
ಬೆಂಗಳೂರು: ಈ ಸಲ ಐಪಿಎಲ್‌ನಲ್ಲಿ ತನ್ನ ತವರು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿರುವ ಹಾಲಿ ಚಾಂಪಿಯನ್ ಆರ್‌ಸಿಬಿ, ಬುಧವಾರ ಲಖನೌ ಸೂಪರ್ ಜೈಂಟ್ಸ್ ವಿರುದ್ಧ ಕಣಕ್ಕಿಳಿಯಲಿದೆ. ಇದರಲ್ಲಿ ಗೆದ್ದು ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರುವುದು ಆರ್‌ಸಿಬಿಯ ಪ್ರಮುಖ ಗುರಿ.
ಎಲ್ಲಾ ವಿಭಾಗದಲ್ಲೂ ಬಲಿಷ್ಠವಾಗಿರುವ ಆರ್‌ಸಿಬಿ ಈ ಬಾರಿ ಆಡಿರುವ 4 ಪಂದ್ಯಗಳ ಪೈಕಿ 3ರಲ್ಲಿ ಗೆದ್ದಿದೆ. ಚಿನ್ನಸ್ವಾಮಿಯಲ್ಲಿ ಸನ್‌ರೈಸರ್ಸ್, ಸಿಎಸ್‌ಕೆ ವಿರುದ್ಧ ಜಯಗಳಿಸಿರುವ ತಂಡ, ಮುಂಬೈಯನ್ನು ವಾಂಖೆಡೆಯಲ್ಲಿ ಮಣಿಸಿತ್ತು. ಈಗ ಲಖನೌಗೆ ಆಘಾತ ನೀಡಲು ಕಾಯುತ್ತಿದೆ. ಅತ್ತ ಲಖನೌ ಅಸ್ಥಿರ ಆಟವಾಡುತ್ತಿದ್ದು, ಆಡಿರುವ 4ರ ಪೈಕಿ 2ರಲ್ಲಿ ಮಾತ್ರ ಗೆದ್ದಿದೆ.
ಆರ್‌ಸಿಬಿ ಬ್ಯಾಟರ್‌ಗಳು ಟೂರ್ನಿಯಲ್ಲಿ ಅಬ್ಬರಿಸುತ್ತಿದ್ದಾರೆ. ದೇವದತ್ ಪಡಿಕ್ಕಲ್(201 ರನ್), ಟಿಮ್ ಡೇವಿಡ್(221), ನಾಯಕ ರಜತ್ ಪಾಟೀದಾರ್(214), ಫಿಲ್ ಸಾಲ್ಟ್(178), ವಿರಾಟ್ ಕೊಹ್ಲಿ(162) ಅಮೋಘ ಲಯದಲ್ಲಿದ್ದಾರೆ. ಈ ಐವರು ಬ್ಯಾಟರ್‌ಗಳು 4 ಪಂದ್ಯಗಳಲ್ಲಿ ಒಟ್ಟು 52 ಸಿಕ್ಸರ್ ಸಿಡಿಸಿದ್ದು, ಇದು ಉಳಿದೆಲ್ಲಾ ತಂಡಗಳಿಗಿಂತ ಜಾಸ್ತಿ. ಹೀಗಾಗಿ ಲಖನೌ ಬೌಲರ್‌ಗಳನ್ನೂ ಬೆವರಿಳಿಸುವ ಕಾತರದಲ್ಲಿದೆ. ತಂಡ ಈಗಾಗಲೇ ಸತತ 4 ಪಂದ್ಯಗಳಲ್ಲೂ 200+ ರನ್ ಕಲೆಹಾಕಿದ್ದು, ಮತ್ತೆ ದೊಡ್ಡ ಮೊತ್ತದ ವಿಶ್ವಾಸದಲ್ಲಿದೆ.
ತಂಡದ ಬೌಲಿಂಗ್ ವಿಭಾಗವೂ ಬಲಿಷ್ಠವಾಗಿದೆ. ಜೋಶ್ ಹೇಜಲ್‌ವುಡ್ ಹಾಗೂ ಜೇಕಬ್ ಡಫಿ ಜೊತೆ ಭುವನೇಶ್ವರ್ ಕುಮಾರ್, ಕೃನಾಲ್ ಪಾಂಡ್ಯ, ಸುಯಶ್ ಶರ್ಮಾ ಮಿಂಚಿನ ದಾಳಿ ನಡೆಸುತ್ತಿದ್ದಾರೆ.
