ICC T20 World Cup: ಕೆಲವೇ ಗಂಟೆಯೊಳಗಾಗಿ ಇಂಡೋ-ಪಾಕ್‌ ಪಂದ್ಯದ ಟಿಕೆಟ್ ಸೋಲ್ಡೌಟ್‌..!

By Suvarna NewsFirst Published Feb 8, 2022, 9:17 AM IST
Highlights

* ಮತ್ತೊಮ್ಮೆ ಭಾರತ-ಪಾಕಿಸ್ತಾನ ಕ್ರಿಕೆಟ್‌ ತಂಡಗಳು ಮುಖಾಮುಖಿಗೆ ವೇದಿಕೆ ಸಜ್ಜು

* ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ನಲ್ಲಿ ಉಭಯ ತಂಡಗಳು ಮುಖಾಮುಖಿ

* ಟಿಕೆಟ್‌ ಮಾರಾಟ ಆರಂಭವಾಗಿ ಕೆಲವೇ ಗಂಟೆಗಳೊಳಗಾಗಿ ಟಿಕೆಟ್ ಸೋಲ್ಡೌಟ್

ದುಬೈ(ಫೆ.08): ಬದ್ಧವೈರಿಗಳಾದ ಭಾರತ ಹಾಗೂ ಪಾಕಿಸ್ತಾನ (India vs Pakistan) ಕ್ರಿಕೆಟ್‌ ತಂಡಗಳು ದ್ವಿಪಕ್ಷೀಯ ಸರಣಿಗಳಲ್ಲಿ ಎದುರಾಗುವುದನ್ನು ನಿಲ್ಲಿಸಿ ಹಲವು ವರ್ಷಗಳೇ ಕಳೆದಿವೆ. ವಿಶ್ವಕಪ್‌, ಏಷ್ಯಾಕಪ್‌, ಚಾಂಪಿಯನ್ಸ್‌ ಟ್ರೋಫಿಗಳಲ್ಲಿ ಮಾತ್ರ ಉಭಯ ತಂಡಗಳು ಮುಖಾಮುಖಿಯಾಗಲಿವೆ. ಇದೀಗ 2022ರ ಐಸಿಸಿ ಟಿ20 ವಿಶ್ವಕಪ್‌ನಲ್ಲಿ (ICC T20 World Cup) ಭಾರತ-ಪಾಕಿಸ್ತಾನ ಸೆಣಸಲಿದ್ದು, ಪಂದ್ಯದ ಟಿಕೆಟ್‌ಗಳು ಕೆಲವೇ ಗಂಟೆಗಳಲ್ಲಿ ಮಾರಾಟವಾಗಿದೆ.

ಸೋಮವಾರ ಐಸಿಸಿ ಆಲ್‌ಲೈನ್‌ ಮೂಲಕ ಟಿಕೆಟ್‌ ಮಾರಾಟ ಆರಂಭಿಸಿತು. ಫೈನಲ್‌ ಸೇರಿ ಎಲ್ಲಾ 45 ಪಂದ್ಯಗಳ ಟಿಕೆಟ್‌ಗಳನ್ನು t20worldcup.com ನಲ್ಲಿ ಖರೀದಿಗೆ ಲಭ್ಯಗೊಳಿಸಿರುವ ಐಸಿಸಿ, ಎಲ್ಲಾ ವರ್ಗದವರಿಗೂ ಕೈಗೆಟುಕುವಂತೆ ಟಿಕೆಟ್‌ಗಳ ಬೆಲೆ ನಿಗದಿಪಡಿಸಿದೆ. ಸೋಮವಾರ ಬೆಳಗ್ಗೆ 6.30ರ ವೇಳೆಗೆ(ಭಾರತೀಯ ಕಾಲಮಾನ) ಟಿಕೆಟ್‌ ಮಾರಾಟ ಆರಂಭಗೊಂಡಿತು. ಬೆಳಗ್ಗೆ 11.30ರ ವೇಳೆಗೆ (ಭಾರತೀಯ ಕಾಲಮಾನ) ಭಾರತ ಹಾಗೂ ಪಾಕಿಸ್ತಾನ ಪಂದ್ಯಗಳ ಟಿಕೆಟ್‌ಗಳು ಸಂಪೂರ್ಣವಾಗಿ ಮಾರಾಟವಾಗಿವೆ ಎಂದು ಐಸಿಸಿ ತನ್ನ ಪ್ರಕಟಣೆಯಲ್ಲಿ ತಿಳಿಸಿತು. ಕೇವಲ 5 ಗಂಟೆಗಳ ಅವಧಿಯಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವಿನ ಪಂದ್ಯದ ಟಿಕೆಟ್‌ಗಳು ಮಾರಾಟವಾಗಿವೆ.

