ಐಪಿಎಲ್ ನಲ್ಲಿ ಆರ್ ಸಿಬಿ ಮ್ಯಾನೇಜ್ ಮೆಂಟ್ ನ ಬ್ಲಂಡರ್
ಪ್ಲೇಯರ್ ಗಳ ಆಯ್ಕೆ ಬಗ್ಗೆ ಮಾಜಿ ವೇಗಿ ವೆಂಕಟೇಶ್ ಪ್ರಸಾದ್ ಗರಂ
ಪ್ರತಿ ವರ್ಷವೂ ಆರ್ ಸಿಬಿ ಮ್ಯಾನೇಜ್ ಮೆಂಟ್ ನಿಂದ ಹರಾಜಿನ ವೇಳೆ ತಪ್ಪುಗಳ ಸರಮಾಲೆ
ಬೆಂಗಳೂರು (ಫೆ. 13): ಐಪಿಎಲ್ ಹರಾಜಿನಲ್ಲಿ (IPL Auction) ಆರ್ ಸಿಬಿ (RCB) ತಂಡ ಮಾಡಿರುವ ಆಯ್ಕೆಗಳ ಬಗ್ಗೆ ಎಲ್ಲಾ ಕಡೆಯಿಂದ ಟೀಕೆಗಳು ವ್ಯಕ್ತವಾಗಿವೆ. ಇಷ್ಟು ವರ್ಷದ ಐಪಿಎಲ್ ನಲ್ಲಿ ಆರ್ ಸಿಬಿ ತಂಡದಿಂದ ಇಂಥ ಕೆಟ್ಟ ಹರಾಜು ಆಗಿದ್ದೇ ಇಲ್ಲ ಎಂದು ಫ್ಯಾನ್ಸ್ ಗಳು ಆಕ್ರೋಶ ತೋಡಿಕೊಂಡಿರುವ ಹೊತ್ತಿಗಾಗಲೇ ಟೀಮ್ ಇಂಡಿಯಾ ಮಾಜಿ ವೇಗಿ (Team India Former Fast Bowler) ಹಾಗೂ ಆರ್ ಸಿಬಿಯ ಮಾಜಿ ಬೌಲಿಂಗ್ ಕೋಚ್ (Former RCB Bowling Coach) ವೆಂಕಟೇಶ್ ಪ್ರಸಾದ್ ಒಟ್ಟಾರೆ ಆರ್ ಸಿಬಿ ತಂಡದ ಮ್ಯಾನೇಜ್ ಮೆಂಟ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
"ದಿನೇಶ್ ಕಾರ್ತಿಕ್ (Dinesh Karthik) ಅವರಿಗೆ ನೀವು ಐದೂವರೆ ಕೋಟಿ ಕೊಟ್ಟು ಖರೀದಿ ಮಾಡುತ್ತೀರಿ ಎಂದಾದಲ್ಲಿ ಅದು ತಂಡದ ಅತೀದೊಡ್ಡ ಬ್ಲಂಡರ್. ದಿನೇಶ್ ಕಾರ್ತಿಕ್ ಅವರನ್ನು ಎಲ್ಲಾ ಮ್ಯಾಚ್ ಗಳನ್ನೂ ಆಡಿಸ್ತೀರಾ ಅನ್ನೋ ಪ್ರಶ್ನೆಗಳು ಖಂಡಿತ ಬರುತ್ತವೆ. ದಿನೇಶ್ ಕಾರ್ತಿಕ್ ತಮ್ಮ ಪ್ರೈಮ್ ದಿನಗಳನ್ನು ಈಗಾಗಲೇ ಕಂಡಿದ್ದಾಗಿದೆ. ಅದನ್ನು ನಾವು ಒಪ್ಪಿಕೊಳ್ಳಬೇಕಾಗಿದೆ. ಹರಾಜಿನಲ್ಲಿ ಈ ಪ್ಲೇಯರ್ ಗಳನ್ನು ಖರೀದಿ ಮಾಡುವ ಮಾಡುವ ವೇಳೆ ನಮ್ಮದೇ ಆದ ಒಂದು ಮಿತಿಗಳನ್ನು ಹೊಂದಿರಬೇಕು. ಬಹುಶಃ ಅದಕ್ಕೇ ನನಗೆ ಅರ್ಥವಾಗುತ್ತಿಲ್ಲ. ಆರ್ ಸಿಬಿಯ ಮ್ಯಾನೇಜ್ ಮೆಂಟ್ ಏನು ಮಾಡ್ತಾ ಇದೆ ಅಂತ. ಹರಾಜಿನ ಟೇಬಲ್ ಮೇಲೆ ಅಂದಾಜು 8 ಜನ ಕುಳಿತಿರ್ತಾರೆ. ಅವ್ರ ನಡುವೆ ಈ ವಿಚಾರದಲ್ಲಿ ಏನೆಲ್ಲಾ ಚರ್ಚೆಗಳು ನಡೀತಿರುತ್ತೆ. ಕೆಲ ಪ್ಲೇಯರ್ ಗಳನ್ನು ಸೆಲೆಕ್ಷನ್ ಮಾಡುವಾಗ ಚರ್ಚೆ ಮಾಡ್ತಾರೋ? ಇಲ್ವೋ? ಅಥವಾ ತುಂಬಾನೇ ಜಾಸ್ತಿ ಚರ್ಚೆ ಮಾಡಿ ಕನ್ ಫ್ಯೂಸ್ ಆಗಿ ಬಿಡ್ತಾರಾ? ಒಂಥಾರಾ ಬ್ರೇನ್ ಫೇಡ್ (ಸಂಪೂರ್ಣ ಗೊಂದಲ) ಕ್ಷಣ ಏನಾದ್ರೂ ಇವರಿಗೆ ಆಗುತ್ತಾ ಅನ್ನೋ ಪ್ರಶ್ನೆಗಳು ನನ್ನಲ್ಲಿದೆ' ಎಂದು ವೆಂಕಟೇಶ್ ಪ್ರಸಾದ್ ಸ್ಟಾರ್ ಸ್ಪೋರ್ಟ್ಸ್ ಕನ್ನಡ ವಾಹಿನಿಯ ವಿಶ್ಲೇಷಣೆಯ ವೇಳೆ ಮಾತನಾಡಿದ್ದಾರೆ.
