ಜೆಕೊಬ್ ಬೆಥೆಲ್ ಬದಲಿಗೆ ಮತ್ತೋರ್ವ ಡೇಂಜರಸ್ ಬ್ಯಾಟರ್ ಕರೆತಂದ ಆರ್‌ಸಿಬಿ!

Published : May 23, 2025, 01:06 PM IST
ಜೆಕೊಬ್ ಬೆಥೆಲ್ ಬದಲಿಗೆ ಮತ್ತೋರ್ವ ಡೇಂಜರಸ್ ಬ್ಯಾಟರ್ ಕರೆತಂದ ಆರ್‌ಸಿಬಿ!

ಸಾರಾಂಶ

ಆರ್‌ಸಿಬಿ ಪ್ಲೇ ಆಫ್‌ಗೆ ಲಗ್ಗೆಯಿಟ್ಟಿದ್ದು, ಚೊಚ್ಚಲ ಐಪಿಎಲ್ ಟ್ರೋಫಿ ಗೆಲ್ಲುವ ನಿರೀಕ್ಷೆಯಲ್ಲಿದೆ. ಜೆಕೊಬ್ ಬೆಥೆಲ್ ಬದಲಿಗೆ ನ್ಯೂಜಿಲೆಂಡ್‌ನ ಟಿಮ್ ಸೀಫರ್ಟ್ ತಂಡ ಸೇರಿದ್ದಾರೆ. ಸೀಫರ್ಟ್ 2 ಕೋಟಿಗೆ ತಾತ್ಕಾಲಿಕವಾಗಿ ಆರ್‌ಸಿಬಿಗೆ ಆಡಲಿದ್ದಾರೆ. ಎಂಗಿಡಿ ಬದಲಿಗೆ ಮುಝರಬಾನಿ ತಂಡ ಸೇರಿದ್ದಾರೆ. ಆರ್‌ಸಿಬಿ 17 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದೆ.

ಬೆಂಗಳೂರು: 18ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್‌ ಟೂರ್ನಿಯು ನಿರ್ಣಾಯಕಘಟ್ಟ ತಲುಪಿದೆ. ಈಗಾಗಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಗುಜರಾತ್ ಟೈಟಾನ್ಸ್, ಪಂಜಾಬ್ ಕಿಂಗ್ಸ್‌ ಹಾಗೂ ಮುಂಬೈ ಇಂಡಿಯನ್ಸ್‌ ತಂಡಗಳು ಪ್ಲೇ ಆಫ್‌ಗೆ ಲಗ್ಗೆಯಿಟ್ಟಿದೆ. ಇನ್ನು ರಜತ್ ಪಾಟೀದಾರ್ ನೇತೃತ್ವದ ಆರ್‌ಸಿಬಿ ತಂಡವು ಇದೀಗ ಚೊಚ್ಚಲ ಐಪಿಎಲ್ ಟ್ರೋಫಿ ಗೆಲ್ಲುವ ಕನವರಿಕೆಯಲ್ಲಿದ್ದು, ಪ್ಲೇ ಆಫ್‌ ಪಂದ್ಯಕ್ಕೂ ಮುನ್ನ ಮತ್ತೋರ್ವ ಡೇಂಜರಸ್‌ ಬ್ಯಾಟರ್‌ ಕರೆತಂದಿದೆ.

