
ವಿಶಾಖಪಟ್ಟಣಂ(ಏ.03): ಸುನಿಲ್ ನರೈನ್, ಆಂಡ್ರೆ ರಸೆಲ್ ಸ್ಪೋಟಕ ಬ್ಯಾಟಿಂಗ್ ಹಾಗೂ ವೈಭವ್ ಅರೋರ, ವರುಣ್ ಚಕ್ರವರ್ತಿ ಮಿಂಚಿನ ಬೌಲಿಂಗ್ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್ ಎದುರು ಕೋಲ್ಕತಾ ನೈಟ್ ರೈಡರ್ಸ್ ತಂಡವು 106 ರನ್ ಅಂತರದ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ ಅಂಕಪಟ್ಟಿಯಲ್ಲಿ ರಾಜಸ್ಥಾನ ರಾಯಲ್ಸ್ ತಂಡವನ್ನು ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದೆ.
ಗೆಲ್ಲಲು ಬರೋಬ್ಬರಿ 273 ರನ್‌ಗಳ ಕಠಿಣ ಗುರಿ ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್ ತಂಡವು, ಬೃಹತ್ ಮೊತ್ತ ನೋಡಿಯೇ ಕಂಗಾಲಾಗಿ ಹೋಯಿತು. ಪರಿಣಾಮ ಡೆಲ್ಲಿ ಕ್ಯಾಪಿಟಲ್ಸ್ ತಂಡವು 33 ರನ್ ಗಳಿಸುವಷ್ಟರಲ್ಲಿ ಅಗ್ರಕ್ರಮಾಂಕದ ನಾಲ್ವರು ಬ್ಯಾಟರ್‌ಗಳು ಪೆವಿಲಿಯನ್ ಸೇರಿದರು. ವಾರ್ನರ್ 18 ಹಾಗೂ ಪೃಥ್ವಿ ಶಾ 10 ರನ್ ಗಳಿಸಿದರೆ, ಮಿಚೆಲ್ ಮಾರ್ಷ್, ಹಾಗೂ ಅಭಿಷೇಕ್ ಪೊರೆಲ್ ಶೂನ್ಯ ಸುತ್ತಿ ಪೆವಿಲಿಯನ್ ಹಾದಿ ಹಿಡಿದರು.
IPL 2024: ಡೆಲ್ಲಿ ವಿರುದ್ಧ 39 ಎಸೆತಗಳಲ್ಲಿ 89 ರನ್ ಚಚ್ಚಿದ ಸುನೀಲ್ ನಾರಾಯಣ್, ಕೆಕೆಆರ್ 272 ರನ್!
ಇನ್ನು ಪವರ್‌ಪ್ಲೇನಲ್ಲೇ 4 ವಿಕೆಟ್ ಕಳೆದುಕೊಂಡು ಕಂಗಾಲಾಗಿದ್ದ ಡೆಲ್ಲಿ ತಂಡಕ್ಕೆ 5ನೇ ವಿಕೆಟ್‌ಗೆ ನಾಯಕ ರಿಷಭ್ ಪಂತ್ ಹಾಗೂ ಟ್ರಿಸ್ಟಿನ್ ಸ್ಟಬ್ಸ್ ಆಸರೆಯಾದರು. ರಿಷಭ್ ಪಂತ್ 25 ಎಸೆತಗಳನ್ನು ಎದುರಿಸಿ 4 ಬೌಂಡರಿ ಹಾಗೂ 5 ಸಿಕ್ಸರ್ ಸಹಿತ 55 ರನ್ ಬಾರಿಸಿ ವರುಣ್ ಚಕ್ರವರ್ತಿಗೆ ವಿಕೆಟ್ ಒಪ್ಪಿಸಿದರೆ, ಟ್ರಿಸ್ಟನ್ ಸ್ಟಬ್ಸ್ 32 ಎಸೆತಗಳನ್ನು ಎದುರಿಸಿ ತಲಾ 4 ಬೌಂಡರಿ ಹಾಗೂ ಸಿಕ್ಸರ್ ಸಹಿತ 54 ರನ್ ಗಳಿಸಿ ಚಕ್ರವರ್ತಿಗೆ ಎರಡನೇ ಬಲಿಯಾದರು.
ಈ ಜೋಡಿ ಬೇರ್ಪಡುತ್ತಿದ್ದಂತೆಯೇ ಡೆಲ್ಲಿ ಕ್ಯಾಪಿಟಲ್ಸ್ ತಂಡವು ದಿಢೀರ್ ಕುಸಿತ ಕಂಡಿತು. ಪರಿಣಮ 17.2 ಓವರ್‌ಗಳಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವು 166 ರನ್ ಗಳಿಸಿ ಸರ್ವಪತನ ಕಂಡಿತು.
ಇನ್ನು ಇದಕ್ಕೂ ಮೊದಲು ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಕೆಕೆಆರ್ ತಂಡಕ್ಕೆ ಫಿಲ್ ಸಾಲ್ಟ್ ಹಾಗೂ ಸುನಿಲ್ ನರೈನ್ ಸಿಡಿಲಬ್ಬರದ ಆರಂಭ ಒದಗಿಸಿಕೊಟ್ಟರು. ಮೊದಲ ವಿಕೆಟ್‌ಗೆ ಈ ಜೋಡಿ ಕೇವಲ 4.3 ಓವರ್‌ಗಳಲ್ಲಿ 60 ರನ್ ಜತೆಯಾಟವಾಡಿತು. ಸಾಲ್ಟ್ 18 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು.
ರಿಷಭ್ ಪಂತ್ ಹೃದಯ ಕದ್ದ ಇಶಾ ನೇಗಿ..! ಇಲ್ಲಿದೆ ಕ್ಯೂಟ್ ಜೋಡಿಯ ಇಂಟ್ರೆಸ್ಟಿಂಗ್ ಲವ್ ಸ್ಟೋರಿ
ಇದಾದ ಬಳಿಕ ಎರಡನೇ ವಿಕೆಟ್‌ಗೆ ಸುನಿಲ್ ನರೈನ್ ಹಾಗೂ ಅಂಗ್‌ಕ್ರಿಶ್ ರಘುವಂಶಿ 104 ರನ್‌ಗಳ ಜತೆಯಾಟವಾಡಿದರು. ರಘುವಂಶಿ 27 ಎಸೆತಗಳಲ್ಲಿ 54 ರನ್ ಸಿಡಿಸಿದರೆ, ಸುನಿಲ್ ನರೈನ್ 39 ಎಸೆತಗಳಲ್ಲಿ ತಲಾ 7 ಸಿಕ್ಸರ್ ಹಾಗೂ ಬೌಂಡರಿ ಸಹಿತ 85 ರನ್ ಬಾರಿಸಿ ಮಿಂಚಿದರು. ಇನ್ನು ಮಧ್ಯಮ ಕ್ರಮಾಂಕದಲ್ಲಿ ಆಂಡ್ರ ರಸೆಲ್ 41 ಹಾಗೂ ರಿಂಕು ಸಿಂಗ್ 8 ಎಸೆತಗಳಲ್ಲಿ 26 ರನ್ ಸಿಡಿಸಿ ಅಬ್ಬರಿಸಿದರು. ಪರಿಣಾಮ ಕೆಕೆಆರ್ ತಂಡವು 20 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 272 ರನ್ ಕಲೆಹಾಕಿತು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.