
ಬೆಂಗಳೂರು: ಭಾರತದಲ್ಲಿ ಹುಟ್ಟಿದ ಪ್ರತಿಯೊಬ್ಬ ಕ್ರಿಕೆಟಿಗನಿಗೂ ಟೀಂ ಇಂಡಿಯಾವನ್ನು ಪ್ರತಿನಿಧಿಸಬೇಕು ಎನ್ನುವ ಕನಸಿರುತ್ತದೆ. ಭಾರತ ತಂಡವನ್ನು ಪ್ರತಿನಿಧಿಸಿ, ಒಳ್ಳೆಯ ಪ್ರದರ್ಶನ ತೋರಬೇಕು ಎನ್ನುವುದು ಪ್ರತಿ ಕ್ರಿಕೆಟಿಗನ ಕನಸಾಗಿರುತ್ತದೆ. ಯಾಕಂದ್ರೆ ಟೀಂ ಇಂಡಿಯಾ ಆಟಗಾರನಾದ್ರೆ ಪ್ರತಿಯೊಬ್ಬರು ಎಲ್ಲೇ ಹೋದ್ರೂ ಗುರುತಿಸುತ್ತಾರೆ. ಹೀಗಿರುವಾಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿಕೆಟ್ ಕೀಪರ್ ಬ್ಯಾಟರ್ ಜಿತೇಶ್ ಶರ್ಮಾ ಅಚ್ಚರಿಯ ಹೇಳಿಕೆ ನೀಡಿ ಗಮನ ಸೆಳೆದಿದ್ದಾರೆ. ಜಿತೇಶ್ ಶರ್ಮಾ ಆರ್‌ಸಿಬಿ ತಂಡ ಕೂಡಿಕೊಂಡ ಬಳಿಕ ಏನೆಲ್ಲಾ ಬದಲಾವಣೆಗಳಾದವು ಎನ್ನುವುದನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ.
ಆರ್‌ಸಿಬಿ ತಂಡ ಕೂಡಿಕೊಂಡ ಮೇಲೆ ಸಿಕ್ತು ಸರಿಯಾದ ಪರಿಚಯ:
ವಿಕೆಟ್ ಕೀಪರ್ ಜಿತೇಶ್ ಶರ್ಮಾ ಅವರನ್ನು ಆರ್‌ಸಿಬಿ ಫ್ರಾಂಚೈಸಿಯು ಐಪಿಎಲ್ ಮೆಗಾ ಹರಾಜಿನಲ್ಲಿ ಬರೋಬ್ಬರಿ 11 ಕೋಟಿ ರುಪಾಯಿ ನೀಡಿ ಖರೀದಿಸಿತ್ತು. ಇದೀಗ ಆರ್‌ಸಿಬಿ ತನ್ನ ಅಧಿಕೃತ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದು, ಹಲವು ವಿಚಾರಗಳ ಬಗ್ಗೆ ಜಿತೇಶ್ ಶರ್ಮಾ ಮುತ್ತಿನಂಥ ಮಾತುಗಳನ್ನು ಆಡಿದ್ದಾರೆ.
ಮಗನ ಕ್ರಿಕೆಟ್ ಕನಸಿಗೆ ಸರ್ವಸ್ವವನ್ನೂ ತ್ಯಾಗ ಮಾಡಿದ ತಂದೆ, ಈಗ ಆತ ಐಪಿಎಲ್ ಓಪನ್ನರ್!
"ನಾನು ಸಯ್ಯದ್ ಮುಷ್ತಾಕ್ ಅಲಿ ಆಡುತ್ತಿದ್ದಾಗ, ಪ್ರೇಕ್ಷಕರು ಜಿತೇಶ್, ಜಿತೇಶ್, ಆರ್‌ಸಿಬಿ ಆರ್‌ಸಿಬಿ ಎಂದು ಕೂಗುತ್ತಿದ್ದರು. ಆಗಲೇ ನನಗೆ ಗೊತ್ತಾಗಿದ್ದು, ನಾನು ಸಣ್ಣ ಪುಟ್ಟ ತಂಡವನ್ನು ಸೇರಿಕೊಂಡಿಲ್ಲವೆಂದು. ಆರ್‌ಸಿಬಿ ಪರ ಆಡುವುದು ಸಣ್ಣ ವಿಷಯವೇನಲ್ಲ. ಈ ತಂಡದ ಪರವಾಗಿ ಆಡುವಾಗ ಬೇರೆಯದ್ದೇ ಫೀಲಿಂಗ್ ಇರುತ್ತದೆ. ಯಾಕಂದ್ರೆ 100-150 ಮಂದಿ ನನ್ನ ಆಟೋಗ್ರಾಫ್‌ಗಾಗಿ ಕಾಯುತ್ತಿರುತ್ತಾರೆ. ಇದಕ್ಕೂ ಮೊದಲು ಟೀಂ ಇಂಡಿಯಾಗೆ ಪಾದಾರ್ಪಣೆ ಮಾಡಿದ್ದೇನೆ. ಆಗ ಎರಡು ಜನರೂ ನನ್ನ ಹತ್ರ ಬಂದಿರಲಿಲ್ಲ. ಇದೇ ಕಾರಣಕ್ಕೆ ನಾನು ಹೇಳಿದ್ದು, ಈ ಫ್ರಾಂಚೈಸಿ ಆಡುವುದೆಂದರೆ ಅದು ಬೇರೆಯದ್ದೇ ರೀತಿಯ ಫೀಲಿಂಗ್ ಅಂತ ಜಿತೇಶ್ ಶರ್ಮಾ ಹೇಳಿದ್ದಾರೆ.
