ಧೋನಿ ಮತ್ತು ಕೊಹ್ಲಿ ನಡುವಿನ ಸ್ನೇಹದ ಬಗ್ಗೆ ಧೋನಿ ಮಾತನಾಡಿದ್ದಾರೆ. ಕೊಹ್ಲಿ ಅವರ ಬ್ಯಾಟಿಂಗ್ ಕೌಶಲ್ಯ ಮತ್ತು ಫಿಟ್ನೆಸ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇಶಾನ್ ಕಿಶನ್ ಅವರ ಕಮ್‌ಬ್ಯಾಕ್ ಕುರಿತು ವರದಿಯಿದೆ.
ಚೆನ್ನೈ: ಹಿರಿಯ-ಕಿರಿಯ ಆಟಗಾರರ ನಡುವೆ ಒಂದು ಗೆರೆ ಇರುತ್ತದೆ. ಆದರೆ ನಾನು ಮತ್ತು ವಿರಾಟ್ ಕೊಹ್ಲಿ ಈಗಲೂ ಉತ್ತಮ ಸ್ನೇಹಿತರು ಎಂದು ಭಾರತದ ಮಾಜಿ ನಾಯಕ ಎಂ.ಎಸ್.ಧೋನಿ ಹೇಳಿದ್ದಾರೆ.
‘2022ರಲ್ಲಿ ಟೆಸ್ಟ್ ನಾಯಕತ್ವ ತೊರೆದ ಬಳಿಕ ಧೋನಿ ಹೊರತುಪಡಿಸಿ ಬೇರೆ ಯಾರೂ ತಮಗೆ ಮೆಸೇಜ್ ಮಾಡಿರಲಿಲ್ಲ’ ಎಂಬ ಕೊಹ್ಲಿ ಹೇಳಿಕೆ ಬಗ್ಗೆ ಜಿಯೋಹಾಟ್‌ಸ್ಟಾರ್ ಸಂದರ್ಶನದಲ್ಲಿ ಧೋನಿ ಪ್ರತಿಕ್ರಿಯಿಸಿದರು. ಆದರೆ ಕೊಹ್ಲಿಗೆ ಕಳುಹಿಸಿದ ಸಂದೇಶ ಏನು ಎಂಬುದನ್ನು ಬಹಿರಂಗಪಡಿಸಲು ಅವರು ನಿರಾಕರಿಸಿದರು. ‘ನಾನು ಸಂಬಂಧದ ಬಗ್ಗೆ ಮಾತನಾಡುತ್ತೇನೆ, ಸಂದೇಶದ ಬಗ್ಗೆ ಅಲ್ಲ. ಅದನ್ನು ಹಾಗೆಯೇ ಇಟ್ಟುಕೊಳ್ಳಲು ನಾನು ಇಷ್ಟಪಡುತ್ತೇನೆ. ನಂಬಿಕೆ ಮುಖ್ಯ’ ಎಂದರು.
BCCI ಸೆಂಟ್ರಲ್ ಕಾಂಟ್ರ್ಯಾಕ್ಟ್ ಪ್ರಕಟ; ಮೊದಲ ಬಾರಿ ಕನ್ನಡತಿಗೆ ಸ್ಥಾನ!
‘ಕೊಹ್ಲಿ 40-60 ರನ್‌ಗೆ ತೃಪ್ತರಾಗುವುದಿಲ್ಲ. ಯಾವತ್ತೂ ಶತಕ ಗಳಿಸಬೇಕು, ಪಂದ್ಯದ ಕೊನೆವರೆಗೂ ಕ್ರೀಸ್‌ನಲ್ಲಿರಬೇಕೆಂದು ಬಯಸುತ್ತಾರೆ. ಅವರು ಬ್ಯಾಟಿಂಗ್ ಕೌಶಲ್ಯ, ಫಿಟ್ನೆಸ್ ಮತ್ತಷ್ಟು ಹೆಚ್ಚಿಸಿಕೊಂಡಿದ್ದಾರೆ’ ಎಂದು ಧೋನಿ ಹೇಳಿದರು.
ಧೋನಿ, ಕೊಹ್ಲಿ ಒಂದು ಸಂಸ್ಥೆ ಇದ್ದಂತೆ: ನವಜೋತ್ ಸಿಂಗ್ ಸಿಧು
ನವದೆಹಲಿ: 'ಕ್ರಿಕೆಟ್ ದಿಗ್ಗಜರಾಗಿರುವ ಎಂ.ಎಸ್.ಧೋನಿ ಮತ್ತು ವಿರಾಟ್ ಕೊಹ್ಲಿ ಯಾವ ಸಂಸ್ಥೆಗೂ ಕಡಿಮೆಯಿಲ್ಲ. ಅವರ ಸಮಕಾಲೀನರು ಮರೆಯಾದರೂ, ಇವರಿಬ್ಬರ ಹವಾ ಕಮ್ಮಿ ಆಗಿಲ್ಲ' ಎಂದು ಟೀಂ ಇಂಡಿಯಾದ ಮಾಜಿ ಆಟಗಾರ ನವಜೋತ್ ಸಿಧು ಹಾಡಿ ಹೊಗಳಿದ್ದಾರೆ.
