ರುತುರಾಜ್, ರಾಚಿನ್ ಅಬ್ಬರಿಸಲಿಲ್ಲ, ರಹಾನೆ ಹೋರಾಟ ಸಾಕಾಗಲಿಲ್ಲ, ದುಬೆ ಆಟ ಸೀಮಿತಗೊಂಡಿತು. ಧೋನಿ ತಮ್ಮ ಹಳೇ ಆಟ ಪ್ರದರ್ಶಿಸಿದರೂ ಸಿಎಸ್‌ಕೆ ಗೆಲುವಿನ ದಡ ಸೇರಲಿಲ್ಲ. ಅದ್ಭುತ ಪ್ರದರ್ಶನ ನೀಡಿದ ಡೆಲ್ಲಿ ಮೊದಲ ಗೆಲುವು ದಾಖಲಿಸಿದರೆ, ಚೆನ್ನೈ ಮೊದಲ ಸೋಲಿನ ಕಹಿ ಅನುಭವಿಸಿತು.
ವಿಶಾಖಪಟ್ಟಣಂ(ಮಾ.31) ಐಪಿಎಲ್ 2024ರ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮೊದಲ ಸೋಲಿನ ಕಹಿ ಅನುಭವಿಸಿದರೆ, ಇತ್ತ ಡೆಲ್ಲಿ ಕ್ಯಾಪಿಟಲ್ಸ್ ಮೊದಲ ಗೆಲುವಿನ ಸಿಹಿ ಕಂಡಿದೆ. ವಿಶಾಖಪಟ್ಟಣಂನಲ್ಲಿ ನಡೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ 20 ರನ್ ಗೆಲುವು ದಾಖಲಿಸಿದೆ. ಎಂಎಸ್ ಧೋನಿ ತಮ್ಮ ಹಳೇ ಖದರಿನ ಆಟ ಪ್ರದರ್ಶಿಸಿದರೂ ಸಿಎಸ್‌ಕೆಯನ್ನು ಗೆಲುವಿನ ದಡ ಸೇರಿಸಲು ಸಾಧ್ಯವಾಗಲಿಲ್ಲ. ಈ ಮೂಲಕ ಈ ಆವೃತ್ತಿಯಲ್ಲಿ ಆರಂಭಿಕ 2 ಪಂದ್ಯ ಸೋತ ಬಳಿಕ ಡೆಲ್ಲಿ ಮೊದಲ ಗೆಲುವು ಸಾಧಿಸಿದೆ. ಇತ್ತ ಸತತ 2 ಗೆಲುವು ಸಾಧಿಸಿ ಅಂಕಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿದ್ದ ಚೆನ್ನೈ ಮೊದಲ ಸೋಲು ಕಂಡಿದೆ.
192 ರನ್ ಟಾರ್ಗೆಟ್ ಪಡೆದ ಚೆನ್ನೈ ಸೂಪರ್ ಕಿಂಗ್ಸ್ ದಿಟ್ಟ ಹೋರಾಟದ ಮೂಲಕ ಚೇಸಿಂಗ್ ಮಾಡಲು ಲೆಕ್ಕಾಚಾರ ಹಾಕಿಕೊಂಡಿತ್ತು. ಆದರೆ ಆರಂಭದಲ್ಲೇ ಸಿಎಸ್‌ಕೆ ಲೆಕ್ಕಾಚಾರ ಉಲ್ಟಾ ಆಯಿತು. ಕಾರಣ ಆರಂಭಿಕರು ಅಬ್ಬರಿಸಲಿಲ್ಲ. ನಾಯಕ ರುತುರಾಜ್ ಗಾಯಕ್ವಾಡ್ ಹಾಗೂ ರಾಚಿನ್ ರವೀಂದ್ರ ವಿಕೆಟ್ ಪತನಗೊಂಡಿತು. ರುತುರಾಜ್ ಗಾಯಕ್ವಾಡ್ ಕೇವಲ 1 ರನ್ ಸಿಡಿಸಿ ಔಟಾದರೆ, ರಾಚಿನ್ 2 ರನ್ ಸಿಡಿಸಿ ನಿರ್ಗಮಿಸಿದರು. ಕೇವಲ 7 ರನ್‌ಗೆ ಚೆನ್ನೈ 2 ಪ್ರಮುಖ ವಿಕೆಟ್ ಕಳೆದುಕೊಂಡು ಕಂಗಾಲಾಯಿತು.
undefined
ಧೋನಿ ಬೆರುಗುಗೊಳಿಸಿದ ಪತಿರಾನ ಕ್ಯಾಚ್, IPL 2024 ಅತ್ಯುತ್ತಮ ಕ್ಯಾಚ್ ಪಟ್ಟ!
