ಐಪಿಎಲ್ 2026: ವಿಡಿಯೋ ಗೇಮ್‌ ಕ್ರಿಕೆಟ್‌ ಆಡಿದ ವೈಭವ್‌ ಸೂರ್ಯವಂಶಿ, ಧ್ರುವ್‌ ಜುರೆಲ್; ಕಂಗೆಟ್ಟ ಆರ್‌ಸಿಬಿ ಬೌಲರ್ಸ್‌

Published : Apr 11, 2026, 12:08 AM IST
Vaibhav Sooryavanshi

ಸಾರಾಂಶ

ಆರ್‌ಸಿಬಿ ನೀಡಿದ್ದ 202 ರನ್‌ಗಳ ಬೃಹತ್ ಗುರಿಯನ್ನು ರಾಜಸ್ಥಾನ ರಾಯಲ್ಸ್, ವೈಭವ್ ಸೂರ್ಯವಂಶಿ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಸುಲಭವಾಗಿ ಬೆನ್ನಟ್ಟಿತು. ಕೇವಲ 26 ಎಸೆತಗಳಲ್ಲಿ 78 ರನ್ ಸಿಡಿಸಿದ ವೈಭವ್ ಹಾಗೂ ಅಜೇಯ 81 ರನ್ ಬಾರಿಸಿದ ಧ್ರುವ್ ಜುರೆಲ್ ತಂಡದ ಭರ್ಜರಿ ಗೆಲುವಿಗೆ ಕಾರಣರಾದರು.

ಗುವಾಹಟಿ (ಏ.10): ಮಳೆಯಿಂದಾಗಿ ತಡವಾಗಿ ಆರಂಭವಾದ ರಾಜಸ್ಥಾನ ರಾಯಲ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಐಪಿಎಲ್‌ ಪಂದ್ಯದಲ್ಲಿ ಮೊದಲ ಆವೃತ್ತಿಯ ಚಾಂಪಿಯನ್‌ ಟೀಮ್‌ ಅದ್ಭುತ ಜಯ ಸಾಧಿಸಿದೆ. ಆರ್‌ಸಿಬಿ ನೀಡಿದ್ದ 202 ರನ್‌ಗಳ ಬೃಹತ್ ಗುರಿಯನ್ನು ರಾಜಸ್ಥಾನ ರಾಯಲ್ಸ್ ಕೇವಲ 12 ಎಸೆತ ಬಾಕಿ ಇರುವಂತೆ 18 ಓವರ್‌ಗಳಲ್ಲಿ 4 ವಿಕೆಟ್‌ಗೆ 202 ರನ್‌ ಬಾರಿಸಿ ಗೆಲುವು ಕಂಡಿತು. ವಿಡಿಯೋ ಗೇಮ್‌ನಲ್ಲಿ ಆಡುವಂತೆ ಬ್ಯಾಟ್‌ ಬೀಸಿದ ವೈಭವ್‌ ಸೂರ್ಯವಂಶಿ, ಕೇವಲ 26 ಎಸೆತಗಳಲ್ಲಿ 7 ಬೌಂಡರಿ, 8 ಅಮೋಘ ಸಿಕ್ಸರ್‌ ಸಿಡಿಸಿ ರಾಜಸ್ಥಾನ ತಂಡದ 6 ವಿಕೆಟ್‌ ಗೆಲುವಿಗೆ ಕಾರಣರಾದರು.

