
ಲಖನೌ: 18ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ 30ನೇ ಪಂದ್ಯದಲ್ಲಿ ಲಖನೌ ಸೂಪರ್ ಜೈಂಟ್ಸ್ ಹಾಗೂ ಚೆನ್ನೈ ಸೂಪರ್ ಜೈಂಟ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯಕ್ಕೂ ಮುನ್ನ ಸತತ 5 ಸೋಲು ಕಂಡು ಕಂಗೆಟ್ಟಿದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡವು 5 ವಿಕೆಟ್ ಅಂತರದ ಭರ್ಜರಿ ಗೆಲುವು ಸಾಧಿಸುವ ಮೂಲಕ ಜಯದ ಹಳಿಗೆ ಮರಳುವಲ್ಲಿ ಯಶಸ್ವಿಯಾಗಿದೆ. ಲಖನೌ ಸೋಲಿಸಿದ ಬೆನ್ನಲ್ಲೇ ಎಂ ಎಸ್ ಧೋನಿ ನೇತೃತ್ವದ ಸಿಎಸ್‌ಕೆ ತಂಡದ ಮೇಲೆ ಮ್ಯಾಚ್ ಫಿಕ್ಸಿಂಗ್ ಆರೋಪ ಕೇಳಿ ಬಂದಿದೆ. ಹೀಗಾಗಿ ಫ್ಯಾನ್ಸ್ ಚೆನ್ನೈ ತಂಡವನ್ನು ಮತ್ತೊಮ್ಮೆ ಐಪಿಎಲ್‌ನಿಂದ ಬ್ಯಾನ್ ಮಾಡಬೇಕು ಎಂದು ಸೋಷಿಯಲ್ ಮೀಡಿಯಾ ಮೂಲಕ ಆಗ್ರಹಿಸಿದ್ದಾರೆ.
ಹೌದು, ಚೆನ್ನೈ ಹಾಗೂ ಲಖನೌ ನಡುವಿನ ಮಹತ್ವದ ಪಂದ್ಯಕ್ಕೆ ಇಲ್ಲಿನ ಏಕಾನ ಕ್ರಿಕೆಟ್ ಸ್ಟೇಡಿಯಂ ಆತಿಥ್ಯ ವಹಿಸಿತ್ತು. ಈ ಪಂದ್ಯದ ಟಾಸ್ ವೇಳೆಯೇ ಮ್ಯಾಚ್ ಫಿಕ್ಸಿಂಗ್ ನಡೆದಿದೆ ಎಂದು ನೆಟ್ಟಿಗರು ಗಂಭೀರ ಆರೋಪ ಮಾಡಿದ್ದಾರೆ.
ಇದನ್ನೂ ಓದಿ: ಸತತ 5 ಸೋಲಿನ ಬಳಿಕ ಕೊನೆಗೂ ಗೆದ್ದ ಸಿಎಸ್‌ಕೆ! ಪಂದ್ಯ ಗೆಲ್ಲಿಸಿದ ಧೋನಿ
ಅಷ್ಟಕ್ಕೂ ಟಾಸ್ ವೇಳೆ ಆಗಿದ್ದೇನು?:
ಲಖನೌ ನಾಯಕ ರಿಷಭ್ ಪಂತ್ ಹಾಗೂ ಚೆನ್ನೈ ನಾಯಕ ಧೋನಿ ಟಾಸ್‌ಗಾಗಿ ಮೈದಾನಕ್ಕೆ ಬಂದಿದ್ದರು. ಈ ವೇಳೆ ಟಾಸ್ ನಿರ್ವಾಹಕ ಮಾಜಿ ಕ್ರಿಕೆಟಿಗ ಮುರುಳಿ ಕಾರ್ತಿಕ್, ಮ್ಯಾಚ್ ರೆಫ್ರಿ ನಾರಾಯಣ ಕುಟ್ಟಿ ಉಪಸ್ಥಿತರಿದ್ದರು. ಆತಿಥೇಯ ಕ್ಯಾಪ್ಟನ್ ರಿಷಭ್ ಪಂತ್ ನಾಣ್ಯ ಚಿಮ್ಮಿಕೆ ಮಾಡಿದರು. ಈ ಸಂದರ್ಭದಲ್ಲಿ ಚೆನ್ನೈ ನಾಯಕ ಧೋನಿ ಬಹಿರಂಗವಾಗಿ ತಮ್ಮ ನಿರ್ಧಾರ ತಿಳಿಸುವ ಬದಲು ಮ್ಯಾಚ್ ರೆಫ್ರಿ ನಾರಾಯಣ ಕುಟ್ಟಿ ಅವರ ಬಳಿ ತಮ್ಮ ನಿರ್ಧಾರವನ್ನು ಸಣ್ಣ ಧ್ವನಿಯಲ್ಲಿ ಹೇಳಿದರು. ಇನ್ನು ಟಾಸ್ ಆಗುತ್ತಿದ್ದಂತೆಯೇ ಮುರುಳಿ ಕಾರ್ತಿಕ್, ಧೋನಿಯವರನ್ನು ಉದ್ದೇಶಿಸಿ, ನೀವು ಟೇಲ್ಸ್ ಅಲ್ವಾ ಹೇಳಿದ್ದು ಎಂದು ಪ್ರಶ್ನಿಸಿದ್ದಾರೆ. ಆಗ ಮ್ಯಾಚ್ ರೆಫ್ರಿ ಆಗಿದ್ದ ನಾರಾಯಣ ಕುಟ್ಟಿ ಹೆಡ್ಸ್ ಎಂದು ಹೇಳುತ್ತಾರೆ. ಈ ವಿಡಿಯೋವೀಗ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ.
