ಐಪಿಎಲ್ ಹರಾಜಿನಲ್ಲಿ ದುಬಾರಿ ಬೆಲೆಗೆ ಲಖನೌ ತಂಡಕ್ಕೆ ಸೇರ್ಪಡೆಯಾದ ರಿಷಭ್ ಪಂತ್, ಸತತ ವೈಫಲ್ಯ ಅನುಭವಿಸುತ್ತಿದ್ದಾರೆ. ಮುಂಬೈ ವಿರುದ್ಧದ ಪಂದ್ಯದಲ್ಲಿ ಕೇವಲ 2 ರನ್ ಗಳಿಸಿ ಔಟಾದರು. ಹಾರ್ದಿಕ್ ಪಾಂಡ್ಯ ಐಪಿಎಲ್‌ನಲ್ಲಿ 5 ವಿಕೆಟ್ ಪಡೆದ ಮೊದಲ ನಾಯಕ ಎಂಬ ಹೆಗ್ಗಳಿಕೆ ಪಡೆದರು.
ಲಖನೌ: ಕಳೆದ ಐಪಿಎಲ್ ಹರಾಜಿನಲ್ಲಿ ಬರೋಬ್ಬರಿ ₹27 ಕೋಟಿಗೆ ಲಖನೌ ಸೂಪರ್ ಜೈಂಟ್ಸ್ ಪಾಲಾಗಿದ್ದ ರಿಷಭ್ ಪಂತ್, ತಮ್ಮ ಕಳಪೆ ಪ್ರದರ್ಶನ ಮುಂದುವರಿಸಿದ್ದಾರೆ. ಅವರು ಸತತ 4ನೇ ಪಂದ್ಯದಲ್ಲೂ ವಿಫಲರಾಗಿದ್ದು, ಲಯಕ್ಕೆ ಮರಳಲು ಪರದಾಡುತ್ತಿದ್ದಾರೆ.
ಶುಕ್ರವಾರ ಮುಂಬೈ ಇಂಡಿಯನ್ಸ್ ವಿರುದ್ಧ ಪಂದ್ಯದಲ್ಲಿ ಲಖನೌ ನಾಯಕ ರಿಷಭ್ ಕೇವಲ 2 ರನ್‌ಗೆ ಔಟಾದರು. 6 ಎಸೆತಗಳನ್ನು ಎದುರಿಸಿದ ಅವರು, ಹಾರ್ದಿಕ್ ಪಾಂಡ್ಯ ಎಸೆತದಲ್ಲಿ ರಿಟರ್ನ್ ಕ್ಯಾಚ್ ನೀಡಿ ನಿರ್ಗಮಿಸಿದರು. ಇದು ಟೂರ್ನಿಯ 4 ಪಂದ್ಯಗಳಲ್ಲಿ ಅವರ ಒಂದಂಕಿ ಮೊತ್ತ. ಆರಂಭಿಕ ಪಂದ್ಯದಲ್ಲಿ ಡೆಲ್ಲಿ ವಿರುದ್ಧ ಶೂನ್ಯಕ್ಕೆ ಔಟಾಗಿದ್ದ ರಿಷಭ್, ಸನ್‌ರೈಸರ್ಸ್ ವಿರುದ್ಧ 15 ರನ್ ಗಳಿಸಿದ್ದರು. ಬಳಿಕ ಪಂಜಾಬ್ ವಿರುದ್ಧವೂ ವಿಫಲರಾಗಿದ್ದ ಅವರು, ಕೇವಲ 2 ರನ್ ಬಾರಿಸಿದ್ದರು. ಅಂದರೆ ಟೂರ್ನಿಯಲ್ಲಿ ಅವರ ಒಟ್ಟು ಸ್ಕೋರ್ 19 ರನ್.
ಪಂಜಾಬ್ vs ರಾಜಸ್ಥಾನ: ಹ್ಯಾಟ್ರಿಕ್ ಗೆಲುವಿಗಾಗಿ ಪಂಜಾಬ್ ಹೋರಾಟ!
