IPL Auction 2022: ಅಂಡರ್-19 ತಾರೆಯರಿಗೆ ಐಪಿಎಲ್‌ನಲ್ಲಿ ಬಂಪರ್‌..?

Suvarna News   | Asianet News
Published : Feb 08, 2022, 12:08 PM IST
IPL Auction 2022: ಅಂಡರ್-19 ತಾರೆಯರಿಗೆ ಐಪಿಎಲ್‌ನಲ್ಲಿ ಬಂಪರ್‌..?

ಸಾರಾಂಶ

* ಐಸಿಸಿ ಅಂಡರ್ 19 ವಿಶ್ವಕಪ್ ಟೂರ್ನಿಯಲ್ಲಿ ಭಾರತೀಯ ಆಟಗಾರರರಿಗೆ ಜಾಕ್‌ಪಾಟ್ * ದಾಖಲೆಯ 5ನೇ ಬಾರಿಗೆ ವಿಶ್ವಕಪ್‌ ಗೆದ್ದ ಭಾರತ ತಂಡದಲ್ಲಿದ್ದ 8 ಆಟಗಾರರು ಹರಾಜಿನಲ್ಲಿ ಭಾಗಿ * ಅಂಡರ್‌-19 ವಿಶ್ವಕಪ್‌ ಗೆದ್ದ ಭಾರತ ತಂಡವನ್ನು ಬಿಸಿಸಿಐ ಅಹಮದಾಬಾದ್‌ನಲ್ಲಿ ಸನ್ಮಾನ

ನವದೆಹಲಿ(ಫೆ.08): 2022ರ ಐಪಿಎಲ್‌ ಮೆಗಾ ಹರಾಜಿಗೆ (IPL Auction 2022) ಕೇವಲ ಒಂದು ವಾರ ಮೊದಲು ಐಸಿಸಿ ಅಂಡರ್‌-19 ಏಕದಿನ ಕ್ರಿಕೆಟ್‌ ವಿಶ್ವಕಪ್‌ (ICC U-19 World Cup) ಮುಕ್ತಾಯಗೊಂಡಿರುವುದು ಭಾರತೀಯ ಆಟಗಾರರ ಪಾಲಿಗೆ ವರದಾನವಾಗಿದೆ. ದಾಖಲೆಯ 5ನೇ ಬಾರಿಗೆ ವಿಶ್ವಕಪ್‌ ಗೆದ್ದ ಭಾರತ ತಂಡದಲ್ಲಿದ್ದ 8 ಆಟಗಾರರು, 370 ಭಾರತೀಯ ಆಟಗಾರರನ್ನೊಳಗೊಂಡ ಅಂತಿಮ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದು, ಐಪಿಎಲ್‌ಗೆ ಪಾದಾರ್ಪಣೆ ಮಾಡುವ ನಿರೀಕ್ಷೆಯಲ್ಲಿದ್ದಾರೆ.

ವಿಶ್ವಕಪ್‌ ವಿಜೇತ ತಂಡದ ನಾಯಕ, ದೆಹಲಿಯ ಯಶ್‌ ಧುಳ್‌ (Yash Dhull) 20 ಲಕ್ಷ ರುಪಾಯಿ  ಮೂಲ ಬೆಲೆ ಹೊಂದಿದ್ದು, ಅವರೊಂದಿಗೆ ಆರಂಭಿಕ ಬ್ಯಾಟರ್‌ ಹಾರ್ನೂರ್‌ ಸಿಂಗ್‌, ಕರ್ನಾಟಕದ ಆಲ್ರೌಂಡರ್‌ ಅನೀಶ್ವರ್‌ ಗೌತಮ್‌, ಚಂಡೀಗಢದ ಆಲ್ರೌಂಡರ್‌ ರಾಜ್‌ ಅಂಗದ್‌ ಬಾವಾ, ಮಹಾರಾಷ್ಟ್ರದ ಆಲ್ರೌಂಡರ್‌ ಕೌಶಲ್‌ ತಾಂಬೆ, ವೇಗಿ ರಾಜ್‌ವರ್ಧನ್‌ ಹಂಗ್ರೇಕರ್‌, ಸ್ಪಿನ್ನರ್‌ ವಿಕಿ ಒಸ್ವಾಲ್‌ ಹಾಗೂ ಉತ್ತರ ಪ್ರದೇಶದ ವೇಗಿ ವಾಸು ವತ್ಸ್‌ ಹರಾಜಿನಲ್ಲಿ ಪಾಲ್ಗೊಳ್ಳಲಿದ್ದಾರೆ.

