ಐಪಿಎಲ್‌ ಜತೆ ಯಾವ ಟೂರ್ನಿಯನ್ನೂ ಹೋಲಿಸಲು ಸಾಧ್ಯವಿಲ್ಲ: ವಹಾಬ್ ರಿಯಾಜ್

By Suvarna NewsFirst Published May 15, 2021, 4:56 PM IST
Highlights

* ಐಪಿಎಲ್ ಟೂರ್ನಿಯನ್ನು ಗುಣಗಾನ ಮಾಡಿದ ಪಾಕ್‌ ವೇಗಿ ವಹಾಬ್ ರಿಯಾಜ್

* ಐಪಿಎಲ್‌ ಟೂರ್ನಿಯನ್ನು ಪಿಎಸ್‌ಎಲ್‌ ಜತೆ ಹೋಲಿಸಲು ಸಾಧ್ಯವಿಲ್ಲ ಎಂದ ಎಡಗೈ ವೇಗಿ

* ಐಪಿಎಲ್ ಟೂರ್ನಿ ಉಳಿದೆಲ್ಲಾ ಟೂರ್ನಿಗಳಿಗಿಂತ ಭಿನ್ನ ಎಂದ ರಿಯಾಜ್

ಕರಾಚಿ(ಮೇ.15): ಇಂಡಿಯನ್‌ ಪ್ರೀಮಿಯರ್ ಲೀಗ್ ಉನ್ನತ ಸ್ಥರದಲ್ಲಿದ್ದು, ಪಾಕಿಸ್ತಾನ ಸೂಪರ್ ಲೀಗ್ ಸೇರಿದಂತೆ ವಿಶ್ವದ ಟಿ20 ಲೀಗ್ ಅನ್ನು ಐಪಿಎಲ್‌ ಜತೆ ಹೋಲಿಸಲು ಸಾಧ್ಯವಿಲ್ಲ ಎಂದು ಪಾಕಿಸ್ತಾನದ ಮಾರಕ ವೇಗಿ ವಹಾಬ್ ರಿಯಾಜ್ ಹೇಳಿದ್ದಾರೆ.

ಐಪಿಎಲ್ ಟೂರ್ನಿಯಲ್ಲಿ ಪಾಲ್ಗೊಳ್ಳಲು ಅಂತಾರಾಷ್ಟ್ರೀಯ ಕ್ರಿಕೆಟ್ ಆಟಗಾರರು ತುದಿಗಾಲಿನಲ್ಲಿ ನಿಂತಿರುತ್ತಾರೆ. ಐಪಿಎಲ್‌ ಟೂರ್ನಿಯನ್ನು ಆಯೋಜಕರು ಅತ್ಯಂತ ಅಚ್ಚುಕಟ್ಟಾಗಿ ಆಯೋಜಿಸುತ್ತಿರುವ ರೀತಿ ನಿಜಕ್ಕೂ ಅನನ್ಯವಾದದ್ದು ಎಂದು ರಿಯಾಜ್ ಐಪಿಎಲ್‌ ಟೂರ್ನಿಯನ್ನು ಗುಣಗಾನ ಮಾಡಿದ್ದಾರೆ.

