
ನವದೆಹಲಿ(ನ.10): 2023ರ ಐಪಿಎಲ್ ಆಟಗಾರರ ಮಿನಿ ಹರಾಜು ಪ್ರಕ್ರಿಯೆ ಡಿಸೆಂಬರ್ 23ರಂದು ಕೊಚ್ಚಿಯಲ್ಲಿ ನಡೆಯಲಿದೆ ಎಂದು ಬುಧವಾರ ಬಿಸಿಸಿಐ ಅಧಿಕೃತ ಪ್ರಕಟಣೆ ಹೊರಡಿಸಿದೆ. ಹರಾಜು ಪ್ರಕ್ರಿಯೆಯು ಬೆಂಗಳೂರು ಇಲ್ಲವೇ ಟರ್ಕಿಯ ಇಸ್ತಾಂಬುಲ್‌ನಲ್ಲಿ ನಡೆಯಬಹುದು ಎನ್ನಲಾಗಿತ್ತು. ಆದರೆ ಬಿಸಿಸಿಐ ಕೊಚ್ಚಿಯಲ್ಲಿ ನಡೆಸಲು ನಿರ್ಧರಿಸಿದೆ. ತಂಡಗಳು ತಾವು ಉಳಿಸಿಕೊಳ್ಳುವ ಆಟಗಾರರ ಪಟ್ಟಿಯನ್ನು ನವೆಂಬರ್ 15ರೊಳಗೆ ಪ್ರಕಟಿಸಬೇಕಿದೆ. ಕಳೆದ ಹರಾಜಿನ ಬಳಿಕ ಉಳಿದ ಹಣ, ಆಟಗಾರರನ್ನು ಕೈಬಿಟ್ಟ ಬಳಿಕ ಉಳಿಯುವ ಹಣದ ಜೊತೆಗೆ ಹೆಚ್ಚುವರಿ 5 ಕೋಟಿ ರುಪಾಯಿ ಬಳಸಲು ಅವಕಾಶ ನೀಡಲಾಗಿದೆ.
ಕಳೆದ ಮೆಗಾ ಹರಾಜಿನ ಬಳಿಕ ಪಂಜಾಬ್ ಕಿಂಗ್ಸ್ ಫ್ರಾಂಚೈಸಿಯು ಸದ್ಯ ಗರಿಷ್ಠ 3.45 ಕೋಟಿ ರುಪಾಯಿಗಳನ್ನು ತನ್ನ ಪರ್ಸ್‌ನಲ್ಲಿ ಉಳಿಸಿಕೊಂಡಿದೆ. ಇನ್ನು ಸಂಜೀವ್ ಗೋಯೆಂಕಾ ಒಡೆತನದ ಲಖನೌ ಸೂಪರ್ ಜೈಂಟ್ಸ್ ತಂಡವು ತನ್ನ ಪರ್ಸ್‌ನಲ್ಲಿರುವ ಎಲ್ಲಾ ಹಣವನ್ನು ಬಳಸಿಕೊಂಡು ಆಟಗಾರರನ್ನು ಖರೀದಿಸಿತ್ತು. ಇನ್ನುಳಿದಂತೆ ಚೆನ್ನೈ ಸೂಪರ್ ಕಿಂಗ್ಸ್ 2.95 ಕೋಟಿ ರುಪಾಯಿ, ರಾಯಲ್ ಚಾಲೆಂಜರ್ಸ್ ಬೆಂಗಳೂರು 1.55 ಕೋಟಿ ರುಪಾಯಿ, ರಾಜಸ್ಥಾನ ರಾಯಲ್ಸ್ 95 ಲಕ್ಷ ರುಪಾಯಿ, ಕೋಲ್ಕತಾ ನೈಟ್ ರೈಡರ್ಸ್ 45 ಲಕ್ಷ ರುಪಾಯಿ ಹಣವನ್ನು ತನ್ನ ಪರ್ಸ್‌ನಲ್ಲಿ ಉಳಿಸಿಕೊಂಡಿದೆ. ಇನ್ನುಳಿದಂತೆ ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ 15 ಲಕ್ಷ, ಇನ್ನುಳಿದ ಮೂರು ತಂಡಗಳಾದ ಮುಂಬೈ ಇಂಡಿಯನ್ಸ್, ಸನ್‌ರೈಸರ್ಸ್ ಹೈದರಾಬಾದ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ತಲಾ 10 ಲಕ್ಷ ರುಪಾಯಿಗಳನ್ನು ತನ್ನ ಪರ್ಸ್‌ನಲ್ಲಿ ಉಳಿಸಿಕೊಂಡಿವೆ.
T20 World Cup ಕೊಹ್ಲಿ-ಪಾಂಡ್ಯ ಸಿಡಿಲಬ್ಬರದ ಬ್ಯಾಟಿಂಗ್, ಇಂಗ್ಲೆಂಡ್‌ಗೆ ಸವಾಲಿನ ಗುರಿ ನೀಡಿದ ಭಾರತ..!
