ಡಿಸೆಂಬರ್ 19ರಂದು ದುಬೈನಲ್ಲಿ ಐಪಿಎಲ್ ಹರಾಜು; ಆಟಗಾರರ ರೀಟೈನ್‌ಗೆ ಡೇಟ್ ಫಿಕ್ಸ್

By Naveen Kodase  |  First Published Nov 4, 2023, 1:38 PM IST

ಪ್ರತಿ ಫ್ರಾಂಚೈಸಿಯು ಈ ಬಾರಿ ಆಟಗಾರರ ಹರಾಜಿನಲ್ಲಿ ಗರಿಷ್ಠ 100 ಕೋಟಿ ರುಪಾಯಿ ಖರ್ಚು ಮಾಡಲು ಅವಕಾಶ ಕಲ್ಪಿಸಲಾಗಿದೆ. ಇದು ಮಿನಿ ಹರಾಜಾಗಿದ್ದು, ಮುಂದಿನ ವರ್ಷ ಮೆಗಾ ಹರಾಜು ನಡೆಯಲಿದೆ. 


ದುಬೈ(ನ.11): 2024ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌(ಐಪಿಎಲ್‌)ನ ಆಟಗಾರರ ಹರಾಜು ಪ್ರಕ್ರಿಯೆ ಡಿಸೆಂಬರ್ 19ರಂದು ದುಬೈನಲ್ಲಿ ನಡೆಯಲಿದೆ ಎಂದು ಬಿಸಿಸಿಐ ಖಚಿತಪಡಿಸಿದೆ. ಐಪಿಎಲ್‌ ಇತಿಹಾಸದಲ್ಲೇ ಇದೇ ಮೊದಲ ಬಾರಿ ಹರಾಜು ಭಾರತದ ಹೊರಗಡೆ ನಡೆಯಲಿದೆ. 

ಪ್ರತಿ ಫ್ರಾಂಚೈಸಿಗೆ ಆಟಗಾರರ ರೀಟೈನ್‌ ಪಟ್ಟಿ ಸಲ್ಲಿಕೆಗೆ ನವೆಂಬರ್ 26ರ ಗಡುವು ನೀಡಲಾಗಿದೆ. ಈ ಮೊದಲು ನವೆಂಬರ್ 15ಕ್ಕೂ ಮುನ್ನ ಫ್ರಾಂಚೈಸಿಗಳಿಗೆ ರೀಟೈನ್ ಆಟಗಾರರ ಪಟ್ಟಿ ಸಲ್ಲಿಸುವಂತೆ ಬಿಸಿಸಿಐ ಗಡುವು ನೀಡಿದೆ. ಇದೀಗ ಆ ದಿನಾಂಕವನ್ನು ಬಿಸಿಸಿಐ ಪರಿಷ್ಕರಿಸಿದೆ.

Tap to resize

Latest Videos

ಪ್ರತಿ ಫ್ರಾಂಚೈಸಿಯು ಈ ಬಾರಿ ಆಟಗಾರರ ಹರಾಜಿನಲ್ಲಿ ಗರಿಷ್ಠ 100 ಕೋಟಿ ರುಪಾಯಿ ಖರ್ಚು ಮಾಡಲು ಅವಕಾಶ ಕಲ್ಪಿಸಲಾಗಿದೆ. ಇದು ಮಿನಿ ಹರಾಜಾಗಿದ್ದು, ಮುಂದಿನ ವರ್ಷ ಮೆಗಾ ಹರಾಜು ನಡೆಯಲಿದೆ. 

ICC World Cup 2023: ಕುಗ್ಗಿರುವ ಇಂಗ್ಲೆಂಡ್‌ಗೆ ಆಸೀಸ್‌ ಸವಾಲು..!