ಹೌದು, ಐಪಿಎಲ್‌ ಪ್ಲೇ ಆಫ್‌ಗೂ ಮುನ್ನ ಇಂಗ್ಲೆಂಡ್‌ನ ಸ್ಪೋಟಕ ಬ್ಯಾಟರ್ ಜೆಕೊಬ್ ಬೆಥೆಲ್, ನ್ಯಾಷನಲ್ ಡ್ಯೂಟಿಗಾಗಿ ಇಂಗ್ಲೆಂಡ್ ತಂಡ ಕೂಡಿಕೊಳ್ಳಲಿದ್ದಾರೆ. ಹೀಗಾಗಿ ಬೆಥೆಲ್ ಬದಲಿಗೆ ನ್ಯೂಜಿಲೆಂಡ್ ಮೂಲದ ಸ್ಪೋಟಕ ಬ್ಯಾಟರ್ ಟಿಮ್ ಸೀಫರ್ಟ್‌ ಆರ್‌ಸಿಬಿ ತಂಡ ಕೂಡಿಕೊಂಡಿದ್ದಾರೆ. ಈ ಕುರಿತಂತೆ ಆರ್‌ಸಿಬಿ ಫ್ರಾಂಚೈಸಿ ತನ್ನ ಅಧಿಕೃತ ಸೋಷಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದೆ. "ನ್ಯೂಜಿಲೆಂಡ್ ಸ್ಪೋಟಕ ವಿಕೆಟ್ ಕೀಪರ್ ಬ್ಯಾಟರ್ ಟಿಮ್ ಸೀಫರ್ಟ್‌ ಅವರು ಜೆಕೊಬ್ ಬೆಥೆಲ್ ಅವರಿಗೆ ತಾತ್ಕಾಲಿಕ ಬದಲಿ ಆಟಗಾರನಾಗಿ ತಂಡ ಕೂಡಿಕೊಂಡಿದ್ದಾರೆ. ಬೆಥೆಲ್, ಸನ್‌ರೈಸರ್ಸ್ ಹೈದರಾಬಾದ್ ಎದುರಿನ ಪಂದ್ಯದ ಬಳಿಕ ನ್ಯಾಷನಲ್ ಡ್ಯೂಟಿಗಾಗಿ ಇಂಗ್ಲೆಂಡ್ ತಂಡ ಕೂಡಿಕೊಳ್ಳಲಿದ್ದಾರೆ" ಎಂದು ಆರ್‌ಸಿಬಿ ಫ್ರಾಂಚೈಸಿ ಟ್ವೀಟ್ ಮಾಡಿದೆ.

30 ವರ್ಷದ ಹೊಡಿಬಡಿಯಾಟಗಾರ ಟಿಮ್ ಸೀಫರ್ಟ್‌ ಇದುವರೆಗೂ ಕಿವೀಸ್ ಪರ 66 ಟಿ20 ಪಂದ್ಯಗಳನ್ನಾಡಿ 1540 ರನ್ ಸಿಡಿಸಿದ್ದಾರೆ. ಇದೀಗ ಸೀಫರ್ಟ್ 2 ಕೋಟಿ ರುಪಾಯಿ ಮೊತ್ತಕ್ಕೆ ಆರ್‌ಸಿಬಿ ತಂಡವನ್ನು ತಾತ್ಕಾಲಿಕವಾಗಿ ಕೂಡಿಕೊಂಡಿದ್ದಾರೆ. ಟಿಮ್ ಸೀಫರ್ಟ್ ಈ ಮೊದಲು 2021ರಲ್ಲಿ ಕೋಲ್ಕತಾ ನೈಟ್ ರೈಡರ್ಸ್ ಹಾಗೂ 2022ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಪ್ರತಿನಿಧಿಸಿದ್ದರು. ಅಗ್ರಕ್ರಮಾಂಕದ ಬ್ಯಾಟರ್ ಆಗಿರುವ ಸೀಫರ್ಟ್ ವಿಕೆಟ್ ಕೀಪರ್ ಮಾತ್ರವಲ್ಲದೇ ಚುರುಕಿನ ಕ್ಷೇತ್ರರಕ್ಷಣೆಗೂ ಹೆಸರುವಾಸಿಯಾಗಿದ್ದಾರೆ.

ಇಂಗ್ಲೆಂಡ್ ಮೂಲದ 21 ವರ್ಷದ ಯುವ ಪ್ರತಿಭಾನ್ವಿತ ಬ್ಯಾಟರ್ ಜೆಕೊಬ್ ಬೆಥೆಲ್, ಈ ಬಾರಿಯ ಐಪಿಎಲ್‌ನಲ್ಲಿ ಆರ್‌ಸಿಬಿ ಪರ ಎರಡು ಪಂದ್ಯಗಳನ್ನಾಡಿದ್ದಾರೆ. ಅದಲ್ಲೂ ಚೆನ್ನೈ ಸೂಪರ್ ಕಿಂಗ್ಸ್ ಎದುರು ಬೆಥೆಲ್ ಕೇವಲ 33 ಸೆತಗಳಲ್ಲಿ 55ರನ್ ಸಿಡಿಸಿ ಗಮನ ಸೆಳೆದಿದ್ದರು. ಟಿಮ್ ಸೈಫರ್ಟ್‌ ಮೇ 27ರಂದು ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಲಖನೌ ಸೂಪರ್ ಜೈಂಟ್ಸ್ ಎದುರಿನ ಪಂದ್ಯಕ್ಕೆ ಆರ್‌ಸಿಬಿ ಪರ ಆಡಲು ಲಭ್ಯವಿರಲಿದ್ದಾರೆ. 

