
ನವದೆಹಲಿ(ಮಾ.13): 2022ರ ಡಿಸೆಂಬರ್‌ನಲ್ಲಿ ಭೀಕರ ಕಾರು ಅಪಘಾತಕ್ಕೆ ತುತ್ತಾಗಿದ್ದ ಯುವ, ತಾರಾ ಕ್ರಿಕೆಟಿಗ ರಿಷಭ್ ಪಂತ್ ಬರೋಬ್ಬರಿ 14 ತಿಂಗಳ ಬಳಿಕ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಮರಳಲು ಸಜ್ಜಾಗಿದ್ದಾರೆ. ರಿಷಭ್ ಪಂತ್‌ಗೆ ಬಿಸಿಸಿಐ ಫಿಟ್ನೆಸ್ ಪ್ರಮಾಣ ಪತ್ರ ನೀಡಿದ್ದು, ವಿಕೆಟ್ ಕೀಪರ್ ಬ್ಯಾಟರ್ ಆಗಿಯೇ ಡೆಲ್ಲಿ ಕ್ಯಾಪಿಟಲ್ಸ್ ಪರ ಆಡಲಿದ್ದಾರೆ.
ಈ ಬಗ್ಗೆ ಮಂಗಳವಾರ ಬಿಸಿಸಿಐ ಪ್ರಕಟನೆ ಹೊರಡಿಸಿದೆ. ‘ಭೀಕರ ಅಪಘಾತದ ಬಳಿಕ 14 ತಿಂಗಳ ಚಿಕಿತ್ಸೆ, ಪುನಶ್ಚೇತನ ಶಿಬಿರ ಪೂರೈಸಿ ರಿಷಭ್ ಈಗ ಆಟಕ್ಕೆ ಫಿಟ್ ಆಗಿದ್ದಾರೆ. ಅವರು ಮುಂಬರುವ ಐಪಿಎಲ್‌ನಲ್ಲಿ ವಿಕೆಟ್ ಕೀಪರ್ ಬ್ಯಾಟರ್ ಆಗಿಯೇ ಆಡಲಿದ್ದಾರೆ’ ಎಂದಿದೆ.
ಈ ಮೊದಲು ಪಂತ್ ಡೆಲ್ಲಿ ಪರ ಕೇವಲ ಬ್ಯಾಟರ್ ಆಗಿಯೇ ಆಡಲಿದ್ದಾರೆ ಎಂದು ಹೇಳಲಾಗುತ್ತಿತ್ತು. ಆದರೆ ಕೆಲ ತಿಂಗಳುಗಳಿಂದ ಅಭ್ಯಾಸದಲ್ಲಿ ನಡೆಸುತ್ತಿದ್ದ 26 ವರ್ಷದ ಪಂತ್ ಐಪಿಎಲ್‌ನಲ್ಲಿ ಪೂರ್ಣ ಪ್ರಮಾಣದ ಆಟಗಾರನಾಗಿ ಕಣಕ್ಕಿಳಿಯಲಿದ್ದಾರೆ.
ವಿಶ್ವಕಪ್‌ಗೂ ಆಯ್ಕೆ?
ಐಪಿಎಲ್‌ನಲ್ಲಿ ರಿಷಭ್ ಪಂತ್ ಆಡುವುದು ಖಚಿತವಾಗಿದ್ದರಿಂದ ರಿಷಭ್ ಪಂತ್ ಟಿ20 ವಿಶ್ವಕಪ್‌ನಲ್ಲೂ ಆಡುವ ಸಾಧ್ಯತೆ ಹೆಚ್ಚು. ಈ ಬಗ್ಗೆ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಕೂಡಾ ಈಗಾಗಲೇ ಸುಳಿವು ನೀಡಿದ್ದರು. ಆದರೆ ಐಪಿಎಲ್‌ನಲ್ಲಿ ರಿಷಭ್ ಯಾವ ರೀತಿ ಪ್ರದರ್ಶನ ನೀಡಲಿದ್ದಾರೆ ಎಂಬುದರ ಮೇಲೆ ಅವರ ಟಿ20 ವಿಶ್ವಕಪ್ ಭವಿಷ್ಯ ನಿರ್ಧಾರವಾಗಲಿದೆ.
ಪ್ರಸಿದ್ಧ್ ಐಪಿಎಲ್‌ಗಿಲ್ಲ
ಇತ್ತೀಚೆಗಷ್ಟೇ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಕನ್ನಡಿಗ ವೇಗಿ ಪ್ರಸಿದ್ಧ್ ಕೃಷ್ಣ ಈ ಬಾರಿ ಐಪಿಎಲ್‌ನಲ್ಲಿ ಆಡುವುದಿಲ್ಲ ಎಂದು ಬಿಸಿಸಿಐ ತಿಳಿಸಿದೆ. ಅವರು ರಾಜಸ್ಥಾನ ರಾಯಲ್ಸ್ ತಂಡದಲ್ಲಿದ್ದಾರೆ. ಇನ್ನು, ವೇಗಿ ಮೊಹಮದ್ ಶಮಿ ಹಿಮ್ಮಡಿ ಶಸ್ತ್ರಚಿಕಿತ್ಸೆಗೆ ಒಳಗಾಗಿ ಚಿಕಿತ್ಸೆ ಪಡೆಯುತ್ತಿರುವುದರಿಂದ ಅವರು ಸೆಪ್ಟಂಬರ್‌ಗೂ ಮುನ್ನ ಕ್ರಿಕೆಟ್‌ಗೆ ಮರಳುವುದಿಲ್ಲ ಎಂದು ಬಿಸಿಸಿಐ ಸ್ಪಷ್ಟಪಡಿಸಿದೆ.
ಟಿ20 ವಿಶ್ವಕಪ್ ಟೂರ್ನಿಯಿಂದ ವಿರಾಟ್ ಕೊಹ್ಲಿಗೆ ಕೊಕ್ ಸಾಧ್ಯತೆ, ಐಪಿಎಲ್ ಪ್ರದರ್ಶನ ನಿರ್ಣಾಯಕ!
ಯಶಸ್ವಿ ಜೈಸ್ವಾಲ್‌ಗೆ ಐಸಿಸಿ ತಿಂಗಳ ಶ್ರೇಷ್ಠ ಆಟಗಾರ ಗೌರವ
ದುಬೈ: ಟೆಸ್ಟ್ ಪಾದಾರ್ಪಣೆಗೈದ ಕಡಿಮೆ ಅವಧಿಯಲ್ಲೇ ತಮ್ಮ ಆಟದ ಮೂಲಕ ಎಲ್ಲರ ಗಮನ ಸೆಳೆದಿರುವ ಭಾರತದ ಯುವ ತಾರೆ ಯಶಸ್ವಿ ಜೈಸ್ವಾಲ್ ಐಸಿಸಿ ಫೆಬ್ರವರಿ ತಿಂಗಳ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಅವರು ನ್ಯೂಜಿಲೆಂಡ್‌ನ ಕೇನ್ ವಿಲಿಯಮ್ಸನ್, ಶ್ರೀಲಂಕಾದ ಪಥುಂ ನಿಸ್ಸಾಂಕ ಅವರನ್ನು ಹಿಂದಿಕ್ಕಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. 22 ವರ್ಷದ ಜೈಸ್ವಾಲ್ ಇಂಗ್ಲೆಂಡ್ ವಿರುದ್ಧ ಇತ್ತೀಚೆಗಷ್ಟೇ ಕೊನೆಗೊಂಡ 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಬರೋಬ್ಬರಿ 712 ರನ್ ಕಲೆಹಾಕಿದ್ದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.