
ಮುಂಬೈ: ಆಕ್ರಮಣಕಾರಿ ಬ್ಯಾಟಿಂಗ್ ಮೂಲಕವೇ ಅಬ್ಬರಿಸುತ್ತಿದ್ದ ಸನ್‌ರೈಸರ್ಸ್ ಹೈದರಾಬಾದ್ ಮತ್ತೆ ಬ್ಯಾಟಿಂಗ್ ವೈಫಲ್ಯಕ್ಕೆ ತುತ್ತಾಗಿ ಸೋಲನುಭವಿಸಿದೆ. ಗುರುವಾರ ಮುಂಬೈ ಇಂಡಿಯನ್ಸ್ ವಿರುದ್ಧ ವಾಂಖೆಡೆ ಕ್ರೀಡಾಂಗಣದಲ್ಲಿ ಸನ್‌ರೈಸರ್ಸ್ 04 ವಿಕೆಟ್‌ಗಳಿಂದ ಪರಾಭವಗೊಂಡಿತು. ಸನ್‌ಗೆ ಇದು 7ರಲ್ಲಿ 5ನೇ ಸೋಲು. ಮುಂಬೈ 7 ಪಂದ್ಯಗಳಲ್ಲಿ 3ನೇ ಜಯ ದಾಖಲಿಸಿತು.
ಮೊದಲು ಬ್ಯಾಟ್ ಮಾಡಿದ ಸನ್‌ರೈಸರ್ಸ್ 5 ವಿಕೆಟ್‌ಗೆ 162 ರನ್ ಕಲೆಹಾಕಿತು. ತಂಡದ ಯಾರೊಬ್ಬರೂ ಅರ್ಧಶತಕ ಗಳಿಸಲಿಲ್ಲ. ಅಭಿಷೇಕ್ ಶರ್ಮಾ 28 ಎಸೆತಕ್ಕೆ 48 ರನ್ ಗಳಿಸಿದರೆ, ಟ್ರ್ಯಾವಿಸ್ ಹೆಡ್ 28 ರನ್ ಬಾರಿಸಲು 29 ಎಸೆತಗಳನ್ನು ತೆಗೆದುಕೊಂಡರು. ಕ್ಲಾಸೆನ್ 37 ರನ್ ಕೊಡುಗೆ ನೀಡಿದರು. ಕೊನೆಯಲ್ಲಿ ಅನಿಕೇತ್ ವರ್ಮಾ 8 ಎಸೆತಕ್ಕೆ 18 ರನ್ ಬಾರಿಸಿ, ತಂಡದ ಮೊತ್ತವನ್ನು 160ರ ಗಡಿ ದಾಟಿಸಿದರು.
ಇದನ್ನೂ ಓದಿ: ಇನ್‌ಸ್ಟಾ ಖಾತೆಯಿಂದ ಕಮರ್ಷಿಯಲ್ ಪೋಸ್ಟ್ ಡಿಲೀಟ್ ಕುರಿತು ಮೌನ ಮುರಿದ ವಿರಾಟ್
ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಮುಂಬೈ 18.1 ಓವರ್‌ಗಳಲ್ಲಿ ಗೆಲುವು ತನ್ನದಾಗಿಸಿಕೊಂಡಿತು. ರೋಹಿತ್ 16 ಎಸೆತಕ್ಕೆ 26, ರಿಕೆಲ್ಟನ್ 23 ಎಸೆತಗಳಲ್ಲಿ 31 ರನ್ ಗಳಿಸಿ ಉತ್ತಮ ಆರಂಭ ಒದಗಿಸಿಕೊಟ್ಟರು. ಬಳಿಕ ವಿಲ್ ಜ್ಯಾಕ್ಸ್(26 ಎಸೆತಕ್ಕೆ 36) ಹಾಗೂ ಸೂರ್ಯಕುಮಾರ್ ಯಾದವ್(15 ಎಸೆತಕ್ಕೆ 26) ತಂಡವನ್ನು ಗೆಲುವಿನತ್ತ ಕೊಂಡೊಯ್ದರು. ಇವರಿಬ್ಬರೂ ಔಟಾದ ಬಳಿಕ ಹಾರ್ದಿಕ್, ತಿಲಕ್ ವರ್ಮಾ ತಂಡವನ್ನು ಗೆಲ್ಲಿಸಿದರು.
ನಾಯಕ ಹಾರ್ದಿಕ್ ಪಾಂಡ್ಯ ಕೇವಲ 9 ಎಸೆತಗಳನ್ನು ಎದುರಿಸಿ 3 ಬೌಂಡರಿ ಹಾಗೂ ಒಂದು ಆಕರ್ಷಕ ಸಿಕ್ಸರ್‌ಗಳ ನೆರವಿನಿಂದ ಚುರುಕಿನ 21 ರನ್ ಸಿಡಿಸಿದರು. ಇನ್ನು ಮತ್ತೊಂದು ತುದಿಯಲ್ಲಿ ತಿಲಕ್ ವರ್ಮಾ ಅಜೇಯ 21 ರನ್ ಸಿಡಿಸುವ ಮೂಲಕ ಯಾವುದೇ ಅಪಾಯವಿಲ್ಲದೇ ತಂಡವನ್ನು ಗೆಲುವಿನ ದಡ ಸೇರಿಸುವಲ್ಲಿ ಯಶಸ್ವಿಯಾದರು.