ವೆಸ್ಟ್‌ಇಂಡೀಸ್‌ ಆಲ್ರೌಂಡರ್‌ ಶೆಫರ್ಡ್‌ ಮುಂಬೈ ತಂಡಕ್ಕೆ

ಮುಂಬೈ: ವೆಸ್ಟ್‌ಇಂಡೀಸ್‌ನ ಆಲ್ರೌಂಡರ್‌ ರೊಮಾರಿಯೋ ಶೆಫರ್ಡ್‌ 2024ರ ಐಪಿಎಲ್‌ಗೂ ಮುನ್ನ ಮುಂಬೈ ಇಂಡಿಯನ್ಸ್‌ ತಂಡಕ್ಕೆ ಸೇರ್ಪಡೆಗೊಂಡಿದ್ದಾರೆ. ಶೆಫರ್ಡ್‌ ಕಳೆದ ವರ್ಷ ಹರಾಜಿನಲ್ಲಿ ಲಖನೌ ಸೂಪರ್‌ ಜೈಂಟ್ಸ್‌ ತಂಡಕ್ಕೆ 50 ಲಕ್ಷ ರು.ಗೆ ಹರಾಜಾಗಿದ್ದರು. ಅಷ್ಟೇ ಬೆಲೆಗೆ ಅವರನ್ನು ಸದ್ಯ ಮುಂಬೈ ತಂಡ ತನ್ನತ್ತ ಸೆಳೆದುಕೊಂಡಿದೆ. ಅವರು ಈ ವರೆಗೆ 4 ಐಪಿಎಲ್‌ ಪಂದ್ಯಗಳನ್ನಾಡಿದ್ದಾರೆ.

ಐಪಿಎಲ್‌ನಲ್ಲಿ ಪಾಲುದಾರಿಕೆಗೆ ಸೌದಿ ಅರೇಬಿಯಾ ಆಸಕ್ತಿ!

ನವದೆಹಲಿ: ಜಗತ್ತಿನ ಶ್ರೀಮಂತ ಕ್ರಿಕೆಟ್‌ ಲೀಗ್‌ ಎನಿಸಿಕೊಂಡಿರುವ ಐಪಿಎಲ್‌ನಲ್ಲಿ ಸೌದಿ ಅರೇಬಿಯಾ 5 ಬಿಲಿಯನ್‌ ಅಮೆರಿಕನ್‌ ಡಾಲರ್‌ ಹಣ ಹೂಡಿಕೆ ಮಾಡಲು ಆಸಕ್ತಿ ತೋರಿದೆ ಎಂದು ಅಂ.ರಾ. ಮಾಧ್ಯಮವೊಂದು ವರದಿ ಮಾಡಿದೆ.

30 ಬಿಲಿಯನ್‌ ಅಮೆರಿಕನ್‌ ಡಾಲರ್‌ ಮೌಲ್ಯ ಹೊಂದಿರುವ ಐಪಿಎಲ್ ಅನ್ನು ಒಂದು ಪ್ರತ್ಯೇಕ ಕಂಪನಿಯಾಗಿ ಸ್ಥಾಪಿಸಿ, ಆ ಸಂಸ್ಥೆಯಲ್ಲಿ 5 ಬಿಲಿಯನ್‌ ಡಾಲರ್‌ ಹೂಡಿಕೆ ಮಾಡುವ ಬಗ್ಗೆ ಸೌದಿ ರಾಜಕುಮಾರ ಮೊಹಮ್ಮದ್ ಬಿನ್ ಸಲ್ಮಾನ್‌ರ ಸಲಹೆಗಾರರು ಭಾರತ ಸರ್ಕಾರದೊಂದಿಗೆ ಮಾತುಕತೆಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

Breaking: ಟೀಂ ಇಂಡಿಯಾಗೆ ಅತಿದೊಡ್ಡ ಶಾಕ್: ಸ್ಟಾರ್ ಕ್ರಿಕೆಟಿಗ ವಿಶ್ವಕಪ್‌ನಿಂದಲೇ ಔಟ್..!

ಕಳೆದ ಸೆಪ್ಟೆಂಬರ್‌ನಲ್ಲಿ ಸೌದಿ ರಾಜ ಭಾರತಕ್ಕೆ ಭೇಟಿ ನೀಡಿದ್ದ ವೇಳೆ ಈ ಕುರಿತು ಮಾತುಕತೆ ನಡೆಸಲಾಗಿದ್ದು, ಹೂಡಿಕೆ ಮಾಡುವ ಬಗ್ಗೆ ಪ್ರಸ್ತಾಪ ಮುಂದಿಟ್ಟಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ. ಬಿಸಿಸಿಐ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಡೆಲ್ಲಿಯಲ್ಲಿ ವಾಯುಮಾಲಿನ್ಯ: ಬಾಂಗ್ಲಾದ ಅಭ್ಯಾಸ ರದ್ದು!

