ಪಂಜಾಬ್ ಕಿಂಗ್ಸ್ ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯೊಂದಿಗೆ ರಾಜಸ್ಥಾನ ರಾಯಲ್ಸ್ ವಿರುದ್ಧ ಸೆಣಸಲು ಸಜ್ಜಾಗಿದೆ. ಯುವ ಆಟಗಾರರಾದ ಪ್ರಿಯಾನ್ಶ್ ಅರ್ಯ, ಶಶಾಂಕ್ ಸಿಂಗ್ ಮತ್ತು ಬೌಲರ್ ಗಳಾದ ವಿಜಯ್‌ಕುಮಾರ್ ವೈಶಾಖ್, ಅರ್ಶ್‌ದೀಪ್ ಸಿಂಗ್, ಸ್ಪಿನ್ನರ್ ಯಜುವೇಂದ್ರ ಚಹಲ್ ತಂಡದ ಬಲವಾಗಿದ್ದಾರೆ.
ಮುಲ್ಲಾನ್ಪುರ: ಈ ಬಾರಿ ಐಪಿಎಲ್‌ನಲ್ಲಿ ಆರಂಭಿಕ ಎರಡೂ ಪಂದ್ಯಗಳಲ್ಲಿ ಗೆದ್ದು, ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಪಂಜಾಬ್ ಕಿಂಗ್ಸ್ ಹ್ಯಾಟ್ರಿಕ್ ಜಯದ ನಿರೀಕ್ಷೆಯಲ್ಲಿದೆ. ತಂಡ ಶನಿವಾರ ರಾಜಸ್ಥಾನ ರಾಯಲ್ಸ್ ವಿರುದ್ಧ ಸೆಣಸಾಡಲಿದೆ.
ಶ್ರೇಯಸ್ ಅಯ್ಯರ್ ನಾಯಕತ್ವದ ಪಂಜಾಬ್, 2 ಪಂದ್ಯಗಳಲ್ಲೂ ಸ್ಫೋಟಕ ಆಟ ಪ್ರದರ್ಶಿಸಿ ಗೆದ್ದಿದೆ. ತಂಡ ಎಲ್ಲಾ ವಿಭಾಗದಲ್ಲೂ ಬಲಿಷ್ಠವಾಗಿದ್ದು, ಮತ್ತೊಂದು ದೊಡ್ಡ ಗೆಲುವಿನ ವಿಶ್ವಾಸದಲ್ಲಿದೆ. ಯುವ ತಾರೆಗಳಾದ ಪ್ರಿಯಾನ್ಶ್ ಅರ್ಯ, ಶಶಾಂಕ್ ಸಿಂಗ್ ಅಬ್ಬರಿಸುತ್ತಿದ್ದಾರೆ. ಕರ್ನಾಟಕದ ವೇಗಿ ವಿಜಯ್‌ಕುಮಾರ್ ವೈಶಾಖ್, ಅರ್ಶ್‌ದೀಪ್ ಸಿಂಗ್, ಸ್ಪಿನ್ನರ್ ಯಜುವೇಂದ್ರ ಚಹಲ್ ತಂಡದ ಬೌಲಿಂಗ್ ಆಧಾರಸ್ತಂಭ.
ಇದನ್ನೂ ಓದಿ: ಹ್ಯಾಟ್ರಿಕ್ ಸೋಲಿನ ಭೀತಿಯಲ್ಲಿರುವ ಚೆನ್ನೈಗೆ ಧೋನಿ ಕ್ಯಾಪ್ಟನ್? ಗಾಯಕ್ವಾಡ್‌ಗೆ ಏನಾಯ್ತು?
ಪಂಜಾಬ್ ಕಿಂಗ್ಸ್ ತಂಡವು ಹ್ಯಾಟ್ರಿಕ್ ಗೆಲುವು ಸಾಧಿಸಬೇಕಿದ್ದರೇ ಶ್ರೇಯಸ್ ಅಯ್ಯರ್, ಶಶಾಂಕ್ ಸಿಂಗ್, ಮಾರ್ಕಸ್ ಸ್ಟೋನಿಸ್ ಹಾಗೂ ಗ್ಲೆನ್ ಮ್ಯಾಕ್ಸ್‌ವೆಲ್ ಸ್ಪೋಟಕ ಇನ್ನಿಂಗ್ಸ್ ಆಡಬೇಕಿದೆ
ಮತ್ತೊಂದೆಡೆ ರಾಜಸ್ಥಾನ ಆರಂಭಿಕ 2 ಪಂದ್ಯಗಳಲ್ಲಿ ಸೋತರೂ ಕಳೆದ ಪಂದ್ಯದಲ್ಲಿ ಗೆಲುವಿನ ಹಳಿಗೆ ಮರಳಿದೆ. ಆದರೆ ಯಶಸ್ವಿ ಜೈಸ್ವಾಲ್ ವೈಫಲ್ಯ ತಂಡಕ್ಕೆ ತಲೆನೋವಾಗಿ ಪರಿಣಮಿಸಿದೆ. ಅವರು ಈ ಪಂದ್ಯದಲ್ಲಾದರೂ ಉತ್ತಮ ಆಟವಾಡಬೇಕಿದೆ. ಮೊದಲ 3 ಪಂದ್ಯಗಳಲ್ಲೂ ಇಂಪ್ಯಾಕ್ಟ್ ಆಟಗಾರನಾಗಿ ಕಣಕ್ಕಿಳಿದು, ಕೇವಲ ಬ್ಯಾಟಿಂಗ್ ಮಾಡಿದ್ದ ಸಂಜು ಸ್ಯಾಮ್ಸನ್ ಈ ಪಂದ್ಯದಲ್ಲಿ ಪೂರ್ಣ ಪ್ರಮಾಣದಲ್ಲಿ ಆಡಲಿದ್ದಾರೆ. ಅವರು ನಾಯಕತ್ವ ವಹಿಸಿಕೊಳ್ಳುವುದರ ಜೊತೆಗೆ ವಿಕೆಟ್ ಕೀಪಿಂಗ್ ಕೂಡಾ ಮಾಡಲಿದ್ದಾರೆ.
