ಮೊದಲು ಬ್ಯಾಟ್ ಮಾಡಿದ ಚೆನ್ನೈ ಸಿಕ್ಸರ್, ಬೌಂಡರಿಗಳ ಸುರಿಮಳೆ ಸಿಡಿಸಿ ಒಟ್ಟುಗೂಡಿಸಿದ್ದು 206 ರನ್. ಕಳೆದುಕೊಂಡ ವಿಕೆಟ್‌ಗಳ ಸಂಖ್ಯೆ 6. ಯಶಸ್ವಿಯಾಗಿ ಚೇಸ್ ಮಾಡುತ್ತೇವೆಂಬ ನಿರೀಕ್ಷೆಯೊಂದಿಗೆ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದ್ದ ಗುಜರಾತ್‌ಗೆ ಚೆನ್ನೈನ ಬೃಹತ್ ಮೊತ್ತ ಕೈ ಗೆಟುಕಲಿಲ್ಲ.
ಚೆನ್ನೈ: ಚೆಪಾಕ್ ಭದ್ರಕೋಟೆಯಲ್ಲಿ ಚೆನ್ನೈಯನ್ನು ಸೋಲಿಸುವುದು ಯಾವುದೇ ತಂಡಗಳಿಗೂ ಕಷ್ಟಸಾಧ್ಯ. ತವರಿನ ಅಂಗಳದಲ್ಲಿ ತನ್ನದೇ ಆದ ವರ್ಚಸ್ಸನ್ನು ಕಾಪಾಡಿಕೊಂಡು ಬಂದಿರುವ 5 ಬಾರಿ ಚಾಂಪಿಯನ್ ಚೆನ್ನೈ ತಂಡಕ್ಕೆ ಈ ಬಾರಿ ಶರಣಾಗಿದ್ದು ಮಾಜಿ ಚಾಂಪಿಯನ್ ಗುಜರಾತ್ ಟೈಟಾನ್ಸ್. ಮಂಗಳವಾರ ನಡೆದ ಮಾಜಿ ಚಾಂಪಿಯನ್‌ಗಳ ಕಾದಾಟದಲ್ಲಿ ಚೆನ್ನೈಗೆ 63 ರನ್ ಬೃಹತ್ ಗೆಲುವು ಲಭಿಸಿತು.
ಮೊದಲು ಬ್ಯಾಟ್ ಮಾಡಿದ ಚೆನ್ನೈ ಸಿಕ್ಸರ್, ಬೌಂಡರಿಗಳ ಸುರಿಮಳೆ ಸಿಡಿಸಿ ಒಟ್ಟುಗೂಡಿಸಿದ್ದು 206 ರನ್. ಕಳೆದುಕೊಂಡ ವಿಕೆಟ್‌ಗಳ ಸಂಖ್ಯೆ 6. ಯಶಸ್ವಿಯಾಗಿ ಚೇಸ್ ಮಾಡುತ್ತೇವೆಂಬ ನಿರೀಕ್ಷೆಯೊಂದಿಗೆ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದ್ದ ಗುಜರಾತ್‌ಗೆ ಚೆನ್ನೈನ ಬೃಹತ್ ಮೊತ್ತ ಕೈ ಗೆಟುಕಲಿಲ್ಲ. ತವರಿನ ತಂಡದ ಬೌಲರ್‌ಗಳ ಸಂಘಟಿತ ದಾಳಿ ಮುಂದೆ ನಿರುತ್ತರವಾದ ಗುಜರಾತ್ 8 ವಿಕೆಟ್ ಕಳೆದುಕೊಂಡು 163 ರನ್ ಗಳಿಸಿ ಸೋಲೊಪ್ಪಿಕೊಂಡಿತು.
undefined
ಆರಂಭದಲ್ಲೇ ಅಬ್ಬರಿಸುವ ಮುನ್ಸೂಚನೆ ನೀಡಿದ್ದ ಆರಂಭಿಕರಾದ ಶುಭ್‌ಮನ್ ಗಿಲ್(08), ವೃದ್ಧಿಮಾನ್ ಸಾಹ(21) ಪವರ್-ಪ್ಲೇ ಮುಕ್ತಾಯಕ್ಕೂ ಮುನ್ನವೇ ಪೆವಿಲಿಯನ್ ಸೇರಿದ್ದರು. ಆ ಬಳಿಕ ಚೆನ್ನೈ ವೇಗಿಗಳನ್ನು ಅಲ್ಪ ಮಟ್ಟಿಗೆ ಎದುರಿಸಿ ನಿಂತಿದ್ದು ಸಾಯಿ ಸುದರ್ಶನ್ ಮಾತ್ರ. ಆದರೆ ಅವರ ಇನ್ನಿಂಗ್ಸ್ 37ಕ್ಕೆ ಕೊನೆಗೊಂಡಿತು. ಇತರ ಯಾರಿಂದಲೂ ಸೂಕ್ತ ಬೆಂಬಲ ಸಿಗಲಿಲ್ಲ. ಡೇವಿಡ್ ಮಿಲ್ಲರ್ 21 ರನ್ ಗಳಿಸಿದರು. ದೀಪಕ್ ಚಹರ್, ತುಷಾರ್ ದೇಶಪಾಂಡೆ ತಲಾ 2 ವಿಕೆಟ್ ಕಿತ್ತರು.