"ಇಂಥ ಆಯ್ಕೆಗಳನ್ನು ಮಾಡಿ, ಅಭಿಮಾನಿಗಳಿಗೆ ಆರ್ ಸಿ ಬಿ ಏನಂಥ ಉತ್ತರ ನೀಡುತ್ತೆ" 🤔
ಹರಾಜಿನಲ್ಲಿ ತಂಡದ ನೀರಸ ಆಯ್ಕೆಗಳ ಬಗ್ಗೆ ಮಾಜಿ ವೇಗಿ, ವಿಶ್ಲೇಷಕ ವೆಂಕಟೇಶ್ ಪ್ರಸಾದ್ ಖಡಕ್ ಮಾತು 🙌 pic.twitter.com/a5b9ttTTeF
"ಪ್ರತಿ ಬಾರಿಯೂ ರಾಯಲ್ ಚಾಲೆಂಜರ್ಸ್ ತಂಡ ಹರಾಜಿನ ಟೇಬಲ್ ಮುಂದೆ ಬಂದಾಗ ಅವರು ಸಾಲು ಸಾಲು ಪ್ರಮಾದಗಳನ್ನೇ ಮಾಡುತ್ತಾರೆ. ಆರ್ ಸಿಬಿ ತಂಡಕ್ಕೆ ಮುಖ್ಯವಾಗಿ ಬೇಕಾದ ಲೋಕಲ್ ಫ್ಲೇವರ್ ಗಳು ಈ ಬಾರಿ ಇಲ್ಲವೇ ಇಲ್ಲ. ಸ್ಥಳೀಯ ಆಟಗಾರರು ಇಲ್ಲ ಎಂದ ಮೇಲೆ ಇಲ್ಲಿನ ಅಭಿಮಾನಿಗಳ ಜೊತೆ ಅವರು ಹೇಗೆ ಕನೆಕ್ಟ್ ಆಗ್ತಾರೆ. ಆರ್ ಸಿಬಿ ವಿಚಾರದಲ್ಲಿ ಇರುವ ಪ್ರಮುಖ ಪ್ರಶ್ನೆ ಇದೇ. 14 ವರ್ಷದಿಂದ ಈ ಪ್ರಶ್ನೆಯನ್ನು ಕೇಳ್ತಾ ಇರೋದು ನಾನಲ್ಲ, ವಿಜಯ್ ಭಾರದ್ವಾಜ್ ಆಗ್ಲಿ, ಅಖಿಲ್ ಆಗಲಿ ಇದನ್ನು ಕೇಳ್ತಾ ಇಲ್ಲ. ಆರ್ ಸಿಬಿ ಅಭಿಮಾನಿಗಳ ಪ್ರಶ್ನೆ ಇದು. ಫ್ಯಾನ್ಸ್ ಗೋಸ್ಕರ ನೀವು ಸ್ಥಳೀಯ ಆಟಗಾರರಿಗೆ ಮನ್ನಣೆ ನೀಡಬೇಕು' ಎಂದು ವೆಂಕಟೇಶ್ ಪ್ರಸಾದ್ ಹೇಳಿರುವ ವಿಡಿಯೋವನ್ನು ಸ್ಟಾರ್ ಸ್ಪೋರ್ಟ್ಸ್ ಕನ್ನಡ ವಾಹಿನಿ ಪೋಸ್ಟ್ ಮಾಡಿದ್ದು ಸಾಕಷ್ಟು ವೈರಲ್ ಆಗಿದೆ. ಇನ್ಸ್ ಟಾಗ್ರಾಮ್ ನಲ್ಲೂ ಈ ವಿಡಿಯೋ ಪೋಸ್ಟ್ ಆಗಿತ್ತಾದರೂ, ಬಳಿಕ ಅದನ್ನು ಡಿಲೀಟ್ ಮಾಡಲಾಗಿದೆ.
