ಪ್ಲೇ-ಆಫ್‌ ಕುತೂಹಲಕ್ಕೆ ತೆರೆ: ಇನ್ನು ಅಗ್ರ-2ಕ್ಕೆ 4 ತಂಡಗಳ ಪೈಪೋಟಿ!

Published : May 23, 2025, 09:18 AM IST
ಪ್ಲೇ-ಆಫ್‌ ಕುತೂಹಲಕ್ಕೆ ತೆರೆ: ಇನ್ನು ಅಗ್ರ-2ಕ್ಕೆ 4 ತಂಡಗಳ ಪೈಪೋಟಿ!

ಸಾರಾಂಶ

ಐಪಿಎಲ್‌ನಲ್ಲಿ ಗುಜರಾತ್, ಆರ್‌ಸಿಬಿ, ಪಂಜಾಬ್ ಮತ್ತು ಮುಂಬೈ ಪ್ಲೇ-ಆಫ್‌ಗೆ ಲಗ್ಗೆ ಇಟ್ಟಿವೆ. ಏಳು ಪಂದ್ಯಗಳು ಬಾಕಿ ಇರುವಾಗಲೇ ನಾಲ್ಕು ತಂಡಗಳು ಅರ್ಹತೆ ಪಡೆದಿದ್ದು ಇದೇ ಮೊದಲು. ಈಗ ಅಗ್ರ ಎರಡು ಸ್ಥಾನಗಳಿಗಾಗಿ ತೀವ್ರ ಪೈಪೋಟಿ ನಡೆಯಲಿದೆ. ಮುಂಬೈ ಡೆಲ್ಲಿಯನ್ನು ಸೋಲಿಸಿ ಪ್ಲೇ-ಆಫ್ ಪ್ರವೇಶಿಸಿದೆ. ಡೆಲ್ಲಿ ಟೂರ್ನಿಯಿಂದ ಹೊರಬಿದ್ದಿದೆ.

ನವದೆಹಲಿ: ಕಳೆದ ಹಲವು ವಾರಗಳಿಂದ ಕ್ರಿಕೆಟಿಗರು, ಅಭಿಮಾನಿಗಳಲ್ಲಿದ್ದ ಐಪಿಎಲ್ ಪ್ಲೇ-ಆಫ್‌ ಸ್ಥಾನದ ಕುತೂಹಲಕ್ಕೆ ತೆರೆಬಿದ್ದಿದೆ. ಈಗಾಗಲೇ ಗುಜರಾತ್‌, ಆರ್‌ಸಿಬಿ, ಪಂಜಾಬ್‌ ಹಾಗೂ ಮುಂಬೈ ಇಂಡಿಯನ್ಸ್‌ ತಂಡಗಳು ಅಂಕಪಟ್ಟಿಯಲ್ಲಿ ಅಗ್ರ-4 ಸ್ಥಾನ ಖಚಿತಪಡಿಸಿಕೊಂಡಿವೆ. ಇನ್ನು ಮುಂದೆ ಅಗ್ರ-2 ಸ್ಥಾನಕ್ಕೆ ಈ ತಂಡಗಳು ತೀವ್ರ ಪೈಪೋಟಿ ನಡೆಸಲಿವೆ.

ಅಂಕಪಟ್ಟಿಯಲ್ಲಿ ಅಗ್ರ-2 ಸ್ಥಾನಿಯಾದ ತಂಡಗಳು ಕ್ವಾಲಿಫೈಯರ್‌-1ರಲ್ಲಿ ಆಡಲಿದ್ದು, ಅದರಲ್ಲಿ ಸೋತರೂ ಫೈನಲ್‌ ಪ್ರವೇಶಿಸಲು ಮತ್ತೊಂದು ಅವಕಾಶ ಸಿಗಲಿದೆ. 3 ಮತ್ತು 4ನೇ ಸ್ಥಾನಿಯಾದ ತಂಡಗಳು ಎಲಿಮಿನೇಟರ್‌ ಆಡಲಿದ್ದು, ಗೆದ್ದ ತಂಡ ಕ್ವಾಲಿಫೈಯರ್‌-2ಗೆ ಪ್ರವೇಶಿಸಿದರೆ, ಸೋತ ತಂಡ ಹೊರಬೀಳಲಿದೆ. ಹೀಗಾಗಿ ಪ್ರತಿ ತಂಡಕ್ಕೂ ಅಗ್ರ-2 ಸ್ಥಾನ ಮಹತ್ವದ್ದು. ಸದ್ಯ ಅಗ್ರ-4ರಲ್ಲಿರುವ ಎಲ್ಲಾ ತಂಡಗಳಿಗೂ ಅಗ್ರ-2ರಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುವ ಅವಕಾಶವಿದೆ. ಹೀಗಾಗಿ ಲೀಗ್‌ ಹಂತದ ಕೊನೆ ಪಂದ್ಯದವರೆಗೂ ಭಾರೀ ಪೈಪೋಟಿ, ಕುತೂಹಲ ನಿರೀಕ್ಷೆಯಿದೆ.