ಸ್ಫೋಟಕ ಬ್ಯಾಟಿಂಗ್: ಕಳೆದ ಆವೃತ್ತಿಯಲ್ಲಿ ಪವರ್-ಪ್ಲೇನಲ್ಲಿ ಅತಿಹೆಚ್ಚು ರನ್‌ರೇಟ್ ಹೊಂದಿದ್ದ ಚೆನ್ನೈ ಈ ಬಾರಿಯೂ ಸ್ಫೋಟಕ ಬ್ಯಾಟಿಂಗ್ ಮೂಲಕವೇ ಸದ್ದು ಮಾಡುತ್ತಿದೆ. ಭವಿಷ್ಯದ ಸೂಪರ್‌ಸ್ಟಾರ್‌ಗಳು ಎಂದೇ ಕರೆಸಿಕೊಳ್ಳುವ ನಾಯಕ ಋತುರಾಜ್ ಗಾಯಕ್ವಾಡ್ ಹಾಗೂ ರಚಿನ್ ರವೀಂದ್ರ ಆರಂಭದಲ್ಲೇ ಗುಜರಾತ್ ಬೌಲರ್‌ಗಳನ್ನು ಚೆಂಡಾಡಿದರು. 27 ಎಸೆತದಲ್ಲೇ 50 ರನ್ ಸೇರಿಸಿದ ತಂಡ ಪವರ್-ಪ್ಲೇನಲ್ಲಿ 69 ರನ್ ಕಲೆಹಾಕಿತು. ಆ ಬಳಿಕವೂ ತಂಡದ ಅಬ್ಬರಕ್ಕೆ ಕಡಿವಾಣ ಬೀಳಲಿಲ್ಲ. ಗಾಯಕ್ವಾಡ್ 36 ಎಸೆತದಲ್ಲಿ 46 ರನ್ ಸಿಡಿಸಿದರೆ, ರಚಿನ್ ಕೇವಲ 20 ಎಸೆತದಲ್ಲಿ 6 ಬೌಂಡರಿ, 3 ಸಿಕ್ಸರ್‌ನೊಂದಿಗೆ 46 ರನ್ ಚಚ್ಚಿದರು. ಇವರಿಬ್ಬರು ಔಟಾದ ಬಳಿಕ ಗುಜರಾತ್ ಪುಟಿದೇಳುವ ನಿರೀಕ್ಷೆಯಲ್ಲಿದ್ದರೂ ಅದನ್ನು ಶಿವಂ ದುಬೆ ಭಗ್ನಗೊಳಿಸಿದರು. ಮೈದಾನದ ಮೂಲೆಮೂಲೆಗೂ ಚೆಂಡನ್ನು ಅಟ್ಟಿದ ದುಬೆ 23 ಎಸೆತಗಳಲ್ಲೇ 2 ಬೌಂಡರಿ, 5 ಸಿಕ್ಸರ್‌ನೊಂದಿಗೆ 51 ರನ್ ಸಿಡಿಸಿದರು. ಕೊನೆಯಲ್ಲಿ ಡ್ಯಾರಿಲ್ ಮಿಚೆಲ್(ಔಟಾಗದೆ 24), ಸಮೀರ್ ರಿಜ್ವಿ(6 ಎಸೆತದಲ್ಲಿ 14) ತಂಡವನ್ನು 200ರ ಗಡಿ ದಾಟಿಸಿದರು.
ಸ್ಕೋರ್:
ಚೆನ್ನೈ 20 ಓವರಲ್ಲಿ 206/6 (ದುಬೆ 51, ರಚಿನ್ 46, ಋತುರಾಜ್ 46, ರಶೀದ್ 2-49)
ಗುಜರಾತ್ 20 ಓವರಲ್ಲಿ 143/8 (ಸುದರ್ಶನ್ 37, ತುಷಾರ್ 2-21, ದೀಪಕ್ 2-28)
ಎಲ್ಲಾ ಏಳು ಪಂದ್ಯದಲ್ಲೂ ತವರಿನ ತಂಡಕ್ಕೆ ಜಯ!
ಈ ಬಾರಿ ಐಪಿಎಲ್‌ನಲ್ಲಿ ಈ ವರೆಗೆ 7 ಪಂದ್ಯಗಳು ನಡೆದಿದ್ದು, ತವರಿನ ತಂಡಗಳೇ ಗೆದ್ದಿರುವುದು ವಿಶೇಷ. ಉದ್ಘಾಟನಾ ಪಂದ್ಯದಲ್ಲಿ ಚೆನ್ನೈ, ಆ ಬಳಿಕ ಪಂಜಾಬ್, ಕೋಲ್ಕತಾ, ರಾಜಸ್ಥಾನ, ಗುಜರಾತ್, ಆರ್‌ಸಿಬಿ, ಚೆನ್ನೈ ತಂಡಗಳು ತವರಿನ ಕ್ರೀಡಾಂಗಣದಲ್ಲಿ ಗೆಲುವು ಸಾಧಿಸಿವೆ.
29ನೇ ಬಾರಿ: ಸಿಎಸ್‌ಕೆ ಐಪಿಎಲ್‌ನಲ್ಲಿ 29ನೇ ಬಾರಿ 200+ ರನ್ ದಾಖಲಿಸಿತು. ಇದು ಯಾವುದೇ ತಂಡದ ಪರ ಗರಿಷ್ಠ. ಆರ್‌ಸಿಬಿ 24 ಬಾರಿ ಈ ಸಾಧನೆ ಮಾಡಿದೆ.