
ಕೋಲ್ಕತಾ: ಹಾಲಿ ಚಾಂಪಿಯನ್ ಕೋಲ್ಕತಾ ತಂಡ ಪ್ಲೇ-ಆಫ್ ರೇಸ್‌ನಿಂದ ಹೊರಬೀಳುವುದರಿಂದ ಕೂದಲೆಳೆ ಅಂತರದಲ್ಲಿ ಪಾರಾಗಿದೆ. ನಿರ್ಣಾಯಕ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ 1 ರನ್ ರೋಚಕ ಗೆಲುವು ಸಾಧಿಸಿದ ಕೆಕೆಆರ್, ನಾಕೌಟ್ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ. ತಂಡ 11 ಪಂದ್ಯಗಳಲ್ಲಿ 11 ಅಂಕ ಸಂಪಾದಿಸಿದ್ದು, ಇನ್ನುಳಿದ 3 ಪಂದ್ಯದಲ್ಲೂ ಗೆದ್ದರೆ ಪ್ಲೇ-ಆಫ್‌ಗೇರಬಹುದು. ಮತ್ತೆ ಕೊನೆ ಕ್ಷಣದ ಒತ್ತಡಕ್ಕೆ ಬಲಿಯಾದ ರಾಜಸ್ಥಾನ ಟೂರ್ನಿಯಲ್ಲಿ ಆಡಿದ 12 ಪಂದ್ಯಗಳಲ್ಲಿ 9ನೇ ಸೋಲನುಭವಿಸಿತು.
ಮೊದಲು ಬ್ಯಾಟ್ ಮಾಡಿದ ಕೆಕೆಆರ್, 4 ವಿಕೆಟ್‌ಗೆ 204 ರನ್ ಕಲೆಹಾಕಿತು. ಗುರ್ಬಾಜ್ 35, ರಹಾನೆ 30 ರನ್ ಗಳಿಸಿದರೆ, ಅಂಘ್‌ಕೃಷ್ ರಘುವಂಶಿ 31 ಎಸೆತಕ್ಕೆ 44 ರನ್ ಸಿಡಿಸಿದರು. ಕೊನೆಯಲ್ಲಿ ಅಬ್ಬರಿಸಿದ ಆಂಡ್ರೆ ರಸೆಲ್ ಕೇವಲ 25 ಎಸೆತಕ್ಕೆ 57 ರನ್ ಸಿಡಿಸಿ ತಂಡದ ಮೊತ್ತವನ್ನು 200ರ ಗಡಿ ದಾಟಿಸಿದರು.
ಕೆಕೆಆರ್‌ನ ಮೊತ್ತ ದೊಡ್ಡದೇ ಆಗಿದ್ದರೂ ರಿಯಾನ್ ಪರಾಗ್ ಅಬ್ಬರದಿಂದಾಗಿ ರಾಜಸ್ಥಾನ ಗೆಲುವಿನ ಸನಿಹ ತಲುಪಿತ್ತು. ಆದರೆ ಕೊನೆಯಲ್ಲಿ ಎಡವಿದ ತಂಡ 8 ವಿಕೆಟ್‌ಗೆ 205 ರನ್ ಗಳಿಸಿ ಸೋಲೊಪ್ಪಿಕೊಂಡಿತು.
8 ಓವರ್‌ಗಳಲ್ಲಿ 5 ವಿಕೆಟ್‌ಗೆ 72 ರನ್ ಗಳಿಸಿದ್ದ ತಂಡ ಬಳಿಕ ಗೇರ್ ಚೇಂಜ್ ಮಾಡಿಕೊಂಡಿತು. ಮೊಯೀನ್ ಅಲಿ ಎಸೆದ 13ನೇ ಓವರ್‌ನಲ್ಲಿ 5 ಎಸೆತಗಳಲ್ಲಿ 5 ಸಿಕ್ಸರ್ ಸಿಡಿಸಿದ ರಿಯಾನ್ ಪರಾಗ್, ತಂಡವನ್ನು ಗೆಲುವಿನ ಹಳಿಗೆ ತಂದಿಟ್ಟರು. ಕೊನೆ 4 ಓವರ್‌ಗೆ 43 ರನ್ ಬೇಕಿದ್ದಾಗ ನರೈನ್ 17ನೇ ಓವರ್‌ನಲ್ಲಿ 5 ರನ್ ಬಿಟ್ಟುಕೊಟ್ಟರು. 45 ಎಸೆತಕ್ಕೆ 94 ರನ್ ಗಳಿಸಿದ್ದ ರಿಯಾನ್, 18ನೇ ಓವರ್‌ನಲ್ಲಿ ಹರ್ಷಿತ್‌ಗೆ ವಿಕೆಟ್ ಒಪ್ಪಿಸಿದರು. ಆ ಓವರಲ್ಲಿ ಕೇವಲ 5 ರನ್ ಬಂತು. 19ನೇ ಓವರ್‌ನಲ್ಲಿ ರಸೆಲ್ 11 ರನ್ ನೀಡಿದರು. ವೈಭವ್ ಅರೋರಾ ಎಸೆದ ಕೊನೆ ಓವರ್‌ಗೆ 22 ರನ್ ಬೇಕಿತ್ತು. ಮೊದಲೆರಡು ಎಸೆತಕ್ಕೆ 3 ರನ್ ಬಂತು. ಬಳಿಕ 3 ಎಸೆತಗಳಲ್ಲಿ ಶುಭಂ ದುಬೆ 2 ಸಿಕ್ಸರ್, 1 ಬೌಂಡರಿ ಬಾರಿಸಿದರು. ಕೊನೆ ಎಸೆತಕ್ಕೆ 3 ರನ್ ಬೇಕಿತ್ತು. 2ನೇ ರನ್ ಪ್ರಯತ್ನದಲ್ಲಿದ್ದಾಗ ಆರ್ಚರ್ ರನೌಟ್ ಆದರು.
