
ಬೆಂಗಳೂರು: ಕನ್ನಡ, ಕನ್ನಡಿಗರ ಕಡೆಗಣನೆ ಮೂಲಕ ಭಾರಿ ಟೀಕೆ ಎದುರಿಸುತ್ತಿದ್ದ ಆರ್‌ಸಿಬಿ ಕಳೆದೆರಡು ವರ್ಷಗಳಿಂದ ಕನ್ನಡಿಗರ ಮನವೊಲಿಕೆಗೆ ವಿವಿಧ ತಂತ್ರಗಳನ್ನು ರೂಪಿಸುತ್ತಿದೆ. ಇದರ ಮುಂದುವರಿದ ಭಾಗ ಎಂಬಂತೆ, ಜಿಲೇಬಿ ಮೂಲಕ ದೇಶದ ವಿವಿಧೆಡೆಯ ಅಭಿಮಾನಿಗಳಿಗೆ ಕನ್ನಡ ಕಲಿಸುವ ಯೋಜನೆ ಕೈಗೆತ್ತಿಗೊಂಡಿದೆ.
ಕೆಲ ದಿನಗಳ ಹಿಂದೆಯೇ ಈ ಅಭಿಯಾನ ಆರಂಭಿಸಲಾಗಿದ್ದು, ವಿರಾಟ್ ಕೊಹ್ಲಿ, ಎಲೈಸಿ ಪೆರ್ರಿ, ದೇವ್‌ದತ್ ಪಡಿಕ್ಕಲ್ ಸೇರಿದಂತೆ ಫ್ರಾಂಚೈಸಿಯ ಪ್ರಮುಖ ಆಟಗಾರರು ಅಭಿಯಾನದಲ್ಲಿ ಭಾಗಿಯಾಗಿದ್ದಾರೆ. ಕನ್ನಡ ಅಕ್ಷರ ರೂಪದ ಜಿಲೇಬಿ ತಯಾರಿಸಿ, ಅದನ್ನು ಆಟಗಾರರು, ಅಭಿಮಾನಿಗಳಿಗೆ ನೀಡಿ ಪದಗಳ ಅರ್ಥಗಳನ್ನು ವಿವರಿಸಲಾಗುತ್ತದೆ.
ಈಗಾಗಲೇ ಅಭಿಯಾನದ ಭಾಗವಾಗಿ ಕೆಲ ವಿಡಿಯೋಗಳನ್ನು ಫ್ರಾಂಚೈಸಿಯು ಯೂಟ್ಯೂಬ್‌ನಲ್ಲಿ ಹಂಚಿಕೊಂಡಿದೆ. ಅಲ್ಲದೆ, jilebikodi@gmail.com ಇಮೇಲ್ ಮಾಡುವ ಮೂಲಕ ಕಲಿಕಾ ತರಗತಿಯಲ್ಲಿ ಪಾಲ್ಗೊಳ್ಳಬಹುದು ಎಂದು ಫ್ರಾಂಚೈಸಿ ತಿಳಿಸಿದೆ.
ಕನಿಷ್ಠ 1000 ಅಭಿಮಾನಿಗಳಿಗೆ ಉಚಿತ ಕನ್ನಡ ಕಲಿಸಲು ಆರಂಭಿಸಿರುವ ಫ್ರಾಂಚೈಸಿಯು, ಕನ್ನಡ ಅಕ್ಷರದ ಜಿಲೇಬಿಗಳನ್ನು ತಯಾರಿಸಿ ಬೆಂಗಳೂರಿನ ಆರ್‌ಸಿಬಿ ಬಾರ್ ಮತ್ತು ಕೆಫೆಯಲ್ಲಿ ಇಟ್ಟಿದೆ. ಏ.11ರವರೆಗೆ ಜಿಲೇಬಿ ಲಭ್ಯವಿದೆ ಎಂದು ಫ್ರಾಂಚೈಸಿ ತಿಳಿಸಿದೆ.
ತವರಿನಲ್ಲಿ ಮತ್ತೆ ಮುಗ್ಗರಿಸಿದ ಆರ್‌ಸಿಬಿ:
ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಪಂದ್ಯದಲ್ಲಿ ಮತ್ತೊಮ್ಮೆ ಆರ್‌ಸಿಬಿ ಪಡೆ ತವರಿನಲ್ಲಿ ಮುಗ್ಗರಿಸಿದೆ. ತವರಿನಾಚೆ ಮೂರು ಪಂದ್ಯ ಗೆದ್ದು ಬೀಗಿರುವ ಆರ್‌ಸಿಬಿ ಪಡೆಗೆ ತವರಿನಲ್ಲಿ ಇದೀಗ ಎರಡನೇ ಸೋಲು ಎದುರಾಗಿದೆ. ಬ್ಯಾಟಿಂಗ್‌ನಲ್ಲಿ ವೈಫಲ್ಯ ಅನುಭವಿಸಿದ್ದೇ ಆರ್‌ಸಿಬಿ ತಂಡದ ಸೋಲಿಗೆ ಪ್ರಮುಖ ಕಾರಣ ಎನಿಸಿಕೊಂಡಿತು.
