ದಾಖಲೆ ಶತಕ ಸಿಡಿಸಿದ ವೈಭವ್‌ಗೆ ಬಂಪರ್; ಹೊಸ ಆಸೆ ಬಿಚ್ಚಿಟ್ಟ ಬಿಹಾರದ 14 ವರ್ಷದ ಕ್ರಿಕೆಟಿಗ!

Published : Apr 30, 2025, 11:14 AM ISTUpdated : Apr 30, 2025, 11:36 AM IST
ದಾಖಲೆ ಶತಕ ಸಿಡಿಸಿದ ವೈಭವ್‌ಗೆ ಬಂಪರ್; ಹೊಸ ಆಸೆ ಬಿಚ್ಚಿಟ್ಟ ಬಿಹಾರದ 14 ವರ್ಷದ ಕ್ರಿಕೆಟಿಗ!

ಸಾರಾಂಶ

ಐಪಿಎಲ್‌ನಲ್ಲಿ 14 ವರ್ಷದ ವೈಭವ್ ಸೂರ್ಯವಂಶಿ 35 ಎಸೆತಗಳಲ್ಲಿ ಶತಕ ಸಿಡಿಸಿ ಕ್ರಿಕೆಟ್ ದಿಗ್ಗಜರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಸಚಿನ್, ಕೊಹ್ಲಿ, ಯುವರಾಜ್ ಸೇರಿದಂತೆ ಅನೇಕ ದಿಗ್ಗಜರು ವೈಭವ್ ಅವರ ಸಾಧನೆಯನ್ನು ಶ್ಲಾಘಿಸಿದ್ದಾರೆ. ಬಿಹಾರ ಸಿಎಂ ನಿತೀಶ್ ಕುಮಾರ್ 10 ಲಕ್ಷ ಬಹುಮಾನ ಘೋಷಿಸಿದ್ದಾರೆ.

ನವದೆಹಲಿ: ಐಪಿಎಲ್‌ನಲ್ಲಿ 35 ಎಸೆತದಲ್ಲಿ ಶತಕ ಸಿಡಿಸಿದ ರಾಜಸ್ಥಾನ ರಾಯಲ್ಸ್‌ನ ವೈಭವ ಸೂರ್ಯವಂಶಿ ಆಟವನ್ನು ಇಡೀ ಕ್ರಿಕೆಟ್ ಲೋಕ ಕೊಂಡಾಡಿದೆ. 'ಕ್ರಿಕೆಟ್ ದೇವರು' ಎಂದೇ ಕರೆಸಿಕೊಳ್ಳುವ ಸಚಿನ್ ತೆಂಡುಲ್ಕರ್, 'ವೈಭವ ನಿರ್ಭೀತ ಆಟ, ಬ್ಯಾಟ್ ಬೀಸುವ ವೇಗ, ಮುಂಚಿತವಾಗಿ ಚೆಂಡಿನ ಲೆಂಥ್ ಗ್ರಹಿಸಿಕೊಂಡು ಆಡುವ ರೀತಿ, ಚೆಂಡನ್ನು ಬೌಂಡರಿ ಹೊರಕ್ಕೆ ಅಟ್ಟುವ ಪರಿ ಎಲ್ಲವೂ ಬಹಳ ಸೊಗಸಾಗಿದೆ' ಎಂದು ಟ್ವಿಟ್ ಮಾಡಿದ್ದಾರೆ.

ಇನ್ನು ವಿರಾಟ್ ಕೊಹ್ಲಿ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ 'ಒಂದೆಡೆ ಸಾರ್ಮಥ್ಯ ಹಾಗೂ ಮತ್ತೊಂದೆಡೆ ವೈಭವ್ ಸೂರ್ಯವಂಶಿ, ಮುಂದಿನ ಪೀಳಿಗೆಯನ್ನು ಮುನ್ನಡೆಸಿರಿ. ದೇವರು ನಿಮಗೆ ಒಳ್ಳೇದು ಮಾಡಲಿ ಎಂದು ಬರೆದುಕೊಂಡಿದ್ದಾರೆ. ಯುವರಾಜ್ ಸಿಂಗ್, “ನಿಮಗೆ 14 ವರ್ಷ ವಯಸ್ಸಿದ್ದಾಗ ಏನು ಮಾಡುತ್ತಿದ್ದಿರಿ?, ಈ ಬಾಲಕ ವಿಶ್ವ ಶ್ರೇಷ್ಠ ಬೌಲರ್‌ಗಳನ್ನು ಮನಸೋ ಇಚ್ಛೆ ದಂಡಿಸುತ್ತಿದ್ದಾನೆ. ಈತನ ಹೆಸರನ್ನು ನೆನಪಿನಲ್ಲಿಟ್ಟುಕೊಳ್ಳಿ ಎಂದು ಟ್ವಿಟ್ ಮಾಡಿದ್ದಾರೆ. 

