IPL 2025: ಹಾಲಿ ಚಾಂಪಿಯನ್‌ ಹೀನಾಯ ಸೋಲಿಗೆ ಕಾರಣವಾದ ಅಶ್ವನಿ ಯಾರು?

Published : Apr 01, 2025, 10:31 AM ISTUpdated : Apr 01, 2025, 11:59 AM IST
 IPL 2025: ಹಾಲಿ ಚಾಂಪಿಯನ್‌ ಹೀನಾಯ ಸೋಲಿಗೆ ಕಾರಣವಾದ ಅಶ್ವನಿ ಯಾರು?

ಸಾರಾಂಶ

ಮುಂಬೈ ಇಂಡಿಯನ್ಸ್ ಕೋಲ್ಕತಾ ವಿರುದ್ಧ 8 ವಿಕೆಟ್‌ಗಳಿಂದ ಜಯಗಳಿಸಿತು. ಪಂಜಾಬ್‌ನ ಯುವ ವೇಗಿ ಅಶ್ವನಿ ಕುಮಾರ್ 4 ವಿಕೆಟ್ ಪಡೆದು ಮಿಂಚಿದರು. ಕೆಕೆಆರ್ 116 ರನ್‌ಗಳಿಗೆ ಆಲೌಟ್ ಆಯಿತು. ಮುಂಬೈ ಬ್ಯಾಟ್ಸ್‌ಮನ್ ರಿಕೆಲ್ಟನ್ 62 ರನ್ ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಅಶ್ವನಿ ಕುಮಾರ್ 30 ಲಕ್ಷಕ್ಕೆ ಮುಂಬೈ ಇಂಡಿಯನ್ಸ್ ತಂಡಕ್ಕೆ ಸೇರಿದರು.

ಮುಂಬೈ: ಹೊಸ ಪ್ರತಿಭೆಗಳನ್ನು ಹೆಕ್ಕಿ ತೆಗೆಯುವುದರಲ್ಲಿ ಮುಂಬೈ ಇಂಡಿಯನ್ಸ್‌ಗೆ ಸರಿಸಾಟಿಯಿಲ್ಲ, ಅಂಥದ್ದೇ ಒಬ್ಬ ಉದಯೋನ್ಮುಖ ಎಡಗೈ ವೇಗಿಯನ್ನು ಸೋಮವಾರ ಕೋಲ್ಕತಾ ನೈಟ್‌ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಮುಂಬೈ ಕಣಕ್ಕಿಳಿಸಿತು. ವಾಂಖೇಡೆ ಕ್ರೀಡಾಂಗಣದಲ್ಲಿ ತಮ್ಮ ಅಸಾಧಾರಣ ವೇಗದ ಬೌಲಿಂಗ್ ಮೂಲಕ ಎಲ್ಲರನ್ನೂ ನಿಬ್ಬೆರಗಾಗಿಸಿದ 23 ವರ್ಷದ ಅಶ್ವನಿ ಕುಮಾರ್, ತಮ್ಮ ತಂಡಕ್ಕೆ ಈ ಆವೃತ್ತಿಯಲ್ಲಿ ಮೊದಲ ಜಯ ತಂದುಕೊಟ್ಟರು. 8 ವಿಕೆಟ್‌ಗಳಿಂದ ಗೆದ್ದ ಮುಂಬೈ, ಅಂಕಪಟ್ಟಿಯಲ್ಲಿ ಖಾತೆ ತೆರೆಯಿತು.

