IPL Auction 2024: ಸ್ಟಾರ್ಕ್‌, ಕಮಿನ್ಸ್‌ಗೆ ಏಕಿಷ್ಟು ದೊಡ್ಡ ಮೊತ್ತ? IPL ಸೀಸನ್ ಪೂರ್ತಿ ಲಭ್ಯ ಇರ್ತಾರಾ ಈ ಇಬ್ಬರು ವೇಗಿಗಳು?

By Kannadaprabha NewsFirst Published Dec 20, 2023, 10:58 AM IST
Highlights

ಮೊದಲು ಆರ್‌ಸಿಬಿ-ಸನ್‌ರೈಸರ್ಸ್‌ ಬಿಡ್ಡಿಂಗ್‌ ವಾರ್‌ನಲ್ಲಿ ಪ್ಯಾಟ್‌ ಕಮಿನ್ಸ್‌ 20.5 ಕೋಟಿ ರು.ಗೆ ಬಿಕರಿಯಾದರೆ, ಆ ಬಳಿಕ ಕೋಲ್ಕತಾ ನೈಟ್‌ರೈಡರ್ಸ್‌ ತನ್ನೆಲ್ಲಾ ಪ್ರತಿ ಸ್ಪರ್ಧಿಗಳನ್ನು ಹಿಂದಿಕ್ಕಿ ಮಿಚೆಲ್‌ ಸ್ಟಾರ್ಕ್‌ರನ್ನು ಬರೋಬ್ಬರಿ 24.75 ಕೋಟಿ ರು.ಗೆ ಖರೀದಿ ಮಾಡಿತು. ಇವರಿಬ್ಬರ ಖರೀದಿ ಕ್ರಿಕೆಟ್‌ ಜಗತ್ತಿನಲ್ಲಿ ಸಂಚಲನವನ್ನೇ ಮೂಡಿಸಿದ್ದು, ಐಪಿಎಲ್‌ ಹರಾಜಿನ ಲೆಕ್ಕಾಚಾರದ ಹಿಂದಿನ ತರ್ಕವೇನು ಎನ್ನುವ ಅಭಿಯಾನಿಗಳ ಕುತೂಹಲ ಇನ್ನಷ್ಟು ಹೆಚ್ಚಾಗಿದೆ.

ದುಬೈ(ಡಿ.20): ಐಪಿಎಲ್‌ ಇತಿಹಾಸದಲ್ಲೇ ಅತಿ ದುಬಾರಿ ಆಟಗಾರರು ಎನ್ನುವ ದಾಖಲೆಯನ್ನು ಆಸ್ಟ್ರೇಲಿಯಾದ ಇಬ್ಬರು ಚಾಂಪಿಯನ್‌ ವೇಗಿಗಳು ಬರೆದಿದ್ದಾರೆ. ಮಂಗಳವಾರ ಇಲ್ಲಿ ನಡೆದ 17ನೇ ಆವೃತ್ತಿಯ ಮಿನಿ ಹರಾಜು ಪ್ರಕ್ರಿಯೆಯಲ್ಲಿ ದುಬಾರಿ ಆಟಗಾರನ ದಾಖಲೆ ಎರಡು ಬಾರಿ ಉತ್ತಮಗೊಂಡಿತು.

ಮೊದಲು ಆರ್‌ಸಿಬಿ-ಸನ್‌ರೈಸರ್ಸ್‌ ಬಿಡ್ಡಿಂಗ್‌ ವಾರ್‌ನಲ್ಲಿ ಪ್ಯಾಟ್‌ ಕಮಿನ್ಸ್‌ 20.5 ಕೋಟಿ ರು.ಗೆ ಬಿಕರಿಯಾದರೆ, ಆ ಬಳಿಕ ಕೋಲ್ಕತಾ ನೈಟ್‌ರೈಡರ್ಸ್‌ ತನ್ನೆಲ್ಲಾ ಪ್ರತಿ ಸ್ಪರ್ಧಿಗಳನ್ನು ಹಿಂದಿಕ್ಕಿ ಮಿಚೆಲ್‌ ಸ್ಟಾರ್ಕ್‌ರನ್ನು ಬರೋಬ್ಬರಿ 24.75 ಕೋಟಿ ರು.ಗೆ ಖರೀದಿ ಮಾಡಿತು. ಇವರಿಬ್ಬರ ಖರೀದಿ ಕ್ರಿಕೆಟ್‌ ಜಗತ್ತಿನಲ್ಲಿ ಸಂಚಲನವನ್ನೇ ಮೂಡಿಸಿದ್ದು, ಐಪಿಎಲ್‌ ಹರಾಜಿನ ಲೆಕ್ಕಾಚಾರದ ಹಿಂದಿನ ತರ್ಕವೇನು ಎನ್ನುವ ಅಭಿಯಾನಿಗಳ ಕುತೂಹಲ ಇನ್ನಷ್ಟು ಹೆಚ್ಚಾಗಿದೆ.