IPL Auction 2022 Live: 4 ಕೋಟಿಗೆ ಶಿವಂ ದುಬೆ ಖರೀದಿಸಿದ ಚೆನ್ನೈ, ಹೈದರಾಬಾದ್ ತೆಕ್ಕೆಗೆ ಮಾರ್ಕೊ ಯಾನ್ಸೆನ್!...
ಈ ವಿಡಿಯೋಗೆ ಸಾಕಷ್ಟು ಕಾಮೆಂಟ್ ಗಳೂ ಬಂದಿದ್ದು, ಬಹುತೇಕ ಎಲ್ಲರೂ ಆರ್ ಸಿಬಿಯ ತಂತ್ರಗಾರಿಕೆಯನ್ನು ಟೀಕೆ ಮಾಡಿದ್ದಾರೆ. ಬಿಎಸ್ ಭೂಷಣ್ (@BHUSHANBS2) ಎನ್ನುವ ವ್ಯಕ್ತಿ, "ನಮ್ಮ ಕರ್ನಾಟಕದ ಆಟಗಾರರನ್ನು ಖರೀದಿಸಲು ಪ್ರಯತ್ನ ಮಾಡಿ ವಿಫಲವಾದರೆ ನಮ್ಮದೇನೂ ತಕರಾರಿಲ್ಲ ಆದರೆ ಅವರನ್ನು ತೆಗೆದುಕೊಳ್ಳುವ ಮನಸೇ ಮಾಡಿಲ್ಲ ಇದು ನಮಗೆ ತುಂಬಾ ದುಃಖಕರವಾದ ವಿಷಯ, ಅವನ್ಯಾರೋ ಅನುಜ್ ರವತ್ ಗಿಂತ ಕಡೆಯಾಗಿ ಹೋದರ ನಮ್ಮ ಉತ್ತಪ್ಪ ಮನೀಶ್ ಪಾಂಡೆ ಕರುಣ್ ನಾಯರ್ ಜಗದೀಶ್ ಸುಚಿತ್" ಎಂದು ಪ್ರಶ್ನೆ ಮಾಡಿದ್ದಾರೆ.
ಇನ್ನು ಸಂತೋಷ್ (@Santosh211246) ಎನ್ನುವ ಅಭಿಮಾನಿ, ಆರ್ ಸಿಬಿ ಫ್ಯಾನ್ ಆಗಿ ನಾನು ರಾಜೀನಾಮೆ ನೀಡುತ್ತಿದ್ದೇನೆ ಎಂದು ಹೇಳಿದ್ದಾರೆ. ""ಲೋಕಲ್ ಫ್ಲೇವರ್" ಯಾವತ್ತೂ ಇರಲಿಲ್ಲ... ಮುಂದೇನು ಇರಲ್ಲ...ನಮ್ಮವರು ಯಾವ ತಂಡದಲ್ಲಿ ಆಡ್ತಾರೊ... ಆ ತಂಡಕ್ಕೆ ನಮ್ಮ ಬೆಂಬಲ... "Resigning as RCB fan" good bye" ಎಂದು ಕಾಮೆಂಟ್ ಮಾಡಿದ್ದಾರೆ.
IPL Auction 2022 : ಒಂದೇ ವರ್ಷದಲ್ಲಿ 8.35 ಕೋಟಿ ಮೌಲ್ಯ ಕಳೆದುಕೊಂಡ ಕೆ.ಗೌತಮ್!
ಇನ್ನು ಪ್ರದೀಪ್ (@Pradeepa116) ಎನ್ನುವ ಅಭಿಮಾನಿ, ಬೆಂಗಳೂರು ಮರ್ಯಾದೆಯನ್ನು ಯಾಕೆ ಕಳೆಯುತ್ತಿದ್ದೀರಾ ಎಂದು ಆರ್ ಸಿಬಿಗೆ ಪ್ರಶ್ನೆ ಮಾಡಿದ್ದಾರೆ. "ಇಂತವರೆನ್ನಲ್ಲ ತಗೊಂಡು ಯಾಕೆ ಬೆಂಗಳೂರು ಮರ್ಯಾದೆ ಕಳೆಯುತ್ತಿರಾ..ಫ್ರಾಂಚೈಸಿ ಹೆಸರಾದರೂ ಬದಲಾಯಿಸಿಕೊಂಡು ಹೋಗಿಬಿಡಿ .." ಎಂದು ಬರೆದಿದ್ದಾರೆ. ಈ ನಡುವೆ 2ನೇ ದಿನದ ಹರಾಜಿನಲ್ಲಿ ಕೂಡ ಆರ್ ಸಿಬಿ ಯಾವುದೇ ಕರ್ನಾಟಕ ಪ್ಲೇಯರ್ ಗಳನ್ನು ಆಯ್ಕೆ ಮಾಡಿಕೊಳ್ಳುವ ಸಾಹಸ ಮಾಡಲಿಲ್ಲ.