ಲೀಗ್‌ನ 7 ಪಂದ್ಯ ಬಾಕಿ ಇದ್ರೂ ಪ್ಲೇ-ಆಫ್‌ ರೇಸ್‌ ಅಂತ್ಯ ಇದೇ ಮೊದಲು

ನವದೆಹಲಿ: ಬುಧವಾರ ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ಮುಂಬೈ ಇಂಡಿಯನ್ಸ್‌ ಗೆಲುವು ಸಾಧಿಸುವುದರೊಂದಿಗೆ 18ನೇ ಆವೃತ್ತಿ ಐಪಿಎಲ್‌ನ ಪ್ಲೇ-ಆಫ್‌ ರೇಸ್‌ ಕೊನೆಗೊಂಡಿದೆ. ಲೀಗ್‌ ಹಂತದಲ್ಲಿ 7 ಪಂದ್ಯ ಬಾಕಿ ಇರುವಾಗಲೇ ಅಗ್ರ-4ರಲ್ಲಿ ತಂಡಗಳು ಸ್ಥಾನ ಖಚಿತಪಡಿಸಿಕೊಂಡಿದ್ದು ಇದೇ ಮೊದಲು.

ಈ ಮೊದಲು 2011ರಲ್ಲಿ ಲೀಗ್‌ ಹಂತದಲ್ಲಿ 3 ಪಂದ್ಯ ಬಾಕಿಯಿದ್ದಾಗ ಪ್ಲೇ-ಆಫ್‌ ರೇಸ್‌ನ 4 ತಂಡಗಳು ಅಂತಿಮಗೊಂಡಿದ್ದವು. ಉಳಿದಂತೆ ಯಾವ ಆವೃತ್ತಿಯಲ್ಲೂ 2ಕ್ಕಿಂತ ಹೆಚ್ಚು ಪಂದ್ಯ ಬಾಕಿ ಇದ್ದಾಗಲೇ ಪ್ಲೇ-ಆಫ್‌ ರೇಸ್‌ ಕೊನೆಗೊಂಡಿರಲಿಲ್ಲ. 2008, 2024ರಲ್ಲಿ ತಲಾ 2 ಪಂದ್ಯ, 2012, 2017, 2021, 2022ರಲ್ಲಿ ತಲಾ 1 ಪಂದ್ಯ ಬಾಕಿ ಇದ್ದಾಗಲಷ್ಟೇ ಪ್ಲೇ-ಆಫ್‌ನ 4 ಸ್ಥಾನಗಳು ಭರ್ತಿಯಾಗಿದ್ದವು. ಉಳಿದಂತೆ 2009, 2010, 2013, 2014, 2015, 2016, 2018, 2019, 2020 ಹಾಗೂ 2023ರಲ್ಲಿ ಲೀಗ್‌ ಹಂತದ ಕೊನೆ ಪಂದ್ಯದವರೆಗೂ ನಾಕೌಟ್‌ ರೇಸ್‌ನ ಕುತೂಹಲ ಉಳಿದುಕೊಂಡಿದ್ದವು.