ಸ್ಟಾರ್ಕ್‌, ಕಮಿನ್ಸ್‌ಗೆ ಏಕಿಷ್ಟು ದೊಡ್ಡ ಮೊತ್ತ?

ಮಿಚೆಲ್‌ ಸ್ಟಾರ್ಕ್‌ ಹಾಗೂ ಪ್ಯಾಟ್‌ ಕಮಿನ್ಸ್‌ ಇಬ್ಬರೂ ಚಾಂಪಿಯನ್‌ ಬೌಲರ್‌ಗಳು. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ದಶಕಕ್ಕೂ ಹೆಚ್ಚು ಕಾಲ ಪಳಗಿರುವವರು. ಸ್ಟಾರ್ಕ್‌ ತಮ್ಮ ಪ್ರಚಂಡ ವೇಗ, ಸ್ವಿಂಗ್‌ನಿಂದ ಎಂತಹ ಬಲಿಷ್ಠ ಬ್ಯಾಟರ್‌ನನ್ನು ಬೇಕಿದ್ದರೂ ನಡುಗಿಸಬಲ್ಲರು.

ಇನ್ನು ಕಮಿನ್ಸ್‌ ಆಸ್ಟ್ರೇಲಿಯಾದ ಟೆಸ್ಟ್‌, ಏಕದಿನ ತಂಡದ ನಾಯಕ. ಇತ್ತೀಚೆಗಷ್ಟೇ ಆಸ್ಟ್ರೇಲಿಯಾಕ್ಕೆ ಏಕದಿನ ವಿಶ್ವಕಪ್‌ ಗೆಲ್ಲಿಸಿಕೊಟ್ಟಿದ್ದ ನಾಯಕ. ಎಲ್ಲಕ್ಕಿಂತ ಮುಖ್ಯವಾಗಿ ಭಾರತೀಯ ಪಿಚ್‌ಗಳ ಬಗ್ಗೆ ಅಗಾಧವಾದ ಜ್ಞಾನ ಹೊಂದಿದ್ದಾರೆ. ತಂಡವನ್ನು ಮುನ್ನಡೆಸಬಲ್ಲ ಆಟಗಾರ ಕೂಡ ಹೌದು. ಅವರನ್ನೇ ಸನ್‌ರೈಸರ್ಸ್‌ ನಾಯಕನನ್ನಾಗಿ ನೇಮಿಸಿದರೂ ಅಚ್ಚರಿಯಿಲ್ಲ.

Ind vs SA 2nd ODI: ಕಳಪೆ ಬ್ಯಾಟಿಂಗ್‌ಗೆ ಬೆಲೆ ತೆತ್ತ ಭಾರತ

ಐಪಿಎಲ್‌ ಋತು ಪೂರ್ತಿ ಲಭ್ಯ ಇರ್ತಾರಾ ಸ್ಟಾರ್ಕ್‌, ಕಮಿನ್ಸ್‌?