ಅಕ್ಟೋಬರ್ 23ರಂದು ಐತಿಹಾಸಿಕ ಮೆಲ್ಬರ್ನ್‌ ಕ್ರಿಕೆಟ್‌ ಗ್ರೌಂಡ್‌(ಎಂಸಿಜಿ)ನಲ್ಲಿ ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯ ನಡೆಯಲಿದೆ. ಅಕ್ಟೋಬರ್ 16ರಿಂದ ವಿಶ್ವಕಪ್‌ ಆರಂಭಗೊಳ್ಳಲಿದ್ದು, ಅಕ್ಟೋಬರ್ 21ರ ವರೆಗೂ ಅರ್ಹತಾ ಸುತ್ತು ನಡೆಯಲಿದೆ. ಅಕ್ಟೋಬರ್ 22ರಿಂದ ಸೂಪರ್‌-12 ಹಂತ ಆರಂಭಗೊಳ್ಳಲಿದೆ. ‘ಬಿ’ ಗುಂಪಿನಲ್ಲಿ ಸ್ಥಾನ ಪಡೆದಿರುವ ಭಾರತ ಹಾಗೂ ಪಾಕಿಸ್ತಾನ, ಗುಂಪಿನ ಮೊದಲ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ. ನವೆಂಬರ್ 13ರಂದು ಎಂಸಿಜಿಯಲ್ಲೇ ಫೈನಲ್‌ ಪಂದ್ಯ ನಡೆಯಲಿದೆ. ಹಾಲಿ ಚಾಂಪಿಯನ್‌ ಆಸ್ಪ್ರೇಲಿಯಾ ತನ್ನ ತವರಿನಲ್ಲಿ ಪ್ರಶಸ್ತಿ ಉಳಿಸಿಕೊಳ್ಳಲು ಹೋರಾಟ ನಡೆಸಲಿದೆ. ಸೂಪರ್ 12 ಹಂತದ ಗ್ರೂಪ್ 2ನಲ್ಲಿ ಭಾರತ ಹಾಗೂ ಪಾಕಿಸ್ತಾನದ ಜತೆಗೆ ದಕ್ಷಿಣ ಆಫ್ರಿಕಾ, ಬಾಂಗ್ಲಾದೇಶ ಮತ್ತು ಅರ್ಹತಾ ಸುತ್ತಿನ ಗ್ರೂಪ್‌ 'ಬಿ' ವಿಜೇತ ತಂಡ ಹಾಗೂ ಅರ್ಹತಾ ಸುತ್ತಿನ ಗ್ರೂಪ್ 'ಎ' ರನ್ನರ್ ಅಪ್ ತಂಡಗಳು ಸೂಪರ್ 12 ಹಂತದ ಲೀಗ್‌ ಪಂದ್ಯಗಳನ್ನು ಆಡಲಿವೆ. 

𝙏𝙃𝙄𝙎 𝙄𝙎 𝙏𝙃𝙀 𝘽𝙄𝙂 𝙏𝙄𝙈𝙀 !