ಯಶ್‌ ಕೋವಿಡ್‌ನಿಂದಾಗಿ ಕೆಲ ಪಂದ್ಯಗಳನ್ನು ತಪ್ಪಿಸಿಕೊಂಡರೂ, ಸೆಮಿಫೈನಲ್‌ನಲ್ಲಿ ಆಸ್ಪ್ರೇಲಿಯಾ ವಿರುದ್ಧ ಶತಕ ಸಿಡಿಸಿ ತಂಡವನ್ನು ಫೈನಲ್‌ಗೇರಿಸಿದ್ದರು. ಕಳೆದ ಡಿಸೆಂಬರ್‌ನಲ್ಲಿ ನಡೆದಿದ್ದ ಏಷ್ಯಾಕಪ್‌ನಲ್ಲೂ ಭಾರತವನ್ನು ಚಾಂಪಿಯನ್‌ ಪಟ್ಟಕ್ಕೇರಿಸಿದ್ದರು. ಇನ್ನು 18 ವರ್ಷದ ಹಾರ್ನೂರ್‌ ಸಿಂಗ್‌, ಕಳೆದೊಂದು ವರ್ಷದಲ್ಲಿ ಆಕರ್ಷಕ ಪ್ರದರ್ಶನ ತೋರಿದ್ದು, ತಮ್ಮ ಸ್ಫೋಟಕ ಆಟದ ಮೂಲಕ ಗಮನ ಸೆಳೆದಿದ್ದಾರೆ. ಫೈನಲ್‌ನಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ ರಾಜ್‌ ಬಾವಾ, ಆರ್‌.ಅಶ್ವಿನ್‌ ಸೇರಿ ಹಲವು ಅಂತಾರಾಷ್ಟ್ರೀಯ ಕ್ರಿಕೆಟಿಗರಿಂದ ಮೆಚ್ಚುಗೆಗೆ ಪಾತ್ರರಾದ ರಾಜವರ್ಧನ್‌ ಹಂಗ್ರೇಕರ್‌ಗೆ ಹರಾಜಿನಲ್ಲಿ ಬೇಡಿಕೆ ಕಂಡುಬರುವ ಸಾಧ್ಯತೆ ಇದೆ.

ಅಹಮದಾಬಾದ್‌ನಲ್ಲಿ ಸನ್ಮಾನ

ಅಂಡರ್‌-19 ವಿಶ್ವಕಪ್‌ ಗೆದ್ದ ಭಾರತ ತಂಡವನ್ನು ಬಿಸಿಸಿಐ (BCCI) ಅಹಮದಾಬಾದ್‌ನಲ್ಲಿ ಸನ್ಮಾನಿಸಲಿದೆ. ಈ ಕಾರ‍್ಯಕ್ರಮವು ಮಂಗಳವಾರ ನಡೆಯುವ ಸಾಧ್ಯತೆ ಇದೆ. ಫೈನಲ್‌ನಲ್ಲಿ ಇಂಗ್ಲೆಂಡ್‌ ವಿರುದ್ಧ ಗೆದ್ದ ಭಾರತ, ಭಾನುವಾರ ಸಂಜೆ ಕೆರಿಬಿಯನ್‌ನಿಂದ ಆ್ಯಮ್ಸ್‌ಸ್ಟರ್‌ಡ್ಯಾಮ್‌ ಮಾರ್ಗವಾಗಿ ಅಹಮದಾಬಾದ್‌ಗೆ ಆಗಮಿಸಲಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

ಐಪಿಎಲ್‌ ಆರಂಭಕ್ಕೂ ಮೊದಲೇ ಸಿಎಸ್‌ಕೆ, ಮುಂಬೈಗೆ ಜಾಕ್‌ಪಾಟ್‌!

ನವದೆಹಲಿ: 2022ರ ಐಪಿಎಲ್‌ ಟೂರ್ನಿ ಆರಂಭಕ್ಕೂ ಮೊದಲೇ ಚೆನ್ನೈ ಸೂಪರ್‌ ಕಿಂಗ್ಸ್‌ (Chennai Super Kings), ಮುಂಬೈ ಇಂಡಿಯನ್ಸ್‌ (Mumbai Indians) ಹಾಗೂ ಲಖನೌ ಜೈಂಟ್ಸ್‌ ತಂಡಗಳಿಗೆ ಭರ್ಜರಿ ಲಾಭವಾಗಿದೆ. ಈ ಮೂರೂ ತಂಡಗಳು ದೊಡ್ಡ ಮೊತ್ತದ ಶೀರ್ಷಿಕೆ ಪ್ರಾಯೋಜಕತ್ವದ ಒಪ್ಪಂದಕ್ಕೆ ಸಹಿ ಹಾಕಿವೆ.

ICC U-19 World Cup ಕೊಹ್ಲಿಯಂತೆ ಬ್ಯಾಟಿಂಗ್, ಧೋನಿಯಂತೆ ತಂಡ ಮುನ್ನಡೆಸಿದರು: ಯಶ್ ಧುಳ್ ಗುಣಗಾನ..!