ಆರ್‌ಸಿಬಿ ಬ್ಯಾಟರ್‌ಗಳಿಗೆ ಈ ಪಂದ್ಯದಲ್ಲಿ ವೇಗಿ ಮೊಹಮ್ಮದ್ ಶಮಿ ಪ್ರಮುಖ ಸವಾಲಾಗಬಹುದು. ಮೊಹಮ್ಮದ್ ಶಮಿ 4 ಪಂದ್ಯಗಳಲ್ಲಿ ಕೇವಲ 6.2ರ ಎಕಾನಮಿಯಲ್ಲಿ ರನ್ ಬಿಟ್ಟುಕೊಟ್ಟಿದ್ದಾರೆ. ಇದು ಟೂರ್ನಿಯಲ್ಲಿ ಪ್ರಮುಖ ಬೌಲರ್‌ಗಳ ಪೈಕಿ ಶ್ರೇಷ್ಠ. ಅವರ ಸ್ವಿಂಗ್ ಬೌಲ್‌ಗಳನ್ನು ಆರ್‌ಸಿಬಿ ಬ್ಯಾಟರ್ಸ್ ಯಾವ ರೀತಿ ಎದುರಿಸಲಿದ್ದಾರೆ ಎಂಬ ಕುತೂಹಲವಿದೆ.
ಲಖನೌ ಈ ಬಾರಿ ಹಿನ್ನಡೆ ಅನುಭವಿಸಲು ಬ್ಯಾಟರ್‌ಗಳೇ ಕಾರಣ. ಸ್ವತಃ ನಾಯಕ ರಿಷಭ್ ಪಂತ್(103 ರನ್) ವಿಫಲರಾಗುತ್ತಿದ್ದಾರೆ. ಮಾರ್ಕ್‌ರಮ್, ಮಿಚೆಲ್ ಮಾರ್ಷ್, ಪೂರನ್, ಆಯುಶ್ ಬದೋನಿ, ಸಮದ್‌ರಿಂದಲೂ ದೊಡ್ಡ ಇನ್ನಿಂಗ್ಸ್ ಕಂಡುಬಂದಿಲ್ಲ. ಇವರು ಚಿನ್ನಸ್ವಾಮಿಯ ರನ್ ಸ್ನೇಹಿ ಪಿಚ್‌ನಲ್ಲಾದರೂ ಅಬ್ಬರಿಸಬಲ್ಲರೇ ಎಂದು ಕಾದು ನೋಡಬೇಕು. ಮುಕುಲ್ ಚೌಧರಿ ಮೇಲೂ ಕಣ್ಣಿದೆ.
ಮುಂಬೈ ವಿರುದ್ಧ ಪಂದ್ಯದಲ್ಲಿ ಪಾದ ಗಾಯದಿಂದಾಗಿ ಫೀಲ್ಡಿಂಗ್ ತಪ್ಪಿಸಿಕೊಂಡಿದ್ದ ವಿರಾಟ್ ಕೊಹ್ಲಿ ಮಂಗಳವಾರ ಕೆಲ ಕಾಲ ಅಭ್ಯಾಸ ನಡೆಸಿದರು. ಮೈದಾನದಲ್ಲಿ ಓಡುವ ಮೂಲಕ ವೈದ್ಯಕೀಯ ತಂಡಕ್ಕೆ ತಮ್ಮ ಫಿಟ್ನೆಸ್ ಸಾಬೀತುಪಡಿಸಿದರು. ಅವರು ಪೂರ್ಣ ಪ್ರಮಾಣದಲ್ಲಿ ಫಿಟ್ ಆಗಿದ್ದು, ಲಖನೌ ವಿರುದ್ಧ ಅಬ್ಬರಿಸುವ ವಿಶ್ವಾಸದಲ್ಲಿದ್ದಾರೆ.
ಆರ್‌ಸಿಬಿ: ವಿರಾಟ್ ಕೊಹ್ಲಿ, ಫಿಲ್ ಸಾಲ್ಟ್, ದೇವದತ್ ಪಡಿಕ್ಕಲ್, ರಜತ್ ಪಾಟೀದಾರ್(ನಾಯಕ), ಟಿಮ್ ಡೇವಿಡ್, ಜಿತೇಶ್ ಶರ್ಮಾ, ರೊಮ್ಯಾರಿಯೋ ಶೆಫರ್ಡ್, ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಜೋಶ್ ಹೇಜಲ್‌ವುಡ್, ಸುಯಶ್ ಶರ್ಮಾ, ರಸಿಕ್ ಧರ್.
ಲಖನೌ ಸೂಪರ್ ಜೈಂಟ್ಸ್: ಮಿಚೆಲ್ ಮಾರ್ಷ್, ಏಯ್ಡನ್ ಮಾರ್ಕ್‌ರಮ್, ರಿಷಭ್ ಪಂತ್(ನಾಯಕ), ಆಯುಷ್ ಬದೋನಿ, ನಿಕೋಲಸ್ ಪೂರನ್, ಅಬ್ದುಲ್ ಸಮದ್, ಮುಕುಲ್ ಚೌಧರಿ, ಮೊಹಮ್ಮದ್ ಶಮಿ, ಆವೇಶ್ ಖಾನ್, ದಿಗ್ವೇಶ್ ರಾಥಿ, ಪ್ರಿನ್ಸ್ ಯಾದವ್.
ಮುಖಾಮುಖಿ: 06
ಆರ್‌ಸಿಬಿ: 04
ಲಖನೌ: 02
ಪಂದ್ಯ: ಸಂಜೆ 7.30ಕ್ಕೆ
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.