ಇನ್ನು ಇದೇ ವಿಡಿಯೋದಲ್ಲಿ ಜಿತೇಶ್ ಶರ್ಮಾ ಅಭಿಮಾನಿಗಳನ್ನು ಉದ್ದೇಶಿಸಿ, 'ನಾವು ನಿಮಗಾಗಿ ಮತ್ತೆ ನಮಗಾಗಿ ಈ ಸಲ ಕಪ್ ಗೆಲ್ಲಲು ನಿಜಕ್ಕೂ ಸಾಕಷ್ಟು ಕಠಿಣ ಪರಿಶ್ರಮ ಹಾಕುತ್ತಿದ್ದೇವೆ. ನಿಜ ಹೇಳಬೇಕಂದ್ರೆ ಬಂಗಾರದ ಕಪ್ ಗೆಲ್ಲಲು ನಾನು ಪ್ರತಿ ಪಂದ್ಯದಲ್ಲಿ 99% ಪ್ರಯತ್ನ ಪಡುತ್ತಿಲ್ಲ, ಬದಲಾಗಿ 101% ಪ್ರಯತ್ನ ಪಡುತ್ತಿದ್ದೇನೆ' ಎಂದು ಹೇಳಿದ್ದಾರೆ.
RCB ಕೈಬಿಟ್ಟಿದ್ದೇ ಒಳ್ಳೇದಾಯ್ತು; ಐಪಿಎಲ್‌ನಲ್ಲಿ ಕೆಟ್ಟ ಆಟವಾಡುತ್ತಿದ್ದಾನೆ ಪಂಜಾಬ್ ಪ್ಲೇಯರ್!
ಐಪಿಎಲ್‌ನಲ್ಲಿ ಜಿತೇಶ್ ಶರ್ಮಾ ಪ್ರದರ್ಶನ ಹೇಗಿದೆ?
ವಿಕೆಟ್ ಕೀಪರ್ ಬ್ಯಾಟರ್ ಜಿತೇಶ್ ಶರ್ಮಾ ಭಾರತ ಪರ ಇದುವರೆಗೂ 9 ಟಿ20 ಪಂದ್ಯಗಳನ್ನಾಡಿದ್ದಾರೆ. ಭಾರತ ಪರ ನಿರೀಕ್ಷಿತ ಪ್ರದರ್ಶನ ತೋರಲು ವಿಫಲವಾಗಿದ್ದಾರೆ. ಟೀಂ ಇಂಡಿಯಾ ಪರ ಜಿತೇಶ್ ಶರ್ಮಾ 14.28ರ ಬ್ಯಾಟಿಂಗ್ ಸರಾಸರಿಯಲ್ಲಿ ಕೇವಲ 100 ರನ್ ಗಳಿಸಲಷ್ಟೇ ಶಕ್ತರಾಗಿದ್ದಾರೆ. ಇನ್ನು 2025ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಜಿತೇಶ್ ಶರ್ಮಾ ಆರ್‌ಸಿಬಿ ಪರ 4 ಇನ್ನಿಂಗ್ಸ್‌ಗಳನ್ನಾಡಿ 29ರ ಬ್ಯಾಟಿಂಗ್ ಸರಾಸರಿಯಲ್ಲಿ 157ರ ಸ್ಟ್ರೈಕ್‌ರೇಟ್‌ನಲ್ಲಿ 88 ರನ್ ಬಾರಿಸಿದ್ದಾರೆ. ಇನ್ನು ಒಟ್ಟಾರೆ ಐಪಿಎಲ್ ರೆಕಾರ್ಡ್ ನೋಡವುದಾದರೇ, 46 ಐಪಿಎಲ್ ಪಂದ್ಯಗಳನ್ನಾಡಿ 23ರ ಸರಾಸರಿಯಲ್ಲಿ 151ರ ಸ್ಟ್ರೈಕ್‌ರೇಟ್‌ನಲ್ಲಿ 818 ರನ್ ಸಿಡಿಸಿದ್ದಾರೆ.
ಇನ್ನು ಚೊಚ್ಚಲ ಐಪಿಎಲ್ ಟ್ರೋಫಿ ಕನವರಿಕೆಯಲ್ಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಆರಂಭಿಕ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ತೋರುತ್ತಿದೆ. ಇದುವರೆಗೂ ಆರ್‌ಸಿಬಿ 6 ಪಂದ್ಯಗಳನ್ನಾಡಿ 4 ಗೆಲುವು ಹಾಗೂ 2 ಸೋಲು ಸಹಿತ 8 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಇದೀಗ ಏಪ್ರಿಲ್ 18ರಂದು ಆರ್‌ಸಿಬಿ ತಂಡವು ತವರಿನಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಎದುರಿಸಲು ಸಜ್ಜಾಗಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.