
ಬೆಂಗಳೂರು: ಐದು ಬಾರಿ ಚಾಂಪಿಯನ್ ಪಟ್ಟ ಅಲಂಕರಿಸುವ ಮೂಲಕ ಐಪಿಎಲ್‌ನ ಯಶಸ್ವಿ ತಂಡಗಳಲ್ಲಿ ಮುಂಬೈ ಇಂಡಿಯನ್ಸ್ ಅಗ್ರಸ್ಥಾನದಲ್ಲಿದೆ. ಆದರೆ 2021ರಿಂದೀಚೆಗೆ ಯಾಕೋ ನೀತಾ ಅಂಬಾನಿ ಮಾಲಿಕತ್ವದ ಮುಂಬೈ ಇಂಡಿಯನ್ಸ್ ಅದೃಷ್ಟ ಯಾಕೋ ಕೈಕೊಟ್ಟಂತಿದೆ. ಕಳೆದ ಕೆಲ ವರ್ಷಗಳಿಂದ ಮುಂಬೈ ಇಂಡಿಯನ್ಸ್ ತಂಡವು ನೀರಸ ಪ್ರದರ್ಶನ ತೋರುತ್ತಿದೆ. ಹೀಗಾಗಿ 2027ರ ಐಪಿಎಲ್ ಟೂರ್ನಿಗೂ ಮುನ್ನ ಮುಂಬೈ ಇಂಡಿಯನ್ಸ್ ತಂಡದಲ್ಲಿ ಮೇಜರ್ ಸರ್ಜರಿ ನಡೆಯುವ ಸಾಧ್ಯತೆಯಿದೆ.
ಮೇಲ್ನೋಟಕ್ಕೆ ಮುಂಬೈ ಇಂಡಿಯನ್ಸ್ ಬ್ಯಾಟಿಂಗ್ ವಿಭಾಗ ಸಾಕಷ್ಟು ಬಲಿಷ್ಠವಾಗಿ ಗುರುತಿಸಿಕೊಂಡಿದ್ದರೂ, ಬೌಲಿಂಗ್ ವಿಭಾಗ ಕೈಕೊಡುತ್ತಿರುವುದು ಮುಂಬೈ ಫ್ರಾಂಚೈಸಿಯ ನಿದ್ದೆಗೆಡುವಂತೆ ಮಾಡಿದೆ. 2026ರ ಐಪಿಎಲ್ ಟೂರ್ನಿಯಲ್ಲಿ ಹಾರ್ದಿಕ್ ಪಾಂಡ್ಯ ನೇತೃತ್ವದ ಮುಂಬೈ ಇಂಡಿಯನ್ಸ್ ತಂಡವು ಆಡಿದ 14 ಪಂದ್ಯಗಳ ಪೈಕಿ 10 ಪಂದ್ಯಗಳಲ್ಲಿ ಸೋಲು ಕಾಣುವ ಮೂಲಕ 9ನೇ ಸ್ಥಾನಿಯಾಗಿ ತನ್ನ ಅಭಿಯಾನ ಮುಗಿಸಿತ್ತು. ಹೀಗಾಗಿ ಮುಂಬೈ ಫ್ರಾಂಚೈಸಿಯು ಮುಂಬರುವ ಐಪಿಎಲ್ ಹರಾಜಿಗೂ ಮುನ್ನ ಈ ಮೂರು ಬೌಲರ್‌ಗಳಿಗೆ ಗೇಟ್‌ಪಾಸ್ ನೀಡಲು ರೆಡಿಯಾಗಿದೆ. ಈ ಬೌಲರ್‌ಗಳ ಪೈಕಿ 12.5 ಕೋಟಿ ರುಪಾಯಿಗೆ ಖರೀದಿಸಿದ್ದ ಮಾರಕ ಎಡಗೈ ವೇಗಿಯೂ ಇದ್ದಾರೆ ಎನ್ನುವುದು ವಿಶೇಷ. ಈ ಲಿಸ್ಟ್‌ನಲ್ಲಿರುವ ಮೂವರು ಬೌಲರ್‌ಗಳು ಯಾರು ನೋಡೋಣ ಬನ್ನಿ.
