
ಮುಂಬೈ(ಫೆ.22): 2024ನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ವೇಳಾಪಟ್ಟಿ ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿದೆ. ಈ ಕುರಿತಾಗಿ ಲೇಟೆಸ್ಟ್ ಅಪ್‌ಡೇಟ್ ಹೊರಬಿದ್ದಿದ್ದು, ಐಪಿಎಲ್‌ನ ಬದ್ಧ ಎದುರಾಳಿಗಳೆಂದೇ ಬಿಂಬಿತವಾಗಿರುವ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳ ನಡುವೆ ಉದ್ಘಾಟನಾ ಪಂದ್ಯ ನಡೆಯಲಿದೆ ಎಂದು ವರದಿಯಾಗಿದೆ.
ಹೌದು, ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡವು, ಫಾಫ್ ಡು ಪ್ಲೆಸಿಸ್ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಎದುರಿಸಲಿದೆ. ಈ ಹೈವೋಲ್ಟೇಜ್ ಪಂದ್ಯಕ್ಕೆ ಚೆನ್ನೈನ ಚೆಪಾಕ್ ಮೈದಾನ ಆತಿಥ್ಯ ವಹಿಸುವ ಸಾಧ್ಯತೆಯಿದ ಎಂದು ವರದಿಯಾಗಿದೆ.
ಸಮಾಚಾರ್ ಏಜೆನ್ಸಿಯ IANS ವರದಿಯ ಪ್ರಕಾರ, 2024ರ ಐಪಿಎಲ್ ಟೂರ್ನಿಯ ಮಾರ್ಚ್ 22ರಿಂದ ಆರಂಭವಾಗಲಿದ್ದು, ಉದ್ಘಾಟನಾ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಕಾದಾಡಲಿವೆ.
ಸಾನಿಯಾಗೆ ಕೈಕೊಟ್ಟಿದ್ದೇಕೆ ಶೋಯೆಬ್ ಮಲಿಕ್..? ಇಲ್ಲಿದೆ ನೋಡಿ ಹೊಸ ಅಪ್‌ಡೇಟ್
ಈಗಾಗಲೇ ಐಪಿಎಲ್ ಚೇರ್‌ಮನ್ ಅರುಣ್ ಧುಮಾಲ್ ನೀಡಿರುವ ಮಾಹಿತಿಯಂತೆ ಮುಂಬರುವ ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಮೊದಲ 15 ದಿನದ ಐಪಿಎಲ್ ವೇಳಾಪಟ್ಟಿಯನ್ನು ಮೊದಲ ಹಂತದಲ್ಲಿ ಪ್ರಕಟಿಸಲಾಗುವುದು ಎಂದು ತಿಳಿಸಿದ್ದಾರೆ. ಇನ್ನು ಕೆಲವು ಮಾಧ್ಯಮ ವರದಿಗಳ ಪ್ರಕಾರ ಇಂದೇ 17ನೇ ಆವೃತ್ತಿಯ ಐಪಿಎಲ್ ಟೂರ್ನಿಯ ಮೊದಲ ಹಂತದ ವೇಳಾಪಟ್ಟಿ ರಿಲೀಸ್ ಆಗಲಿದೆ ಎನ್ನಲಾಗುತ್ತಿದೆ.
ಈ ಮೊದಲು ಐಪಿಎಲ್ ಚೇರ್‌ಮನ್ ಅರುಣ್ ಧುಮಾಲ್ ಕೂಡಾ ಇದೇ ಮಾತನ್ನು ಹೇಳಿದ್ದರು. ನಾವು ಮಾರ್ಚ್ 22ರಿಂದ ಐಪಿಎಲ್ ಟೂರ್ನಿ ಆಯೋಜಿಸಲು ಯೋಚಿಸುತ್ತಿದ್ದೇವೆ. ಲೋಕಸಭಾ ಚುನಾವಣೆಯ ಹೊರತಾಗಿಯೂ ಸಂಪೂರ್ಣ ಐಪಿಎಲ್ ಟೂರ್ನಿಯನ್ನು ತಾವು ಭಾರತದಲ್ಲೇ ಆಯೋಜಿಸುವುದಾಗಿಯೂ ಅರುಣ್ ಧುಮಾಲ್ ಹೇಳಿದ್ದರು.
