
ಬೆಂಗಳೂರು: 'ದಿ ಗ್ರೇಟ್ ಫಿನಿಶರ್' ಮಹೇಂದ್ರ ಸಿಂಗ್ ಧೋನಿಯ ಆಟ ಈ ಬಾರಿ ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿಲ್ಲ. 17ನೇ ಆವೃತ್ತಿಯ ಐಪಿಎಲ್ ಟೂರ್ನಿಯ 68ನೇ ಪಂದ್ಯದಲ್ಲಿ ಆತಿಥೇಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಪ್ಲೇ ಆಫ್ ಪ್ರವೇಶಿಸುವ ನಿಟ್ಟಿನಲ್ಲಿ ಮಾಡು ಇಲ್ಲವೇ ಮಡಿ ಪಂದ್ಯ ಎನಿಸಿಕೊಂಡಿದ್ದ ಕದನದಲ್ಲಿ ಕೊನೆಗೂ ಆರ್‌ಸಿಬಿ 27 ರನ್ ಅಂತರದ ಭರ್ಜರಿ ಗೆಲುವು ಸಾಧಿಸಿ ಪ್ಲೇ ಆಫ್‌ಗೆ ಲಗ್ಗೆಯಿಟ್ಟರೆ, ಚಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪ್ಲೇ ಆಫ್ ಕನಸು ನುಚ್ಚುನೂರಾಯಿತು.
ಕ್ರಿಕೆಟ್ ಅಭಿಮಾನಿಗಳನ್ನು ಅಕ್ಷರಶಃ ತುದಿಗಾಲಿನಲ್ಲಿ ನಿಲ್ಲುವಂತೆ ಮಾಡಿದ್ದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಕೊನೆಯ ಓವರ್‌ನಲ್ಲಿ ಪ್ಲೇ ಆಫ್‌ಗೇರಲು ಕೇವಲ 17 ರನ್ ಅಗತ್ಯವಿತ್ತು. ಕೊನೆಯ ಓವರ್ ಬೌಲಿಂಗ್ ಮಾಡುವ ಜವಾಬ್ದಾರಿ ಯಶ್ ದಯಾಳ್ ವಹಿಸಿಕೊಂಡರು. ಎದುರಿಗಿದ್ದಿದ್ದು ಐಪಿಎಲ್ ಇತಿಹಾಸದಲ್ಲೇ 20ನೇ ಓವರ್‌ನಲ್ಲಿ ಅತಿಹೆಚ್ಚು ಸಿಕ್ಸರ್ ಸಿಡಿಸಿದ ಬ್ಯಾಟರ್ ಖ್ಯಾತಿಯ ಮಹೇಂದ್ರ ಸಿಂಗ್ ಧೋನಿ. 20ನೇ ಓವರ್‌ನ ಮೊದಲ ಎಸೆತವನ್ನು ಧೋನಿ 110 ಮೀಟರ್ ದೂರಕ್ಕೆ ಸಿಕ್ಸರ್ ಸಿಡಿಸುವ ಮೂಲಕ ಚೆಂಡನ್ನು ಮೈದಾನದಾಚೆಗೆ ಅಟ್ಟಿದರು. ಪರಿಣಾಮ ಕೊನೆಯ 5 ಎಸೆತಗಳಲ್ಲಿ ಕೇವಲ 11 ರನ್ ಅಗತ್ಯವಿತ್ತು. ಆ ಬಳಿಕ ಕರಾರುವಕ್ಕಾದ ದಾಳಿ ನಡೆಸಿದ ಯಶ್ ದಯಾಳ್ ಆರ್‌ಸಿಬಿಗೆ ರೋಚಕ ಗೆಲುವು ತಂದುಕೊಟ್ಟರು.
ಚೆನ್ನೈ ಎದುರು ಆರ್‌ಸಿಬಿ ಗೆಲುವಿನ ಬೆನ್ನಲ್ಲೇ ಆನಂದ ಭಾಷ್ಪ ಸುರಿಸಿದ ವಿರುಷ್ಕಾ ಜೋಡಿ..! ವಿಡಿಯೋ ವೈರಲ್
ಇನ್ನು ಪಂದ್ಯ ಮುಕ್ತಾಯದ ಬಳಿಕ ಡ್ರೆಸ್ಸಿಂಗ್ ರೂಂನಲ್ಲಿ ಆರ್‌ಸಿಬಿ ತಂಡವನ್ನು ಉದ್ದೇಶಿಸಿ ಮಾತನಾಡಿದ ದಿನೇಶ್ ಕಾರ್ತಿಕ್, ಧೋನಿ ಸಿಕ್ಸರ್ ಬಾರಿಸಿದ್ದು, ಒಳ್ಳೆಯದ್ದೇ ಆಯಿತು ಎನ್ನುವ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ ಸೋಲಿನ ಗಾಯದ ಮೇಲೆ ಉಪ್ಪು ಸುರಿಯುವ ಕೆಲಸ ಮಾಡಿದ್ದಾರೆ.