ಮೊದಲ ಮೂರು ಓವರ್‌ನಲ್ಲೇ 53 ರನ್ ಕಲೆಹಾಕಿದ್ದ ಆರ್‌ಸಿಬಿ ತಂಡವು ಫಿಲ್ ಸಾಲ್ಟ್ ವಿಕೆಟ್ ಪತನವಾಗುತ್ತಿದ್ದಂತೆಯೇ ನಾಟಕೀಯ ಕುಸಿತ ಕಂಡಿತು. ದೇವದತ್ ಪಡಿಕ್ಕಲ್, ಜಿತೇಶ್ ಶರ್ಮಾ ಹಾಗೂ ಲಿಯಾಮ್ ಲಿವಿಂಗ್‌ಸ್ಟೋನ್ ಒಂದಂಕಿ ಮೊತ್ತಕ್ಕೆ ವಿಕೆಟ್ ಒಪ್ಪಿಸುವ ಮೂಲಕ ನಿರಾಸೆ ಅನುಭವಿಸಿದರು. ಅಂತಿಮವಾಗಿ ಆರ್‌ಸಿಬಿ ತಂಡವು ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 163 ರನ್ ಕಲೆಹಾಕಿತು.
ಇನ್ನು ಡೆಲ್ಲಿ ಆರಂಭಿಕ ಆಘಾತಕ್ಕೆ ಗುರಿಯಾಯಿತು. ಆರ್‌ಸಿಬಿ ಮಾಜಿ ನಾಯಕ ಫಾಫ್ ಡು ಪ್ಲೆಸಿ (02), ಜೇಕ್ ಫ್ರೇಸರ್ (7), ಅಭಿಷೇಕ್ ಪೊರೆಲ್ (7) ಪವರ್-ಪ್ಲೇನಲ್ಲೇ ಔಟಾದರು. 6 ಓವರ್‌ಗೆ 3 ವಿಕೆಟ್ ನಷ್ಟಕ್ಕೆ 39 ರನ್ ಗಳಿಸಿತು. ಆದರೆ ಆ ಬಳಿಕ ಕೆ ಎಲ್ ರಾಹುಲ್ 53 ಎಸೆತಗಳನ್ನು ಎದುರಿಸಿ 7 ಬೌಂಡರಿ ಹಾಗೂ 6 ಸಿಕ್ಸರ್ ಸಹಿತ 93 ರನ್ ಸಿಡಿಸಿ ಇನ್ನೂ 13 ಎಸೆತ ಬಾಕಿ ಇರುವಂತೆಯೇ ಗೆಲುವಿನ ದಡ ಸೇರಿಸಿದರು.
ಆರ್‌ಸಿಬಿ 5 ಓವರಲ್ಲಿ 89 ರನ್, ಉಳಿದ 15 ಓವರಲ್ಲಿ 74 ರನ್!
ಆರ್‌ಸಿಬಿ 1ರಿಂದ 3, 19-20ನೇ ಓವರ್ ಸೇರಿ ಒಟ್ಟು 5 ಓವರಲ್ಲಿ ವಿಕೆಟ್ ನಷ್ಟವಿಲ್ಲದೆ 89 ರನ್ ಗಳಿಸಿದರೆ, ಇನ್ನುಳಿದ 15 ಓವರಲ್ಲಿ 7 ವಿಕೆಟ್ ಕಳೆದುಕೊಂಡು ಗಳಿಸಿದ್ದು ಕೇವಲ 71 ರನ್. ಮೊದಲ 3 ಓವರಲ್ಲಿ ಸಾಲ್ಟ್, ಕೊನೆ 2 ಓವರಲ್ಲಿ ಡೇವಿಡ್ ಅಬ್ಬರದ ಆಟವಾಡಿದರು.
55 ಡಾಟ್ ಬಾಲ್
ಆರ್‌ಸಿಬಿ ಇನ್ನಿಂಗ್ಸ್‌ನಲ್ಲಿ ಒಟ್ಟು 55 ಡಾಟ್ ಬಾಲ್‌ಗಳಿದ್ದವು. ಅಂದರೆ 9 ಓವರ್‌ಗಳಲ್ಲಿ ಆರ್‌ಸಿಬಿ ಒಂದೂ ರನ್ ಗಳಿಸಲಿಲ್ಲ. ಇದು ಪಂದ್ಯದ ಫಲಿತಾಂಶದ ಮೇಲೆ ಪರಿಣಾಮ ಬೀರಿತು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.