ಇನ್ನು ಇದಕ್ಕೂ ಮೊದಲು ಆರ್‌ಸಿಬಿ ತಂಡವು ಜಿಂಬಾಬ್ವೆ ಮೂಲದ ನೀಳಕಾಯದ ವೇಗಿ ಬ್ಲೆಸ್ಸಿಂಗ್ ಮುಝರಬಾನಿ ಅವರನ್ನು ಲುಂಗಿ ಎಂಗಿಡಿ ಅವರಿಗೆ ತಾತ್ಕಾಲಿಕ ಬದಲಿ ಆಟಗಾರನಾಗಿ ಕರೆ ತಂದಿದೆ. ಲುಂಗಿ ಎಂಗಿಡಿ ಈಗಾಗಲೇ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ದಕ್ಷಿಣ ಆಫ್ರಿಕಾ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಹೀಗಾಗಿ ಮಹತ್ವದ ಟೂರ್ನಿಗೆ ಸಿದ್ದತೆ ನಡೆಸುವ ಸಲುವಾಗಿ ಲುಂಗಿ ಎಂಗಿಡಿ ಪ್ಲೇ ಆಫ್‌ ಪಂದ್ಯಗಳಿಂದ ಹೊರಗುಳಿಯಲಿದ್ದಾರೆ. ಅವರ ಸ್ಥಾನಕ್ಕೆ ಮುಝರಬಾನಿ ಆರ್‌ಸಿಬಿ ತಂಡ ಕೂಡಿಕೊಳ್ಳಲಿದ್ದಾರೆ.

ಸದ್ಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 12 ಪಂದ್ಯಗಳನ್ನಾಡಿ 8 ಗೆಲುವು, 3 ಸೋಲು ಹಾಗೂ ಒಂದು ರದ್ದಾದ ಪಂದ್ಯ ಸೇರಿದಂತೆ 17 ಅಂಕ ಗಳಿಸಿ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನ ಕಾಯ್ದುಕೊಂಡಿದೆ. ಇದೀಗ ಸನ್‌ರೈಸರ್ಸ್ ಹೈದರಾಬಾದ್ ಎದುರಿನ ಪಂದ್ಯದಲ್ಲಿ ಅರ್‌ಸಿಬಿ ತಂಡವು ಗೆಲುವು ಸಾಧಿಸಿದರೆ, ಅಂಕಪಟ್ಟಿಯಲ್ಲಿ ಮತ್ತೊಮ್ಮೆ ಅಗ್ರಸ್ಥಾನ ಪಡೆಯಲಿದೆ. ಇದರ ಜತೆಗೆ ಬಹುತೇಕ ಮೊದಲ ಕ್ವಾಲಿಫೈಯರ್ ಪಂದ್ಯವನ್ನಾಡಲು ಅರ್ಹತೆ ಗಳಿಸಿದರೂ ಅಚ್ಚರಿಯೇನಿಲ್ಲ. 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

20 ಮ್ಯಾಚ್ ಬಳಿಕ ಕೊನೆಗೂ ಟಾಸ್ ಗೆದ್ದ ಭಾರತ! ದಕ್ಷಿಣ ಆಫ್ರಿಕಾ ತಂಡದಲ್ಲಿ 2 ಬದಲಾವಣೆ!
ಭಾರತ ಎದುರಿನ 3ನೇ ಏಕದಿನ ಪಂದ್ಯಕ್ಕೂ ಮುನ್ನ ದಕ್ಷಿಣ ಆಫ್ರಿಕಾಗೆ ಬಿಗ್ ಶಾಕ್! 2 ಸ್ಟಾರ್ ಆಟಗಾರರು ಔಟ್!