ಐಪಿಎಲ್ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ ಬಿಸಿಸಿಐ
2023ರ ಐಪಿಎಲ್ ತವರು ಹಾಗೂ ತವರಿನಾಚೆ ಪಂದ್ಯಗಳು ಆಯೋಜನೆ
ಚೊಚ್ಚಲ ಆವೃತ್ತಿಯ ಮಹಿಳಾ ಐಪಿಎಲ್‌ಗೂ ಭರ್ಜರಿ ಸಿದ್ದತೆ
ನವದೆಹಲಿ(ಸೆ.23): ಕೋವಿಡ್‌ಗೂ ಮೊದಲು ನಡೆಯುತ್ತಿದ್ದ ರೀತಿಯಲ್ಲೇ 2023ರ ಐಪಿಎಲ್ ನಡೆಯಲಿದೆ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಗುರುವಾರ ತಿಳಿಸಿದ್ದಾರೆ. ತಂಡಗಳು ತವರು, ತವರಿನಾಚೆ ಮಾದರಿಯಲ್ಲಿ ಪಂದ್ಯಗಳನ್ನು ಆಡಲಿವೆ. ಟೂರ್ನಿಯು ಕೇವಲ ಒಂದು ಇಲ್ಲವೇ ಎರಡು ನಗರಗಳಿಗೆ ಸೀಮಿತವಾಗದೆ ಎಲ್ಲಾ 10 ತಂಡಗಳ ತವರಿನಲ್ಲೂ ನಡೆಯಲಿದೆ ಎಂದು ಗಂಗೂಲಿ ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅಭಿಮಾನಿಗಳು ಬೆಂಗಳೂರಿನಲ್ಲೇ ತಮ್ಮ ನೆಚ್ಚಿನ ತಂಡದ ಪಂದ್ಯಗಳನ್ನು ವೀಕ್ಷಿಸಬಹುದಾಗಿದೆ.
ಕೋವಿಡ್‌ನಿಂದಾಗಿ 2020ರಲ್ಲಿ ಟೂರ್ನಿ ಯುಎಇನಲ್ಲಿ ನಡೆದಿತ್ತು. 2021ರಲ್ಲಿ ಭಾರತದ 4 ನಗರಗಳಲ್ಲಿ ನಡೆಸಲು ಯೋಜನೆ ರೂಪಿಸಿ ಟೂರ್ನಿ ಆರಂಭಿಸಲಾಯಿತು. ಆದರೆ ಕೋವಿಡ್ ಪ್ರಕರಣಗಳು ದಾಖಲಾಗುತ್ತಿದ್ದಂತೆ ಟೂರ್ನಿಯನ್ನು ಸ್ಥಗಿತಗೊಳಿಸಿ 4 ತಿಂಗಳ ಬಳಿಕ ಯುಎಇನಲ್ಲಿ ಪೂರ್ಣಗೊಳಿಸಲಾಯಿತು. 2022ರ ಐಪಿಎಲ್‌ನ ಲೀಗ್ ಪಂದ್ಯಗಳು ಮುಂಬೈ, ಪುಣೆಯಲ್ಲಿ ನಡೆದರೆ ಪ್ಲೇ-ಆಫ್ ಪಂದ್ಯಗಳು ಕೋಲ್ಕತಾ ಮತ್ತು ಅಹಮದಾಬಾದ್‌ನಲ್ಲಿ ನಡೆದಿದ್ದವು.
ಇದೀಗ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, ರಾಜ್ಯ ಸಂಸ್ಥೆಗಳಿಗೆ ಬರೆದ ಪತ್ರದಲ್ಲಿ ಮುಂದಿನ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯು ತವರು ಹಾಗೂ ತವರಿನಾಚೆ 10 ತಂಡಗಳು ತಮ್ಮ ತವರಿನಲ್ಲಿ ಐಪಿಎಲ್ ಪಂದ್ಯಗಳನ್ನಾಡಲಿವೆ ಎಂದು ತಿಳಿಸಿದ್ದಾರೆ.
ಇದೇ ಸಂದರ್ಭದಲ್ಲಿ 2020ರ ಬಳಿಕ ಪೂರ್ಣ ಪ್ರಮಾಣದ ದೇಶಿ ಕ್ರಿಕೆಟ್ ಟೂರ್ನಿಯನ್ನು ಆಯೋಜಿಸಲು ಬಿಸಿಸಿಐ ಸಕಲ ಸಿದ್ದತೆಗಳನ್ನು ನಡೆಸಿದೆ. ಎಲ್ಲಾ ಬಹುದಿನಗಳ ಟೂರ್ನಿಯು ತವರು ಹಾಗೂ ತವರಿನಾಚೆ ಪಂದ್ಯಗಳನ್ನು ನಡೆಸಲು ಬಿಸಿಸಿಐ ನಿರ್ಧರಿಸಿದೆ.