ಇನ್ನು ಗೆಲುವಿನ ಮೂಲಕ ಹಾರ್ದಿಕ್ ಪಾಂಡ್ಯ ನೇತೃತ್ವದ ಮುಂಬೈ ಇಂಡಿಯನ್ಸ್ ತಂಡವು ತನ್ನ ಪ್ಲೇ ಆಫ್ ಕನಸಿಗೆ ಮತ್ತಷ್ಟು ಜೀವ ತುಂಬಿದೆ. ಇನ್ನೊಂದೆಡೆ ಸನ್‌ರೈಸರ್ಸ್ ಹೈದರಾಬಾದ್ ತಂಡವು ಅಂಕಪಟ್ಟಿಯಲ್ಲಿ 9ನೇ ಸ್ಥಾನದಲ್ಲಿಯೇ ಮುಂದುವರೆದಿದೆ. ಟೂರ್ನಿಯಲ್ಲಿ ಸನ್‌ರೈಸರ್ಸ್ ಪ್ಲೇ ಆಫ್ ರೇಸ್‌ನಲ್ಲಿ ಉಳಿಯಬೇಕಿದ್ದರೇ, ಇನ್ನುಳಿದ ಪಂದ್ಯಗಳನ್ನು ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿದೆ.
ಇದನ್ನೂ ಓದಿ: SRH ಟ್ರಾವಿಸ್ ಹೆಡ್ ಊಬರ್ ಜಾಹೀರಾತಿಗೆ ಆರ್‌ಸಿಬಿ ಕೆಂಡ, ಕೋರ್ಟ್ ಮೆಟ್ಟಿಲೇರಿದ ಪ್ರಕರಣ
ಸ್ಕೋರ್: ಸನ್‌ರೈಸರ್ಸ್ 20 ಓವರಲ್ಲಿ 162/5 (ಅಭಿಷೇಕ್ 40, ಕ್ಲಾಸೆನ್ 37, ಹೆಡ್ 28, ವಿಲ್ ಜ್ಯಾಕ್ಸ್ 2-14), ಮುಂಬೈ 00 ಓವರಲ್ಲಿ 00 (ಜ್ಯಾಕ್ಸ್ 36, ರಿಕೆಲ್ಟನ್ 31, ಕಮಿನ್ಸ್ 3-26)
ಹೆಡ್ ಐಪಿಎಲ್‌ನಲ್ಲಿ 2ನೇ ವೇಗದ 1000
ಟ್ರ್ಯಾವಿಸ್ ಹೆಡ್ ಐಪಿಎಲ್‌ನಲ್ಲಿ 2ನೇ ವೇಗದ 1,000 ರನ್ ಕಲೆಹಾಕಿದರು. ಅವರು 575 ಎಸೆತಗಳಲ್ಲಿ ಈ ಮೈಲುಗಲ್ಲು ಸಾಧಿಸಿದ್ದಾರೆ. ಆ್ಯಂಡ್ರೆ ರಸೆಲ್ ಕೇವಲ 545 ಎಸೆತಗಳಲ್ಲಿ ಈ ಸಾಧನೆ ಮಾಡಿದ್ದು, ವೇಗವಾಗಿ 1,000 ರನ್ ಗಳಿಸಿದ ಆಟಗಾರ ಎನಿಸಿಕೊಂಡಿದ್ದಾರೆ. ಕ್ಲಾಸೆನ್ 594 ಎಸೆತಗಳಲ್ಲಿ ಈ ಮೈಲುಗಲ್ಲು ತಲುಪಿದ್ದರು.
ಇದನ್ನೂ ಓದಿ: ಡ್ರೆಸ್ಸಿಂಗ್ ರೂಮ್ ವಿಚಾರ ಹೊರಗೆ ಸೋರಿಕೆ: ಬಿಸಿಸಿಐನಿಂದ ಮೂವರ ವಜಾ?
ನೋಬಾಲ್: ಪೆವಿಲಿಯನ್ ಸೇರಿದ್ರೂ ಮತ್ತೆ ಕ್ರೀಸ್‌ಗೆ ಬಂದ ರ್‍ಯಾನ್ ರಿಕೆಲ್ಟನ್!
ಗುರುವಾರದ ಪಂದ್ಯ ವಿಚಿತ್ರ ಸನ್ನಿವೇಶಕ್ಕೆ ಸಾಕ್ಷಿಯಾಯಿತು. 7ನೇ ಓವರ್‌ನಲ್ಲಿ ಜೀಶಾನ್ ಎಸೆತದಲ್ಲಿ ಕಮಿನ್ಸ್‌ಗೆ ಕ್ಯಾಚ್ ನೀಡಿ ಮುಂಬೈನ ರಿಕೆಲ್ಟನ್ ಪೆವಿಲಿಯನ್‌ಗೆ ಮರಳಿದ್ದರು. ಆದರೆ ಈ ಎಸೆತದಲ್ಲಿ ವಿಕೆಟ್ ಕೀಪರ್ ಕ್ಲಾಸೆನ್‌ರ ಗ್ಲೌಸ್, ಸ್ಟಂಪ್‌ಗಿಂತ ಮುಂದೆ ಬಂದಿದ್ದರಿಂದ 4ನೇ ಅಂಪೈರ್ ನೋಬಾಲ್ ಎಂದು ತೀರ್ಪಿತ್ತರು. ಹೀಗಾಗಿ ರಿಕೆಲ್ಟನ್ ಮತ್ತೆ ಕ್ರೀಸ್‌ಗೆ ಆಗಮಿಸಿ, ಬ್ಯಾಟಿಂಗ್ ಮುಂದುವರಿಸಿದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.