ಭಾರತದ ವೇಗಿ ದೀಪಕ್ ಚಹರ್ ಅವರನ್ನು ಮುಂಬೈ ಇಂಡಿಯನ್ಸ್ ಫ್ರಾಂಚೈಸಿ 9.25 ಕೋಟಿ ರುಪಾಯಿ ನೀಡಿ ರೀಟೈನ್ ಮಾಡಿಕೊಂಡಿತ್ತು. ಗಾಯದ ಸಮಸ್ಯೆಯ ಹೊರತಾಗಿಯೂ ದೀಪಕ್ ಚಹರ್ ಮೇಲೆ ಮುಂಬೈ ಫ್ರಾಂಚೈಸಿ ನಂಬಿಕೆಯಿಟ್ಟಿತ್ತು. ಆದರೆ ದೀಪಕ್ ಚಹರ್ ಕಳೆದ ಸೀಸನ್ ಐಪಿಎಲ್ ಟೂರ್ನಿಯಲ್ಲಿ ಮುಂಬೈ ಪರ 3 ಪಂದ್ಯಗಳನ್ನಾಡಿ ಕೇವಲ ಒಂದು ವಿಕೆಟ್ ಕಬಳಿಸಲಷ್ಟೇ ಶಕ್ತರಾಗಿದ್ದರು. ಹೀಗಾಗಿ ಚಹರ್‌ಗೆ ಮುಂಬೈ ತಂಡದಿಂದ ಗೇಟ್‌ಪಾಸ್ ಸಿಗೋದು ಬಹುತೇಕ ಖಚಿತ ಎನ್ನಲಾಗಿದೆ.
2026ರ ಐಪಿಎಲ್ ಟೂರ್ನಿಗೂ ಮುನ್ನ ಮುಂಬೈ ಇಂಡಿಯನ್ಸ್ ಫ್ರಾಂಚೈಸಿ 2 ಕೋಟಿ ರುಪಾಯಿ ನೀಡಿ ಲಖನೌ ಸೂಪರ್ ಜೈಂಟ್ಸ್ ತಂಡದಿಂದ ಶಾರ್ದೂಲ್ ಠಾಕೂರ್ ಅವರನ್ನು ಕರೆ ತಂದಿತು. ಶಾರ್ದೂಲ್ ಠಾಕೂರ್ ಮೇಲೆ ಬೆಟ್ಟದಷ್ಟು ನಿರೀಕ್ಷೆಯಿಟ್ಟುಕೊಂಡು ಮುಂಬೈ ಫ್ರಾಂಚೈಸಿ ಈ ಡೀಲ್‌ಗೆ ಕೈ ಹಾಕಿತ್ತು. ಆದರೆ ಶಾರ್ದೂಲ್ ಠಾಕೂರ್ ಮುಂಬೈ ಇಂಡಿಯನ್ಸ್ ಪರ 7 ಪಂದ್ಯಗಳನ್ನಾಡಿ ಕೇವಲ ಆರು ವಿಕೆಟ್ ಕಬಳಿಸಿ ನಿರೀಕ್ಷೆ ಹುಸಿಗೊಳಿಸಿದರು. ಹೀಗಾಗಿ ಶಾರ್ದೂಲ್ ಠಾಕೂರ್ ಅವರನ್ನು ಮುಂಬೈ ಫ್ರಾಂಚೈಸಿ ರಿಲೀಸ್ ಮಾಡುವ ಸಾಧ್ಯತೆ ಹೆಚ್ಚಿದೆ.
ಕಿವೀಸ್ ಮೂಲದ ಅನುಭವಿ ಎಡಗೈ ವೇಗಿ ಟ್ರೆಂಟ್ ಬೌಲ್ಟ್ ಅವರನ್ನು ಮುಂಬೈ ಇಂಡಿಯನ್ಸ್ ಫ್ರಾಂಚೈಸಿ 2026ರ ಐಪಿಎಲ್ ಟೂರ್ನಿಗೂ ಮುನ್ನ ಬರೋಬ್ಬರಿ 12.5 ಕೋಟಿ ರುಪಾಯಿ ನೀಡಿ ರೀಟೈನ್ ಮಾಡಿಕೊಂಡಿತ್ತು. ಪವರ್ ಪ್ಲೇ ಹಾಗೂ ಡೆತ್ ಓವರ್‌ಗಳಲ್ಲಿ ಮಿಂಚಿನ ದಾಳಿ ನಡೆಸುವ ಸಾಮರ್ಥ್ಯ ಹೊಂದಿರುವ ಬೌಲ್ಟ್, ಕಳೆದ ಸೀಸನ್ ಐಪಿಎಲ್ ಟೂರ್ನಿಯಲ್ಲಿ ದಯನೀಯ ವೈಫಲ್ಯ ಅನುಭವಿಸಿದ್ದರು. ಬೌಲ್ಟ್ ಕಳೆದ ಸೀಸನ್ ಐಪಿಎಲ್ ಟೂರ್ನಿಯಲ್ಲಿ 5 ಪಂದ್ಯಗಳನ್ನಾಡಿ 11.62ರ ಸರಾಸರಿಯಲ್ಲಿ ರನ್ ಬಿಟ್ಟುಕೊಟ್ಟು ಕೇವಲ ಎರಡು ವಿಕೆಟ್ ಅಷ್ಟೇ ಕಬಳಿಸಿದ್ದರು. ಹೀಗಾಗಿ ಬೌಲ್ಟ್ ಅವರಿಗೆ ಮುಂಬೈ ಫ್ರಾಂಚೈಸಿ ಗೇಟ್‌ಪಾಸ್ ನೀಡಲು ರೆಡಿಯಾಗಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.