
ದುಬೈ(ಡಿ.20): 2024ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಆರಂಭಕ್ಕೂ ಮುನ್ನ ಇದೀಗ ಆಟಗಾರರ ಹರಾಜು ನಡೆದಿದೆ. ಡಿಸೆಂಬರ್ 19ರಂದು ನಡೆದ ಐಪಿಎಲ್ ಆಟಗಾರರ ಹರಾಜಿನಲ್ಲಿ ಎಲ್ಲಾ 10 ಫ್ರಾಂಚೈಸಿಗಳು ಸಾಕಷ್ಟು ಅಳೆದುತೂಗಿ ತಮಗೆ ಬೇಕಾದ ಆಟಗಾರರನ್ನು ಖರೀದಿಸುವಲ್ಲಿ ಯಶಸ್ವಿಯಾಗಿವೆ. ಇದೀಗ ಆಟಗಾರರ ಹರಾಜಿನ ವೇಳೆ ಪಂಜಾಬ್ ಕಿಂಗ್ಸ್ ಫ್ರಾಂಚೈಸಿಯು ತಪ್ಪಾದ ಆಟಗಾರನನ್ನು ಬಿಡ್ ಮಾಡಿ ಮಹಾ ಎಡವಟ್ಟು ಮಾಡಿಕೊಂಡು ಸುದ್ದಿಯಾಗಿದೆ.
ಹೌದು, ಪಂಜಾಬ್ ಕಿಂಗ್ಸ್ ಫ್ರಾಂಚೈಸಿಯು ಆಟಗಾರರ ಹರಾಜಿನ ವೇಳೆ ಭಾರತೀಯ ಅನುಭವಿ ದೇಶಿ ಆಟಗಾರನಾಗಿರುವ ಶಶಾಂಕ್ ಸಿಂಗ್ ಅವರಿಗೆ ಬಿಡ್ ಮಾಡಿ ಕೈಸುಟ್ಟುಕೊಂಡಿತು. 20 ಲಕ್ಷ ರುಪಾಯಿ ಮೂಲಬೆಲೆ ಹೊಂದಿದ್ದ ಶಶಾಂಕ್ ಸಿಂಗ್ ಅವರಿಗೆ ಪಂಜಾಬ್ ಕಿಂಗ್ಸ್ ಕನ್‌ಫ್ಯೂಸ್ ಮಾಡಿಕೊಂಡು ಬಿಡ್ ಮಾಡಿತು. ಆ ಬಳಿಕ ತಾವು ತೆಗೆದುಕೊಳ್ಳಬೇಕಿದ್ದ ಆಟಗಾರನಲ್ಲ ಎಂದು ತಿಳಿಯುವಷ್ಟರಲ್ಲಿ ಬಿಡ್ಡಿಂಗ್ ಪ್ರಕ್ರಿಯೆ ಮುಗಿದುಹೋಗಿತ್ತು. ಹೀಗಾಗಿ ಪಂಜಾಬ್ ಕಿಂಗ್ಸ್ ತಂಡದ ಕೋ-ಓನರ್ ಪ್ರೀತಿ ಝಿಂಟಾ ಈ ಬಿಡ್ಡಿಂಗ್ ವಾಪಾಸ್ ಪಡೆಯುವಂತೆ ಮನವಿ ಮಾಡಿಕೊಂಡರಾದರೂ ಅವರ ಮನವಿಯನ್ನು ಪುರಸ್ಕರಿಸಲಿಲ್ಲ.
IPL 2024: ಹರಾಜಿನಲ್ಲೇ ಅರ್ಧ ಸೋತ ಅರ್‌ಸಿಬಿ..! ಮಾಡಿದ ಎಡವಟ್ಟು ಒಂದೆರಡಲ್ಲ
32 ವರ್ಷದ ಶಶಾಂಕ್ ಸಿಂಗ್ ದೇಶಿ ಕ್ರಿಕೆಟ್‌ನಲ್ಲಿ ಛತ್ತೀಸ್‌ಘಡ ತಂಡವನ್ನು ಪ್ರತಿನಿಧಿಸುತ್ತಾ ಬಂದಿದ್ದಾರೆ. ಆಕ್ಷನರ್ ಆಗಿದ್ದ ಮಲ್ಲಿಕಾ ಸಾಗರ್, ಈ ಆಟಗಾರನ ಹೆಸರನ್ನು ಕರೆಯುತ್ತಿದ್ದಂತೆಯೇ ಪಂಜಾಬ್ ಕಿಂಗ್ಸ್ ಫ್ರಾಂಚೈಸಿಯು ಮೂಲಬೆಲೆಗೆ ಬಿಡ್ ಮಾಡಿತು. ಇನ್ನೂ ಅಂತರಾಷ್ಟ್ರೀಯ ಕ್ರಿಕೆಟ್ ಪಂದ್ಯವನ್ನಾಡದ ಬ್ಯಾಟಿಂಗ್ ಆಲ್ರೌಂಡರ್ ಶಶಾಂಕ್ ಸಿಂಗ್, ಕಳೆದ ಬಾರಿಯ ಐಪಿಎಲ್ ಟೂರ್ನಿಯ ವೇಳೆಯಲ್ಲಿ ಅನ್‌ಸೋಲ್ಡ್ ಆಗಿದ್ದರು.