ಭಾರತ ಟಿ20 ತಂಡದ ನಾಯಕ ಸೂರ್ಯಕುಮಾರ್ ಯಾದವ್, ಮೊಹಮದ್ ಶಮಿ, ಖ್ಯಾತ ವೀಕ್ಷಕ ವಿವರಣೆಗಾರ ಇಯಾನ್ ಬಿಶಪ್ ಸೇರಿ ಅನೇಕರು ವೈಭವ್‌ರನ್ನು ಕೊಂಡಾಡಿದ್ದಾರೆ.

ತಂದೆ, ತಾಯಿಯ ಪರಿಶ್ರಮದ ಫಲ ನಾನು ಏನಾಗಿದ್ದೇನೋ ಅದಕ್ಕೆ ನನ್ನ ಹೆತ್ತವರೇ ಕಾರಣ. ನಮ್ಮ ತಾಯಿ ಪ್ರತಿ ದಿನ ರಾತ್ರಿ 11ಕ್ಕೆ ಮಲಗಿ, ನನಗಾಗಿ ಬೆಳಗ್ಗೆ 3ಕ್ಕೆ ಏಳುತ್ತಾರೆ. ನನ್ನ ತಂದೆ ನನಗಾಗಿ ಕೆಲಸ ತ್ಯಜಿಸಿದ್ದಾರೆ. ಅಣ್ಣ ಮನೆಯ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ. ಭಾರತೀಯ ಕ್ರಿಕೆಟ್‌ಗೆ ದೊಡ್ಡ ಕೊಡುಗೆ ನೀಡಬೇಕು ಎನ್ನುವುದೇ ನನ್ನ ಗುರಿ ಎಂದು ವೈಭವ್ ಸೂರ್ಯವಂಶಿ ಹೇಳಿದ್ದಾರೆ.

ವೈಭವ್‌ಗೆ 10 ಲಕ್ಷ ಬಹುಮಾನ ಘೋಷಿಸಿದ ಬಿಹಾರ ಸಿಎಂ ನಿತೇಶ್

ವೈಭವ್ ಸೂರ್ಯವಂಶಿಗೆ ಬಿಹಾರ ಮುಖ್ಯ ಮಂತ್ರಿ ನಿತೇಶ್ ಕುಮಾರ್ 10 ಲಕ್ಷ ರುಪಾಯಿ ನಗದು ಬಹುಮಾನ ಘೋಷಿಸಿದ್ದಾರೆ. 'ಕಳೆದ ವರ್ಷ ವೈಭವ್ ಹಾಗೂ ಅವರ ತಂದೆಯನ್ನು ಭೇಟಿಯಾಗಿದ್ದೆ. ದಾಖಲೆಯ ಶತಕದ ಬಳಿಕ ಕರೆ ಮಾಡಿ ಅಭಿನಂದನೆ ಸಲ್ಲಿಸಿದೆ. ಈತ ಭವಿಷ್ಯದ ಸ್ಟಾರ್ ಆಗಲಿ' ಎಂದು ತಿಳಿಸಿದ್ದಾರೆ.

14 ವರ್ಷದ ವೈಭವ್‌ 17 ಎಸೆತಕ್ಕೆ ಫಿಫ್ಟಿ: ದಾಖಲೆ
ಜೈಪುರ: ಸೋಮವಾರ ಗುಜರಾತ್‌ ವಿರುದ್ಧ ರಾಜಸ್ಥಾನ ರಾಯಲ್ಸ್‌ನ 14 ವರ್ಷದ ವೈಭವ್ ಸೂರ್ಯವಂಶಿ ಅರ್ಧಶತಕ ಬಾರಿಸಿದ್ದು, ಐಪಿಎಲ್‌ನಲ್ಲಿ ಈ ಸಾಧನೆ ಮಾಡಿದ ಅತಿ ಕಿರಿಯ ಆಟಗಾರ ಎನಿಸಿಕೊಂಡರು. ಅವರು ಕೇವಲ 17 ಎಸೆತಗಳಲ್ಲೇ ಈ ಮೈಲುಗಲ್ಲು ತಲುಪಿದರು. ಇದು ಈ ಐಪಿಎಲ್‌ನ ಅತಿ ವೇಗದ ಫಿಫ್ಟಿ. ಒಟ್ಟಾರೆ ಟೂರ್ನಿ ಇತಿಹಾಸದ ಅತಿವೇಗದ ಅರ್ಧಶತಕದ ದಾಖಲೆ ಯಶಸ್ವಿ ಜೈಸ್ವಾಲ್‌ ಹೆಸರಲ್ಲಿದೆ. ಅವರು 2023ರಲ್ಲಿ ಕೋಲ್ಕತಾ ವಿರುದ್ಧ 13 ಎಸೆತಗಳಲ್ಲಿ ಫಿಫ್ಟಿ ಬಾರಿಸಿದ್ದರು.

