
ಲಖನೌ(ಮೇ.02): ಮತ್ತೊಂದು ರೋಚಕ ಪಂದ್ಯಾಟಕ್ಕೆ 16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಆರ್‌ಸಿಬಿ ಹಾಗೂ ಲಖನೌ ಸೂಪರ್ ಜೈಂಟ್ಸ್ ಸಾಕ್ಷಿಯಾಗಿದೆ. ಮೇ 01ರಂದು ಇಲ್ಲಿನ ಭಾರತ ರತ್ನ ಶ್ರೀ ಅಟಲ್ ಬಿಹಾರಿ ವಾಜಪೇಯಿ ಏಕಾನ ಕ್ರಿಕೆಟ್ ಮೈದಾನದಲ್ಲಿ ನಡೆದ ಕಡಿಮೆ ಮೊತ್ತದ ಪಂದ್ಯವೊಂದರಲ್ಲಿ ಕೆ ಎಲ್ ರಾಹುಲ್ ನೇತೃತ್ವದ ಲಖನೌ ಸೂಪರ್ ಜೈಂಟ್ಸ್ ಎದುರು ಆರ್‌ಸಿಬಿ 18 ರನ್‌ಗಳ ಭರ್ಜರಿ ಜಯ ಸಾಧಿಸುವ ಮೂಲಕ ತವರಿನಲ್ಲಿ ಅನುಭವಿಸಿದ್ದ ಆಘಾತಕಾರಿ ಸೋಲಿನ ಲೆಕ್ಕಾಚುಕ್ತಾ ಮಾಡುವಲ್ಲಿ ಆರ್‌ಸಿಬಿ ಯಶಸ್ವಿಯಾಗಿದೆ.
ತನ್ನದೇ ತವರಿನಲ್ಲಿ ಲಖನೌ ವಿರುದ್ಧ ಎದುರಾಗಿದ್ದ ಸೋಲಿನ ಮುಖಭಂಗ ಹಾಗೂ ಅತಿರೇಕದ ಸಂಭ್ರಮಾಚರಣೆಗೆ ಸೋಮವಾರ ಆರ್‌ಸಿಬಿ ಸರಿಯಾಗಿಯೇ ಸೇಡು ತೀರಿಸಿಕೊಂಡಿದೆ. ಲಖನೌನ ಸ್ಪಿನ್ ಪಿಚ್ನಲ್ಲಿ ನಡೆದ ಕಡಿಮೆ ಮೊತ್ತದ ಥ್ರಿಲ್ಲರ್ನಲ್ಲಿ 18 ರನ್ಗಳಿಂದ ಗೆದ್ದ ಆರ್‌ಸಿಬಿ, ಅಂಕಪಟ್ಟಿಯಲ್ಲಿ 5ನೇ ಸ್ಥಾನಕ್ಕೇರಿದರೆ, ತವರಿನಲ್ಲಿ ಸತತ 2ನೇ ಪಂದ್ಯದಲ್ಲೂ 135ಕ್ಕಿಂತ ಕಡಿಮೆ ಮೊತ್ತ ಚೇಸ್ ಮಾಡಲಾಗದ ಲಖನೌ 3ನೇ ಸ್ಥಾನಕ್ಕೆ ಕುಸಿಯಿತು.
150 ಕೂಡಾ ಉತ್ತಮ ಮೊತ್ತ ಎನಿಸಿದ್ದ ಪಿಚ್ನಲ್ಲಿ ಮೊದಲು ಬ್ಯಾಟಿಂಗ್ಗಿಳಿದ ಆರ್‌ಸಿಬಿ ಗಳಿಸಿದ್ದು 9 ವಿಕೆಟ್ಗೆ ಕೇವಲ 126 ರನ್. ಬ್ಯಾಟರ್ಗಳು ನಿರೀಕ್ಷಿತ ಮೊತ್ತ ಗಳಿಸದಿದ್ದರೂ ಬೌಲರ್ಗಳು ತಂಡದ ಕೈಹಿಡಿದರು. ಬಿಗು ದಾಳಿ ನಡೆಸಿ 19.5 ಓವರಲ್ಲಿ ಲಖನೌ ತಂಡವನ್ನು 108ಕ್ಕೆ ಆಲೌಟ್ ಮಾಡಿತು. ಶೂನ್ಯಕ್ಕೇ ವಿಕೆಟ್ ಕಳೆದುಕೊಂಡ ತಂಡದ ಪೆವಿಲಿಯನ್ ಪರೇಡ್ ಕೊನೆವರೆಗೂ ನಿಲ್ಲಿಲಿಲ್ಲ. ಕೆ.ಗೌತಮ್(23), ಕೃನಾಲ್(14), ಸ್ಟೋಯ್ನಿಸ್(13) ಬಿಟ್ಟರೆ ಉಳಿದವರಾರಯರೂ ಮಿಂಚಲಿಲ್ಲ. 38ಕ್ಕೆ ಪ್ರಮುಖ 5 ವಿಕೆಟ್ ಕಿತ್ತ ಆರ್‌ಸಿಬಿ ಬೌಲರ್ಸ್ ಪಂದ್ಯದ ಮೇಲಿನ ಹಿಡಿತ ಕೈಜಾರದಂತೆ ನೋಡಿಕೊಂಡರು. ಅಮಿತ್ ಮಿಶ್ರಾ(19), ನವೀನ್-ಉಲ್-ಹಕ್(13) ಹೋರಾಟ ತಂಡದ ಗೆಲುವಿಗೆ ಸಾಕಾಗಲಿಲ್ಲ. ಗಾಯದಿಂದಾಗಿ ಕೊನೆ ಕ್ರಮಾಂಕದಲ್ಲಿ ಕ್ರೀಸ್ಗಿಳಿದ ರಾಹುಲ್(00) ಖಾತೆ ತೆರೆಯಲೂ ಸಾಧ್ಯವಾಗಲಿಲ್ಲ. ಜೋಶ್ ಹೇಜಲ್ವುಡ್, ಕರ್ಣ್ ಶರ್ಮಾ ತಲಾ 2 ವಿಕೆಟ್ ಪಡೆದರು.