ಸ್ಕೋರ್: ಕೋಲ್ಕತಾ 4 ವಿಕೆಟ್‌ಗೆ 206 (ರಸೆಲ್ ಔಟಾಗದೆ 57, ರಘುವಂಶಿ 44, ಗುರ್ಬಾಜ್ 35, ರಿಯಾನ್ 1-21), ರಾಜಸ್ಥಾನ 20 ಓವರಲ್ಲಿ 205/8 (ರಿಯಾನ್ 95, ಜೈಸ್ವಾಲ್ 34, ವರುಣ್ 2-32)
ಪಂದ್ಯಶ್ರೇಷ್ಠ: ಆ್ಯಂಡ್ರೆ ರಸೆಲ್
ಈ ವರ್ಷ 4ನೇ ಬಾರಿ ಕೊನೆ ಕ್ಷಣದಲ್ಲಿ ಎಡವಿ ಸೋತ ರಾಜಸ್ಥಾನ!
ರಾಜಸ್ಥಾನ ತಂಡ ಈ ಬಾರಿ ಉತ್ತಮ ಪ್ರದರ್ಶನ ನೀಡಿದ್ದರೂ, ಅದೃಷ್ಟ ಕೈಕೊಟ್ಟು ಪಂದ್ಯ ಸೋತಿದ್ದೇ ಹೆಚ್ಚು. ಡೆಲ್ಲಿ ವಿರುದ್ಧ ಕೊನೆ ಓವರ್‌ಗೆ 9 ರನ್ ಗಳಿಸಲಾಗದೆ ಟೈ ಮಾಡಿಕೊಂಡು, ಬಳಿಕ ಸೂಪರ್ ಓವರ್‌ನಲ್ಲಿ ಸೋತಿತ್ತು. ಲಖನೌ ವಿರುದ್ಧವೂ ಕೊನೆ ಓವರ್‌ಗೆ 9 ರನ್ ಬೇಕಿದ್ದಾಗ ಸೋತಿತ್ತು. ಆರ್‌ಸಿಬಿ ವಿರುದ್ಧ ಕೊನೆ ಓವರ್‌ಗೆ 18 ರನ್ ಬೇಕಿದ್ದಾಗ 12 ಎಸೆತಕ್ಕೆ ಕೇವಲ 5 ರನ್ ಗಳಿಸಿ ಪರಾಭವಗೊಂಡಿತ್ತು.
ರಾಯಲ್ಸ್‌ಗೆ 3ನೇ ಸಲ 1 ರನ್‌ನಿಂದ ಸೋಲು
ರಾಜಸ್ಥಾನ ತಂಡ ಐಪಿಎಲ್‌ನಲ್ಲಿ 3ನೇ ಬಾರಿ ಕೇವಲ 1 ರನ್ ಅಂತರದಲ್ಲಿ ಸೋತಿದೆ. 2011ರಲ್ಲಿ ಡೆಲ್ಲಿ, 2024ರಲ್ಲಿ ಸನ್‌ರೈಸರ್ಸ್ ಹಾಗೂ ಈ ಬಾರಿ ಕೆಕೆಆರ್ ವಿರುದ್ಧ ಈ ರೀತಿ ಪರಾಭವಗೊಂಡಿದೆ.
ರಿಯಾನ್ ಸತತ 6 ಎಸೆತಕ್ಕೆ 6 ಸಿಕ್ಸರ್
ರಾಯಲ್ಸ್ ನಾಯಕ ರಿಯಾನ್ ಸತತ 6 ಎಸೆತಕ್ಕೆ 6 ಸಿಕ್ಸರ್ ಸಿಡಿಸಿದರು. ಮೊಯೀನ್‌ರ 13ನೇ ಓವರ್‌ನ ಕೊನೆ 5 ಎಸೆತಗಳಲ್ಲಿ 5 ಸಿಕ್ಸರ್ ಬಾರಿಸಿದರು. ಮುಂದಿನ ಓವರ್‌ನಲ್ಲಿ ವರುಣ್ ಚಕ್ರವರ್ತಿ ಎಸೆತವನ್ನೂ ರಿಯಾನ್ ಸಿಕ್ಸರ್‌ಗಟ್ಟಿ ಸತತ 6 ಸಿಕ್ಸರ್ ಪೂರೈಸಿದರು.
05ನೇ ಬ್ಯಾಟರ್
ಐಪಿಎಲ್‌ನಲ್ಲಿ ಒಂದೇ ಓವರ್‌ನಲ್ಲಿ 5 ಸಿಕ್ಸರ್ ಸಿಡಿಸಿದ 5ನೇ ಆಟಗಾರ ರಿಯಾನ್. 2012ರಲ್ಲಿ ಗೇಲ್, 2020ರಲ್ಲಿ ರಾಹುಲ್ ತೆವಾಟಿಯಾ, 2021ರಲ್ಲಿ ಜಡೇಜಾ, 2023ಲ್ಲಿ ರಿಂಕು ಈ ಸಾಧನೆ ಮಾಡಿದ್ದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.