ಕಮಿನ್ಸ್‌ ಹಾಗೂ ಸ್ಟಾರ್ಕ್‌ರನ್ನು ಖರೀದಿಸಿರುವ ತಂಡಗಳು ಈ ಇಬ್ಬರು ದಿಗ್ಗಜ ವೇಗಿಗಳನ್ನು ಕೇಳಬೇಕಿರುವ ಮೊದಲ ಪ್ರಶ್ನೆ, ‘ನೀವು ಪೂರ್ತಿ ಋತುವಿಗೆ ಲಭ್ಯರಿರುತ್ತೀರಾ?, ಎಲ್ಲಾ ಪಂದ್ಯಗಳನ್ನು ಆಡುತ್ತೀರಾ’ ಎಂದು. 

ಹರಾಜಿಗೂ ಮೊದಲು ಲಭ್ಯತೆ ಬಗ್ಗೆ ಮಾಹಿತಿ ಪಡೆದುಕೊಳ್ಳಲಾಗಿರುತ್ತದೆ ಆದರೂ, ಇಬ್ಬರೂ ಟೆಸ್ಟ್‌ ಕ್ರಿಕೆಟ್‌ನತ್ತ ಹೆಚ್ಚು ಗಮನ ಹರಿಸುವ ಆಟಗಾರರು. ಕ್ರಿಕೆಟ್‌ ಆಸ್ಟ್ರೇಲಿಯಾದ ಕೆಲಸದ ಒತ್ತಡ ನಿರ್ವಹಣೆ ನಿಯಮ ಈ ಇಬ್ಬರನ್ನೂ ಎಲ್ಲಾ ಪಂದ್ಯಗಳನ್ನು ಆಡದಂತೆ ತಡೆಯಬಹುದು. ಆದರೆ ಇಷ್ಟು ದೊಡ್ಡ ಮೊತ್ತಕ್ಕೆ ಬಿಕರಿಯಾದ ಮೇಲೆ ಆಡದೆ ಹೊರಗುಳಿಯಲೂ ಸಾಧ್ಯವಿರುವುದಿಲ್ಲ. ಸ್ಟಾರ್ಕ್‌ ಹಾಗೂ ಕಮಿನ್ಸ್‌ರನ್ನು ಆಯಾ ತಂಡಗಳು ಎಷ್ಟು ಸಮರ್ಪಕವಾಗಿ ಬಳಸಿಕೊಳ್ಳಲಿವೇ ಎನ್ನುವ ಕುತೂಹಲ ಎಲ್ಲರಲ್ಲೂ ಇದೆ.

'ಬಲಗೈ ಸುರೇಶ್‌ ರೈನಾ..' ಸಮೀರ್‌ ರಿಜ್ವಿಯನ್ನು 8.40 ಕೋಟಿಗೆ ಖರೀದಿಸಿದ ಚೆನ್ನೈ ಸೂಪರ್‌ ಕಿಂಗ್ಸ್!

8 ವರ್ಷ ಬಳಿಕ ಐಪಿಎಲ್‌ಗೆ ಮರಳಿದ ಸ್ಟಾರ್ಕ್‌ಗೆ ಲಾಟರಿ!

ಮಿಚೆಲ್‌ ಸ್ಟಾರ್ಕ್‌ ಈ ಬಾರಿ ಕೋಲ್ಕತಾಕ್ಕೆ 24.75 ಕೋಟಿ ರು.ಗೆ ಸೇರ್ಪಡೆಗೊಂಡಿದ್ದು, ಐಪಿಎಲ್‌ ಇತಿಹಾಸದ ದುಬಾರಿ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಗಮನಾರ್ಹ ಸಂಗತಿ ಏನೆಂದರೆ ಸ್ಟಾರ್ಕ್‌ ಕೊನೆ ಬಾರಿ ಐಪಿಎಲ್‌ನಲ್ಲಿ ಆಡಿದ್ದು 2015ರಲ್ಲಿ. ₹5 ಕೋಟಿ ನೀಡಿ 2014ರ ಹರಾಜಿನಲ್ಲಿ ಸ್ಟಾರ್ಕ್‌ರನ್ನು ಆರ್‌ಸಿಬಿ ಖರೀದಿಸಿತ್ತು. 2 ಆವೃತ್ತಿಗಳಲ್ಲಿ ಆಡಿದ್ದ ಅವರು ಬಳಿಕ ಈ ವರೆಗೂ ವಿವಿಧ ಕಾರಣಗಳಿಂದಾಗಿ ಟೂರ್ನಿಗೆ ಗೈರಾಗಿದ್ದರು.

