ಸೈಮಂಡ್ಸ್‌, ಫ್ರಾಂಕ್ಲಿನ್‌ ನನ್ನ ಕೈಕಾಲು ಕಟ್ಟಿ ಕೂಡಿಹಾಕಿದ್ದರು..! ಆಘಾತಕಾರಿ ಘಟನೆ ಬಿಚ್ಚಿಟ್ಟ ಚಹಲ್

By Naveen KodaseFirst Published Apr 10, 2022, 1:45 PM IST
Highlights

* ಮುಂಬೈ ಇಂಡಿಯನ್ಸ್ ತಂಡದಲ್ಲಿದ್ದಾಗಿನ ಕರಾಳ ನೆನಪು ಮೆಲುಕು ಹಾಕಿದ ಯುಜುವೇಂದ್ರ ಚಹಲ್

* ರಾಜಸ್ಥಾನ ರಾಯಲ್ಸ್‌ ತಂಡವನ್ನು ಪ್ರತಿನಿಧಿಸುತ್ತಿರುವ ಯುಜುವೇಂದ್ರ ಚಹಲ್

ಮುಂಬೈ(ಏ.10): ಗುರುವಾರವಷ್ಟೇ 2013ರ ಐಪಿಎಲ್‌ ವೇಳೆ ನಡೆದಿದ್ದ ಆಘಾತಕಾರಿ ಘಟನೆಯೊಂದನ್ನು ಬಹಿರಂಗಪಡಿಸಿದ್ದ ಸ್ಪಿನ್ನರ್‌ ಯಜುವೇಂದ್ರ ಚಹಲ್‌ (Yuzvendra Chahal), ಅಂಥದ್ದೇ ಮತ್ತೊಂದು ಘಟನೆ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. 2011ರ ಚಾಂಪಿಯನ್ಸ್‌ ಲೀಗ್‌ ವೇಳೆ ನಡೆದ ಘಟನೆಯನ್ನು ರಾಜಸ್ಥಾನ ರಾಯಲ್ಸ್‌ (Rajasthan Royals) ತಂಡದ ಸಂದರ್ಶನದ ವೇಳೆ ಅವರು ನೆನಪಿಸಿಕೊಂಡಿದ್ದಾರೆ. ‘2011ರ ಚಾಂಪಿಯನ್ಸ್‌ ಲೀಗ್‌ ವೇಳೆ ಚೆನ್ನೈ ಹೋಟೆಲ್‌ನಲ್ಲಿ ಆ್ಯಂಡ್ರೂ ಸೈಮಂಡ್ಸ್‌ (Andrew Symonds), ನ್ಯೂಜಿಲೆಂಡ್‌ನ ಜೇಮ್ಸ್‌ ಫ್ರಾಂಕ್ಲಿನ್‌ (James Franklin) ಕುಡಿದ ಮತ್ತಿನಲ್ಲಿ ನನ್ನ ಕೈಕಾಲು ಕಟ್ಟಿ, ಬಾಯಿಗೆ ಟೇಪ್‌ ಅಂಟಿಸಿದ್ದರು. ಬಳಿಕ ಒಂದು ಕೋಣೆಯಲ್ಲಿ ಕೂಡಿ ಹಾಕಿದ್ದರು. ಪಾರ್ಟಿ ಮುಗಿದ ಮೇಲೆ ಅವರು ನನ್ನನ್ನು ಮರೆತು ಹೋಗಿದ್ದರು. ಬೆಳಗ್ಗೆ ಹೋಟೆಲ್‌ ಕ್ಲೀನರ್‌ ಬಂದು ಟೇಪ್‌ ಬಿಚ್ಚಿದರು’ ಎಂದಿದ್ದಾರೆ.

2011ರ ಚಾಂಪಿಯನ್ಸ್ ಲೀಗ್ ವಿಜೇತರಾದ ಬಳಿಕ ನಾವು ಚೆನ್ನೈನ ಹೋಟೆಲ್‌ನಲ್ಲಿದ್ದೆವು. ಆ್ಯಂಡ್ರೂ ಸೈಮಂಡ್ಸ್ ಸಾಕಷ್ಟು ಮದ್ಯ ಸೇವಿಸಿದ್ದರು. ನಾನಾಗ ಅವರ ಜತೆಯಲ್ಲಿಯೇ ಇದ್ದೆ. ಆಗ ಆ್ಯಂಡ್ರೂ ಸೈಮಂಡ್ಸ್ ಹಾಗೂ ಜೇಮ್ಸ್ ಫ್ರಾಂಕ್ಲಿನ್‌ ನನ್ನ ಕೈ ಹಾಗೂ ಕಾಲನ್ನು ಕಟ್ಟಿಹಾಕಿ ಬಾಯಿಗೆ ಟೇಪ್ ಅಂಟಿಸಿದ್ದರು. ಬಳಿಕ ನೀನು ಇದನ್ನು ಬಿಡಿಸಿಕೋ ನೋಡೋಣ ಎಂದು ಹೇಳಿ ಹೋದರು. ಕುಡಿದ ಮತ್ತಿನಲ್ಲಿ ನನ್ನನ್ನು ಹೀಗೆ ಬಿಟ್ಟು ಹೋಗಿದ್ದೇ ಅವರು ಮರೆತಿದ್ದರು. ರಾತ್ರಿ ಪಾರ್ಟಿ ಮುಗಿದು ಬೆಳಕು ಹರಿದಾಗ, ರೂಂ ಕ್ಲೀನ್ ಮಾಡುವಾತ ಬಂದು ನನ್ನನ್ನು ಬಂಧಮುಕ್ತಗೊಳಿಸಿದ್ದರು ಎಂದು ಆ ಕರಾಳ ದಿನಗಳನ್ನು ಮೆಲುಕು ಹಾಕಿದ್ದಾರೆ.