ವಾಂಖೇಡೆಯಲ್ಲಿ ಟಾಸ್ ಗೆಲ್ಲುವ ತಂಡಗಳು ಮೊದಲು ಫೀಲ್ಡ್ ಮಾಡಲು ನಿರ್ಧರಿಸುವುದು ಸಾಮಾನ್ಯ. ಮುಂಬೈ ಸಹ ಅದೇ ನಿರ್ಧಾರವನ್ನು ತೆಗೆದುಕೊಂಡಿತು. ಮೊದಲ ಓವರಲ್ಲೇ ವಿಕೆಟ್ ಉರುಳಿಸುವ ಸಂಪ್ರದಾಯವನ್ನು ಮುಂದುವರಿಸಿದ ಟ್ರೆಂಟ್ ಬೌಲ್ಟ್ ಕೆಕೆಆರ್‌ನ ಆರಂಭಿಕ ಸುನಿಲ್ ನರೈನ್ (0)ಗೆ ಪೆವಿಲಿಯನ್ ದಾರಿ ತೋರಿಸಿದರೆ, ದೀಪಕ್ ಚಹ‌ರ್‌ ಎಸೆತದಲ್ಲಿ ಡಿ ಕಾಕ್ (1) ಔಟಾದರು. 2 ರನ್ ಗೆ 2 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಕೆಕೆಆರ್‌ಗೆ ದಿಕ್ಕೇ ತೋಚದಂತೆ ಮಾಡಿದ್ದು ಅಶ್ವಿನಿ. ತಾವೆಸೆದ ಮೊದಲ ಎಸೆತದಲ್ಲೇ ರಹಾನೆಯನ್ನು ಔಟ್ ಮಾಡಿದರು. 

ಇದನ್ನೂ ಓದಿ: ಪರ್ಪಲ್ ಕ್ಯಾಪ್ ರೇಸ್‌ನಲ್ಲಿರುವ 5 ಘಟಾನುಘಟಿ ಬೌಲರ್‌ಗಳಿವರು!

ಕೇವಲ 3 ಓವರ್ ಬೌಲ್ ಮಾಡಿದ ಪಂಜಾಬ್‌ನ ಈ ಯುವ ವೇಗಿ, ರಹಾನೆ (11), ರಿಂಕು ಸಿಂಗ್ (17), ಮನೀಶ್ ಪಾಂಡೆ (19), ಆ್ಯಂಡ್ರೆ ರಸೆಲ್ (05)ರನ್ನು ಔಟ್ ಮಾಡಿ, ಕೆಕೆಆರ್‌ನ ಬ್ಯಾಟಿಂಗ್ ಬೆನ್ನೆಲುಬು ಮುರಿದರು. ಅಂಗ್‌ಕೃಷ್ ರಘುವಂಶಿ (26) ಹಾಗೂ ಕೊನೆಯಲ್ಲಿ ರಮಣ್‌ದೀಪ್ ಸಿಂಗ್ (22) ಹೋರಾಟದಿಂದಾಗಿ ಕೆಕೆಆರ್ 100 ರನ್ ಗಡಿ ದಾಟಿತು. 16.2 ಓವರಲ್ಲಿ ತಂಡ 116 ರನ್‌ಗೆ ಆಲೌಟ್ ಆಯಿತು.

ಯಾರು ಈ ಅಶ್ವನಿ ?

ಪಂಜಾಬ್‌ನ ಝನ್‌ಜೇರಿ ಎಂಬ ಊರಿನ ಅಶ್ವನಿ ಕುಮಾರ್, ತಮ್ಮ ರಾಜ್ಯದ ಪರ ಕೇವಲ 4 ಟಿ20, 2 ರಣಜಿ ಟ್ರೋಫಿ ಪಂದ್ಯಗಳನ್ನಾಡಿದ್ದಾರೆ. ಕಳೆದ ವರ್ಷ ಶೇರ್ -ಎ-ಪಂಜಾಬ್ ಟಿ20 ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ತೋರಿದ್ದ ಇವರನ್ನು ಮುಂಬೈ ಇಂಡಿಯನ್ಸ್‌ ಸ್ಕೌಟಿಂಗ್ ತಂಡ ಗಮನಿಸಿ, ಐಪಿಎಲ್ ಆಯ್ಕೆ ಟ್ರಯಲ್ಸ್‌ಗೆ ಆಹ್ವಾನಿಸಿತ್ತು. ಟ್ರಯಲ್ಸ್‌ನಲ್ಲಿ ಮುಂಬೈ ಕೋಚ್‌ಗಳ ಗಮನ ಸೆಳೆದ ಅಶ್ವನಿಯನ್ನು ಹರಾಜಿನಲ್ಲಿ 30 ಲಕ್ಷಕ್ಕೆ ಖರೀದಿಸಲಾಗಿತ್ತು.

