
ನವದೆಹಲಿ: ಸತತ 4 ಗೆಲುವುಗಳೊಂದಿಗೆ 2025ರ ಐಪಿಎಲ್‌ನಲ್ಲಿ ಭರ್ಜರಿ ಆರಂಭ ಪಡೆದಿದ್ದ ಡೆಲ್ಲಿ ಕ್ಯಾಪಿಟಲ್ಸ್, ಕಳೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ವೀರೋಚಿತ ಸೋಲು ಅನುಭವಿಸಿತ್ತು. ಆ ಸೋಲಿನ ಕಹಿಯನ್ನು ಮರೆತು, ಬುಧವಾರ ತವರಿನಲ್ಲಿ ಮೊದಲ ಜಯ ಸಾಧಿಸಲು ಡೆಲ್ಲಿ ಉತ್ಸುಕಗೊಂಡಿದೆ.
ಕಳೆದ ಪಂದ್ಯದಲ್ಲಿ ಇಂಪ್ಯಾಕ್ಟ್ ಆಟಗಾರನಾಗಿ ಕರುಣ್ ನಾಯರ್ ಆಡಿದ ಆಟ, ತಂಡದ ಆತ್ಮವಿಶ್ವಾಸ ಹೆಚ್ಚಿಸಿದೆ. ಕೆ.ಎಲ್.ರಾಹುಲ್ ಅಮೋಘ ಲಯದಲ್ಲಿದ್ದು, ಅವರ ಮೇಲೂ ತಂಡ ನಿರೀಕ್ಷೆ ಇಟ್ಟುಕೊಂಡಿದೆ. ಇನ್ನು ಇವತ್ತಿನ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಆರಂಭಿಕ ಬ್ಯಾಟರ್ ಆಗಿರುವ ಜೇಕ್‌ಫ್ರೆಸರ್ ಮೆಕ್‌ಗುರ್ಕ್ ಅವರ ಫಾರ್ಮ್ ದೊಡ್ಡ ತಲೆನೋವು ತಂದುಕೊಟ್ಟಿದೆ. ಆಸ್ಟ್ರೇಲಿಯಾ ಮೂಲದ ಯುವ ಆರಂಭಿಕ ಬ್ಯಾಟರ್ ಮೆಕ್‌ಗುರ್ಕ್ ಕಳೆದ ಆವೃತ್ತಿಯ ಐಪಿಎಲ್‌ನಲ್ಲಿ ಅಬ್ಬರಿಸಿ ಬೊಬ್ಬಿರಿದ್ದರು. ಆದರೆ ಈ ಸಲ ಕೇವಲ 100ರ ಸ್ಟ್ರೈಕ್‌ರೇಟ್‌ನಲ್ಲಿ 46 ರನ್ ಗಳಿಸಲಷ್ಟೇ ಶಕ್ತರಾಗಿದ್ದಾರೆ. ಇನ್ನು ಫಾಫ್ ಡು ಪ್ಲೆಸಿಸ್ ಫಿಟ್ನೆಸ್ ಸಮಸ್ಯೆ ಡೆಲ್ಲಿಯನ್ನು ಕಾಡುವ ಸಾಧ್ಯತೆಯಿದೆ.
ಇನ್ನು ಅಭಿಷೇಕ್ ಪೊರೆಲ್, ಟ್ರಿಸ್ಟಿನ್ ಸ್ಟಬ್ಸ್ ಅಸ್ಥಿರ ಪ್ರದರ್ಶನ ತೋರುತ್ತಿದ್ದಾರೆ. ಇನ್ನು ಅಕ್ಷರ್ ಪಟೇಲ್ ಕೂಡಾ ತಮ್ಮ ಸಾಮರ್ಥ್ಯಕ್ಕೆ ತಕ್ಕಂತ ಆಟವಾಡಬೇಕಿದೆ. ಈಗಾಗಲೇ ಮುಂಬೈ ಎದುರು ಸೋತು, ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಜಾರಿರುವ ಡೆಲ್ಲಿಯ ಇನ್ನೊಂದು ಸೋಲು ಮತ್ತಷ್ಟು ಕುಸಿಯುವಂತೆ ಮಾಡುವ ಸಾಧ್ಯತೆಯಿದೆ.