Latest Videos

ಯುಜುವೇಂದ್ರ ಚಹಲ್ ಅವರ ಈ ಹೇಳಿಕೆಯ ಕುರಿತಂತೆ ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯಾಗಲಿ, ಐಪಿಎಲ್‌ ಆಡಳಿತ ಮಂಡಳಿಯಾಗಲಿ ಇದುವರೆಗೂ ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ. 

ಇದಕ್ಕೂ ಮುನ್ನ ‘2013ರ ಐಪಿಎಲ್‌ ವೇಳೆ ಕುಡಿದ ಮತ್ತಿನಲ್ಲಿ ಆಟಗಾರನೊಬ್ಬ ನನ್ನನ್ನು 15 ಮಹಡಿಯಿಂದ ಕೆಳಕ್ಕೆ ನೇತು ಹಾಕಿದ್ದ’ ಎಂದಿದ್ದ ಅವರು ಆಟಗಾರನ ಮಾಹಿತಿ ಬಹಿರಂಗಪಡಿಸಿರಲಿಲ್ಲ. 2013ರ ಐಪಿಎಲ್ ಟೂರ್ನಿಯ ವೇಳೆ ಯುಜುವೇಂದ್ರ ಚಹಲ್, ಮುಂಬೈ ಇಂಡಿಯನ್ಸ್ ತಂಡವನ್ನು ಪ್ರತಿನಿಧಿಸಿದ್ದರು. ಬೆಂಗಳೂರಲ್ಲಿ ಪಂದ್ಯವಾಡಿದ ಬಳಿಕ ಹೋಟೆಲ್‌ನಲ್ಲಿ ಔತಣಕೂಟವೊಂದಿತ್ತು. ಆ ವೇಳೆ ಕುಡಿದ ಮತ್ತಿನಲ್ಲಿ ಆಟಗಾರನೊಬ್ಬ ನನ್ನನ್ನು 15 ಮಹಡಿಯಿಂದ ಕೆಳಕ್ಕೆ ನೇತು ಹಾಕಿದ್ದ. ನಾನು ಆತನ ಕೈಗಳನ್ನು ಬಲವಾಗಿ ಹಿಡಿದುಕೊಂಡಿದ್ದೆ. ನನ್ನ ಕೈ ಜಾರಿದ್ದರೆ ಪ್ರಾಣ ಹೋಗುತ್ತಿತ್ತು. ಸಹ ಆಟಗಾರರ ಸಮಯ ಪ್ರಜ್ಞೆಯಿಂದ ಜೀವ ಉಳಿಯಿತು’ ಎಂದು ಚಹಲ್‌ ಹೇಳಿದ್ದರು.

Royals’ comeback stories ke saath, aapke agle 7 minutes hum 💗 | | pic.twitter.com/RjsLuMcZhV

— Rajasthan Royals (@rajasthanroyals)

IPL 2022: ಆರ್​ಸಿಬಿ ನಂತರ ಕನ್ನಡಿಗರ ಸಪೋರ್ಟ್ ಯಾವ ತಂಡಕ್ಕೆ ಗೊತ್ತಾ..?

ಈ ಎರಡೂ ಘಟನೆ ಬಗ್ಗೆ ಸಾಮಾಜಿಕ ತಾಣಗಳಲ್ಲಿ ಮಾಜಿ ಕ್ರಿಕೆಟಿಗರು ಸೇರಿದಂತೆ ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಭಾರತದ ಮಾಜಿ ಕೋಚ್‌ ರವಿಶಾಸ್ತ್ರಿ ಇಂತಹ ಬೇಜವಾಬ್ದಾರಿ ಕೆಲಸಗಳನ್ನು ಮಾಡುವವರನ್ನು ಆಜೀವ ನಿಷೇಧಕ್ಕೆ ಒಳಪಡಿಸಬೇಕು ಎಂದಿದ್ದಾರೆ.

2013ರಲ್ಲಿ ಮುಂಬೈ ಇಂಡಿಯನ್ಸ್ ಪರ ಐಪಿಎಲ್‌ಗೆ ಪಾದಾರ್ಪಣೆ ಮಾಡಿದ್ದ ಯುಜುವೇಂದ್ರ ಚಹಲ್‌, 2014ರಲ್ಲಿ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡವನ್ನು ಕೂಡಿಕೊಂಡಿದ್ದರು. 2021ರ ಐಪಿಎಲ್‌ ಟೂರ್ನಿಯವರೆಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅವಿಭಾಜ್ಯ ಅಂಗವಾಗಿ ಗುರುತಿಸಿಕೊಂಡಿದ್ದ ಚಹಲ್‌, ಇದೀಗ 15ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ರಾಜಸ್ಥಾನ ರಾಯಲ್ಸ್‌ ತೆಕ್ಕೆಗೆ ಜಾರಿದ್ದಾರೆ.  

click me!