ಜಿಯೋಸ್ಟಾರ್ ಸಂವಾದದಲ್ಲಿ ಮಾತನಾಡಿರುವ ಸಿಧು, 'ಜನರು ಅವರನ್ನು ಐಕಾನ್ ಎಂದು ಕರೆಯುತ್ತಾರೆ. ನಾನು ಅವರನ್ನು ಸಂಸ್ಥೆ ಎನ್ನು ತ್ತೇನೆ. ಕೊಹ್ಲಿ, ಧೋನಿ ಹೆಸರು ಹಲವು ತಲೆಮಾರುಗಳವರೆಗೆ ಉಳಿಯುತ್ತದೆ. ಬೀದಿಯಲ್ಲಿರುವ ಮಕ್ಕಳು ಕೂಡ ಕೊಹ್ಲಿ ಯಾಗಲು ಬಯಸುತ್ತಾರೆ' ಎಂದಿದ್ದಾರೆ.
ಹಲವು ಸಂಕಷ್ಟ ಹಿಮ್ಮೆಟ್ಟಿಸಿ ಕಿಶನ್ ಗ್ರೇಟ್ ಕಮ್‌ಬ್ಯಾಕ್
ಹೈದರಾಬಾದ್: ದೇಸಿ ಕ್ರಿಕೆಟ್ ಆಡಲು ಆಸಕ್ತಿ ತೋರದಕ್ಕೆ ಭಾರತ ತಂಡದಿಂದ ಹೊರಬಿದ್ದು, ಬಳಿಕ ಬಿಸಿಸಿಐ ವಾರ್ಷಿಕ ಗುತ್ತಿಗೆಯನ್ನೂ ಕಳೆದುಕೊಂಡಿದ್ದ ಯುವ ಕ್ರಿಕೆಟಿಗ ಇಶಾನ್ ಈಗ ಕಮ್‌ಬ್ಯಾಕ್ ಹಾದಿಯಲ್ಲಿದ್ದಾರೆ. ಭಾನುವಾರ ರಾಜಸ್ಥಾನ ವಿರುದ್ಧ ಸನ್‌ರೈಸರ್ಸ್ ಪರ ಇಶಾನ್ ಸ್ಫೋಟಕ ಶತಕ ಸಿಡಿಸಿ ಸಂಭ್ರಮಿಸಿದ್ದಾರೆ.
ದೇಸಿ ಕ್ರಿಕೆಟ್ ಆಡಲೇಬೇಕೆಂಬ ನಿಯಮ ಉಲ್ಲಂಘಿಸಿದ್ದ ಇಶಾನ್, 2023ರ ನವೆಂಬರ್ ಬಳಿಕ ಭಾರತ ತಂಡದಲ್ಲಿ ಸ್ಥಾನ ಪಡೆದಿಲ್ಲ. ಕಳೆದ ವರ್ಷ ಐಪಿಎಲ್‌ನ ಮುಂಬೈ ತಂಡದಿಂದಲೂ ಹೊರಬಿದ್ದಿದ್ದರು. ಹರಾಜಿನಲ್ಲಿ ಸನ್‌ರೈಸರ್ಸ್ ₹11.25 ಕೋಟಿಗೆ ಖರೀದಿಸಿತ್ತು. ಇದನ್ನೇ ಮೆಟ್ಟಿಲಾಗಿ ಮಾಡಿಕೊಂಡ ಇಶಾನ್, ಹಲವು ತಿಂಗಳುಗಳಿಂದ ಪ್ರತಿದಿನ 2 ಅವಧಿ ಪೂರ್ತಿ ಅಭ್ಯಾಸ ನಡೆಸುತ್ತಿದ್ದಾರೆ.
ಬೆಳಗ್ಗಿನ ಅವಧಿಯ 2-3 ಗಂಟೆ ಕಾಲ ಬ್ಯಾಟಿಂಗ್ ಪ್ರಾಕ್ಟಿಸ್ ಮಾಡುತ್ತಿದ್ದ ಕಿಶನ್, ಸಂಜೆ 1-2 ಗಂಟೆ ಜಿಮ್‌ನಲ್ಲಿ ಬೆವರಿಳಿಸುತ್ತಿದ್ದರು. ಅಲ್ಲದೆ, ಮಾನಸಿಕ ಆರೋಗ್ಯ ವೃದ್ಧಿಗೂ ಗಮನಕೊಡುತ್ತಿದ್ದರು. ಇದರ ಫಲ ಎಂಬಂತೆ ಅಬ್ಬರದ ಪ್ರದರ್ಶನ ನೀಡಿದ್ದಾರೆ.