ಪ್ಲೇ-ಆಫ್‌ಗೆ ನುಗ್ಗಿದ ಮುಂಬೈ: ಡೆಲ್ಲಿ ಕ್ಯಾಪಿಟಲ್ಸ್ ಪ್ಲೇ ಆಫ್ ರೇಸ್‌ನಿಂದಲೇ ಔಟ್

ಮುಂಬೈ: ಈ ಬಾರಿ ಐಪಿಎಲ್‌ನ ಆರಂಭಿಕ 5 ಪಂದ್ಯಗಳ ಪೈಕಿ 4ರಲ್ಲಿ ಸೋತಿದ್ದ ಮುಂಬೈ ಇಂಡಿಯನ್ಸ್‌, ಬಳಿಕ ಮಾಡಿದ್ದು ಮ್ಯಾಜಿಕ್‌. ಒಂದು ಹಂತದಲ್ಲಿ ಅಂಕಪಟ್ಟಿಯಲ್ಲಿ ಕೊನೆಯಲ್ಲಿದ್ದ 5 ಬಾರಿ ಚಾಂಪಿಯನ್‌ ಮುಂಬೈ, ಈಗ ಟೂರ್ನಿಯ 4ನೇ ತಂಡವಾಗಿ ಪ್ಲೇ-ಆಫ್‌ಗೆ ಅಧಿಕೃತ ಪ್ರವೇಶ ಪಡೆದಿದೆ.

ಬುಧವಾರ ನಿರ್ಣಾಯಕ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಮುಂಬೈ 59 ರನ್‌ ಭರ್ಜರಿ ಜಯಗಳಿಸಿತು. ಪ್ಲೇ-ಆಫ್‌ ದೃಷ್ಟಿಯಿಂದ 2 ತಂಡಗಳಿಗೂ ಗೆಲುವು ಅನಿವಾರ್ಯವಾಗಿತ್ತು. ಆದರೆ ತೀರಾ ಕಳಪೆ ಪ್ರದರ್ಶನ ನೀಡಿದ ಡೆಲ್ಲಿ, ಪ್ಲೇ-ಆಫ್‌ ರೇಸ್‌ನಿಂದ ಅಧಿಕೃತವಾಗಿ ಹೊರಗುಳಿಯಿತು. ಮುಂಬೈ 13 ಪಂದ್ಯಗಳಲ್ಲಿ 8 ಗೆಲುವಿನೊಂದಿಗೆ 16 ಅಂಕ ಸಂಪಾದಿಸಿದ್ದು, ಡೆಲ್ಲಿ 13 ಪಂದ್ಯದಲ್ಲಿ 6ನೇ ಸೋಲು ಕಂಡಿದ್ದು, 13 ಅಂಕದೊಂದಿಗೆ 5ನೇ ಸ್ಥಾನದಲ್ಲೇ ಬಾಕಿಯಾಯಿತು.

ಟಾಸ್‌ ಸೋತ ಮುಂಬೈ, ಬ್ಯಾಟಿಂಗ್‌ಗೆ ಆಹ್ವಾನಿಸಲ್ಪಟ್ಟಿತು. ಸಾಮಾನ್ಯವಾಗಿ ದೊಡ್ಡ ಸ್ಕೋರ್‌ ದಾಖಲಾಗುವ ವಾಂಖೆಡೆ ಪಿಚ್‌ನಲ್ಲಿ ಈ ಬಾರಿ ಬ್ಯಾಟರ್‌ಗಳು ಪರದಾಡಿದರು. ಆದರೆ ಸೂರ್ಯಕುಮಾರ್‌ ಅಬ್ಬರದಿಂದಾಗಿ ಮುಂಬೈ 5 ವಿಕೆಟ್‌ಗೆ 180 ರನ್‌ ಕಲೆಹಾಕಿತು. ಮುಂಬೈನ ಮಾರಕ ದಾಳಿಗೆ ತತ್ತರಿಸಿದ ಡೆಲ್ಲಿ 18.2 ಓವರ್‌ನಲ್ಲಿ 121 ರನ್‌ಗೆ ಆಲೌಟಾಯಿತು.
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

20 ಮ್ಯಾಚ್ ಬಳಿಕ ಕೊನೆಗೂ ಟಾಸ್ ಗೆದ್ದ ಭಾರತ! ದಕ್ಷಿಣ ಆಫ್ರಿಕಾ ತಂಡದಲ್ಲಿ 2 ಬದಲಾವಣೆ!
ಭಾರತ ಎದುರಿನ 3ನೇ ಏಕದಿನ ಪಂದ್ಯಕ್ಕೂ ಮುನ್ನ ದಕ್ಷಿಣ ಆಫ್ರಿಕಾಗೆ ಬಿಗ್ ಶಾಕ್! 2 ಸ್ಟಾರ್ ಆಟಗಾರರು ಔಟ್!