ಒಂದು ವೇಳೆ ಆರ್‌ಸಿಬಿ ಈ ಪಂದ್ಯದಲ್ಲೂ ಸೋಲುಂಡರೆ, ಆಗ ಬಾಕಿ ಉಳಿಯುವ ಎಂಟೂ ಪಂದ್ಯಗಳನ್ನು ಗೆಲ್ಲಬೇಕಾಗಬಹುದು. ಈ ಪಂದ್ಯದಲ್ಲಿ ಗೆಲ್ಲುವುದರ ಜೊತೆಗೆ ಸ್ಥಿರತೆ ಕಾಪಾಡಿಕೊಳ್ಳುವುದರ ಕಡೆಗೆ ಹೆಚ್ಚಿನ ಗಮನ ಹರಿಸುವತ್ತ ಆರ್‌ಸಿಬಿ ಗಮನ ಹರಿಸಬೇಕಿದೆ.
ಮುಂಬೈ(ಏ.11): ಐಪಿಎಲ್ 17ನೇ ಆವೃತ್ತಿಯ ಆರಂಭಗೊಂಡು ಇನ್ನೂ 3 ವಾರವೂ ಕಳೆದಿಲ್ಲ, ಆಗಲೇ ಆರ್‌ಸಿಬಿ ಮಾಡು ಇಲ್ಲವೇ ಮಡಿ ಸ್ಥಿತಿ ತಲುಪಿದೆ. ಗುರುವಾರ ವಾಂಖೇಡೆ ಕ್ರೀಡಾಂಗಣದಲ್ಲಿ ತನ್ನಂತೆಯೇ ಕಠಿಣ ಪರಿಸ್ಥಿತಿ ಎದುರಿಸುತ್ತಿರುವ ಮುಂಬೈ ಇಂಡಿಯನ್ಸ್ ವಿರುದ್ಧ ಸೆಣಸಲಿದೆ.
ಆಡಿರುವ 5 ಪಂದ್ಯಗಳಲ್ಲಿ ಕೇವಲ 1ರಲ್ಲಿ ಗೆದ್ದಿರುವ ರಾಯಲ್ ಚಾಲೆಂಜರ್ಸ್, ಪ್ಲೇ-ಆಫ್ ರೇಸ್‌ನಲ್ಲಿ ಉಳಿಯಬೇಕಿದ್ದರೆ ಬಾಕಿ ಇರುವ 9 ಪಂದ್ಯಗಳಲ್ಲಿ ಕನಿಷ್ಠ 7ರಲ್ಲಿ ಗೆಲ್ಲಬೇಕಿದೆ. ತಂಡದ ನೆಟ್ ರನ್‌ರೇಟ್ ಕೂಡ ಕಳಪೆಯಾಗಿರುವ ಕಾರಣ, ಕನಿಷ್ಠ 8 ಗೆಲುವುಗಳು ಬೇಕಾಗಬಹುದು.
ಒಂದು ವೇಳೆ ಆರ್‌ಸಿಬಿ ಈ ಪಂದ್ಯದಲ್ಲೂ ಸೋಲುಂಡರೆ, ಆಗ ಬಾಕಿ ಉಳಿಯುವ ಎಂಟೂ ಪಂದ್ಯಗಳನ್ನು ಗೆಲ್ಲಬೇಕಾಗಬಹುದು. ಈ ಪಂದ್ಯದಲ್ಲಿ ಗೆಲ್ಲುವುದರ ಜೊತೆಗೆ ಸ್ಥಿರತೆ ಕಾಪಾಡಿಕೊಳ್ಳುವುದರ ಕಡೆಗೆ ಹೆಚ್ಚಿನ ಗಮನ ಹರಿಸುವತ್ತ ಆರ್‌ಸಿಬಿ ಗಮನ ಹರಿಸಬೇಕಿದೆ.
IPL 2024 ರಾಜಸ್ಥಾನ ರಾಯಲ್‌ಗೆ ಮೊದಲ ಸೋಲಿನ ಶಾಕ್!
ಆರ್‌ಸಿಬಿ ತನ್ನ ಬ್ಯಾಟಿಂಗ್ ಪಡೆ ಅತ್ಯಂತ ಬಲಿಷ್ಠವಾಗಿದೆ ಎಂದು ನಂಬಿಕೊಂಡು ಟೂರ್ನಿಗೆ ಕಾಲಿಟ್ಟಿತ್ತು. ಆದರೆ ಬ್ಯಾಟಿಂಗ್ ವಿಭಾಗ ದೊಡ್ಡ ಸಮಸ್ಯೆಯಾಗಿ ಕಾಡುತ್ತಿದೆ. ವಿರಾಟ್ ಕೊಹ್ಲಿ ಮೇಲೆ ತಂಡ ಅತಿಯಾಗಿ ಅವಲಂಬಿತಗೊಂಡಿದೆ. ಅವರ ಸ್ಟ್ರೈಕ್‌ರೇಟ್ ಬಗ್ಗೆ ಚರ್ಚೆ ನಡೆಯುತ್ತಿದೆಯಾದರೂ, ಕೊಹ್ಲಿಯನ್ನು ಹೊರತುಪಡಿಸಿ ಮತ್ತ್ಯಾರೂ ರನ್ ಕಲೆಹಾಕುತ್ತಿಲ್ಲ.