ಧೋನಿ ಬಾರಿಸಿದ ಸಿಕ್ಸರ್ ಚಿನ್ನಸ್ವಾಮಿ ಸ್ಟೇಡಿಯಂ ಆಚೆಗೆ ಹೋಗಿ ಬಿದ್ದಿತು. ಹೀಗಾಗಿ ಬಾಲ್ ಕಳೆದು ಹೋಗಿದ್ದರಿಂದ, ಮ್ಯಾಚ್ ಅಫಿಶಿಯಲ್ಸ್ ಬೆಂಗಳೂರು ತಂಡಕ್ಕೆ ಬೌಲಿಂಗ್ ಮಾಡಲು ಹೊಸ ಚೆಂಡು ನೀಡಿದರು. ಇದು ಆರ್‌ಸಿಬಿ ಗೆಲುವಿಗೆ ನೆರವಾಯಿತು ಎನ್ನುವನ್ನು ಬಿಚ್ಚಿಟ್ಟಿದ್ದಾರೆ.
CSK ಹೊರದಬ್ಬಿ ಪ್ಲೇ ಆಫ್‌ಗೆ ಆರ್‌ಸಿಬಿ ಲಗ್ಗೆ! ಈ ಸಲ ಕಪ್ ನಮ್ದೇ..?
"ಎಂ ಎಸ್ ಧೋನಿ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ 110 ಮೀಟರ್ ದೂರ ಸಿಕ್ಸರ್ ಚಚ್ಚಿದ್ದು, ನಮ್ಮ ಪಾಲಿಗೆ ಒಳ್ಳೆಯದ್ದೇ ಆಯಿತು. ಧೋನಿ ಆ ರೀತಿ ಸಿಕ್ಸರ್ ಬಾರಿಸಿದ್ದರಿಂದಲೇ ನಮಗೆ ಹೊರ ಬಾಲ್ ಸಿಕ್ಕಿತು. ಹೀಗಾಗಿ ಯಶ್ ದಯಾಳ್ ಚೆಂಡನ್ನು ಗ್ರಿಪ್ ಆಗಿ ಹಿಡಿದು ಬೌಲಿಂಗ್ ಮಾಡಲು ಅನುಕೂಲವಾಯಿತು" ಎಂದು ಡಿಕೆ ಹೇಳಿದರು.
ಯಶ್ ದಯಾಳ್ 20ನೇ ಓವರ್‌ನ ಮೊದಲ ಎಸೆತದಲ್ಲಿ ಸಿಕ್ಸರ್ ಚಚ್ಚಿಸಿಕೊಂಡರೂ, ಮರು ಎಸೆತದಲ್ಲೇ ಧೋನಿಯನ್ನು ಬಲಿ ಪಡೆಯುವಲ್ಲಿ ಯಶಸ್ವಿಯಾದರು. ಆ ಬಳಿಕ ಮೂರನೇ ಚೆಂಡನ್ನು ಚುಕ್ಕೆ ಎಸೆತವನ್ನಾಗಿಸಿದರೆ, ನಾಲ್ಕನೇ ಎಸೆತದಲ್ಲಿ ಶಾರ್ದೂಲ್ ಠಾಕೂರ್ ಒಂದು ರನ್ ಬಾರಿಸಿದರು. ಇನ್ನು ರವೀಂದ್ರ ಜಡೇಜಾ ಎದುರಿಸಿದ 5 ಹಾಗೂ ಆರನೇ ಎಸೆತದಲ್ಲಿ ಯಶ್ ದಯಾಳ್ ಯಾವುದೇ ರನ್ ನೀಡಲಿಲ್ಲ. ಪ್ಲೇ ಆಫ್‌ಗೇರಲು 201 ನ್ ಗಳಿಸಬೇಕಿದ್ದ ಚೆನ್ನೈ ಸೂಪರ್ ಕಿಂಗ್ಸ್ ಕೇವಲ 191 ರನ್ ಗಳಿಸಲಷ್ಟೇ ಶಕ್ತವಾಯಿತು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.