ಸುಲಭ ಗುರಿ ಬೆನ್ನತ್ತಿದ ಮುಂಬೈ ಮೊದಲ ವಿಕೆಟ್ ಗೆ 46 ರನ್ ಜೊತೆಯಾಟ ಪಡೆಯಿತು. ಇಂಪ್ಯಾಕ್ಟ್ ಆಟಗಾರನಾಗಿ ಕಣಕ್ಕಿಳಿದ ರೋಹಿತ್ (13) ಮತ್ತೊಮ್ಮೆ ನಿರಾಸೆ ಮೂಡಿಸಿದರು. ದ.ಆಫ್ರಿಕಾ ಯುವ ವಿಕೆಟ್ ಕೀಪರ್-ಬ್ಯಾಟರ್ ಡ್ಯಾನ್ ರಿಕೆಲ್ಟನ್ ಸಿಕ್ಸರ್ ಸುರಿಮಳೆ ಸುರಿಸಿ ಕೆಕೆಆರ್‌ಗೆ ನೀರಿಳಿಸಿದರು. 41 ಎಸೆತದಲ್ಲಿ 4 ಬೌಂಡರಿ, 5 ಸಿಕ್ಸರ್‌ನೊಂದಿಗೆ 62 ರನ್ ಚಚ್ಚಿ ಔಟಾಗದೆ ಉಳಿದರು. ವಿಲ್ ಜ್ಯಾಕ್ಸ್ (16) ಹೆಚ್ಚು ಕಾಲ ಕ್ರೀಸ್ ನಲ್ಲಿ ನಿಲ್ಲದಿದರೂ, ನಾಯಕ ಸೂರ್ಯಕುಮಾರ್ ಯಾದವ್‌ ತವರಿನ ಅಭಿಮಾನಿಗಳಿಗೆ ನಿರಾಸೆ ಮೂಡಿಸಲಿಲ್ಲ. 9 ಎಸೆತದಲ್ಲಿ 27 ರನ್ ಸಿಡಿಸಿದರು. ಮುಂಬೈ ಇನ್ನೂ 7.1 ಓವರ್ ಬಾಕಿ ಇರುವಂತೆ ಪಂದ್ಯ ಜಯಿಸಿತು.

ಇದನ್ನೂ ಓದಿ: ಬೆಂಗಳೂರಿನಲ್ಲಿ ಸಾಮಾನ್ಯ ಜನರಂತೆ ಓಡಾಡುತ್ತಿರುವ ಕ್ರಿಕೆಟಿಗ ದಿನೇಶ್ ಕಾರ್ತಿಕ್..!

ಸ್ಕೋರ್: ಕೆಕೆಆರ್ 16.2 ಓವರಲ್ಲಿ 116/10 (ಅಂಗ್ ಕೃಷ್ 26, ರಮಣ್‌ದೀಪ್ 22, ಅಶ್ವನಿ 4-24, ಚಹರ್ 2-19), ಮುಂಬೈ 12.5 ಓವರಲ್ಲಿ 121/2 (ರಿಕೆಲ್ಸನ್ 62*, ಸೂರ್ಯ 27*, ರಸೆಲ್ 2-35)

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸಂಜು ಸ್ಯಾಮ್ಸನ್ ನನ್ನ ಅಣ್ಣನಿದ್ದಂತೆ; ಇಬ್ಬರ ಪೈಪೋಟಿ ಬಗ್ಗೆ ಮನಬಿಚ್ಚಿ ಮಾತಾಡಿದ ಜಿತೇಶ್ ಶರ್ಮಾ
ದಕ್ಷಿಣ ಆಫ್ರಿಕಾ ಎದುರು ಗೆದ್ದರೂ ನಿಂತಿಲ್ಲ ಚಿಂತೆ: 2ನೇ ಟಿ20ಗೆ ಭಾರತ ತಂಡದಲ್ಲಿ ಬದಲಾವಣೆ?