Latest Videos

ಐಪಿಎಲ್‌ ಮಾಧ್ಯಮ ಹಕ್ಕು ಜೂನ್‌ 12ಕ್ಕೆ ಹರಾಜು ಸಾಧ್ಯತೆ..!

By Kannadaprabha NewsFirst Published Mar 28, 2022, 12:06 PM IST
Highlights

* 2023-2027ರ ಅವಧಿಯ ಐಪಿಎಲ್‌ ಮಾಧ್ಯಮ ಹಕ್ಕಿನ ಹರಾಜು ಪ್ರಕ್ರಿಯೆಗೆ ಬಿಸಿಸಿಐ ಸಿದ್ದತೆ

* ಐಪಿಎಲ್‌ ಮಾಧ್ಯಮ ಹಕ್ಕಿಗೆ ಬಿಸಿಸಿಐ 35,000 ಕೋಟಿ ರುಪಾಯಿ ಮೂಲಬೆಲೆ ನಿಗದಿ

* ಹರಾಜು ಪ್ರಕ್ರಿಯೆಯನ್ನು ಬಿಸಿಸಿಐ ಜೂನ್‌ 12ಕ್ಕೆ ನಡೆಸುವ ಸಾಧ್ಯತೆ

ಮುಂಬೈ(ಮಾ.28): 2023-2027ರ ಅವಧಿಯ ಐಪಿಎಲ್‌ ಮಾಧ್ಯಮ ಹಕ್ಕಿಗೆ (IPL Media Rights) ಬಿಸಿಸಿಐ 35,000 ಕೋಟಿ ರುಪಾಯಿ ಮೂಲಬೆಲೆ ನಿಗದಿಪಡಿಸಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಈ ಬಗ್ಗೆ ಇತ್ತೀಚೆಗೆ ನಡೆದ ಐಪಿಎಲ್‌ ಆಡಳಿಯ ಮಂಡಳಿಯ ಸಭೆಯಲ್ಲಿ ನಿರ್ಧರಿಸಲಾಗಿದ್ದು, ಹರಾಜು ಪ್ರಕ್ರಿಯೆಯನ್ನು ಬಿಸಿಸಿಐ (BCCI) ಜೂನ್‌ 12ಕ್ಕೆ ನಡೆಸುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.

ಬಿಸಿಸಿಐ ಮಾಧ್ಯಮ ಹಕ್ಕು ವಿತರಣೆ ಮೂಲಕ 45,000 ಕೋಟಿ ರು.ಗೂ ಹೆಚ್ಚು ಬಂಪರ್‌ ಮೊತ್ತ ನಿರೀಕ್ಷಿಸಿದ್ದು, ಹರಾಜು ಪ್ರಕ್ರಿಯೆಯನ್ನು ಟಿವಿ, ಡಿಜಿಟಲ್‌ ಹಕ್ಕು ಸೇರಿದಂತೆ 4 ವಿಭಾಗಗಳಲ್ಲಿ ನಡೆಸುವ ಸಾಧ್ಯತೆ ಇದೆ. ಅಲ್ಲದೇ, ಕೇವಲ ಒಂದೇ ಸಂಸ್ಥೆಗೆ ಮಾಧ್ಯಮ ಹಕ್ಕು ನೀಡುವ ಬದಲು ವಿವಿಧ ಕಂಪೆನಿಗಳಿಗೂ ಅವಕಾಶ ನೀಡಲು ಬಿಸಿಸಿಐ ನಿರ್ಧರಿಸಿದೆ ಎಂದು ಹೇಳಲಾಗುತ್ತಿದೆ. ಈ ಮೊದಲು 2018ರಲ್ಲಿ ಸ್ಟಾರ್‌ ಇಂಡಿಯಾ (Star India) 16,347.5 ಕೋಟಿ ರುಪಾಯಿಗೆ ಮಾಧ್ಯಮ ಹಕ್ಕನ್ನು ತನ್ನದಾಗಿಸಿಕೊಂಡಿತ್ತು. ಇದರ ಅವಧಿ 2022 ಐಪಿಎಲ್‌ಗೆ ಮುಕ್ತಾಯಗೊಳ್ಳಲಿದೆ.