ಫಾಫ್ ಡು ಪ್ಲೆಸಿಸ್ 5 ಪಂದ್ಯಗಳಲ್ಲಿ 109 ರನ್ ಗಳಿಸಿದರೆ, ಮ್ಯಾಕ್ಸ್‌ವೆಲ್ ಗಳಿಕೆ ಕೇವಲ 32 ರನ್. ಗ್ರೀನ್ 68, ಪಾಟೀದಾರ್ 50, ರಾವತ್ 48 ರನ್ ಗಳಿಸಿದ್ದಾರೆ. ಆರ್‌ಸಿಬಿ ಬ್ಯಾಟರ್‌ಗಳು ತಮ್ಮ ತಂಡದ ಬೌಲಿಂಗ್ ಗುಣಮಟ್ಟವನ್ನು ಗಮನದಲ್ಲಿಟ್ಟುಕೊಂಡು ಆಡಬೇಕಿದೆ. ವಾಂಖೇಡೆ ಕೂಡ ಬ್ಯಾಟರ್‌ಗಳ ಪಾಲಿಗೆ ಸ್ವರ್ಗ ಎನಿಸಿದ್ದು, ಬೆಂಗಳೂರು ಪಡೆ ಬೃಹತ್ ಮೊತ್ತ ಗಳಿಸಲು ಮಾನಸಿಕವಾಗಿ ಸಜ್ಜಾಗಬೇಕಿದೆ.
ಈ ಪಂದ್ಯದಲ್ಲಾದರೂ ಸ್ಫೋಟಕ ಆಲ್ರೌಂಡರ್ ವಿಲ್ ಜ್ಯಾಕ್ಸ್, ಕರ್ನಾಟಕದ ಆಲ್ರೌಂಡರ್ ಮನೋಜ್ ಭಾಂಡಗೆ, ವೇಗಿ ವೈಶಾಖ್ ವಿಜಯ್‌ಕುಮಾರ್‌ರನ್ನು ಆಡಿಸುತ್ತಾ ಎನ್ನುವ ಕುತೂಹಲ ಅಭಿಮಾನಿಗಳಲ್ಲಿದೆ.
ಪ್ರೀತಿಯ ಮಡದಿಗಾಗಿ ದಿಢೀರ್ ನಿವೃತ್ತಿ ತಗೊಂಡ್ರಾ ಧೋನಿ..? ಇಲ್ಲಿದೆ ಇಂಟ್ರೆಸ್ಟಿಂಗ್ ಮಾಹಿತಿ
ಮತ್ತೊಂದೆಡೆ ಮುಂಬೈ ಇಂಡಿಯನ್ಸ್ ಸ್ಥಿತಿ ಏನೂ ವಿಭಿನ್ನವಾಗಿಲ್ಲ. ಹ್ಯಾಟ್ರಿಕ್ ಸೋಲಿನೊಂದಿಗೆ ಅಭಿಯಾನ ಆರಂಭಿಸಿದ್ದ ಮುಂಬೈ, ಕಳೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಗೆಲುವು ಸಾಧಿಸಿ ಖಾತೆ ತೆರೆದಿತ್ತು. ಆದರೆ ತಂಡದಲ್ಲಿರುವ ಸಮಸ್ಯೆಗಳೆಲ್ಲವೂ ಸಂಪೂರ್ಣವಾಗಿ ಬಗೆಹರಿದಂತೆ ಕಾಣುತ್ತಿಲ್ಲ.
ಡೆಲ್ಲಿ ವಿರುದ್ಧ ಕೊನೆಯ ಓವರಲ್ಲಿ ರೊಮಾರಿಯೋ ಶೆಫರ್ಡ್ ಸಿಡಿಲಬ್ಬರದ ಆಟವಾಡಿದ ಕಾರಣ, ಮುಂಬೈ ಬೃಹತ್ ಮೊತ್ತ ಪೇರಿಸಿತ್ತು. ಮತ್ತೊಮ್ಮೆ ಅಂತಹ ಅಸಾಧಾರಣ ಆಟ ಪ್ರದರ್ಶಿಸಿ ಸತತ 2ನೇ ಜಯ ಸಾಧಿಸಲು ಪಾಂಡ್ಯ ಪಡೆ ಕಾಯುತ್ತಿದೆ.
ಒಟ್ಟು ಮುಖಾಮುಖಿ: 32
ಆರ್‌ಸಿಬಿ: 13
ಮುಂಬೈ: 19
ಸಂಭವನೀಯ ಆಟಗಾರರ ಪಟ್ಟಿ
ಆರ್‌ಸಿಬಿ: ಡು ಪ್ಲೆಸಿ (ನಾಯಕ), ಕೊಹ್ಲಿ, ಪಾಟೀದಾರ್/ಲೊಮ್ರೊರ್, ಮ್ಯಾಕ್ಸ್‌ವೆಲ್, ಗ್ರೀನ್/ಜ್ಯಾಕ್ಸ್, ಕಾರ್ತಿಕ್, ಡಾಗರ್, ಸೌರವ್/ಮನೋಜ್, ಟಾಪ್ಲಿ/ಫರ್ಗ್ಯೂಸನ್, ಸಿರಾಜ್, ಯಶ್, ವೈಶಾಖ್.
ಮುಂಬೈ: ರೋಹಿತ್, ಕಿಶನ್, ಸೂರ್ಯಕುಮಾರ್, ಹಾರ್ದಿಕ್(ನಾಯಕ), ತಿಲಕ್ ವರ್ಮಾ, ಟಿಮ್ ಡೇವಿಡ್, ಶೆಫರ್ಡ್, ಮೊಹಮದ್ ನಬಿ, ಕೋಟ್ಜೀ, ಪೀಯೂಷ್ ಚಾವ್ಲಾ, ಬುಮ್ರಾ, ಆಕಾಶ್ ಮಧ್ವಾಲ್.
ಪಂದ್ಯ ಆರಂಭ: ಸಂಜೆ 7.30ಕ್ಕೆ
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೋ ಸಿನಿಮಾ