ಅಜಿಂಕ್ಯ ರಹಾನೆ ಹಾಗೂ ಡರಿಲ್ ಮಿಚೆಲ್ ಹೋರಾಟದಿಂದ ಚೆನ್ನೈ ಮತ್ತೆ ಚೇಸಿಂಗ್ ಸವಾಲು ಸ್ವೀಕರಿಸಿತು. ರಹಾನೆ ಹಾಗೂ ಮಿಚೆಲ್ ಸ್ಫೋಟಕ ಬ್ಯಾಟಿಂಗ್‌ನಿಂದ ಕುಸಿತದಿಂದ ಹೊರಬಂದಿತು. ಆದರೆ ಡರಿಲ್ ಮಿಚೆಲ್ 34 ರನ್ ಸಿಡಿಸಿ ಔಟಾದರು. ಮಿಚೆಲ್ ವಿಕೆಟ್ ಪತನದ ಬಳಿಕ ರಹಾನೆ ಅಬ್ಬರಕ್ಕೆ ಕೊಂಚ ಬ್ರೇಕ್ ಬಿದ್ದಿತು. ಇಷ್ಟೇ ಅಲ್ಲ ರಹಾನೆ 30 ಎಸೆತದಲ್ಲಿ 45 ರನ್ ಸಿಡಿಸಿ ವಿಕೆಟ್ ಒಪ್ಪಿಸಿದರು. 102 ರನ್‌ಗೆ ಸಿಎಸ್‌ಕೆ 4 ವಿಕೆಟ್ ಕಳೆದುಕೊಂಡಿತು. ಗೆಲುವಿಗೆ ಇನ್ನೂ 90 ರನ್ ಅವಶ್ಯಕತೆ ಇತ್ತು.
ಪಂದ್ಯ ಬಿಗಿಯಾಗತೊಡಗಿತು. ಚೆನ್ನೈ ಬ್ಯಾಟ್ಸ್‌ಮನ್ ಮೇಲೆ ಒತ್ತಡ ಹೆಚ್ಚಾಯಿತು. ಶಿವಂ ದುಬೆ 18 ರನ್ ಸಿಡಿಸಿ ಔಟಾದರು. ಅಖಾಡಕ್ಕಿಳಿದ ಎಂಎಸ್ ಧೋನಿ ಮೊದಲ ಎಸೆತದಲ್ಲೇ ಬೌಂಡರಿ ಸಿಡಿಸಿದರು. ಈ ಮೂಲಕ ಅಭಿಮಾನಿಗಳ ಸಂಭ್ರಮ ಇಮ್ಮಡಿಗೊಂಡಿತು. ಮರು ಎಸೆತದಲ್ಲಿ ಡೆಲ್ಲಿ ಧೋನಿ ಕ್ಯಾಚ್ ಕೈಚೆಲ್ಲಿತು. ಮತ್ತೊಂದು ಬೌಂಡರಿ ಸಿಡಿಸಿದ ಧೋನಿ ಅಬ್ಬರಿಸುವ ಸೂಚನೆ ನೀಡಿದರು.
ಧೋನಿಗೆ ರವೀಂದ್ರ ಜಡೇಜಾ ಉತ್ತಮ ಸಾಥ್ ನೀಡಿದರು. ಸಿಕ್ಸ್ ಸಿಡಿಸಿದ ಧೋನಿ,ಸಿಎಸ್‌ಕೆ ಅಭಿಮಾನಿಗಳ ಆತ್ಮವಿಶ್ವಾಸ ಹೆಚ್ಚಿಸಿದರು. ಆದರೆ ಡೆಲ್ಲಿ ತಂಡದ ಬೌಲಿಂಗ್ ಚೆನ್ನೈಗೆ ಸವಾಲಾಯಿತು. ಕೊನೆಯ 6 ಎಸೆತದಲ್ಲಿ ಚೆನ್ನೈ ಗೆಲುವಿಗೆ 41 ರನ್ ಅವಶ್ಯಕತೆ ಇತ್ತು. ಮೊದಲ ಎಸೆತ ಬೌಂಡರಿ, ಎರಡನೇ ಎಸೆತ ಸಿಕ್ಸರ್ ಸಿಡಿಸಿದ ಧೋನಿ ಮೂರನೆ ಎಸೆತದಲ್ಲಿ ರನ್ ಗಳಿಸಲು ಸಾಧ್ಯವಾಗಲಿಲ್ಲ. ಆದರೆ ನಾಲ್ಕನೇ ಎಸೆತದಲ್ಲಿ ಬೌಂಡರಿ ಸಿಡಿಸಿದರೆ, 5ನೇ ಎಸೆತದಲ್ಲಿ ರನ್ ಬರಲಿಲ್ಲ. ಕೊನೆಯ ಎಸೆತವನ್ನು ಮತ್ತೆ ಸಿಕ್ಸರ್ ಸಿಡಿಸಿದ ಧೋನಿ ಸೋಲಿನ ಅಂತರವನ್ನು 20 ರನ್‌ಗೆ ಕಡಿತಗೊಳಿಸಿದರು. ಅಂತಿಮ ಓವರ್‌ನಲ್ಲಿ ಧೋನಿ 20 ರನ್ ಸಿಡಿಸಿದರು. ಡೆಲ್ಲಿ 20 ರನ್ ಗೆಲುವು ದಾಖಲಿಸಿತು. ಧೋನಿ 16 ಎಸೆತದಲ್ಲಿ ಅಜೇಯ 37 ರನ್ ಸಿಡಿಸಿದರು.
KKR ಎದುರು ಆರ್‌ಸಿಬಿ ಸೋಲಿಗೆ ಕಾರಣಗಳೇನು..? ಇಲ್ಲಿದೆ ಇಂಟ್ರೆಸ್ಟಿಂಗ್ ಡೀಟೈಲ್ಸ್