ಕಮಿನ್ಸ್‌ಗೆ 2014ರಲ್ಲಿ ₹1 ಕೋಟಿ, ಈ ಬಾರಿ ₹20.5 ಕೋಟಿಗೆ ಬಿಕರಿ!

2014ರಲ್ಲಿ ₹1 ಕೋಟಿಗೆ ಕೋಲ್ಕತಾ ತಂಡ ಸೇರ್ಪಡೆಗೊಂಡು ಐಪಿಎಲ್ ವೃತ್ತಿಬದುಕು ಆರಂಭಿಸಿದ್ದ ಪ್ಯಾಟ್ ಕಮಿನ್ಸ್, ದಶಕದ ಬಳಿಕ ಐಪಿಎಲ್ ಇತಿಹಾಸದ 2ನೇ ಅತಿ ದುಬಾರಿ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ಮೊದಲು 2020ರಲ್ಲಿ ₹15.5 ಕೋಟಿಗೆ ಕೋಲ್ಕತಾಗೆ ಹರಾಜಾಗಿ, ದುಬಾರಿ ವಿದೇಶಿ ಆಟರಾರರಲ್ಲಿ ಒಬ್ಬರು ಎನಿಸಿಕೊಂಡಿದ್ದರು. ನಂತರ 2022ರಲ್ಲಿ ಮತ್ತೆ ಹರಾಜಲ್ಲಿ ಕೋಲ್ಕತಾಗೆ 7.25 ಕೋಟಿಗೆ ಮಾರಾಟಗೊಂಡಿದ್ದರು. ಆದರೆ ಕಳೆದ ವರ್ಷ ಅಂತಾರಾಷ್ಟ್ರೀಯ ಕ್ರಿಕೆಟ್‌ನತ್ತ ಹೆಚ್ಚಿನ ಗಮನ ಹರಿಸುವ ನಿಟ್ಟಿನಲ್ಲಿ ಐಪಿಎಲ್ ನಿಂದ ಹೊರಗುಳಿದಿದ್ದರು.

ಐಪಿಎಲ್‌ ಚಾಂಪಿಯನ್ಸ್‌ಗಿಂತ ಸ್ಟಾರ್ಕ್‌, ಕಮಿನ್ಸ್‌ಗೆ ಹೆಚ್ಚು ಮೊತ್ತ!

ವಿಶ್ವದ ಶ್ರೀಮಂತ ಟಿ20 ಕ್ರಿಕೆಟ್‌ ಲೀಗ್‌ ಎನಿಸಿಕೊಂಡಿರುವ ಐಪಿಎಲ್‌ನಲ್ಲಿ ಚಾಂಪಿಯನ್‌ ಆಗುವ ತಂಡಕ್ಕೆ ಸಿಗುವ ಬಹುಮಾನ ಮೊತ್ತಕ್ಕಿಂತಲೂ ಹೆಚ್ಚಿನ ಹಣವನ್ನು ಈ ಬಾರಿ ಹರಾಜಿನಲ್ಲಿ ಮಿಚೆಲ್‌ ಸ್ಟಾರ್ಕ್‌, ಪ್ಯಾಟ್‌ ಕಮಿನ್ಸ್‌ ಪಡೆದು ಎಲ್ಲರ ಹುಬ್ಬೇರಿಸಿದ್ದಾರೆ. 2023ರ ಐಪಿಎಲ್‌ನಲ್ಲಿ ಚಾಂಪಿಯನ್‌ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡಕ್ಕೆ ಸಿಕ್ಕಿದ್ದು ₹20 ಕೋಟಿ ಬಹುಮಾನ ಮೊತ್ತ. ಆದರೆ ಹರಾಜಿನಲ್ಲಿ ಸ್ಟಾರ್ಕ್‌ ₹24.75 ಕೋಟಿ, ಕಮಿನ್ಸ್‌ ₹20.50 ಕೋಟಿ ಪಡೆದಿದ್ದಾರೆ.
 

click me!