ನವದೆಹಲಿ: ಇಲ್ಲಿನ ವಾಯುಮಾಲಿನ್ಯದ ಪರಿಣಾಮ ವಿಶ್ವಕಪ್‌ಗೂ ತಟ್ಟಿದ್ದು, ಶುಕ್ರವಾರ ಬಾಂಗ್ಲಾದೇಶದ ಆಟಗಾರರು ತಮ್ಮ ಅಭ್ಯಾಸವನ್ನೇ ರದ್ದು ಪಡಿಸಿದರು. ನ.6ರಂದು ಇಲ್ಲಿನ ಕ್ರೀಡಾಂಗಣದಲ್ಲಿ ಬಾಂಗ್ಲಾ-ಶ್ರೀಲಂಕಾ ಪಂದ್ಯ ನಡೆಯಲಿದೆ. ಇದಕ್ಕಾಗಿ ಬುಧವಾರವೇ ಬಾಂಗ್ಲಾ ಆಟಗಾರರು ಡೆಲ್ಲಿ ತಲುಪಿದ್ದು, ಶುಕ್ರವಾರ ಅಭ್ಯಾಸ ಆರಂಭಿಸಬೇಕಿತ್ತು. ಆದರೆ ತೀವ್ರ ವಾಯುಮಾಲಿನ್ಯ ಕಾರಣದಿಂದ ಆಟಗಾರರು ಮೈದಾನಕ್ಕಿಳಿಯದೇ ಹೋಟೆಲ್‌ನಲ್ಲೇ ಕಾಲ ಕಳೆದರು. ಶನಿವಾರವೂ ಕೂಡಾ ಬಾಂಗ್ಲಾಕ್ಕೆ ಅಭ್ಯಾಸ ಶಿಬಿರ ನಿಗದಿಯಾಗಿದೆ.

ಕಳಪೆ ಪ್ರದರ್ಶನ: ವಿವರಣೆ ಕೇಳಿದ ಲಂಕಾ ಮಂಡಳಿ!

ಕೊಲಂಬೊ: ಏಕದಿನ ವಿಶ್ವಕಪ್‌ನಲ್ಲಿ ಹೀನಾದ ಪ್ರದರ್ಶನ ನೀಡುತ್ತಿರುವ ಹಿನ್ನೆಲೆಯಲ್ಲಿ ಶ್ರೀಲಂಕಾ ತಂಡದ ಕೋಚ್‌ ಹಾಗೂ ಆಯ್ಕೆಗಾರರಿಂದ ಲಂಕಾ ಕ್ರಿಕೆಟ್‌ ಮಂಡಳಿ(ಎಸ್‌ಎಲ್‌ಸಿ) ತುರ್ತು ವಿವರಣೆ ಕೇಳಿದೆ. ಗುರುವಾರ ಭಾರತ ವಿರುದ್ಧದ 302 ರನ್ ಹೀನಾಯ ಸೋಲಿನ ಬಳಿಕ ಈ ಬಗ್ಗೆ ಸ್ಪಷ್ಟನೆ ಕೇಳಿದ್ದು, ತಂಡದ ಸಿದ್ಧತೆ, ಆಟಗಾರರ ಆಯ್ಕೆ ಹಾಗೂ ಪಂದ್ಯದ ವೇಳೆ ಕೈಗೊಳ್ಳುತ್ತಿರುವ ನಿರ್ಧಾರದ ಬಗ್ಗೆ ವಿವರಣೆ ನೀಡುವಂತೆ ಸೂಚಿಸಿದೆ. ಅಲ್ಲದೆ ಆಟಗಾರರ ವೈಯಕ್ತಿಕ ಪ್ರದರ್ಶನ, ಪಂದ್ಯದ ಬಳಿಕ ಸೋಲಿನ ಬಗ್ಗೆ ಪರಾಮರ್ಶೆ ಬಗ್ಗೆಯೂ ಸ್ಪಷ್ಟನೆ ಕೇಳಿದೆ. ಲಂಕಾ ಟೂರ್ನಿಯಲ್ಲಿ ಆಡಿರುವ 7 ಪಂದ್ಯಗಳಲ್ಲಿ ಕೇವಲ 2ರಲ್ಲಿ ಗೆದ್ದಿದೆ.

click me!