ವೈಭವ್-ಧ್ರುವ್ ಜುರೆಲ್ ಮಿಂಚು

ಬರ್ಸಾಪರ ಕ್ರಿಕೆಟ್‌ ಸ್ಟೇಡಿಯಂನಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ 202 ರನ್‌ಗಳ ಸವಾಲಿನ ಗುರಿ ಬೆನ್ನತ್ತಿದ ರಾಜಸ್ಥಾನ ರಾಯಲ್ಸ್‌ಗೆ ಯುವ ಪ್ರತಿಭೆ ವೈಭವ್ ಸೂರ್ಯವಂಶಿ ಆನೆಯ ಬಲ ತಂದರು. ಕೇವಲ 26 ಎಸೆತಗಳನ್ನು ಎದುರಿಸಿದ ವೈಭವ್ 8 ಬೌಂಡರಿ ಹಾಗೂ 7 ಭರ್ಜರಿ ಸಿಕ್ಸರ್‌ಗಳ ನೆರವಿನಿಂದ ಬರೊಬ್ಬರಿ 78 ರನ್ ಚಚ್ಚಿ ಆರ್‌ಸಿಬಿ ಬೌಲರ್‌ಗಳನ್ನು ಕಂಗೆಡಿಸಿದರು. ಇವರಿಗೆ ಸಾಥ್ ನೀಡಿದ ವಿಕೆಟ್ ಕೀಪರ್ ಧ್ರುವ್ ಜುರೆಲ್ ಅಜೇಯ 81 ರನ್ (43 ಎಸೆತ, 8 ಬೌಂಡರಿ, 3 ಸಿಕ್ಸರ್) ಬಾರಿಸಿ ಜಯದ ಹಾದಿಯನ್ನು ಸುಗಮಗೊಳಿಸಿದರು. ಇವರಿಬ್ಬರ ಬ್ಯಾಟಿಂಗ್‌ ಪ್ರತಾಪ ಹೇಗಿತ್ತೆಂದರೆ 2ನೇ ವಿಕೆಟ್‌ಗೆ ಕೇವಲ 37 ಎಸೆತಗಳಲ್ಲಿ 108 ರನ್‌ ಜೊತೆಯಾಟವಾಡಿದರು. ಇದರಲ್ಲಿ ವೈಭವ್‌ ಪಾಲೇ ಅಧಿಕವಾಗಿತ್ತು.

ತಂಡದ ಮೊತ್ತ 9ನೇ ಓವರ್‌ನ ಮೊದಲ ಎಸೆತದ ವೇಳೆಗೆ 129 ರನ್‌ ಆಗಿದ್ದಾಗ ವೈಭವ್‌ ಔಟಾದರೆ, ಅದೇ ಮೊತ್ತಕ್ಕೆ ಶಿಮ್ರೋನ್‌ ಹೆಟ್ಮೆಯರ್‌ ಹಾಗೂ ಈ ಮೊತ್ತಕ್ಕೆ 5 ರನ್‌ ಸೇರಿಸುವ ವೇಳೆಗೆ ನಾಯಕ ರಿಯಾನ್‌ ಪರಾಗ್‌ ಕೂಡ ವಿಕೆಟ್‌ ಒಪ್ಪಿಸಿದರು. ಈ ಹಂತದಲ್ಲಿ ಕೊಂಚ ತಂಡ ಗಲಿಬಿಲಿ ಆಯಿತಾದರೂ ಧ್ರುವ್‌ ಜುರೇಲ್‌ಗೆ ಜೊತೆಯಾದ ಅನುಭವಿ ರವೀಂದ್ರ ಜಡೇಜಾ ತಂಡದ ಜಯವನ್ನು ಸುಲಭವಾಗಿಸಿದರು.