IPL 2023 ಮೈದಾನದಲ್ಲೇ ಕಿತ್ತಾಡಿದ ಕೊಹ್ಲಿ-ಗಂಭೀರ್‌ಗೆ ಪಂದ್ಯದ ಶೇ.100 ರಷ್ಟು ದಂಡ!
ಕೊಹ್ಲಿ-ಗಂಭೀರ್ ವಾಗ್ವಾದ
ಬೆಂಗಳೂರಿನ ಪಂದ್ಯದಲ್ಲಿ ಆರ್‌ಸಿಬಿ ಅಭಿಮಾನಿಗಳನ್ನು ಗಂಭೀರ್ ಕೆಣಕ್ಕಿದ್ದಕ್ಕೆ ಆಕ್ರೋಶಿತರಾಗಿದ್ದ ಕೊಹ್ಲಿ, ಈ ಬಾರಿ ಮೈದಾನದಲ್ಲೇ ಬಾಯಿ ಮುಚ್ಚಿಸುವ ಸನ್ನೆ ಮೂಲಕ ಉತ್ತರ ಕೊಟ್ಟರು. ಪಂದ್ಯದ ಬಳಿಕವೂ ಇವರಿಬ್ಬರ ನಡುವೆ ತೀವ್ರ ಮಾತಿನ ಚಕಮಕಿ ನಡೆಯಿತು. ಈ ವೇಳೆ ಅವರನ್ನು ಆಟಗಾರರು, ಅಂಪೈರ್ಗಳು ಸಮಾಧಾನಪಡಿಸಲು ಯತ್ನಿಸಿದರು.
ಆರ್‌ಸಿಬಿ ಹಾಗೂ ಲಖನೌ ಸೂಪರ್ ಜೈಂಟ್ಸ್ ನಡುವಿನ ಈ ಪಂದ್ಯವು ಸಾಕಷ್ಟು ಕಾರಣಗಳಿಗೆ ಮಹತ್ವ ಪಡೆದುಕೊಂಡಿತ್ತು. ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಲಖನೌ ಎದುರು ಆರ್‌ಸಿಬಿ ವಿರೋಚಿತ ಸೋಲು ಅನುಭವಿಸಿತ್ತು. ಆ ಸಂದರ್ಭದಲ್ಲಿ ಗೆಲುವಿನ ರನ್ ಓಡಿದ್ದ ಆವೇಶ್ ಖಾನ್ ಮೈದಾನದಲ್ಲೇ ಹೆಲ್ಮೆಟ್ ಎಸೆದು ಅತಿರೇಕದ ವರ್ತನೆ ತೋರಿದ್ದರು. ಇನ್ನು ಕೊನೆಯವರೆಗೂ ತವರಿನ ತಂಡವು ಗೆಲ್ಲಲಿ ಎಂದು ಆರ್‌ಸಿಬಿ... ಆರ್‌ಸಿಬಿ.. ಎಂದು ಘರ್ಜಿಸುತ್ತಿದ್ದ ಅಭಿಮಾನಿಗಳು ಸೈಲೆಂಟ್ ಆಗಿರಿ ಎಂದು ತಂಡದ ಮೆಂಟರ್ ಗೌತಮ್ ಗಂಭೀರ್ ತುಟಿಮೇಲೆ ಕೈಯಿಟ್ಟು ಹುಷಾರ್ ಎನ್ನುವಂತಹ ಸೂಚನೆ ನೀಡಿದ್ದರು. ಆದರೆ ಇದೀಗ ಲಖನೌ ತಂಡವನ್ನು ಅವರದ್ದೇ ಮೈದಾನದಲ್ಲಿ ಅಲ್ಪಮೊತ್ತಕ್ಕೆ ಆಲೌಟ್ ಮಾಡುವುದಷ್ಟೇ ಅಲ್ಲದೇ ತಾವು ಯಾವುದನ್ನೂ ಇಟ್ಟುಕೊಳ್ಳುವುದಿಲ್ಲ, ಬಡ್ಡಿಸಹಿತ ವಾಪಾಸ್ ನೀಡುತ್ತೇವೆ ಎನ್ನುವುದನ್ನು ಆರ್‌ಸಿಬಿ ತನ್ನ ಪ್ರದರ್ಶನದ ಮೂಲಕ ಮಾಡಿ ತೋರಿಸಿದೆ. ಇದರ ಬೆನ್ನಲ್ಲೇ ಆರ್‌ಸಿಬಿ ಅಭಿಮಾನಿಗಳ ಸಂಭ್ರಮಾಚರಣೆ ಸಾಮಾಜಿಕ ಜಾಲತಾಣಗಳಲ್ಲಿ ಮುಗಿಲು ಮುಟ್ಟಿದ್ದು, ಅದರ ಒಂದಷ್ಟು ಸ್ಯಾಂಪಲ್‌ಗಳು ಇಲ್ಲಿವೆ ನೋಡಿ....
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.