''ಎಲ್ಲಾ ಅಂತಾರಾಷ್ಟ್ರೀಯ ಕ್ರಿಕೆಟಿಗರು ಐಪಿಎಲ್‌ ಟೂರ್ನಿಯನ್ನೇ ಎದುರು ನೋಡುತ್ತಿರುತ್ತಾರೆ. ನೀವು ಐಪಿಎಲ್ ಟೂರ್ನಿಯನ್ನು ಪಿಎಸ್‌ಎಲ್‌ ಜತೆ ಹೋಲಿಸಲು ಸಾಧ್ಯವೇ ಇಲ್ಲ. ಐಪಿಎಲ್‌ ಮತ್ತೊಂದು ಸ್ಥರದಲ್ಲಿದೆ ಎಂದು ನನಗನಿಸುತ್ತದೆ. ಐಪಿಎಲ್ ಟೂರ್ನಿಯ ಆಯೋಜನೆ, ಆಯೋಜಕರ ಬದ್ದತೆ ಎಲ್ಲವೂ ವಿಭಿನ್ನವಾಗಿದೆ. ಹೀಗಾಗಿ ಐಪಿಎಲ್ ಜತೆ ಯಾವುದೇ ಟೂರ್ನಿಯನ್ನು ಹೋಲಿಸಲು ಸಾಧ್ಯವಿಲ್ಲ. ಆದರೆ ಜಗತ್ತಿನಲ್ಲಿ ಐಪಿಎಲ್‌ ನಂತರದ ಟೂರ್ನಿ ಏನಾದರೂ ಇದ್ದರೆ ಅದು ಪಿಎಸ್‌ಎಲ್‌ ಮಾತ್ರ ಎಂದು ವಹಾಬ್ ರಿಯಾಜ್ ಹೇಳಿದ್ದಾರೆ.

ಐಪಿಎಲ್ 2021; ಬಲಿಷ್ಠ ತಂಡ ಆಯ್ಕೆ ಮಾಡಿದ ಬ್ರಾಡ್ ಹಾಗ್; ಹರ್ಷಲ್‌ ಪಟೇಲ್‌ಗಿಲ್ಲ ಸ್ಥಾನ..!

ಪಾಕಿಸ್ತಾನ ಸೂಪರ್ ಲೀಗ್‌ನಲ್ಲಿರುವ ಬೌಲಿಂಗ್ ಸ್ಟ್ಯಾಂಡರ್ಡ್‌ ನೀವು ಜಗತ್ತಿನ ಬೇರೆಲ್ಲಿಯೂ ನೋಡಲು ಸಿಗುವುದಿಲ್ಲ. ಅಷ್ಟೇ ಏಕೆ ಐಪಿಎಲ್‌ನಲ್ಲೂ ಆ ಮಟ್ಟಿಗಿನ ಬೌಲಿಂಗ್ ಗುಣಮಟ್ಟವಿಲ್ಲ. ನೀವೇ ಗಮನಿಸಿರಬಹುದು, ಪಿಎಸ್‌ಎಲ್‌ನಲ್ಲಿ ಅಷ್ಟೊಂದು ಗರಿಷ್ಠ ಸ್ಕೋರ್ ದಾಖಲಾದ ಪಂದ್ಯಗಳು ತುಂಬಾನೇ ವಿರಳ. ಏಕೆಂದರೆ ಪಿಎಸ್‌ಎಲ್‌ನಲ್ಲಿನ ಬೌಲಿಂಗ್ ಗುಣಮಟ್ಟ ಅಷ್ಟು ಉತ್ತಮವಾಗಿದೆ ಎಂದು ಪಾಕ್‌ ಎಡಗೈ ವೇಗಿ ಅಭಿಪ್ರಾಯಪಟ್ಟಿದ್ದಾರೆ.

35 ವರ್ಷದ ವಹಾಬ್ ರಿಯಾಜ್‌ 2020ರಲ್ಲಿ ಕಡೆಯ ಬಾರಿಗೆ ಪಾಕಿಸ್ತಾನ ತಂಡದ ಪರ ಕಾಣಿಸಿಕೊಂಡಿದ್ದರು. ನ್ಯೂಜಿಲೆಂಡ್ ವಿರುದ್ದದ ಟಿ20 ಪಂದ್ಯದ ಬಳಿಕ ತಂಡದಿಂದ ಹೊರಗುಳಿದಿರುವ ರಿಯಾಜ್ ಮುಂಬರುವ ದಕ್ಷಿಣ ಆಫ್ರಿಕಾ ವಿರುದ್ದದ ಸರಣಿಯ ವೇಳೆ ತಂಡ ಕೂಡಿಕೊಳ್ಳುವ ವಿಶ್ವಾಸ ಹೊಂದಿದ್ದಾರೆ.
 

click me!