ಸದ್ಯ ಚಾಲ್ತಿಯಲ್ಲಿರುವ ಒಪ್ಪಂದವು 2018-2022ರ ವರೆಗಿನದ್ದಾಗಿದ್ದು ಮಾಧ್ಯಮ ಹಕ್ಕು ಹೊಂದಿರುವ ಸ್ಟಾರ್‌ ಸಂಸ್ಥೆಯು ಬಿಸಿಸಿಐಗೆ 5 ವರ್ಷಕ್ಕೆ 16347.5 ಕೋಟಿ ರು. ಪಾವತಿಸುತ್ತಿದೆ. ಪ್ರತಿಷ್ಠಿತ ಸಂಸ್ಥೆಯೊಂದು ಸಮೀಕ್ಷೆ ನಡೆಸಿ, ಈಗ ಗಳಿಸುತ್ತಿರುವ ಹಣಕ್ಕಿಂತ ದುಪ್ಪಟ್ಟು ಗಳಿಸಬಹುದು ಎಂದು ವರದಿ ನೀಡಿದೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಎಂದು ವರದಿಯಲ್ಲಿದೆ. 2 ಹೊಸ ತಂಡಗಳ ಸೇರ್ಪಡೆಯಿಂದ ಒಟ್ಟು ಪಂದ್ಯಗಳ ಸಂಖ್ಯೆ 74ಕ್ಕೆ ಏರಿಕೆಯಾಗಿದೆ. ಜೊತೆಗೆ ವೀಕ್ಷಕರ ಸಂಖ್ಯೆಯೂ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿರುವ ಕಾರಣ, ಮಾಧ್ಯಮ ಹಕ್ಕಿನ ಮೊತ್ತವೂ ದುಪ್ಪಟ್ಟಾಗಲಿದೆ ಎನ್ನಲಾಗಿದೆ.

ಬಿಸಿಸಿಐ ಮುಂದಿರುವ ಸವಾಲುಗಳು ಏನು?

2023-27ರ ಅವಧಿಗೆ ಐಪಿಎಲ್‌ ಮಾಧ್ಯಮ ಹಕ್ಕು ಹರಾಜು ಇನ್ನೇನು ಕೆಲವೇ ತಿಂಗಳಲ್ಲಿ ನಡೆಯಲಿದೆ. 2018ರಿಂದ 2022ರ ಅವಧಿಗೆ ಸ್ಟಾರ್‌ ಸ್ಪೋಟ್ಸ್‌ರ್‍ ಸಂಸ್ಥೆ 16347.5 ಕೋಟಿ ರು. ನೀಡಿ ಆತಿಥ್ಯ ಹಕ್ಕು ಖರೀದಿಸಿತ್ತು. ಈಗ ತಂಡಗಳ ಸಂಖ್ಯೆ ಹೆಚ್ಚಾಗಿರುವ ಕಾರಣ ಪಂದ್ಯಗಳ ಸಂಖ್ಯೆಯೂ ಹೆಚ್ಚಾಗಲಿದೆ. ಅಲ್ಲದೇ ಲೀಗ್‌ನ ಮೌಲ್ಯ ಹಲವು ಪಟ್ಟು ಏರಿಕೆಯಾಗಿದ್ದು ಬಿಸಿಸಿಐ ಏನಿಲ್ಲವೆಂದರೂ 40000 ಕೋಟಿ ರು.ನಿಂದ 50000 ಕೋಟಿ ರು. ನಿರೀಕ್ಷೆ ಮಾಡುತ್ತಿದೆ. ಲೀಗ್‌ನ ಮೌಲ್ಯ ಮತ್ತಷ್ಟುಹೆಚ್ಚಬೇಕು, ನಿರೀಕ್ಷೆಗೂ ಮೀರಿದ ಮೊತ್ತಕ್ಕೆ ಮಾಧ್ಯಮ ಪ್ರಸಾರ ಹಕ್ಕು ಮಾರಾಟವಾಗಬೇಕಿದ್ದರೆ ಈ ಆವೃತ್ತಿ ಅಭೂತಪೂರ್ವ ಯಶಸ್ಸು ಕಾಣಬೇಕು.

