IPL 2024: ವ್ಯರ್ಥವಾದ ಕ್ಲಾಸೆನ್‌ ಸ್ಪೋಟಕ ಇನ್ನಿಂಗ್ಸ್‌, ಕೆಕೆಆರ್‌ಗೆ ಗೆಲುವು ನೀಡಿದ ರಾಣಾ!

By Santosh NaikFirst Published Mar 23, 2024, 11:28 PM IST
Highlights


ಹೆನ್ರಿಚ್‌ ಕ್ಲಾಸೆನ್‌ ಅವರ ಸ್ಪೋಟಕ ಬ್ಯಾಟಿಂಗ್‌ ಸಾಹಸದಿಂದ ಸನ್‌ರೈಸರ್ಸ್‌ ಹೈದರಾಬಾದ್‌ ಗೆಲುವಿನ ಸನಿಹ ಬಂದಿತ್ತಾದರೂ, ಕೊನೆಯ ಐದು ಎಸೆತಗಳಲ್ಲಿ 7 ರನ್‌ಗಳನ್ನು ಯಶಸ್ವಿಯಾಗಿ ರಕ್ಷಿಸಿಕೊಂಡ ಹರ್ಷಿತ್‌ ರಾಣಾ ಕೆಕೆಆರ್‌ ತಂಡ ಗೆಲುವಿಗೆ ಕಾರಣರಾದರು.

ಕೋಲ್ಕತ್ತಾ (ಮಾ.13):  ಹೆನ್ರಿಚ್‌ ಕ್ಲಾಸೆನ್‌ ಅವರ ಸ್ಪೋಟಕ ಬ್ಯಾಟಿಂಗ್‌ ಸಾಹಸದಿಂದ ಸನ್‌ರೈಸರ್ಸ್‌ ಹೈದರಾಬಾದ್‌ ತಂಡ ಐಪಿಎಲ್‌ 2024ನ ತನ್ನ ಮೊದಲ ಪಂದ್ಯದಲ್ಲಿ ವಿಶ್ವಾಸದ ಗೆಲುವು ಸಾಧಿಸುವ ಸನಿಹ ಬಂದಿತ್ತು. ಅದರೆ, ಕೊನೇ ಓವರ್‌ ಎಸೆದ ಹರ್ಷಿತ್‌ ರಾಣಾ, ಕೊನೆಯ 5 ಎಸೆತಗಳಲ್ಲಿ 7 ರನ್‌ಗಳನ್ನು ಯಶಸ್ವಿಯಾಗಿ ರಕ್ಷಿಸಿಕೊಳ್ಳುವ ಮೂಲಕ ಕೆಕೆಆರ್‌ ತಂಡದ ರೋಚಕ ಗೆಲುವಿಗೆ ಕಾರಣರಾದರು. ಕೋಲ್ಕತ್ತಾ ನೈಟ್‌ ರೈಡರ್ಸ್‌ ತಂಡ ಗೆಲುವಿಗೆ ನೀಡಿದ್ದ 209 ರನ್‌ಗಳ ಗುರಿಯನ್ನು ಬೆನ್ನಟ್ಟಿದ್ದ ಸನ್‌ರೈಸರ್ಸ್‌ ಹೈದರಾಬಾದ್‌ ತಂಡ 7 ವಿಕೆಟ್‌ಗೆ 204 ರನ್‌ ಬಾರಿಸಲಷ್ಟೇ ಶಕ್ತವಾಗಿ 4 ರನ್‌ಗಳಿಂದ ಸೋಲು ಕಂಡಿತು.

16ನೇ ಓವರ್‌ ಮುಕ್ತಾಯದ ವೇಳೆಗೆ 4 ವಿಕೆಟ್‌ಗೆ 133 ರನ್‌ಗಳಿಸಿದ್ದ ಸನ್‌ರೈಸರ್ಸ್‌ ಹೈದರಾಬಾದ್‌ ತಂಡಕ್ಕೆ ಸೋಲು ನಿಶ್ಚಿತ ಎಂದೇ ಭಾವಿಸಲಾಗಿತ್ತು. ಕೊನೆಯ 24 ಎಸೆತಗಳಲ್ಲಿ ಸನ್‌ರೈಸರ್ಸ್‌ ಗೆಲುವಿಗೆ 76 ರನ್‌ಗಳು ಬೇಕಿದ್ದವು. ಆದರೆ, ಕ್ರೀಸ್‌ನಲ್ಲಿದ್ದ ಹೆನ್ರಿಚ್‌ ಕ್ಲಾಸೆನ್‌ ಹಾಗೂ ಶಾಬಾಜ್‌ ಅಹ್ಮದ್‌ ಈ ಅಸಾಧ್ಯವನ್ನು ಸಾಧಿಸಿ ತೋರಿಸಿದ್ದರು. ಇದರಿಂದಾಗಿ ಕೊನೇ ಓವರ್‌ನಲ್ಲಿ ಹೈದರಾಬಾದ್‌ ತಂಡದ ಗೆಲುವಿಗೆ 13 ರನ್‌ಗಳು ಬೇಕಿದ್ದವು.