ಇದನ್ನೂ ಓದಿ: ಐಪಿಎಲ್ 2025: ಪಂಜಾಬ್ ಕಿಂಗ್ಸ್‌ಗೆ ಬಿಗ್ ಶಾಕ್; ಸ್ಟಾರ್ ಕ್ರಿಕೆಟಿಗ ಟೂರ್ನಿಯಿಂದ ಔಟ್
ಮತ್ತೊಂದೆಡೆ ಆಡಿರುವ 6 ಪಂದ್ಯಗಳಲ್ಲಿ 4ರಲ್ಲಿ ಸೋತು, 8ನೇ ಸ್ಥಾನದಲ್ಲಿರುವ ರಾಜಸ್ಥಾನ ರಾಯಲ್ಸ್, ಲಯಕ್ಕೆ ಮರಳಲು ಎದುರು ನೋಡುತ್ತಿದೆ. ತಂಡದ ಬ್ಯಾಟಿಂಗ್, ಬೌಲಿಂಗ್ ವಿಭಾಗ ಇನ್ನಷ್ಟೇ ತನ್ನ ಅಸಲಿ ಸಾಮರ್ಥ್ಯಕ್ಕೆ ತಕ್ಕಂತೆ ಆಡಬೇಕಿದೆ. ರಾಜಸ್ಥಾನ ರಾಯಲ್ಸ್ ಪರ ಕಳೆದ ಆವೃತ್ತಿಯಲ್ಲಿ ರಿಯಾನ್ ಪರಾಗ್ ಮಾಡಿದ್ದ ಮ್ಯಾಜಿಕ್ ಈ ಬಾರಿ ಮರುಕಳಿಸಲು ವಿಫಲವಾಗಿದ್ದಾರೆ. ಇನ್ನು ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್ ಸ್ಪೋಟಕ ಆರಂಭ ಒದಗಿಸಿಕೊಡಬೇಕಿದೆ. ಸಂಜು ಸ್ಯಾಮ್ಸನ್ ಬ್ಯಾಟರ್, ವಿಕೆಟ್ ಕೀಪರ್ ಹಾಗೂ ನಾಯಕನಾಗಿ ಯಶಸ್ಸು ಕಂಡುಕೊಳ್ಳಬೇಕಿದೆ. ಇಲ್ಲದಿದ್ದರೇ, ಪ್ಲೇ ಆಫ್ ಹಾದಿ ಮತ್ತಷ್ಟು ದುರ್ಗಮವಾಗಲಿದೆ. ಡೆಲ್ಲಿಯ ಬ್ಯಾಟಿಂಗ್ ಸ್ನೇಹಿ ಪಿಚ್‌ನಲ್ಲಿ ಶಿಮ್ರೊನ್ ಹೆಟ್ಮೇಯರ್, ಧೃವ್ ಜುರೆಲ್ ಹಾಗೂ ನಿತೀಶ್ ರಾಣಾ ಅಬ್ಬರಿಸಲೇಬೇಕಿದೆ, ಇಲ್ಲದಿದ್ದರೇ, ರಾಜಸ್ಥಾನಕ್ಕೆ ಮತ್ತೊಂದು ಸೋಲು ಕಟ್ಟಿಟ್ಟ ಬುತ್ತಿ.
ಒಟ್ಟಾರೆ, ನಿರ್ಣಾಯಕ ಹಂತದಲ್ಲಿ ಉಭಯ ತಂಡಗಳ ನಡುವಿನ ಸೆಣಸಾಟ, ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ. ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ರಾಜಸ್ಥಾನ ರಾಯಲ್ಸ್ ತಂಡಗಳು ಕಳೆದ ಪಂದ್ಯದಲ್ಲಿ ಮುಗ್ಗರಿಸಿದ್ದು, ಶತಾಯಗತಾಯ ಗೆಲುವಿನ ಹಳಿಗೆ ಮರಳಲು ತುದಿಗಾಲಿನಲ್ಲಿ ನಿಂತಿವೆ.
ಇದನ್ನೂ ಓದಿ: ಐಪಿಎಲ್ 2025: ಈ ಸಲ ಚಾಂಪಿಯನ್ ಆಗುವ ತಂಡಕ್ಕೆ ಸಿಗುವ ನಗದು ಬಹುಮಾನ ಎಷ್ಟು?
ಉಭಯ ತಂಡಗಳ ಸಂಭಾವ್ಯ ಆಟಗಾರರ ಪಟ್ಟಿ:
ಡೆಲ್ಲಿ ಕ್ಯಾಪಿಟಲ್ಸ್: ಜೇಕ್ ಫ್ರೇಸರ್ ಮೆಕ್‌ಗುರ್ಕ್, ಕರುಣ್ ನಾಯರ್, ಅಭಿಷೇಕ್ ಪೋರೆಲ್, ಕೆ ಎಲ್ ರಾಹುಲ್(ವಿಕೆಟ್ ಕೀಪರ್), ಟ್ರಿಸ್ಟಿನ್ ಸ್ಟಬ್ಸ್, ಅಕ್ಷರ್ ಪಟೇಲ್(ನಾಯಕ), ಅಶುತೋಷ್ ಶರ್ಮಾ, ವಿಪ್ರಾಜ್ ನಿಗಮ್, ಮಿಚೆಲ್ ಸ್ಟಾರ್ಕ್, ಕುಲ್ದೀಪ್ ಯಾದವ್, ಮೋಹಿತ್ ಶರ್ಮಾ, ಮುಕೇಶ್ ಕುಮಾರ್.
ರಾಜಸ್ಥಾನ ರಾಯಲ್ಸ್: ಯಶಸ್ವಿ ಜೈಸ್ವಾಲ್, ಸಂಜು ಸ್ಯಾಮ್ಸನ್(ನಾಯಕ & ವಿಕೆಟ್ ಕೀಪರ್), ರಿಯಾನ್ ಪರಾಗ್, ಧೃವ್ ಜುರೆಲ್, ಶಿಮ್ರೊನ್ ಹೆಟ್ಮೇಯರ್, ನಿತೀಶ್ ರಾಣಾ, ವನಿಂದು ಹಸರಂಗ, ಜೋಫ್ರಾ ಆರ್ಚರ್, ಮಹೀಶ್ ತೀಕ್ಷಣ, ಸಂದೀಪ್ ಶರ್ಮಾ, ತುಷಾರ್ ದೇಶಪಾಂಡೆ, ಕುಮಾರ್ ಕಾರ್ತಿಕೇಯ
ಪಂದ್ಯ: ಸಂಜೆ 7.30ಕ್ಕೆ
ಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೋ ಹಾಟ್‌ಸ್ಟಾರ್
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.