DC vs MI: ಡೆಲ್ಲಿ ಎದುರಿನ ಸೋಲಿನ ಬೆನ್ನಲ್ಲೇ ರೋಹಿತ್ ಶರ್ಮಾಗೆ ಮತ್ತೊಂದು ಶಾಕ್‌..!

ಕೋವಿಡ್‌ ಪ್ರಕರಣಗಳು ಕಡಿಮೆಯಾಗಿದ್ದರೂ ಬಿಸಿಸಿಐ ಕೇವಲ ಮುಂಬೈ ಹಾಗೂ ಪುಣೆಯಲ್ಲಿ ಲೀಗ್‌ ಹಂತವನ್ನು ಆಯೋಜಿಸುತ್ತಿದೆ. ಅಲ್ಲದೇ ಕ್ರೀಡಾಂಗಣಕ್ಕೆ ಪ್ರೇಕ್ಷಕರಿಗೆ ಪ್ರವೇಶ ಅವಕಾಶವನ್ನೂ ನೀಡುತ್ತಿದೆ. ಆದರೆ ಎರಡೇ ನಗರಗಳಲ್ಲಿ ಪಂದ್ಯಗಳನ್ನು ಆಯೋಜಿಸುವ ಸಾಹಸ ಕೈಕೊಟ್ಟರೆ ಬಿಸಿಸಿಐಗೆ ನಷ್ಟವಾಗಲಿದೆ. ಹೀಗಾಗಿ ಪಂದ್ಯಗಳು ಸ್ಪರ್ಧಾತ್ಮಕವಾಗಿ, ಅಭಿಮಾನಿಗಳಲ್ಲಿ ಆಸಕ್ತಿ ಕಡಿಮೆಯಾಗದಂತೆ ಬಿಸಿಸಿಐ ನೋಡಿಕೊಳ್ಳಬೇಕಿದೆ.

ಐಪಿಎಲ್‌: ಆಟಗಾರರ ಸಂಚಾರಕ್ಕೆ ಝೀರೋ ಟ್ರಾಫಿಕ್‌ ವ್ಯವಸ್ಥೆ!

ಮುಂಬೈ: ಐಪಿಎಲ್‌ನಲ್ಲಿ ಭಾಗವಹಿಸುವ ಆಟಗಾರರು, ಸಿಬ್ಬಂದಿಯ ಸುಗಮ ಸಂಚಾರಕ್ಕಾಗಿ ಮುಂಬೈ ಪೊಲೀಸ್‌ ಇಲಾಖೆ ಗ್ರೀನ್‌ ಕಾರಿಡಾರರ್‌(ಝೀರೋ ಟ್ರಾಫಿಕ್‌) ವ್ಯವಸ್ಥೆ ಮಾಡಿದೆ. ಆಟಗಾರರು ಪಂದ್ಯ, ಅಭ್ಯಾಸಕ್ಕಾಗಿ ಕ್ರೀಡಾಂಗಣ ಹಾಗೂ ಹೋಟೆಲ್‌ಗೆ ಸಂಚರಿಸುವಾಗ ಟ್ರಾಫಿಕ್‌ ಸಮಸ್ಯೆ ಉಂಟಾಗದಿರಲು ಈ ನಿರ್ಧಾರ ಕೈಗೊಳ್ಳಲಾಗಿದೆ. 

ಇದಕ್ಕಾಗಿ ಟ್ರಾಫಿಕ್‌ ಪೊಲೀಸರು ಸೇರಿದಂತೆ 1,100ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ ಎಂದು ಪೊಲೀಸ್‌ ಇಲಾಖೆ ಮಾಹಿತಿ ನೀಡಿದೆ. ಪಂದ್ಯಾವಳಿ 2 ನಗರಗಳಲ್ಲಿ ನಡೆಯಲಿದ್ದು, ಹತ್ತು ತಂಡಗಳ ಆಟಗಾರರು ವಿವಿಧ ಕಡೆಗಳಲ್ಲಿ ಹೋಟೆಲ್‌ನಲ್ಲಿ ತಂಗಿದ್ದಾರೆ. ಆಟಗಾರರು ಸಂಚರಿಸುವ ವೇಳೆ ಹೆಚ್ಚಿನ ಭದ್ರತೆಯನ್ನೂ ನೀಡಲಾಗುತ್ತದೆ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

click me!