ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್‌ಗೆ ಸತತ 2ನೇ ಸೋಲು. ಗುಜರಾತ್ ಟೈಟಾನ್ಸ್ ವಿರುದ್ಧ 36 ರನ್‌ಗಳಿಂದ ಸೋಲು. ಗುಜರಾತ್‌ನ ಬೌಲಿಂಗ್ ಹಾಗೂ ಬ್ಯಾಟಿಂಗ್‌ನಿಂದ ಗೆಲುವು.
ಅಹಮದಾಬಾದ್: ಕಳೆದ ಆವೃತ್ತಿಯ ಐಪಿಎಲ್‌ನಲ್ಲಿ ಕೊನೆಯ ಸ್ಥಾನ ಪಡೆದಿದ್ದ 5 ಬಾರಿ ಚಾಂಪಿಯನ್ ಮುಂಬೈ ಇಂಡಿಯನ್ಸ್, ಈ ಐಪಿಎಲ್‌ನಲ್ಲೂ ಲಯ ಕಂಡುಕೊಳ್ಳಲು ಪರದಾಡುತ್ತಿದ್ದು ಸತತ 2ನೇ ಸೋಲು ಅನುಭವಿಸಿದೆ. ಶನಿವಾರ ಇಲ್ಲಿ ನಡೆದ ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ಮುಂಬೈಗೆ 36 ರನ್‌ಗಳ ಸೋಲು ಎದುರಾಯಿತು.
ಬೌಲಿಂಗ್, ಬ್ಯಾಟಿಂಗ್ ಎರಡರಲ್ಲೂ ತೀವ್ರ ವೈಫಲ್ಯ ಕಂಡ ಮುಂಬೈ ಸುಲಭವಾಗಿ ಪಂದ್ಯ ಬಿಟ್ಟುಕೊಟ್ಟಿತು. ಮೊದಲು ಬ್ಯಾಟ್ ಮಾಡಿದ ಗುಜರಾತ್ 20 ಓವರಲ್ಲಿ 8 ವಿಕೆಟ್‌ಗೆ 196 ರನ್ ಕಲೆಹಾಕಿತು. ತಂಡ 200 ರನ್ ದಾಟುವ ನಿರೀಕ್ಷೆಯಿತ್ತಾದರೂ, ಕೊನೆಯಲ್ಲಿ ಸತತ ವಿಕೆಟ್‌ಗಳು ಉರುಳಿದ ಕಾರಣ ಅದು ಸಾಧ್ಯವಾಗಲಿಲ್ಲ.
ಆದರೂ, ಗುಜರಾತ್ ದಾಖಲಿಸಿದ ಮೊತ್ತ ಸ್ಪರ್ಧಾತ್ಮಕ ಎನಿಸಿತು. ಕಠಿಣ ಗುರಿ ಬೆನ್ನತ್ತಲು ಮೈದಾನಕ್ಕಿಳಿದ ಮುಂಬೈ ಆರಂಭದಲ್ಲೇ ರೋಹಿತ್ ಶರ್ಮಾ ವಿಕೆಟ್ ಕಳೆದುಕೊಂಡಿತು. ಕೇವಲ 8 ರನ್ ಗಳಿಸಿ ರೋಹಿತ್ ಔಟಾದರು. ರ್‍ಯಾನ್ ರಿಕೆಲ್ಟನ್ ಸಹ ಬೇಗನೆ ಔಟಾದರು.
ಇದನ್ನೂ ಓದಿ: CSK ಬಗ್ಗುಬಡಿದು ಡ್ರೆಸ್ಸಿಂಗ್ ರೂಮ್‌ನಲ್ಲಿ ಭರ್ಜರಿ ಸ್ಟೆಪ್ಸ್ ಹಾಕಿದ ವಿರಾಟ್ ಕೊಹ್ಲಿ! ವಿಡಿಯೋ ವೈರಲ್
3ನೇ ವಿಕೆಟ್‌ಗೆ ಕ್ರೀಸ್ ಹಂಚಿಕೊಂಡ ತಿಲಕ್ ವರ್ಮಾ ಹಾಗೂ ನಾಯಕ ಸೂರ್ಯಕುಮಾರ್ ಯಾದವ್ ಉತ್ತಮ ಜೊತೆಯಾಟದ ಮೂಲಕ ತಂಡಕ್ಕೆ ಚೇತರಿಕೆ ನೀಡಿದರು. ಆದರೆ, ಇವರಿಬ್ಬರ ವಿಕೆಟ್ ಪತನದ ಬಳಿಕ ಮುಂಬೈ ಸೋಲಿನತ್ತ ಮುಖಮಾಡಿತು. 20 ಓವರಲ್ಲಿ 6 ವಿಕೆಟ್‌ಗೆ 160 ರನ್ ಗಳಿಸಲಷ್ಟೇ ಶಕ್ತವಾಯಿತು.