ಐಸಿಸಿ ಟಿ20 ವಿಶ್ವಕಪ್ ಜೂನ್ 1ರಿಂದ ಆರಂಭಗೊಳ್ಳಲಿರುವ ಕಾರಣ ಐಪಿಎಲ್ ಕೂಡಾ ಬೇಗನೇ ಮುಕ್ತಾಯಗೊಳಿಸುವ ಅನಿವಾರ್ಯತೆ ಬಿಸಿಸಿಐಗೆ ಇದೆ. ಹೀಗಾಗಿ ಮೇ 26ರಂದು ಐಪಿಎಲ್ ಫೈನಲ್ ನಡೆಸಲು ಬಿಸಿಸಿಐ ಚಿಂತನೆ ನಡೆಸುತ್ತಿದೆ ಎಂದು ತಿಳಿದುಬಂದಿದೆ.
ವಿರಾಟ್ ಕೊಹ್ಲಿ ಮಗ ಅಕಾಯ್ ಹೆಸರಲ್ಲಿ ನೂರಾರು ನಕಲಿ ಇನ್‌ಸ್ಟಾ ಖಾತೆ!
2024ರ ಐಪಿಎಲ್‌ನಲ್ಲೂ ನಡೆಯಲಿವೆ 74 ಮ್ಯಾಚ್:
ಮಾಧ್ಯಮಗಳ ವರದಿಯ ಪ್ರಕಾರ 2024ರ ಐಪಿಎಲ್ ಟೂರ್ನಿಯು ಕಳೆದ ವರ್ಷ ನಡೆದ ರೀತಿಯಲ್ಲಿಯೇ ನಡೆಯಲಿದೆ. ಕಳೆದ ಬಾರಿಯ ಐಪಿಎಲ್ ಟೂರ್ನಿಯಲ್ಲಿ 74 ಪಂದ್ಯಗಳು ನಡೆದಿದ್ದವು. ಳೆದ ಬಾರಿ ಕೇವಲ 60 ದಿನದಲ್ಲಿ 74 ಪಂದ್ಯಗಳು ನಡೆದಿದ್ದವು. ಆದರೆ ಈ ಬಾರಿ ಐಪಿಎಲ್ ಟೂರ್ನಿಯು 67 ದಿನಗಳ ಕಾಲ ನಡೆಯಲಿದೆ ಎನ್ನಲಾಗುತ್ತಿದೆ.
2019ರಲ್ಲೂ ಭಾರತದಲ್ಲೇ ನಡೆದಿದ್ದ ಪೂರ್ಣ ಐಪಿಎಲ್
ಲೋಕಸಭೆ ಚುನಾವಣೆ ಕಾರಣಕ್ಕೆ ಐಪಿಎಲ್ ಬೇರೆ ದೇಶದಲ್ಲಿ ನಡೆಯಬಹುದು ಎಂದು ಆರಂಭದಲ್ಲಿ ಊಹಾಪೋಹ ಹರಡಿದ್ದವು. ಆದರೆ ಅದನ್ನು ಐಪಿಎಲ್ ಮುಖ್ಯಸ್ಥ ಅಲ್ಲಗಳೆದಿದ್ದಾರೆ. ಈ ಮೊದಲು 2009ರಲ್ಲಿ ಲೋಕಸಭೆ ಚುನಾವಣೆ ಕಾರಣಕ್ಕೆ ಟೂರ್ನಿಯನ್ನು ಸಂಪೂರ್ಣವಾಗಿ ದಕ್ಷಿಣ ಆಫ್ರಿಕಾಕ್ಕೆ ಸ್ಥಳಾಂತರಿಸಲಾಗಿತ್ತು. ಆ ಬಳಿಕ 2014ರಲ್ಲಿ ಆರಂಭದ ಕೆಲ ಪಂದ್ಯಗಳು ಯುಎಇಯಲ್ಲಿ ನಡೆದಿದ್ದರೆ, ಬಳಿಕ ಟೂರ್ನಿಯನ್ನು ಭಾರತದಲ್ಲೇ ಆಯೋಜಿಸಲಾಗಿತ್ತು. 2019ರಲ್ಲಿ ಚುನಾವಣೆ ಹೊರತಾಗಿಯೂ ಟೂರ್ನಿಯನ್ನು ಭಾರತದಲ್ಲೇ ನಡೆಸಲಾಗಿತ್ತು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.