ಹರ್ಷಿತ್‌ ರಾಣಾ ಎಸೆದ ಕೊನೇ ಓವರ್‌ನ ಮೊದಲ ಎಸೆತವನ್ನೇ ಕ್ಲಾಸೆನ್‌ ಸಿಕ್ಸರ್‌ಗೆ ಅಟ್ಟಿದ್ದರು. ಇದರಿಂದಾಗಿ ಕೊನೇ ಐದು ಎಸೆತಗಳಲ್ಲಿ ಸನ್‌ರೈಸರ್ಸ್‌ ತಂಡದ ಗೆಲುವಿಗೆ 7 ರನ್‌ ಬೇಕಿದ್ದವು. 2ನೇ ಎಸೆತದಲ್ಲಿ ಕ್ಲಾಸೆನ್‌ ಒಂದು ರನ್‌ ಪಡೆದು ಶಾಬಾಜ್‌ಗೆ ಬ್ಯಾಟಿಂಗ್‌ ನೀಡಿದ್ದೇ ತಪ್ಪಾಗಿ ಹೋಯಿತು. ಮೂರನೇ ಎಸೆತದಲ್ಲಿ ಶಾಬಾಜ್‌ ಅಹ್ಮದ್‌ ವಿಕೆಟ್‌ ಒಪ್ಪಿಸಿದರೆ, ನಾಲ್ಕನೇ ಎಸೆತದಲ್ಲಿ ಹೊಸ ಬ್ಯಾಟ್ಸ್‌ಮನ್‌ 1 ರನ್‌ ಪಡೆದು ಕ್ಲಾಸೆನ್‌ಗೆ ಬ್ಯಾಟಿಂಗ್‌ ನೀಡಿದ್ದರು. ಈ ಹಂತದಲ್ಲಿ ಸನ್‌ರೈಸರ್ಸ್‌ ಗೆಲುವಿಗೆ ಕೊನೇ ಎರಡು ಎಸೆತಗಳಲ್ಲಿ 5 ರನ್‌ ಬೇಕಿದ್ದವು. ಆದರೆ, 5ನೇ ಎಸೆತದಲ್ಲಿ ಕ್ಲಾಸೆನ್‌ ಔಟಾಗಿದ್ದು ಸನ್‌ ಸೋಲಿಗೆ ಕಾರಣವಾಯಿತು. ಕೊನೇ ಎಸೆತದಲ್ಲಿ ಗೆಲುವಿಗೆ 5 ರನ್‌ ಬೇಕಿದ್ದಾಗ ಹೊಸ ಬ್ಯಾಟ್ಸ್‌ಮನ್‌ ಕಮ್ಮಿನ್ಸ್‌ ರನ್‌ ಗಳಿಸಲು ವಿಫಲರಾಗಿದ್ದರು.

IPL 2024: ಸನ್‌ರೈಸರ್ಸ್‌ ಬೌಲಿಂಗ್‌ ಬೆಂಡೆತ್ತಿದ ರಿಂಕು-ರಸೆಲ್‌!

ಬೃಹತ್‌ ಮೊತ್ತದ ಚೇಸಿಂಗ್‌ ಆರಂಭಿಸಿದ ಸನ್‌ರೈಸರ್ಸ್‌ ಹೈದರಾಬಾದ್‌ ತಂಡಕ್ಕೆ ಮೊದಲ ವಿಕೆಟ್‌ಗ ಮಯಾಂಕ್‌ ಅಗರ್ವಾಲ್‌ ಹಾಗೂ ಇಂಪ್ಯಾಕ್ಟ್‌ ಪ್ಲೇಯರ್‌ ಅಭಿಷೇಕ್‌ ಶರ್ಮ 33 ಎಸೆತಗಳಲ್ಲಿ 60 ರನ್‌ ಜೊತೆಯಾಟವಾಡಿದರು. ಪವರ್‌ ಪ್ಲೇಯ ಅವಕಾಶವನ್ನು ಈ ಜೋಡಿ ಸಂಪೂರ್ಣವಾಗಿ ಬಳಸಿಕೊಂಡಿತು.  21 ಎಸೆತಗಳಲ್ಲಿ 4 ಬೌಂಡರಿ, 1 ಸಿಕ್ಸರ್‌ ಸಿಡಿಸಿದ್ದ  ಮಯಾಂಕ್‌ ಅಗರ್ವಾಲ್‌ 32 ರನ್‌ ಬಾರಿಸಿ ಔಟಾದರು. ಮಯಾಂಕ್‌ ಅಗರ್ವಾಲ್‌ ಔಟಾದ ಮೊತ್ತ್ಕೆ 11 ರನ್‌ ಸೇರಿಸುವ ವೇಳೆಗೆ ಅಭಿಷೇಕ್‌ ಶರ್ಮ ಕೂಡ ವಿಕೆಟ್ ಒಪ್ಪಿಸಿದರು. 19 ಎಸೆತಗಳಲ್ಲಿ 4 ಬೌಂಡರಿ ಹಾಗೂ 2 ಸಿಕ್ಸರ್‌ನೊಂದಿಗೆ 32 ರನ್ ಬಾರಿಸಿದ್ದರು. ನಂತರ ಬಂದ ರಾಹುಲ್‌ ತ್ರಿಪಾಠಿ (20), ಏಡೆನ್‌ ಮಾರ್ಕ್ರಮ್‌ (18) ಗಳಿಸಿದ ರನ್‌ಗಳು ತಂಡಕ್ಕೆ ಸಾಕಾಗಲಿಲ್ಲ. ಅಬ್ದುಲ್‌ ಸಮದ್‌ 11 ಎಸೆತಗಳಲ್ಲಿ ತಲಾ ಒಂದು ಬೌಂಡರಿ ಸಿಕ್ಸರ್‌ಗಳಿದ್ದ 15 ರನ್‌ ಬಾರಿಸಿ ಔಟಾಗಿದ್ದರು.

IPL 2024 ಡೆಲ್ಲಿ ಕ್ಯಾಪಿಟಲ್ಸ್ ಬಗ್ಗುಬಡಿದು ಶುಭಾರಂಭ ಮಾಡಿದ ಪಂಜಾಬ್ ಕಿಂಗ್ಸ್‌

click me!