14ರ ವೈಭವ್‌ ಶತಕದ ದಾಖಲೆ
ಜೈಪುರ: 14 ವರ್ಷದ ಉದಯೋನ್ಮುಖ ಆಟಗಾರ ವೈಭವ್‌ ಸೂರ್ಯವಂಶಿ ಸೋಮವಾರದ ಗುಜರಾತ್‌ ಟೈಟಾನ್ಸ್‌ ವಿರುದ್ಧ ಕೇವಲ 35 ಎಸೆತಗಳಲ್ಲೇ ಶತಕ ಬಾರಿಸಿ, ಹಲವು ದಾಖಲೆಗಳನ್ನು ಬರೆದಿದ್ದಾರೆ. ಅವರು ಟಿ20 ಕ್ರಿಕೆಟ್‌ನಲ್ಲಿ ಶತಕ ಬಾರಿಸಿದ ವಿಶ್ವದ ಅತಿ ಕಿರಿಯ ಆಟಗಾರ. ಅಲ್ಲದೆ ಐಪಿಎಲ್‌ನಲ್ಲಿ 2ನೇ ಅತಿ ವೇಗದ ಸೆಂಚುರಿ ದಾಖಲೆಯನ್ನೂ ಬರೆದಿದ್ದಾರೆ.

ವೈಭವ್ 38 ಎಸೆತಗಳಲ್ಲಿ 7 ಬೌಂಡರಿ, 11 ಸಿಕ್ಸರ್‌ಗಳೊಂದಿಗೆ 101 ರನ್‌ ಸಿಡಿಸಿ ಔಟಾದರು. ಐಪಿಎಲ್‌ನಲ್ಲಿ ಅತಿ ವೇಗದ ಶತಕದ ದಾಖಲೆ ಇರುವುದು ಕ್ರಿಸ್‌ ಗೇಲ್‌ ಹೆಸರಿನಲ್ಲಿ. ಅವರು 30 ಎಸೆತಗಳಲ್ಲೇ ಈ ಸಾಧನೆ ಮಾಡಿದ್ದರು.

ಅತಿ ಕಿರಿಯ: ವೈಭವ್ ಟಿ20 ಕ್ರಿಕೆಟ್‌ನಲ್ಲಿ ಶತಕ ಬಾರಿಸಿದ ಅತಿ ಕಿರಿಯ. ಅವರಿಗೆ ಈಗ 14 ವರ್ಷ, 32 ದಿನ ವಯಸ್ಸು. 2013ರಲ್ಲಿ ಮಹಾರಾಷ್ಟ್ರದ ವಿಜಯ್‌ ತಮಗೆ 18 ವರ್ಷ 118 ದಿನಗಳಾಗಿದ್ದಾಗ ಮುಂಬೈ ವಿರುದ್ಧ ಶತಕ ಬಾರಿಸಿದ್ದರು.

11 ಸಿಕ್ಸರ್‌
ವೈಭವ್ 11 ಸಿಕ್ಸರ್‌ ಸಿಡಿಸಿದರು. ಇದು ಐಪಿಎಲ್‌ ಇನ್ನಿಂಗ್ಸ್‌ನಲ್ಲಿ ಭಾರತೀಯ ಬ್ಯಾಟರ್‌ಗಳ ಪೈಕಿ ಜಂಟಿ ಗರಿಷ್ಠ. ಮುರಳಿ ವಿಜಯ್‌ ಕೂಡಾ 2011ರಲ್ಲಿ 11 ಸಿಕ್ಸರ್‌ ಸಿಡಿಸಿದ್ದರು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಮೇಲ್ಮನವಿ ಅರ್ಜಿ ವಜಾಗೊಳಿಸಿದ ಹೈಕೋರ್ಟ್, ಡಿ.7ಕ್ಕೆ ಕರ್ನಾಟಕ ಕ್ರಿಕೆಚ್ ಸಂಸ್ಥೆ ಚುನಾವಣೆ
ಕಾಂಗರೂ ನಾಡಲ್ಲಿ ಶತಕದ ಬರ ನೀಗಿಸಿಕೊಂಡ ಜೋ ರೂಟ್! ಕೊನೆಗೂ ತಪ್ಪಿದ ಹೇಡನ್ 'ಬೆತ್ತಲೆ ಸೇವೆ'!