
ಅಹಮದಾಬಾದ್(ಮೇ.02): 6 ಪಂದ್ಯಗಳ ಸೋಲಿನೊಂದಿಗೆ 16ನೇ ಆವೃತ್ತಿ ಐಪಿಎಲ್ನ ಅಂಕಪಟ್ಟಿಯಲ್ಲಿ ಕೊನೆ ಸ್ಥಾನದಲ್ಲೇ ಉಳಿದುಕೊಂಡಿರುವ ಡೆಲ್ಲಿ ಕ್ಯಾಪಿಟಲ್ಸ್ ಪ್ಲೇ-ಆಫ್ ರೇಸ್ನಲ್ಲಿ ಉಳಿದುಕೊಳ್ಳಲು ಹರಸಾಹಸ ಪಡುತ್ತಿದ್ದು, ಮಂಗಳವಾರ ನಿರ್ಣಾಯಕ ಪಂದ್ಯದಲ್ಲಿ ಬಲಿಷ್ಠ ಗುಜರಾತ್ ಟೈಟಾನ್ಸ್ ವಿರುದ್ಧ ಸೆಣಸಾಡಲಿದೆ.
5 ಪಂದ್ಯಗಳ ಸೋಲಿನ ಬಳಿಕ ಸತತ 2 ಜಯ ದಾಖಲಿಸಿದ್ದ ಡೇವಿಡ್ ವಾರ್ನರ್ ನೇತೃತ್ವದ ಡೆಲ್ಲಿ ಕಳೆದ ಪಂದ್ಯದಲ್ಲಿ ಮತ್ತೆ ಸೋಲಿನ ಸುಳಿಗೆ ಸಿಲುಕಿತ್ತು. ಹೀಗಾಗಿ ತಂಡ ಬಾಕಿ ಇರುವ ಆರೂ ಪಂದ್ಯಗಳನ್ನು ಗೆದ್ದರೂ ಪ್ಲೇ-ಆಫ್‌ನಲ್ಲಿ ಸ್ಥಾನ ಸಿಗುವುದು ಅನುಮಾನ. ಮತ್ತೊಂದೆಡೆ ಹಾರ್ದಿಕ್ ನಾಯಕತ್ವದ ಗುಜರಾತ್ 8ರಲ್ಲಿ 6 ಪಂದ್ಯಗಳನ್ನು ಗೆದ್ದಿದ್ದು, ಇನ್ನೊಂದು ಗೆಲುವು ತಂಡವನ್ನು ಪ್ಲೇ-ಆಫ್‌ಗೆ ಮತ್ತಷ್ಟು ಹತ್ತಿರವಾಗಿಸಲಿದೆ.
ಡೆಲ್ಲಿ ಕ್ಯಾಪಿಟಲ್ಸ್ ಈ ಬಾರಿ ಯಾವುದೇ ವಿಭಾಗದಲ್ಲೂ ಹೇಳಿಕೊಳ್ಳುವ ಸಾಧನೆ ಮಾಡಿಲ್ಲ. ವಾರ್ನರ್ ಬ್ಯಾಟಿಂಗ್‌ನಲ್ಲಿ ಮಿಂಚುತ್ತಿದ್ದರೂ ನಾಯಕತ್ವದಲ್ಲಿ ವೈಫಲ್ಯ ಕಾಣುತ್ತಿದ್ದಾರೆ. ಭಾರೀ ಭರವಸೆ ಮೂಡಿಸಿದ್ದ ಪೃಥ್ವಿ ಶಾ, ಸರ್ಫರಾಜ್ ಖಾನ್‌ರ ಕಳಪೆ ತಂಡದ ಹಿನ್ನಡೆಗೆ ಪ್ರಮುಖ ಕಾರಣ. ಹೀಗಾಗಿ ಮನೀಶ್ ಪಾಂಡೆ, ಯುವ ತಾರೆ ಪ್ರಿಯಂ ಗರ್ಗ್ ಮೇಲೆ ಭಾರೀ ನಿರೀಕ್ಷೆ ಇಡಲಾಗಿದ್ದು, ಅಕ್ಷರ್ ಪಟೇಲ್, ಮಿಚೆಲ್ ಮಾರ್ಷ್ ಆಟ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ತಂಡಕ್ಕೆ ನಿರ್ಣಾಯಕ ಎನಿಸಬಹುದು.
IPL 2023 ಮೈದಾನದಲ್ಲೇ ಕಿತ್ತಾಡಿದ ಕೊಹ್ಲಿ-ಗಂಭೀರ್‌ಗೆ ಪಂದ್ಯದ ಶೇ.100 ರಷ್ಟು ದಂಡ!
ಮತ್ತೊಂದೆಡೆ ಯಾವುದೇ ಕಠಿಣ ಪರಿಸ್ಥಿತಿಯಿಂದ ಕಮ್ಬ್ಯಾಕ್ ಮಾಡಿ ಪಂದ್ಯ ಗೆಲ್ಲುವ ಸಾಮರ್ಥ್ಯವಿರುವ ಟೂರ್ನಿಯ 2ನೇ ಮುಖಾಮುಖಿಯಲ್ಲೂ ಡೆಲ್ಲಿಯನ್ನು ಮಣಿಸುವ ಕಾತರದಲ್ಲಿದೆ. ತಂಡ ಸಂಯೋಜನೆಯೂ ಉತ್ತಮವಾಗಿದ್ದು, ಏಕಾಂಗಿಯಾಗಿ ಪಂದ್ಯ ಗೆಲ್ಲಿಸಬಲ್ಲ ಹಲವರಿದ್ದಾರೆ. ಇದು ಹಾರ್ದಿಕ್ ಪಾಂಡ್ಯ ಪಡೆಯ ಆತ್ಮವಿಶ್ವಾಸ ಹೆಚ್ಚುವಂತೆ ಮಾಡಿದ್ದು, ಮತ್ತೊಂದು ಗೆಲುವಿನ ವಿಶ್ವಾಸದಲ್ಲಿದೆ.
ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ಪರ ಬ್ಯಾಟಿಂಗ್‌ನಲ್ಲಿ ಶುಭ್‌ಮನ್ ಗಿಲ್, ವೃದ್ದಿಮಾನ್ ಸಾಹ ಉತ್ತಮ ಆರಂಭ ಒದಗಿಸಿಕೊಡುತ್ತಿದ್ದಾರೆ. ಇನ್ನು ಮಧ್ಯಮ ಕ್ರಮಾಂಕದಲ್ಲಿ ನಾಯಕ ಹಾರ್ದಿಕ್ ಪಾಂಡ್ಯ, ಕನ್ನಡಿಗ ಅಭಿಮನ್ ಮನೋಹರ್, ಡೇವಿಡ್ ಮಿಲ್ಲರ್, ಆಲ್ರೌಂಡರ್‌ಗಳಾದ ವಿಜಯ್ ಶಂಕರ್, ರಾಹುಲ್ ತೆವಾಟಿಯಾ ಹಾಗೂ ರಶೀದ್ ಖಾನ್ ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲೂ ತಂಡಕ್ಕೆ ಆಸರೆಯಾಗುವ ಕ್ಷಮತೆ ಹೊಂದಿದ್ದಾರೆ. ಬೌಲರ್‌ಗಳಾದ ಮೊಹಮ್ಮದ್ ಶಮಿ, ಮೋಹಿತ್ ಶರ್ಮಾ, ನೂರ್ ಅಹಮ್ಮದ್ ಹಾಗೂ ಜೋಶ್ವಾ ಲಿಟ್ಲ್ ಮತ್ತೊಮ್ಮೆ ಡೆಲ್ಲಿ ಬ್ಯಾಟರ್‌ಗಳನ್ನು ಕಾಡಲು ಸಜ್ಜಾಗಿದ್ದಾರೆ.
ಮುಖಾಮುಖಿ: 02
ಡೆಲ್ಲಿ: 00
ಗುಜರಾತ್: 02
ಸಂಭವನೀಯ ಆಟಗಾರರ ಪಟ್ಟಿ
ಡೆಲ್ಲಿ: ಡೇವಿಡ್ ವಾರ್ನರ್(ನಾಯಕ), ಫಿಲ್ ಸಾಲ್ಟ್, ಮಿಚೆಲ್ ಮಾರ್ಷ್, ಸರ್ಫರಾಜ್ ಖಾನ್, ಮನೀಶ್ ಪಾಂಡೆ, ಪ್ರಿಯಂ ಗರ್ಗ್, ಅಕ್ಷರ್ ಪಟೇಲ್, ರಿಪಲ್ ಪಟೇಲ್, ಕುಲ್ದೀಪ್ ಯಾದವ್, ಏನ್ರಿಚ್ ನೋಕಿಯ, ಇಶಾಂತ್ ಶರ್ಮಾ, ಮುಕೇಶ್ ಕುಮಾರ್.
ಗುಜರಾತ್: ವೃದ್ದಿಮಾನ್ ಸಾಹ, ಶುಭ್‌ಮನ್ ಗಿಲ್, ಹಾರ್ದಿಕ್ ಪಾಂಡ್ಯ(ನಾಯಕ), ಅಭಿನವ್ ಮನೋಹರ್, ಡೇವಿಡ್ ಮಿಲ್ಲರ್, ವಿಜಯ್ ಶಂಕರ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ನೂರ್ ಅಹ್ಮದ್, ಮೋಹಿತ್ ಶರ್ಮಾ, ಮೊಹಮ್ಮದ್ ಶಮಿ, ಜೋಶ್ವಾ ಲಿಟ್ಲ್.
ಪಿಚ್ ರಿಪೋರ್ಟ್
ಮೋದಿ ಕ್ರೀಡಾಂಗಣದ ಪಿಚ್ ಬ್ಯಾಟಿಂಗ್ ಸ್ನೇಹಿಯಾಗಿದ್ದು, ಬೃಹತ್ ಮೊತ್ತ ದಾಖಲಾಗುವ ಸಾಧ್ಯತೆ ಹೆಚ್ಚು. ಇಲ್ಲಿ ನಡೆದ 4 ಪಂದ್ಯಗಳಲ್ಲಿ 3ರಲ್ಲಿ ಚೇಸಿಂಗ್ ಮಾಡಿದ ತಂಡ ಗೆಲುವು ಸಾಧಿಸಿದೆ. ಹೀಗಾಗಿ ಟಾಸ್ ಗೆಲ್ಲುವ ತಂಡ ಫೀಲ್ಡಿಂಗ್ ಆಯ್ಕೆ ಮಾಡಿಕೊಳ್ಳಬಹುದು.
ಪಂದ್ಯ: ಸಂಜೆ 7.30ಕ್ಕೆ
ಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೋ ಸಿನಿಮಾ
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.