ಚೆನ್ನೈ ತಂಡವು ಟಿವಿಎಸ್‌ ಸಂಸ್ಥೆ ಜೊತೆ 3 ವರ್ಷದ ಅವಧಿಗೆ 100 ಕೋಟಿ ರುಪಾಯಿ ಶೀರ್ಷಿಗೆ ಪ್ರಾಯೋಜಕತ್ವ ಒಪ್ಪಂದಕ್ಕೆ ಸಹಿ ಹಾಕಿದೆ. ಅಂದರೆ ವರ್ಷಕ್ಕೆ 33 ಕೋಟಿ ರುಪಾಯಿಗೂ ಹೆಚ್ಚು ಹಣ ಕೇವಲ ಶೀರ್ಷಿಕೆ ಪ್ರಾಯೋಜಕತ್ವದಿಂದ ಸಿಗಲಿದೆ. ಐಪಿಎಲ್‌ ಇತಿಹಾಸದಲ್ಲೇ ಇದು ಅತಿ ದುಬಾರಿ ಶೀರ್ಷಿಕೆ ಪ್ರಾಯೋಜಕತ್ವ ಎನ್ನಲಾಗಿದೆ. ಇನ್ನು ಸ್ಲೈಸ್‌ ಕಾರ್ಡ್ಸ್ ಸಂಸ್ಥೆ ಜೊತೆ ಮುಂಬೈ 3 ವರ್ಷದ ಅವಧಿಗೆ 90 ಕೋಟಿ ರುಪಾಯಿ ಒಪ್ಪಂದಕ್ಕೆ ಸಹಿ ಹಾಕಿದರೆ, ಫ್ಯಾಂಟಸಿ ಸ್ಪೋರ್ಟ್ಸ್‌ ಸಂಸ್ಥೆ ಮೈ ಸರ್ಕಲ್‌ 11 ಜೊತೆ ಲಖನೌ ಜೈಂಟ್ಸ್‌ 3 ವರ್ಷಕ್ಕೆ 75 ಕೋಟಿ ರುಪಾಯಿಗೆ ಒಪ್ಪಂದ ಮಾಡಿಕೊಂಡಿದೆ ಎಂದು ತಿಳಿದುಬಂದಿದೆ.

ಪಾಲ್ ಕಾಲಿಂಗ್‌ವುಡ್‌ ಇಂಗ್ಲೆಂಡ್‌ ತಂಡದ ಹಂಗಾಮಿ ಕೋಚ್‌

ಲಂಡನ್‌: ಮಾಜಿ ಆಲ್ರೌಂಡರ್‌ ಪಾಲ್‌ ಕಾಲಿಂಗ್‌ವುಡ್‌ ಸೋಮವಾರ ಇಂಗ್ಲೆಂಡ್‌ ಕ್ರಿಕೆಟ್‌ ತಂಡದ ಹಂಗಾಮಿ ಪ್ರಧಾನ ಕೋಚ್‌ ಆಗಿ ನೇಮಕಗೊಂಡಿದ್ದಾರೆ. ಆಸ್ಪ್ರೇಲಿಯಾದಲ್ಲಿ 0-4ರ ಅಂತರದಲ್ಲಿ ಆ್ಯಷಸ್‌ ಸರಣಿ ಸೋತ ಬಳಿಕ ಕ್ರಿಸ್‌ ಸಿಲ್ವರ್‌ವುಡ್‌ರನ್ನು ಕೋಚ್‌ ಹುದ್ದೆಯಿಂದ ವಜಾಗೊಳಿಸಲಾಗಿತ್ತು. 

ಸಹಾಯಕ ಕೋಚ್‌ ಆಗಿ ತಂಡದೊಂದಿಗಿದ್ದ ಕಾಲಿಂಗ್‌ವುಡ್‌ಗೆ ಹೆಚ್ಚುವರಿ ಜವಾಬ್ದಾರಿ ನೀಡಲಾಗಿದ್ದು, ಮುಂದಿನ ತಿಂಗಳ ವೆಸ್ಟ್‌ಇಂಡೀಸ್‌ ಪ್ರವಾಸಕ್ಕೆ ಪ್ರಧಾನ ಕೋಚ್‌ ಹುದ್ದೆ ನೀಡಲಾಗಿದೆ. ವಿಂಡೀಸ್‌ ವಿರುದ್ಧ ಇಂಗ್ಲೆಂಡ್‌ 3 ಟೆಸ್ಟ್‌ ಪಂದ್ಯಗಳ ಸರಣಿ ಆಡಲಿದ್ದು, ಮೊದಲ ಪಂದ್ಯ ಮಾರ್ಚ್‌ 1ರಿಂದ ಆರಂಭಗೊಳ್ಳಲಿದೆ.
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಟೀಂ ಇಂಡಿಯಾ ಕ್ರಿಕೆಟಿಗರಿಗೆ ದುಶ್ಚಟವಿದೆ, ಆದರೆ ನನ್ನ ಪತಿಗಿಲ್ಲ! ಈ ಕ್ರಿಕೆಟರ್ ಪತ್ನಿಯಿಂದ ವಿವಾದಾತ್ಮಕ ಹೇಳಿಕೆ
ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಅಂಕಪಟ್ಟಿಯಲ್ಲಿ ಮತ್ತಷ್ಟು ಪಾತಾಳಕ್ಕೆ ಕುಸಿದ ಟೀಂ ಇಂಡಿಯಾ!