ಸಾಮಾನ್ಯವಾಗಿ ಟಾಸ್ ವೇಳೆ ನಾಯಕರಾದವರು ಬಹಿರಂಗವಾಗಿಯೇ ತಮ್ಮ ನಿರ್ಧಾರವನ್ನು ಪ್ರಕಟಿಸುತ್ತಾರೆ. ಆದರೆ ಧೋನಿ, ರೆಫ್ರಿ ಬಳಿ ಗುಟ್ಟಾಗಿ ತಮ್ಮ ನಿರ್ಧಾರ ಹೇಳಿದ್ದೇಕೆ? ಇಲ್ಲೇನೋ ಮ್ಯಾಚ್ ಫಿಕ್ಸಿಂಗ್ ಆಗಿದೆ ಎಂದು ನೆಟ್ಟಿಗರು ಸೋಷಿಯಲ್ ಮೀಡಿಯಾದಲ್ಲಿ ಆರೋಪ ಮಾಡಿದ್ದಾರೆ.
ಇದನ್ನೂ ಓದಿ: ಸನ್‌ರೈಸರ್ಸ್ ಹೈದರಾಬಾದ್ ಆಟಗಾರರು ಉಳಿದುಕೊಂಡಿದ್ದ ಹೋಟೆಲ್‌ನಲ್ಲಿ ಬೆಂಕಿ ಅವಘಡ, ಆಟಗಾರರಿಗೆ ಏನಾಯ್ತು?
ಇನ್ನು ಹೇಗಿತ್ತು ಚೆನ್ನೈ-ಲಖನೌ ಪಂದ್ಯ?
ಟಾಸ್ ಸೋತ ಲಖನೌ ಸೂಪರ್ ಜೈಂಟ್ಸ್ ತಂಡವು ಮೊದಲು ಬ್ಯಾಟಿಂಗ್ ಮಾಡಲಿಳಿಯಿತು. ಲಖನೌ 23 ರನ್ ಗಳಿಸುವಷ್ಟರಲ್ಲಿ ಆರಂಭಿಕ ಬ್ಯಾಟರ್ ಏಯ್ಡನ್ ಮಾರ್ಕ್‌ರಮ್ ಹಾಗೂ ನಂಬಿಗಸ್ಥ ಬ್ಯಾಟರ್ ನಿಕೋಲಸ್ ಪೂರನ್ ವಿಕೆಟ್ ಕಳೆದುಕೊಂಡಿತು. ಇದಾದ ಬಳಿಕ ಮೂರನೇ ವಿಕೆಟ್‌ಗೆ ಮಿಚೆಲ್ ಮಾರ್ಷ್ ಹಾಗೂ ರಿಷಭ್ ಪಂತ್ ಜೋಡಿ ಆಕರ್ಷಕ 50 ರನ್‌ಗಳ ಜತೆಯಾಟವಾಡಿತು. ಇನ್ನು ಮಾರ್ಷ್ 30 ರನ್ ಬಾರಿಸಿದರೆ, ನಾಯಕ ರಿಷಭ್ ಪಂತ್ ಆಕರ್ಷಕ 63 ರನ್ ಸಿಡಿಸಿ ತಂಡಕ್ಕೆ ಆಸರೆಯಾದರು. ಅಂತಿಮವಾಗಿ ಲಖನೌ ತಂಡವು 7 ವಿಕೆಟ್ ಕಳೆದುಕೊಂಡು 166 ರನ್ ಗಳಿಸಲಷ್ಟೇ ಶಕ್ತವಾಯಿತು.
ಇನ್ನು ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಚೆನ್ನೈ ಸೂಪರ್ ಕಿಂಗ್ಸ್ 96 ರನ್‌ಗಳಿಗೆ ಅಗ್ರಕ್ರಮಾಂಕದ 4 ವಿಕೆಟ್ ಕಳೆದುಕೊಂಡಿತು. ಆದರೆ ಕೊನೆಯಲ್ಲಿ ಶಿವಂ ದುಬೆ ಹಾಗೂ ಎಂ ಎಸ್ ಧೋನಿ ಮುರಿಯದ 50+ ರನ್ ಜತೆಯಾಟವಾಡುವ ಮೂಲಕ ಯಾವುದೇ ಅಪಾಯವಿಲ್ಲದೇ ತಂಡವನ್ನು ಗೆಲುವಿನ ದಡ ಸೇರಿಸಿದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.