18ನೇ ಆವೃತ್ತಿಯ ಐಪಿಎಲ್ ಟೂರ್ನಿ ಮಾರ್ಚ್ 21ಕ್ಕೆ ಆರಂಭವಾಗಲಿದ್ದು, ಮೇ 25ರಂದು ಕೋಲ್ಕತಾದಲ್ಲಿ ಫೈನಲ್ ಪಂದ್ಯ ನಡೆಯಲಿದೆ. ಐಸಿಸಿ ಚಾಂಪಿಯನ್ಸ್ ಟ್ರೋಫಿ ಕಾರಣದಿಂದಾಗಿ ಟೂರ್ನಿಯನ್ನು ಒಂದು ವಾರ ಮುಂದೂಡಲಾಗಿದೆ. ಉದ್ಘಾಟನಾ ಮತ್ತು ಫೈನಲ್ ಪಂದ್ಯಗಳು ಕೋಲ್ಕತಾದ ಈಡನ್ ಗಾರ್ಡನ್ಸ್‌ನಲ್ಲಿ ನಡೆಯಲಿವೆ.
ಮುಂಬೈ: 18ನೇ ಆವೃತ್ತಿಯ ಐಪಿಎಲ್ ಟೂರ್ನಿಯ ವೇಳಾಪಟ್ಟಿಯಲ್ಲಿ ಮಹತ್ವದ ಬದಲಾವಣೆಯಾಗಿದ್ದು, ಈ ಮೊದಲು ನಿಗಧಿ ಮಾಡಿದ್ದಕ್ಕಿಂತ ಒಂದು ವಾರ ತಡವಾಗಿ ಮಿಲಿಯನ್ ಡಾಲರ್ ಕ್ರಿಕೆಟ್ ಟೂರ್ನಿಗೆ ಚಾಲನೆ ಸಿಗಲಿದೆ. ಮಾರ್ಚ್ 21ಕ್ಕೆ ಆರಂಭಗೊಳ್ಳಲಿದೆ. ಮೇ 25ರಂದು ಕೋಲ್ಕತಾದಲ್ಲಿ ಫೈನಲ್ ಪಂದ್ಯ ನಡೆಸಲು ಬಿಸಿಸಿಐ ನಿರ್ಧರಿಸಿದೆ.
ಈ ಹಿಂದೆ ಮಾರ್ಚ್ 15ಕ್ಕೆ ಐಪಿಎಲ್ ಆರಂಭಿಸುವುದಾಗಿ ಬಿಸಿಸಿಐ ತಿಳಿಸಿತ್ತು. ಆದರೆ ಐಸಿಸಿ ಚಾಂಪಿಯನ್ಸ್ ಟ್ರೋಫಿ ಮಾರ್ಚ್ 9ಕ್ಕೆ ಕೊನೆಗೊಳ್ಳುವುದರಿಂದ 2 ವಾರ ಬಿಡುವಿನ ಬಳಿಕ ಐಪಿಎಲ್ ಆರಂಭಿಸಲು ಮಂಡಳಿ ನಿರ್ಧರಿಸಿದೆ. ಐಪಿಎಲ್ ಉದ್ಘಾಟನಾ ಪಂದ್ಯ ಹಾಗೂ ಫೈನಲ್ ಪಂದ್ಯವು ಹಾಲಿ ಚಾಂಪಿಯನ್ ತವರು ಮೈದಾನವಾದ ಕೋಲ್ಕತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆಯಲಿದೆ. ಎರಡನೇ ಕ್ವಾಲಿಫೈಯರ್ ಪಂದ್ಯ ಕೂಡಾ ಕೋಲ್ಕತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆಯಲಿದೆ. ಇನ್ನು ಎರಡು ಪ್ಲೇ ಆಫ್ ಪಂದ್ಯಗಳಿಗೆ ರನ್ನರ್ ಅಪ್ ಆಗಿರುವ ಸನ್‌ರೈಸರ್ಸ್ ಹೈದರಾಬಾದ್‌ನ ತವರು ಮೈದಾನವಾದ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಮೈದಾನದಲ್ಲಿ ನಡೆಯುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.
ಸಚಿನ್ ತೆಂಡೂಲ್ಕರ್ ಜತೆಗೆ ಈ 4 ರೆಕಾರ್ಡ್ಸ್ ಅಜರಾಮರ; ಈ ದಾಖಲೆ ಮುರಿಯೋದು ಅಸಾಧ್ಯ!
ಟೂರ್ನಿಯ ಉದ್ಘಾಟನೆ ಹಾಗೂ ಫೈನಲ್ ಪಂದ್ಯಗಳು ಕೋಲ್ಕತಾದ ಈಡನ್ ಗಾರ್ಡನ್ ಕ್ರೀಡಾಂಗಣದಲ್ಲಿ ನಡೆಯಲಿವೆ. ಟೂರ್ನಿಯಲ್ಲಿ ಒಟ್ಟು 74 ಪಂದ್ಯಗಳಿರಲಿವೆ. ಇನ್ನು ಈ ತಿಂಗಳ ಕೊನೆಯಲ್ಲಿ 2025ನೇ ಸಾಲಿನ ಐಪಿಎಲ್ ಟೂರ್ನಿಯ ಸಂಪೂರ್ಣ ವೇಳಾಪಟ್ಟಿ ಹೊರಬೀಳುವ ಸಾಧ್ಯತೆಯಿದೆ ಎಂದು ವರದಿಯಾಗಿದೆ
ಫೆಬ್ರವರಿ 7ರಿಂದ ಡಬ್ಲ್ಯುಪಿಎಲ್
ಮಹಿಳಾ ಐಪಿಎಲ್ ಫೆಬ್ರವರಿ 7ರಿಂದ ಮಾ.2ರ ವರೆಗೆ ನಡೆಯಲಿದೆ. ಬೆಂಗಳೂರು, ಮುಂಬೈ ಜೊತೆಗೆ ಬರೋಡಾ, ಲಖನೌ ಕ್ರೀಡಾಂಗಣಗಳಲ್ಲೂ ಪಂದ್ಯಗಳನ್ನು ಆಯೋಜಿಸಲು ಬಿಸಿಸಿಐ ನಿರ್ಧರಿಸಿದೆ. ಕಳೆದ ಬಾರಿ ಸ್ಮೃತಿ ಮಂಧನಾ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಡಬ್ಲ್ಯುಪಿಎಲ್ ಚಾಂಪಿಯನ್ ಆಗಿ ಹೊರಹೊಮ್ಮಿತ್ತು.