಾಕಷ್ಟು ಮಹತ್ವವಾಗಿದ್ದರಿಂದಲೇ ಋತುರಾಜ್ ಗಾಯಕ್ವಾಡ್, ವಿರಾಟ್ ಕೊಹ್ಲಿ, ಮಯಾಂಕ್ ಅಗರ್‌ವಾಲ್(Mayank Agarwal), ವೆಂಕಟೇಶ್ ಅಯ್ಯರ್, ರೋಹಿತ್ ಶರ್ಮಾ, ಜೋಸ್ ಬಟ್ಲರ್, ಯಶಸ್ವಿ ಜೈಸ್ವಾಲ್ ಅವರನ್ನು ರೀಟೈನ್ ಮಾಡಿಕೊಳ್ಳಲಾಗಿದೆ. ಇನ್ನು ಕೆ.ಎಲ್. ರಾಹುಲ್(KL Rahul), ಶುಭ್‌ಮನ್ ಗಿಲ್ (Shubman Gill) ಅವರನ್ನು ಹರಾಜಿಗೂ ಮುನ್ನ ಹೊಸ ಫ್ರಾಂಚೈಸಿಗಳು ಖರೀದಿಸಿವೆ ಎಂದು ಆಕಾಶ್ ಚೋಪ್ರಾ ಅಭಿಪ್ರಾಯಪಟ್ಟಿದ್ದಾರೆ.
ಈಗಾಗಲೇ ಹಲವು ಆರಂಭಿಕ ಬ್ಯಾಟರ್‌ಗಳನ್ನು ಐಪಿಎಲ್ ಫ್ರಾಂಚೈಸಿಗಳು ರೀಟೈನ್ ಮಾಡಿಕೊಂಡಿದ್ದರೂ ಸಹಾ ಇಶಾನ್ ಕಿಶನ್, ದೇವದತ್ ಪಡಿಕ್ಕಲ್(Devdutt Padikkal), ಕ್ವಿಂಟನ್ ಡಿ ಕಾಕ್ (Quinton de Kock) ಅವರಂತಹ ಉಪಯುಕ್ತ ಆಟಗಾರರು ಹರಾಜಿನಲ್ಲಿ ಲಭ್ಯವಿದ್ದಾರೆ. ಡೇವಿಡ್ ವಾರ್ನರ್(David Warner), ಕ್ರಿಸ್ ಲಿನ್, ಜೇಸನ್ ರಾಯ್, ಜಾನಿ ಬೇರ್‌ಸ್ಟೋವ್ ಅವರನ್ನು ಖರೀದಿಸಲು ಫ್ರಾಂಚೈಸಿಗಳು ಹೆಚ್ಚು ಹಣ ಖರ್ಚು ಮಾಡಬೇಕಾಗಿ ಬರಬಹುದು. ಶಿಖರ್ ಧವನ್, ಫಾಫ್ ಡು ಪ್ಲೆಸಿಸ್, ರಾಬಿನ್ ಉತ್ತಪ್ಪ ಕೂಡಾ ಹರಾಜಿನಲ್ಲಿ ಉತ್ತಮ ಮೊತ್ತ ಪಡೆಯಬಹುದು ಎಂದು ಆಕಾಶ್ ಚೋಪ್ರಾ ಭವಿಷ್ಯ ನುಡಿದಿದ್ದಾರೆ.
ಇದೆಲ್ಲದರ ಹೊರತಾಗಿ ಕ್ವಿಂಟನ್ ಡಿ ಕಾಕ್ ಉತ್ತಮ ಆರಂಭಿಕ ಬ್ಯಾಟರ್ ಜತೆಗೆ ವಿಕೆಟ್ ಕೀಪರ್ ಆಗಿಯೂ ಸೈ ಎನಿಸಿಕೊಂಡಿರುವ ಹಿನ್ನೆಲೆಯಲ್ಲಿ ಡಿ ಕಾಕ್ ಹೆಚ್ಚಿನ ಸಂಭಾವನೆಯನ್ನು ಪಡೆಯಬಹುದು ಎಂದು ಆಕಾಶ್ ಚೋಪ್ರಾ ಹೇಳಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.