17 ಯಶಸ್ವಿ ವರ್ಷಗಳ ಬಳಿಕ ಐಪಿಎಲ್ 18ನೇ ಆವೃತ್ತಿಗೆ ಸಜ್ಜಾಗಿದೆ. ಈ ಬಾರಿ ಟೂರ್ನಿಯು ಮಾರ್ಚ್ 22 ರಿಂದ ಮೇ 25 ರವರೆಗೆ ನಡೆಯಲಿದ್ದು, ಭಾರತದ 13 ಕ್ರೀಡಾಂಗಣಗಳು ಆತಿಥ್ಯ ವಹಿಸಲಿವೆ. ಉದ್ಘಾಟನಾ ಪಂದ್ಯದಲ್ಲಿ ಆರ್‌ಸಿಬಿ ಮತ್ತು ಕೆಕೆಆರ್ ತಂಡಗಳು ಸೆಣಸಾಡಲಿವೆ.
ಕೋಲ್ಕತಾ: ಕಳೆದ 17 ವರ್ಷಗಳಿಂದಲೂ ಕ್ರಿಕೆಟ್ ಅಭಿಮಾನಿಗಳಿಗೆ ಭರಪೂರ ಮನರಂಜನೆ ಒದಗಿಸುತ್ತಿರುವ, ಜಾಗತಿಕ ಮಟ್ಟದ ಅತ್ಯಂತ ಶ್ರೇಷ್ಠ ಕ್ರಿಕೆಟ್ ಲೀಗ್ ಎನಿಸಿಕೊಂಡಿರುವ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) ಪ್ರೌಢಾವಸ್ಥೆ ತಲುಪಿದೆ. ಬಹುನಿರೀಕ್ಷಿತ ಟೂರ್ನಿ ಕೆಲ ದಿನಗಳಲ್ಲೇ 18ನೇ ವರ್ಷಕ್ಕೆ ಕಾಲಿಡಲಿದೆ. ಟೂರ್ನಿ ಶನಿವಾರದಿಂದ ಆರಂಭಗೊಳ್ಳಲಿದ್ದು, 2 ತಿಂಗಳ ಕಾಲ ಕ್ರೀಡಾ ಹಬ್ಬ ರಂಗೇರಲಿದೆ.
ಈ ಬಾರಿ ಟೂರ್ನಿ ಮಾ.22ರಿಂದ ಮೇ 25ರ ವರೆಗೂ ನಡೆಯಲಿದೆ. ಬೆಂಗಳೂರು ಸೇರಿದಂತೆ ಭಾರತದ ಒಟ್ಟು 13 ಕ್ರೀಡಾಂಗಣಗಳು ಆತಿಥ್ಯ ವಹಿಸಲಿವೆ. ‘ಈ ಸಲ ಕಪ್ ನಮ್ದೇ’ ಎಂಬ ಹುಮ್ಮಸ್ಸಿನಲ್ಲಿ ಈ ಬಾರಿಯೂ ಟೂರ್ನಿಗೆ ಕಾಲಿಡಲಿರುವ ಆರ್‌ಸಿಬಿ ತಂಡ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಕೆಕೆಆರ್ ವಿರುದ್ಧ ಕೋಲ್ಕತಾದ ಈಡನ್ ಗಾರ್ಡನ್‌ನಲ್ಲಿ ಸೆಣಸಾಡಲಿವೆ. ಬಹುತೇಕ ದಿನ ಒಂದೇ ಪಂದ್ಯ ನಡೆಯಲಿದ್ದು, ಕೆಲ ವಾರಾಂತ್ಯದಲ್ಲಿ ದಿನವೊಂದಕ್ಕೆ 2 ಪಂದ್ಯಗಳು ಆಯೋಜನೆಗೊಳ್ಳಲಿದೆ. ಮಧ್ಯಾಹ್ನದ ಪಂದ್ಯ 3.30ಕ್ಕೆ, ಮತ್ತೊಂದು ಪಂದ್ಯ ಸಂಜೆ 7.30ಕ್ಕೆ ಆರಂಭಗೊಳ್ಳಲಿವೆ.
ಇದನ್ನೂ ಓದಿ: ಐಪಿಎಲ್‌ನಲ್ಲಿ ಒಮ್ಮೆಯೂ ಕ್ಯಾಪ್ಟನ್ ಆಗದ ಟಾಪ್ 3 ದಿಗ್ಗಜ ಕ್ರಿಕೆಟಿಗರಿವರು!