ಈ ಬಾರಿಯ ಐಪಿಎಲ್ ಆಟಗಾರರ ಹರಾಜಿನಲ್ಲಿ ಆಲ್ರೌಂಡರ್‌ಗಳಾದ ಬೆನ್ ಸ್ಟೋಕ್ಸ್, ಸ್ಯಾಮ್ ಕರ್ರನ್ ಹಾಗೂ ಕ್ಯಾಮರೋನ್ ಗ್ರೀನ್ ಹರಾಜಿನಲ್ಲಿ ಪಾಲ್ಗೊಳ್ಳುವುದು ಬಹುತೇಕ ಖಚಿತ ಎನಿಸಿದ್ದು, ಈ ಮೂವರು ಆಟಗಾರರು ದೊಡ್ಡ ಮೊತ್ತಕ್ಕೆ ಹರಾಜಾಗುವ ಸಾಧ್ಯತೆಯಿದೆ.
ಟಿ20 ರ‍್ಯಾಂಕಿಂಗ್: ಸೂರ್ಯಕುಮಾರ್ ಯಾದವ್ ನಂ.1, ಆರ್ಶದೀಪ್ ಜಿಗಿತ
ದುಬೈ: ಭಾರತದ ತಾರಾ ಬ್ಯಾಟರ್ ಸೂರ್ಯಕುಮಾರ್ ಯಾದವ್ ಐಸಿಸಿ ಟಿ20 ಬ್ಯಾಟರ್‌ಗಳ ರ‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದ್ದು, ಆರ್ಶದೀಪ್ ಸಿಂಗ್ ಬೌಲರ್‌ಗಳ ರ‍್ಯಾಂಕಿಂಗ್ ಪಟ್ಟಿಯಲ್ಲಿ ಜೀವನಶ್ರೇಷ್ಠ 23ನೇ ಸ್ಥಾನಕ್ಕೇರಿದ್ದಾರೆ. ಸದ್ಯ ನಡೆಯುತ್ತಿರುವ ಟಿ20 ವಿಶ್ವಕಪ್‌ನ 5 ಪಂದ್ಯಗಳಲ್ಲಿ 225 ರನ್ ಸಿಡಿಸಿರುವ ಸೂರ್ಯಕುಮಾರ್ ಯಾದವ್ 869 ರೇಟಿಂಗ್ ಅಂಕಗಳನ್ನು ಹೊಂದಿದ್ದಾರೆ. ಬೌಲಿಂಗ್ ರ‍್ಯಾಂಕಿಂಗ್‌ನಲ್ಲಿ ಆರ್ಶದೀಪ್ 4 ಸ್ಥಾನ ಪ್ರಗತಿ ಸಾಧಿಸಿದರೆ, ರವಿಚಂದ್ರನ್ ಅಶ್ವಿನ್ 5 ಸ್ಥಾನ ಜಿಗಿದು 13ನೇ ಸ್ಥಾನ ತಲುಪಿದ್ದಾರೆ.
ವಿಶ್ವಕಪ್: ಹಾರ್ದಿಕ್‌ಗೆ ಪ್ರತ್ಯೇಕ ಬಾಣಸಿಗ!
ಅಡಿಲೇಡ್: ಟಿ20 ವಿಶ್ವಕಪ್‌ನಲ್ಲಿ ಆಡುತ್ತಿರುವ ಭಾರತದ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಆಸ್ಪ್ರೇಲಿಯಾಗೆ ಖಾಸಗಿ ಬಾಣಸಿಗನೊಂದಿಗೆ ತೆರಳಿದ್ದಾರೆ. ಆರಿಫ್ ಎನ್ನುವ ಬಾಣಸಿಗ ಪ್ರತ್ಯೇಕ ಅಪಾರ್ಚ್‌ಮೆಂಟ್‌ನಲ್ಲಿ ಕೊಠಡಿ ಬುಕ್ ಮಾಡಿಕೊಂಡು, ಹಾರ್ದಿಕ್‌ರ ಅಗತ್ಯಕ್ಕೆ ತಕ್ಕಂತೆ ಆಹಾರ ತಯಾರಿಸಿ ಭಾರತ ತಂಡ ಉಳಿದುಕೊಂಡಿರುವ ಹೋಟೆಲ್‌ಗೆ ಕೊಂಡೊಯ್ಯುತ್ತಾರೆ. ಕ್ರಿಕೆಟಿಗನೊಬ್ಬ ಪ್ರತ್ಯೇಕ ಬಾಣಸಿಗನೊಂದಿಗೆ ಪ್ರಯಾಣಿಸುತ್ತಿರುವುದು ಇದೇ ಮೊದಲಿರಬಹುದು ಎಂದು ಮಾಧ್ಯಮವೊಂದು ಸುದ್ದಿ ಪ್ರಕಟಿಸಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.