ಶಶಾಂಕ್ ಸಿಂಗ್ ಹೆಸರು ಬರುತ್ತಿದ್ದಂತೆಯೇ ಪ್ರೀತಿ ಝಿಂಟಾ ಉಳಿದ ಪಂಜಾಬ್ ಕಿಂಗ್ಸ್‌ನ ಸಹ ಮಾಲೀಕರ ಜತೆ ಚರ್ಚಿಸಿ ಪ್ಯಾಡ್ಲ್ ಎತ್ತಿ ಬಿಡ್ ಮಾಡಿದರು. ಅದರಂತೆ ಮಲ್ಲಿಕಾ ಸಾಗರ್ ಹರಾಜು ಪ್ರಕ್ರಿಯೆ ಮುಗಿಸಿದರು. ಶಶಾಂಕ್ ಸಿಂಗ್‌ಗೆ ಉಳಿದ ಯಾವ ಫ್ರಾಂಚೈಸಿಯು ಬಿಡ್ ಮಾಡಲಿಲ್ಲ. ಅಂತಿಮವಾಗಿ ಶಶಾಂಕ್ ಸಿಂಗ್ ಪಂಜಾಬ್ ಕಿಂಗ್ಸ್ ಪಾಲಾದರು.
ಹೇಜಲ್‌ವುಡ್ ಸೇರಿ ಘಟಾನುಘಟಿ ಕ್ರಿಕೆಟಿಗರು ಅನ್‌ಸೋಲ್ಡ್, ಕೆಲ ಕನ್ನಡಿಗರಿಗೂ ನಿರಾಸೆ!
ಇದಾದ ಬಳಿಕ ಮುಂದಿನ ಸೆಟ್ ಹರಾಜು ಆರಂಭವಾಯಿತು. ತಾನ್ಯ ತ್ಯಾಗರಾಜನ್ ಹೆಸರು ಬರುತ್ತಿದ್ದಂತೆಯೇ ಪಂಜಾಬ್ ಕಿಂಗ್ಸ್‌ಗೆ ತಾವು ಈ ಹಿಂದೆ ತಪ್ಪಾದ ಆಟಗಾರನಿಗೆ ಬಿಡ್ ಮಾಡಿರುವುದು ಅರಿವಾಯಿತು. ನಂತರ ಮಾಲೀಕರಾದ ಪ್ರೀತಿ ಜಿಂಟಾ ಹಾಗೂ ನೆಸ್ ವಾಡಿಯಾ ನಾವು ಖರೀದಿಸಬೇಕಿದ್ದ ಆಟಗಾರ ಶಶಾಂಕ್ ಸಿಂಗ್ ಅಲ್ಲ ಎಂದು ತಿಳಿಸಿದರು. ಶಶಾಂಕ್ ಸಿಂಗ್ ಅವರನ್ನು ಕೈಬಿಡಲು ಸಿದ್ದರಿದ್ದರಾದರೂ, ಒಂದು ಸಲ ಹ್ಯಾಮರ್ ಡೌನ್ ಆದ ಬಳಿಕ ಐಪಿಎಲ್ ಹರಾಜಿನ ನಿಯಮದಂತೆ ಪರಿಷ್ಕರಿಸಲು ಸಾಧ್ಯವಿಲ್ಲದಿರುವುದರಿಂದ ಅನಿವಾರ್ಯವಾಗಿ ಶಶಾಂಕ್ ಸಿಂಗ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಬೇಕಾಗಿ ಬಂದಿತು.
ಹೀಗಿತ್ತು ನೋಡಿ ಆ ಕ್ಷಣ:
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.