IPL 2024: ಲಖನೌ ಎದುರು ರಾಜಸ್ಥಾನ ರಾಯಲ್ಸ್‌ಗೆ ಭರ್ಜರಿ ಜಯ, ಪ್ಲೇ ಆಫ್ ಟಿಕೆಟ್ ಬಹುತೇಕ ಕನ್ಫರ್ಮ್

By Naveen Kodase  |  First Published Apr 28, 2024, 6:21 AM IST

ಇಲ್ಲಿನ ಏಕಾನ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಆತಿಥೇಯ ಕೆ ಎಲ್ ರಾಹುಲ್ ನೇತೃತ್ವದ ಲಖನೌ ಸೂಪರ್ ಜೈಂಟ್ಸ್ ನೀಡಿದ್ದ 197 ರನ್‌ಗಳ ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ರಾಜಸ್ಥಾನ ರಾಯಲ್ಸ್ ತಂಡವು ಉತ್ತಮ ಆರಂಭವನ್ನೇ ಪಡೆಯಿತು.


ಲಖನೌ: ರಾಜಸ್ಥಾನ ರಾಯಲ್ಸ್‌ ಈ ಆವೃತ್ತಿಯಲ್ಲಿ 8ನೇ ಜಯ ದಾಖಲಿಸಿದ್ದು, ಪ್ಲೇ-ಆಫ್‌ ಪ್ರವೇಶಿಸುವುದು ಬಹುತೇಕ ಖಚಿತವಾಗಿದೆ. ಶನಿವಾರ ನಡೆದ ಲಖನೌ ಸೂಪರ್‌ ಜೈಂಟ್ಸ್‌ ವಿರುದ್ಧದ ಪಂದ್ಯದಲ್ಲಿ ರಾಯಲ್ಸ್‌ 7 ವಿಕೆಟ್‌ ಜಯ ಸಾಧಿಸಿತು. ಲಖನೌ 5 ವಿಕೆಟ್‌ಗೆ 196 ರನ್‌ ಗಳಿಸಿದರೆ, 3 ವಿಕೆಟ್‌ ಕಳೆದುಕೊಂಡ ರಾಯಲ್ಸ್‌, 1 ಓವರ್‌ ಬಾಕಿ ಇರುವಂತೆಯೇ 199 ರನ್‌ ಕಲೆಹಾಕಿ ಜಯಿಸಿತು.

ಇಲ್ಲಿನ ಏಕಾನ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಆತಿಥೇಯ ಕೆ ಎಲ್ ರಾಹುಲ್ ನೇತೃತ್ವದ ಲಖನೌ ಸೂಪರ್ ಜೈಂಟ್ಸ್ ನೀಡಿದ್ದ 197 ರನ್‌ಗಳ ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ರಾಜಸ್ಥಾನ ರಾಯಲ್ಸ್ ತಂಡವು ಉತ್ತಮ ಆರಂಭವನ್ನೇ ಪಡೆಯಿತು. ಮೊದಲ ವಿಕೆಟ್‌ಗೆ ಯಶಸ್ವಿ ಜೈಸ್ವಾಲ್ ಹಾಗೂ ಜೋಸ್ ಬಟ್ಲರ್ ಜೋಡಿ 5.5 ಓವರ್‌ಗಳಲ್ಲಿ 60 ರನ್‌ಗಳ ಜತೆಯಾಟವಾಡಿತು. ಬಟ್ಲರ್ 34 ರನ್ ಬಾರಿಸಿದರೆ ಜೈಸ್ವಾಲ್ 24 ರನ್ ಗಳಿಸಿ ಸತತ ಎರಡು ಎಸೆತಗಳಲ್ಲಿ ಈ ಇಬ್ಬರು ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿದರು.

Tap to resize

Latest Videos

ಇನ್ನು ಇದರ ಬೆನ್ನಲ್ಲೇ ಇನ್‌ಫಾರ್ಮ್ ಬ್ಯಾಟರ್ ರಿಯಾನ್ ಪರಾಗ್ ಕೂಡಾ ಹೆಚ್ಚುಹೊತ್ತು ನಿಲ್ಲಲಿಲ್ಲ ಪರಾಗ್ 14 ರನ್ ಗಳಿಸಿ ಅಮಿತ್ ಮಿಶ್ರಾಗೆ ವಿಕೆಟ್ ಒಪ್ಪಿಸಿದರು. ಈ ವೇಳೆಗೆ ರಾಜಸ್ಥಾನ ರಾಯಲ್ಸ್ ತಂಡವು 78 ರನ್‌ಗಳಿಗೆ ಮೂರು ವಿಕೆಟ್ ಕಳೆದುಕೊಂಡು ಕೆಲಕಾಲ ಆತಂಕ್ಕೆ ಒಳಗಾಯಿತು.

ಗೆಲುವಿನ ದಡ ಸೇರಿಸಿದ ಸಂಜು-ಜುರೆಲ್: ಈ ವೇಳೆ ನಾಲ್ಕನೇ ವಿಕೆಟ್‌ಗೆ ಜತೆಯಾದ ನಾಯಕ ಸಂಜು ಸ್ಯಾಮ್ಸನ್ ಹಾಗೂ ಧೃವ್ ಜುರೆಲ್ ಮುರಿಯದ ಶತಕದ ಜತೆಯಾಟವಾಡುವ ಮೂಲಕ ತಂಡವನ್ನು ಇನ್ನೂ ಒಂದು ಓವರ್ ಬಾಕಿ ಇರುವಂತೆಯೇ ಗೆಲುವಿನ ದಡ ಸೇರಿಸಿದರು. ಸಂಜು ಸ್ಯಾಮ್ಸನ್ ಕೇವಲ 33 ಎಸೆತಗಳಲ್ಲಿ 7 ಬೌಂಡರಿ ಹಾಗೂ 4 ಸಿಕ್ಸರ್ ಸಹಿತ ಅಜೇಯ 71 ರನ್ ಬಾರಿಸಿದರೆ, ಧೃವ್ ಜುರೆಲ್ 34 ಎಸೆತಗಳಲ್ಲಿ 5 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ ಅಜೇಯ 52 ರನ್ ಬಾರಿಸಿದರು.

ಇನ್ನು ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್ ಮಾಡಿದ ಲಖನೌ ಸೂಪರ್ ಜೈಂಟ್ಸ್ ತಂಡವು ಆರಂಭಿಕ ಆಘಾತದ ಹೊರತಾಗಿಯೂ ನಾಯಕ ಕೆ ಎಲ್ ರಾಹುಲ್(76) ಹಾಗೂ ದೀಪಕ್ ಹೂಡಾ(50) ಬಾರಿಸಿದ ಸ್ಪೋಟಕ ಅರ್ಧಶತಕಗಳ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 196 ರನ್ ಬಾರಿಸಿತ್ತು.

click me!