2024ರ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ 20 ತಂಡಗಳು ಭಾಗಿ?

By Suvarna NewsFirst Published May 15, 2021, 12:51 PM IST
Highlights

* ಟಿ20 ವಿಶ್ವಕಪ್ ಟೂರ್ನಿಯಲ್ಲಿ ಹೆಚ್ಚು ತಂಡಗಳು ಭಾಗವಹಿಸುವಂತೆ ಮಾಡಲು ಐಸಿಸಿ ಚಿಂತನೆ

* 2024ರ ಟಿ20 ವಿಶ್ವಕಪ್ ಟೂರ್ನಿಯಲ್ಲಿ 20 ತಂಡಗಳು ಭಾಗಿ?

*  ಸದ್ಯ 16 ತಂಡಗಳು ಟಿ20 ವಿಶ್ವಕಪ್ ಟೂರ್ನಿಯಲ್ಲಿ ಪಾಲ್ಗೊಳ್ಳುತ್ತಿವೆ

ದುಬೈ(ಮೇ.15): 2024ರ ಟಿ20 ವಿಶ್ವಕಪ್‌ಗೆ ಹಾಲಿ ಇರುವ 16 ತಂಡಗಳ ಬದಲಿಗೆ 20 ತಂಡಗಳನ್ನು ಆಡಿಸಲು ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿ (ಐಸಿಸಿ) ಚಿಂತನೆ ನಡೆಸುತ್ತಿದೆ ಎಂದು ಪ್ರತಿಷ್ಠಿತ ಕ್ರಿಕೆಟ್‌ ವೆಬ್‌ಸೈಟ್‌ವೊಂದು ವರದಿ ಮಾಡಿದೆ. 

ತಲಾ 5 ತಂಡಗಳು ನಾಲ್ಕು ಗುಂಪುಗಳನ್ನು ರಚಿಸಿ ಪಂದ್ಯಾವಳಿ ನಡೆಸುವ ಬಗ್ಗೆ ಐಸಿಸಿ ಯೋಜನೆ ರೂಪಿಸುತ್ತಿದೆ ಎನ್ನಲಾಗಿದೆ. ಇದರೊಂದಿಗೆ ಹೆಚ್ಚು ತಂಡಗಳಿಗೆ ವಿಶ್ವಕಪ್‌ನಲ್ಲಿ ಆಡುವ ಅವಕಾಶ ಸಿಗಲಿದ್ದು, ಒಲಿಂಪಿಕ್ಸ್‌ಗೆ ಕ್ರಿಕೆಟ್‌ ಸೇರ್ಪಡೆಗೊಳಿಸುವ ಯೋಜನೆಗೂ ಅನುಕೂಲವಾಗಲಿದೆ ಎನ್ನುವುದು ಐಸಿಸಿಯ ಉದ್ದೇಶವಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ. 

ಇದೇ ವೇಳೆ ಏಕದಿನ ವಿಶ್ವಕಪ್‌ನಲ್ಲೂ ತಂಡಗಳ ಸಂಖ್ಯೆಯನ್ನು ಏರಿಕೆ ಮಾಡುವ ಬಗ್ಗೆ ಐಸಿಸಿ ಚಿಂತನೆ ನಡೆಸುತ್ತಿದೆ ಎನ್ನಲಾಗಿದೆ. ಕಳೆದ ಕೆಲವು ವರ್ಷಗಳಿಂದಲೂ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ನಿರಂತರವಾಗಿ ತಂಡಗಳ ಸಂಖ್ಯೆಯನ್ನು ಕಡಿಮೆ ಮಾಡುತ್ತಾ ಬರಲಾಗುತ್ತಿದೆ. 2007ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ 16 ತಂಗಳು ಭಾಗವಹಿಸಿದ್ದವು. ಇದಾದ ಬಳಿಕ 2011 ಹಾಗೂ 2015ರ ಏಕದಿನ ವಿಶ್ವಕಪ್‌ನಲ್ಲಿ 14 ತಂಡಗಳಿಗೆ ಮಾತ್ರ ಅವಕಾಶ ನೀಡಲಾಗಿತ್ತು. ಇನ್ನು ಇಂಗ್ಲೆಂಡ್‌ನಲ್ಲಿ ನಡೆದ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಕೇವಲ 10 ತಂಡಗಳು ಮಾತ್ರ ಪಾಲ್ಗೊಳ್ಳಲು ಅವಕಾಶ ನೀಡಲಾಗಿತ್ತು.

ಜುಲೈನಲ್ಲಿ ಟಿ20 ವಿಶ್ವಕಪ್‌ ಸ್ಥಳಾಂತರ ಕುರಿತು ನಿರ್ಧಾರ

2021ರ ಅಕ್ಟೋಬರ್ ಹಾಗೂ ನವೆಂಬರ್‌ನಲ್ಲಿ ಭಾರತದಲ್ಲಿ ನಡೆಯಬೇಕಿರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಆಯೋಜನೆಯ ಕುರಿತಂತೆ ಅನುಮಾನದ ತೂಗುಗತ್ತಿ ನೇತಾಡಲಾರಂಭಿಸಿದೆ. ಭಾರತದಲ್ಲಿ ಕೋವಿಡ್‌ ಎರಡನೇ ಅಲೆ ಜೋರಾಗಿದ್ದು, ಪ್ರತಿನಿತ್ಯ ಮೂರುವರೆ ಲಕ್ಷಕ್ಕೂ ಅಧಿಕ ಹೊಸ ಕೋವಿಡ್ ಪ್ರಕರಣಗಳು ಪತ್ತೆಯಾಗುತ್ತಿವೆ. ಹೀಗಾಗಿ ಟಿ20 ವಿಶ್ವಕಪ್ ಟೂರ್ನಿ ಭಾರತದಲ್ಲಿಯೇ ನಡೆಯಲಿದೆಯೇ ಅಥವಾ ಯುಎಇನಲ್ಲಿ ಜರುಗಲಿದೆಯೇ ಎನ್ನುವುದು ಸದ್ಯಕ್ಕೆ ಯಕ್ಷಪ್ರಶ್ನೆಯಾಗಿಯೇ ಉಳಿದಿದೆ.
 

click me!