Tickets are on sale now for the ICC Men's T20 World Cup Australia 2022! 🎟️

Get your tickets here: https://t.co/CvibedsYAz pic.twitter.com/2rzlcnXlxH

— T20 World Cup (@T20WorldCup)

ಐತಿಹಾಸಿಕ ಮೆಲ್ಬರ್ನ್‌ ಕ್ರಿಕೆಟ್‌ ಗ್ರೌಂಡ್ ಬರೋಬ್ಬರಿ 1 ಲಕ್ಷ ಮಂದಿ ಪ್ರೇಕ್ಷಕರಿಗೆ ಆಸನ ವ್ಯವಸ್ಥೆಯನ್ನು ಹೊಂದಿದ್ದು, ಜಗತ್ತಿನ ಎರಡನೇ ಅತಿದೊಡ್ಡ ಕ್ರಿಕೆಟ್ ಸ್ಟೇಡಿಯಂ ಎನಿಸಿದೆ. ಸಿಡ್ನಿ ಮಾರ್ನಿಂಗ್ ಹೆರಾಲ್ಡ್‌ ವರದಿಯ ಪ್ರಕಾರ, ಅಕ್ಟೋಬರ್ 23ರಂದು ನಡೆಯಲಿರುವ ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವಿನ ಪ್ರೀ-ಸೇಲ್‌(ಪೂರ್ವ ಮಾರಾಟದ ಟಿಕೆಟ್‌ಗಳು)ನ ಎಲ್ಲಾ 60 ಸಾವಿರಕ್ಕೂ ಅಧಿಕ ಟಿಕೆಟ್‌ಗಳು ಕೇವಲ 5 ಗಂಟೆಗಳ ಅವಧಿಯೊಳಗೆ ಮಾರಾಟವಾಗಿವೆ. 

ICC T20 World Cup 2022: ಟೂರ್ನಿ ವೇಳಾಪಟ್ಟಿ ಪ್ರಕಟ, ಇಂಡೋ-ಪಾಕ್‌ ಕಾದಾಟಕ್ಕೆ ಡೇಟ್‌ ಫಿಕ್ಸ್..!

ಇನ್ನು ಈ ಕುರಿತಂತೆ ಪ್ರಕಟಣೆ ಹೊರಡಿಸಿರುವ ಐಸಿಸಿ, ಅಫಿಶಿಯಲ್ ಹಾಸ್ಪಿಟಾಲಿಟಿ ಹಾಗೂ ಐಸಿಸಿ ಟ್ರಾವೆಲ್ಸ್ ಮತ್ತು ಟೂರ್ಸ್‌ ಯೋಜನೆಯಡಿ ಇನ್ನೂ ಕೆಲವು ಟಿಕೆಟ್‌ಗಳು ಲಭ್ಯವಿವೆ. ಇನ್ನುಳಿದವರು ವೇಟ್‌ಲಿಸ್ಟ್‌ನಲ್ಲಿರಬೇಕಾಗುತ್ತದೆ. ಅಂತವರಿಗೆ ಇ-ಮೇಲ್‌ ಮೂಲಕ ಟಿಕೆಟ್‌ ಲಭ್ಯತೆಯ ಬಗ್ಗೆ ಮಾಹಿತಿಯನ್ನು ತಿಳಿಸಲಾಗುವುದು ಎಂದು ತಿಳಿಸಿದೆ.

ಕಳೆದ ವರ್ಷ ಯುಎಇನಲ್ಲಿ ನಡೆದಿದ್ದ ಭಾರತ ವಿರುದ್ಧದ ಪಂದ್ಯದಲ್ಲಿ ಪಾಕಿಸ್ತಾನ 10 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿ, ಇತಿಹಾಸ ಬರೆದಿತ್ತು. ಮೊದಲ ಬಾರಿಗೆ ಐಸಿಸಿ ವಿಶ್ವಕಪ್‌(ಏಕದಿನ ಹಾಗೂ ಟಿ20)ನಲ್ಲಿ ಭಾರತದ ವಿರುದ್ಧ ಗೆಲುವು ಸಾಧಿಸಿದ ದಾಖಲೆ ಬರೆದಿತ್ತು. ಉಭಯ ತಂಡಗಳ ನಡುವೆ ಮತ್ತೊಂದು ರೋಚಕ ಪಂದ್ಯವನ್ನು ಕ್ರಿಕೆಟ್‌ ಅಭಿಮಾನಿಗಳು ನಿರೀಕ್ಷೆ ಮಾಡುತ್ತಿದ್ದು, ಪಾಕಿಸ್ತಾನದ ವಿರುದ್ಧ ಸೇಡು ತೀರಿಸಿಕೊಳ್ಳಲು ಭಾರತ ಎದುರು ನೋಡುತ್ತಿದೆ.

click me!