ಬ್ಯಾಟಿಂಗ್‌ ತಾಕತ್ತು ತೋರಿದ ಆರ್‌ಸಿಬಿ

ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ ಆರಂಭದಲ್ಲೇ ಸಂಕಷ್ಟಕ್ಕೆ ಸಿಲುಕಿತು. ಫಿಲ್ ಸಾಲ್ಟ್ ಮೊದಲ ಎಸೆತದಲ್ಲೇ ಔಟಾದರೆ, ವಿರಾಟ್ ಕೊಹ್ಲಿ (32) ಬಿರುಸಿನ ಆಟವಾಡಿದರೂ ರವಿ ಬಿಷ್ಣೋಯಿಗೆ ವಿಕೆಟ್ ಒಪ್ಪಿಸಿದರು. ಮಧ್ಯಮ ಕ್ರಮಾಂಕದಲ್ಲಿ ವಿಕೆಟ್‌ಗಳು ಪಟಪಟನೆ ಬಿದ್ದಾಗ ನಾಯಕನ ಆಟವಾಡಿದ ರಜತ್ ಪಾಟಿದಾರ್ 40 ಎಸೆತಗಳಲ್ಲಿ 63 ರನ್ ಸಿಡಿಸಿ ತಂಡಕ್ಕೆ ಆಸರೆಯಾದರು. ಅಂತಿಮವಾಗಿ ವೆಂಕಟೇಶ್ ಅಯ್ಯರ್ (29*) ಮತ್ತು ರೊಮಾರಿಯೋ ಶೆಫರ್ಡ್ (22) ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಆರ್‌ಸಿಬಿ 8 ವಿಕೆಟ್ ನಷ್ಟಕ್ಕೆ 201 ರನ್ ಗಳಿಸಿತು.

ಆರ್‌ಸಿಬಿ ಪರ ಕೃನಾಲ್ ಪಾಂಡ್ಯ ಮತ್ತು ಜೋಶ್ ಹೇಜಲ್‌ವುಡ್ ತಲಾ ಎರಡು ವಿಕೆಟ್ ಪಡೆದರಾದರೂ ರನ್ ವೇಗಕ್ಕೆ ಬ್ರೇಕ್ ಹಾಕಲು ಸಾಧ್ಯವಾಗಲಿಲ್ಲ. ವೈಭವ್ ಅವರ 300ರ ಸ್ಟ್ರೈಕ್ ರೇಟ್ ಬ್ಯಾಟಿಂಗ್ ಪಂದ್ಯದ ಚಿತ್ರಣವನ್ನೇ ಬದಲಿಸಿತು. ಅಂತಿಮವಾಗಿ ರವೀಂದ್ರ ಜಡೇಜಾ (21*) ಅವರೊಂದಿಗೆ ಜುರೆಲ್ ಅಜೇಯರಾಗಿ ಉಳಿದು ತಂಡವನ್ನು ಗುರಿ ತಲುಪಿಸಿದರು. ಗುವಾಹಟಿಯ ಬರ್ಸಾಪರ ಕ್ರೀಡಾಂಗಣದಲ್ಲಿ ಸಿಕ್ಸರ್‌ಗಳ ಮಳೆ ಸುರಿಸಿದ ರಾಜಸ್ಥಾನ ತಂಡವು ಈ ಜಯದೊಂದಿಗೆ ಅಂಕಪಟ್ಟಿಯಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿದೆ. ಆರ್‌ಸಿಬಿ ಉತ್ತಮ ಮೊತ್ತ ಪೇರಿಸಿದರೂ ಬೌಲಿಂಗ್ ವಿಭಾಗದ ವೈಫಲ್ಯದಿಂದಾಗಿ ಮತ್ತೊಮ್ಮೆ ಸೋಲೊಪ್ಪಿಕೊಂಡಿತು.

 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

IPL 2026: ಇದು ಆರ್‌ಸಿಬಿ ಬ್ಯಾಟಿಂಗ್ ತಾಕತ್ತು; ಪವರ್‌ಪ್ಲೇ ಆಘಾತದ ನಡುವೆಯೂ 200ರ ಗಡಿ ದಾಟಿದ ಬೆಂಗಳೂರು!
ಮತ್ತೆ ಮದುವೆ ಆಗ್ತಾರಾ ಸ್ಮೃತಿ ಮಂಧನಾ - ಪಲಾಶ್ ಮುಚ್ಚಲ್? ಸ್ಮೃತಿ ತಂದೆಯ ಆಶೀರ್ವಾದ ಪಡೆದ ಪಲಕ್ ಮುಚ್ಚಲ್! ವಿಡಿಯೋ ವೈರಲ್