ಟೂರ್ನಿ ಮಾದರಿ ಹೇಗೆ?:
ಟೂರ್ನಿಯಲ್ಲಿ ಒಟ್ಟು 10 ತಂಡಗಳಿದ್ದು, ತಲಾ 5 ತಂಡಗಳ 2 ಗುಂಪುಗಳನ್ನಾಗಿ ವಿಂಗಡಿಸಲಾಗಿದೆ. ತಂಡಗಳ ಈ ವರೆಗಿನ ಸಾಧನೆ ಆಧಾರದಲ್ಲಿ 2 ಗುಂಪುಗಳನ್ನು ರಚಿಸಲಾಗಿದೆ. ಆದರೆ ಈ ಗುಂಪು ವರ್ಚುವಲ್ ರೀತಿ ಇದ್ದು, ಅಂಕಪಟ್ಟಿಯಲ್ಲಿ ಗಣನೆಗೆ ಬರುವುದಿಲ್ಲ. ಚೆನ್ನೈ, ಕೋಲ್ಕತಾ, ರಾಜಸ್ಥಾನ, ಆರ್‌ಸಿಬಿ ಹಾಗೂ ಪಂಜಾಬ್ ಕಿಂಗ್ಸ್ ‘ಎ’ ಗುಂಪಿನಲ್ಲಿವೆ. ಮುಂಬೈ, ಹೈದರಾಬಾದ್, ಗುಜರಾತ್, ಡೆಲ್ಲಿ ಹಾಗೂ ಲಖನೌ ‘ಬಿ’ ಗುಂಪಿನಲ್ಲಿವೆ. ಪ್ರತಿ ತಂಡ ತನ್ನ ಗುಂಪಿನಲ್ಲಿರುವ ಇತರ 4 ತಂಡಗಳ ವಿರುದ್ಧ ತಲಾ 2, ಹಾಗೂ ತನ್ನ ಸಮಾನಾಂತರವಾಗಿ ಮತ್ತೊಂದು ಗುಂಪಿನಲ್ಲಿರುವ ಒಂದು ತಂಡದ ವಿರುದ್ಧ 2 ಪಂದ್ಯ ಆಡಲಿದೆ. ಇನ್ನೊಂದು ಗುಂಪಿನ ಉಳಿದ 4 ತಂಡಗಳ ವಿರುದ್ಧ ತಲಾ 1 ಪಂದ್ಯ ಆಡಲಿದೆ. ಅಂದರೆ ಪ್ರತಿ ತಂಡಕ್ಕೆ ಒಟ್ಟು 14 ಪಂದ್ಯ.
ಲೀಗ್ ಹಂತದಲ್ಲಿ ಅಗ್ರ-2 ಸ್ಥಾನ ಪಡೆದ ತಂಡಗಳು ಕ್ವಾಲಿಫೈರ್-1 ಪ್ರವೇಶಿಸಲಿದ್ದು, ಅದರಲ್ಲಿ ಗೆದ್ದ ತಂಡ ನೇರವಾಗಿ ಫೈನಲ್‌ಗೇರಲಿದೆ. 3 ಮತ್ತು 4ನೇ ಸ್ಥಾನ ಪಡೆದ ತಂಡಗಳು ಎಲಿಮಿನೇಟರ್‌ನಲ್ಲಿ ಮುಖಾಮುಖಿಯಾಗಲಿವೆ. ಅದರಲ್ಲಿ ಗೆದ್ದ ತಂಡ ಕ್ವಾಲಿಫೈರ್-1ರಲ್ಲಿ ಸೋತ ತಂಡದ ವಿರುದ್ಧ ಆಡಬೇಕು. ಗೆದ್ದ ತಂಡ ಫೈನಲ್‌ಗೇರಲಿದೆ.
ಇದನ್ನೂ ಓದಿ: ಆರ್‌ಸಿಬಿ ತವರಿನ ಪಂದ್ಯಗಳ ಟಿಕೆಟ್ ಈ ಸಲವೂ ದುಬಾರಿ! ಒಂದು ಟಿಕೆಟ್ ಬೆಲೆ ಕೇವಲ ₹42,000
ಆತಿಥ್ಯ ಕ್ರೀಡಾಂಗಣಗಳು
ಕ್ರೀಡಾಂಗಣ ಪಂದ್ಯ - ಆಸನ ಸಾಮರ್ಥ್ಯ
ಬೆಂಗಳೂರು 07 - 35000
ಅಹ್ಮದಾಬಾದ್ 07 - 132000
ಚೆನ್ನೈ 07 - 39000
ಡೆಲ್ಲಿ 05 - 35200
ಲಖನೌ 07 - 50000
ಧರ್ಮಶಾಲಾ 03 - 21200
ಗುವಾಹಟಿ 02 - 46000
ಹೈದ್ರಾಬಾದ್ 09 - 55000
ಜೈಪುರ 05 - 25000
ಕೋಲ್ಕತಾ 09 - 68000
ಚಂಡೀಗಢ 04 - 38000
ಮುಂಬೈ 07 - 38100
ವಿಶಾಖಪಟ್ಟಣಂ 02 - 27500
ಟೂರ್ನಿ ಅಂಕಿ-ಅಂಶ
74 ಪಂದ್ಯ: ಈ ಬಾರಿ ಟೂರ್ನಿಯಲ್ಲಿ ಒಟ್ಟು 74 ಪಂದ್ಯಗಳು ನಡೆಯಲಿವೆ.
65 ದಿನ: 18ನೇ ಆವೃತ್ತಿ ಟೂರ್ನಿ ನಡೆಯಲಿರುವ ದಿನಗಳು 65.
12 ದಿನ: ಒಟ್ಟು 12 ದಿನ ಡಬಲ್ ಹೆಡರ್(ದಿನಕ್ಕೆ 2 ಪಂದ್ಯ) ನಡೆಯಲಿವೆ.
ನಗದು ಬಹುಮಾನ:
₹20 ಕೋಟಿ: ಚಾಂಪಿಯನ್ ತಂಡಕ್ಕೆ ₹20 ಕೋಟಿ ನಗದು ಬಹುಮಾನ ಸಿಗಲಿದೆ.
₹13 ಕೋಟಿ: ರನ್ನರ್-ಅಪ್ ತಂಡಕ್ಕೆ ಸಿಗುವ ಬಹುಮಾನ ಮೊತ್ತ ₹13 ಕೋಟಿ.