Ind vs Aus T20I: ಮೂರನೇ ಪಂದ್ಯದ ಟಿಕೆಟ್ ಖರೀದಿಸಿಲು ಹೈದರಾಬಾದ್‌ನಲ್ಲಿ ನೂಕು ನುಗ್ಗಲು..! ಲಾಠಿ ಚಾರ್ಜ್
2022-23ರ ದೇಸಿ ಕ್ರಿಕೆಟ್ ಋುತುವಿನ ವೇಳಾಪಟ್ಟಿ ಈಗಾಗಲೇ ಪ್ರಕಟಗೊಂಡಿದ್ದು, ಸಯ್ಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯಲ್ಲಿ ‘ಸಿ’ ಗುಂಪಿನಲ್ಲಿ ಸ್ಥಾನ ಪಡೆದಿರುವ ಕರ್ನಾಟಕ ಅಕ್ಟೋಬರ್ 11ರಂದು ತನ್ನ ಮೊದಲ ಪಂದ್ಯವನ್ನು ಮಹಾರಾಷ್ಟ್ರ ವಿರುದ್ಧ ಆಡಲಿದೆ. ರಾಜ್ಯ ತಂಡವು ಮೊಹಾಲಿಯಲ್ಲಿ ಗುಂಪು ಹಂತದ ಪಂದ್ಯಗಳನ್ನು ಆಡಲಿದೆ. ಇನ್ನು ನವೆಂಬರ್ 12ರಿಂದ ಆರಂಭಗೊಳ್ಳಲಿರುವ ವಿಜಯ್ ಹಜಾರೆ ಏಕದಿನ ಟೂರ್ನಿಯಲ್ಲಿ ಕರ್ನಾಟಕಕ್ಕೆ ಮೇಘಾಲಯ ಮೊದಲ ಎದುರಾಳಿ. ಡಿಸೆಂಬರ್ 13ರಿಂದ ರಣಜಿ ಟ್ರೋಫಿ ಆರಂಭಗೊಳ್ಳಲಿದ್ದು, ಸವೀರ್ಸಸ್ ವಿರುದ್ಧ ಕರ್ನಾಟಕ ಬೆಂಗಳೂರಲ್ಲಿ ಮೊದಲ ಪಂದ್ಯ ಆಡಲಿದೆ.
ಇದೇ ವೇಳೆ ಮುಂದಿನ ವರ್ಷ ಆರಂಭದಲ್ಲೇ ಮಹಿಳಾ ಐಪಿಎಲ್ ನಡೆಸಲು ಬಿಸಿಸಿಐ ಯೋಜನೆ ರೂಪಿಸುತ್ತಿರುವುದಾಗಿ ಗಂಗೂಲಿ ತಿಳಿಸಿದ್ದಾರೆ. ಇನ್ನು ಮೊದಲ ಬಾರಿಗೆ ಅಂಡರ್-15 ಬಾಲಕಿಯರ ಟೂರ್ನಿಯನ್ನು ಡಿಸೆಂಬರ್ 26ರಿಂದ ಜನವರಿ12ರ ವರೆಗೂ ನಡೆಸುವುದಾಗಿಯೂ ಬಿಸಿಸಿಐ ಪ್ರಕಟಿಸಿದೆ.
ಪಿಟಿಐ ವರದಿ ಪ್ರಕಾರ, ಚೊಚ್ಚಲ ಆವೃತ್ತಿಯ ಮಹಿಳಾ ಐಪಿಎಲ್ ಟೂರ್ನಿಯಲ್ಲಿ 2023ರ ಮಾರ್ಚ್ ತಿಂಗಳಿನಲ್ಲಿ ನಡೆಯಲಿದೆ. ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿರುವ ಐಸಿಸಿ ಮಹಿಳಾ ಟಿ20 ವಿಶ್ವಕಪ್ ಟೂರ್ನಿ ಮುಕ್ತಾಯದ ಬಳಿಕ ಭಾರತದಲ್ಲಿ ಮಹಿಳಾ ಐಪಿಎಲ್ ಟೂರ್ನಿ ನಡೆಸಲು ಬಿಸಿಸಿಐ ಯೋಜಿಸಿದೆ ಎಂದು ವರದಿಯಾಗಿದೆ. ಮಹಿಳಾ ಐಪಿಎಲ್ ಟೂರ್ನಿ ಆಯೋಜಿಸುವುದರಿಂದ ಭಾರತದಲ್ಲಿ ಮಹಿಳಾ ಕ್ರಿಕೆಟ್ ಮತ್ತಷ್ಟು ಅಭಿವೃದ್ದಿಯಾಗಲಿದೆ ಎಂದು ನಿರೀಕ್ಷಿಸಲಾಗಿದೆ.