ಇನ್ನು ರಾಜಸ್ಥಾನ ರಾಯಲ್ಸ್ ತಂಡಕ್ಕೆ ಕಳೆದ ಪಂದ್ಯದಲ್ಲಿ ನಿತೀಶ್ ರಾಣಾ ಸ್ಪೋಟಕ ಬ್ಯಾಟಿಂಗ್ ಮೂಲಕ ತಂಡಕ್ಕೆ ನೆರವಾಗಿದ್ದರು. ಇವರ ಜತೆಗೆ ಸಂಜು ಸ್ಯಾಮ್ಸನ್, ದೃವ್ ಜುರೆಲ್, ಶಿಮ್ರೊನ್ ಹೆಟ್ಮೇಯರ್ ಸ್ಪೋಟಕ ಬ್ಯಾಟಿಂಗ್ ನಡೆಸಿದರೆ ಎದುರಾಳಿ ಪಡೆ ಕಂಗಾಲಾಗೋದು ಗ್ಯಾರಂಟಿ. ಇನ್ನು ಬೌಲಿಂಗ್ ವಿಭಾಗದಲ್ಲಿ ಸಂದೀಪ್ ಶರ್ಮಾ ತಮ್ಮ ಅನುಭವನನ್ನು ಮತ್ತೊಮ್ಮೆ ರಾಜಸ್ಥಾನ ರಾಯಲ್ಸ್ ತಂಡಕ್ಕೆ ಧಾರೆ ಎರೆಯಬೇಕಿದೆ.
ಇದನ್ನೂ ಓದಿ: ಲಖನೌ ರನ್ ಮಳೆಯಲ್ಲಿ ಕೊಚ್ಚಿಹೋದ ಮುಂಬೈ ಇಂಡಿಯನ್ಸ್! ಪಾಂಡ್ಯ ಪಡೆಗೆ ಟೂರ್ನಿಯಲ್ಲಿ 3ನೇ ಸೋಲು
ಸಂಭಾವ್ಯ ಆಟಗಾರರ ಪಟ್ಟಿ:
ರಾಜಸ್ಥಾನ ರಾಯಲ್ಸ್: ಯಶಸ್ವಿ ಜೈಸ್ವಾಲ್, ಸಂಜು ಸ್ಯಾಮ್ಸನ್(ನಾಯಕ&ವಿಕೆಟ್ ಕೀಪರ್), ನಿತೀಶ್ ರಾಣಾ, ರಿಯಾನ್ ಪರಾಗ್, ಧೃವ್ ಜುರೆಲ್, ಶಿಮ್ರೊನ್ ಹೆಟ್ಮೇಯರ್, ವನಿಂದು ಹಸರಂಗ, ಜೋಫ್ರಾ ಆರ್ಚರ್, ಮಹೀಶ್ ತೀಕ್ಷಣ, ಸಂದೀಪ್ ಶರ್ಮಾ, ತುಷಾರ್ ದೇಶಪಾಂಡೆ, ಕುಮಾರ್ ಕಾರ್ತಿಕೇಯ.
ಪಂಜಾಬ್ ಕಿಂಗ್ಸ್: ಪ್ರಿಯಾನ್ಶ್ ಆರ್ಯ, ಪ್ರಭ್‌ಸಿಮ್ರನ್ ಸಿಂಗ್(ವಿಕೆಟ್ ಕೀಪರ್), ಶ್ರೇಯಸ್ ಅಯ್ಯರ್(ನಾಯಕ), ಶಶಾಂಕ್ ಸಿಂಗ್, ಮಾರ್ಕಸ್ ಸ್ಟೋನಿಸ್, ಗ್ಲೆನ್ ಮ್ಯಾಕ್ಸ್‌ವೆಲ್, ಸೂರ್ಯಾನ್ಶ್ ಶೆಡ್ಗೆ, ಮಾರ್ಕೊ ಯಾನ್ಸೆನ್, ಲಾಕಿ ಫರ್ಗ್ಯೂಸನ್, ಯುಜುವೇಂದ್ರ ಚಹಲ್, ಅರ್ಶದೀಪ್ ಸಿಂಗ್, ಹಪ್ರೀತ್ ಬ್ರಾರ್
ಪಂದ್ಯ: ಸಂಜೆ 7.30ಕ್ಕೆ