ಕಳೆದ ವರ್ಷದ ವರೆಗೂ ಡೆಲ್ಲಿ ಕ್ಯಾಪಿಟಲ್ಸ್ ನಾಯಕರಾಗಿದ್ದ ರಿಷಭ್‌ರನ್ನು ತಂಡ ರಿಟೈನ್ ಮಾಡಿಕೊಂಡಿರಲಿಲ್ಲ. ಹೀಗಾಗಿ ಹರಾಜಿನಲ್ಲಿ ಲಖನೌ ಫ್ರಾಂಚೈಸಿಯು ದುಬಾರಿ ಮೊತ್ತ ನೀಡಿ ಖರೀದಿಸಿತ್ತು. ಆದರೆ ತಮ್ಮ ನಿರೀಕ್ಷೆ ಉಳಿಸಿಕೊಳ್ಳಲು ರಿಷಭ್ ವಿಫಲರಾಗುತ್ತಿದ್ದಾರೆ. ಲಖನೌ ತಂಡ ಏ.8ರಂದು ಕೋಲ್ಕತಾ ವಿರುದ್ಧ ಆಡಲಿದ್ದು, ಆ ಪಂದ್ಯದಲ್ಲಾದರೂ ರಿಷಭ್ ದೊಡ್ಡ ಮೊತ್ತ ಕಲೆಹಾಕುವ ವಿಶ್ವಾಸದಲ್ಲಿದ್ದಾರೆ.
5 ವಿಕೆಟ್ ಗೊಂಚಲು: ಹಾರ್ದಿಕ್ ಐಪಿಎಲ್ ಮೊದಲ ನಾಯಕ
ಐಪಿಎಲ್ ಇನ್ನಿಂಗ್ಸ್‌ನಲ್ಲಿ ಐದು ವಿಕೆಟ್ ಗೊಂಚಲು ಪಡೆದ ಮೊದಲ ನಾಯಕ ಎಂಬ ಹೆಗ್ಗಳಿಕೆಗೆ ಹಾರ್ದಿಕ್ ಪಾಂಡ್ಯ ಪಾತ್ರರಾಗಿದ್ದಾರೆ. ಶುಕ್ರವಾರ ಲಖನೌ ವಿರುದ್ಧ ಪಂದ್ಯದಲ್ಲಿ ಮುಂಬೈನ ಹಾರ್ದಿಕ್ 4 ಓವರ್‌ಗಳಲ್ಲಿ 36 ರನ್ ನೀಡಿ 5 ವಿಕೆಟ್ ಪಡೆದರು. ಅವರು ಮಾರ್ಕ್‌ರಮ್, ನಿಕೋಲಸ್ ಪೂರನ್, ರಿಷಭ್ ಪಂತ್, ಡೇವಿಡ್ ಮಿಲ್ಲರ್, ಆಕಾಶ್‌ದೀಪ್‌ರನ್ನು ಔಟ್ ಮಾಡಿದರು.
ಹ್ಯಾಟ್ರಿಕ್ ಸೋಲಿನ ಭೀತಿಯಲ್ಲಿರುವ ಚೆನ್ನೈಗೆ ಧೋನಿ ಕ್ಯಾಪ್ಟನ್? ಗಾಯಕ್ವಾಡ್‌ಗೆ ಏನಾಯ್ತು?
ನಾಯಕನಾಗಿ ಗರಿಷ್ಠ ವಿಕೆಟ್: ಪಾಂಡ್ಯ ನಂ.2
ಐಪಿಎಲ್‌ನಲ್ಲಿ ನಾಯಕನಾಗಿ ಗರಿಷ್ಠ ವಿಕೆಟ್ ಕಿತ್ತ ಆಟಗಾರರ ಪಟ್ಟಿಯಲ್ಲಿ ಹಾರ್ದಿಕ್ ಪಾಂಡ್ಯ ಜಂಟಿ 2ನೇ ಸ್ಥಾನಕ್ಕೇರಿದ್ದಾರೆ. ಪಟ್ಟಿಯಲ್ಲಿ ಶೇನ್ ವಾರ್ನ್ ಅಗ್ರಸ್ಥಾನದಲ್ಲಿದ್ದಾರೆ. ಅವರು 57 ವಿಕೆಟ್ ಪಡೆದಿದ್ದಾರೆ. ಹಾರ್ದಿಕ್ ಹಾಗೂ ಅನಿಲ್ ಕುಂಬ್ಳೆ ತಲಾ 30 ವಿಕೆಟ್ ಕಬಳಿಸಿದ್ದಾರೆ. ಆರ್.ಅಶ್ವಿನ್ 25, ಪ್ಯಾಟ್ ಕಮಿನ್ಸ್ 21 ವಿಕೆಟ್ ಕಿತ್ತಿದ್ದಾರೆ.