ಗುಜರಾತ್‌ನ ಬೌಲರ್‌ಗಳಾದ ಪ್ರಸಿದ್ಧ್ ಕೃಷ್ಣ, ಮೊಹಮದ್ ಸಿರಾಜ್, ಸಾಯಿ ಕಿಶೋರ್ ರನ್ ನಿಯಂತ್ರಿಸುವ ಜೊತೆಗೆ ಪ್ರಮುಖ ವಿಕೆಟ್‌ಗಳನ್ನೂ ಉರುಳಿಸಿ, ಈ ಆವೃತ್ತಿಯಲ್ಲಿ ತಂಡದ ಮೊದಲ ಗೆಲುವಿಗೆ ಕಾರಣರಾದರು.
ಇದಕ್ಕೂ ಮುನ್ನ ಗುಜರಾತ್‌ಗೆ ಅಗ್ರ 3 ಬ್ಯಾಟರ್‌ಗಳಾದ ಸುದರ್ಶನ್ (63), ಗಿಲ್ (38) ಹಾಗೂ ಬಟ್ಲರ್ (39)ರ ಆಕರ್ಷಕ ಬ್ಯಾಟಿಂಗ್ ನೆರವಾಯಿತು.
ಸ್ಕೋರ್: ಗುಜರಾತ್ 20 ಓವರಲ್ಲಿ 196/8 (ಸುದರ್ಶನ್ 63, ಬಟ್ಲರ್ 39, ಗಿಲ್ 38, ಹಾರ್ದಿಕ್ 2-29), ಮುಂಬೈ 20 ಓವರಲ್ಲಿ 160/6 (ಸೂರ್ಯ 48, ತಿಲಕ್ 39, ಪ್ರಸಿದ್ಧ್ 2-18, ಸಿರಾಜ್ 2-34)
ಅಹಮದಾಬಾದ್‌ನಲ್ಲಿ ಗಿಲ್ 1000 ಐಪಿಎಲ್ ರನ್!
ಗುಜರಾತ್ ಟೈಟಾನ್ಸ್‌ನ ನಾಯಕ, ಆರಂಭಿಕ ಬ್ಯಾಟರ್ ಶುಭ್‌ಮನ್ ಗಿಲ್ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ 1000 ಐಪಿಎಲ್ ರನ್ ಪೂರೈಸಿದ್ದಾರೆ. ಐಪಿಎಲ್‌ನಲ್ಲಿ ಕ್ರೀಡಾಂಗಣವೊಂದರಲ್ಲಿ ಅತಿವೇಗವಾಗಿ 1,000 ರನ್ ಗಳಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ 2ನೇ ಸ್ಥಾನ ಪಡೆದಿದ್ದಾರೆ. ಗಿಲ್ ಕೇವಲ 20 ಇನ್ನಿಂಗ್ಸ್‌ಗಳಲ್ಲಿ ಈ ಮೈಲಿಗಲ್ಲು ತಲುಪಿದ್ದಾರೆ. ಕ್ರಿಸ್ ಗೇಲ್, ಆರ್‌ಸಿಬಿ ಪರ ಆಡುವಾಗ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕೇವಲ 19 ಇನ್ನಿಂಗ್ಸ್‌ಗಳಲ್ಲಿ 1,000 ರನ್ ಗಳಿಸಿದ್ದರು.
ಸನ್‌ರೈಸರ್ಸ್ ಪರ ಆಡುವ ಡೇವಿಡ್ ವಾರ್ನರ್, ಹೈದರಾಬಾದ್‌ನ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ 22 ಇನ್ನಿಂಗ್ಸಲ್ಲಿ 1,000 ರನ್ ಗಳಿಸಿದರೆ, ಕಿಂಗ್ಸ್ ಇಲೆವೆನ್ ಪಂಜಾಬ್‌ನ ಶಾನ್ ಮಾರ್ಷ್ ಮೊಹಾಲಿಯ ಐಎಸ್ ಬಿಂದ್ರಾ ಸ್ಟೇಡಿಯಂನಲ್ಲಿ 26 ಇನ್ನಿಂಗ್ಸ್‌ಗಳಲ್ಲಿ, ಮುಂಬೈನ ವಾಂಖೇಡೆ ಕ್ರೀಡಾಂಗಣದಲ್ಲಿ ಸೂರ್ಯಕುಮಾರ್ ಯಾದವ್ 31 ಇನ್ನಿಂಗ್ಸ್‌ನಲ್ಲಿ 1000 ರನ್ ಮೈಲಿಗಲ್ಲು ತಲುಪಿದ್ದರು.