
ಬೆಂಗಳೂರು(ಮೇ.21): 16ನೇ ಆವತ್ತಿಯ ಐಪಿಎಲ್‌ನ ಲೀಗ್ ಹಂತ ಭಾನುವಾರ ಮುಕ್ತಾಯಗೊಳ್ಳಲಿದ್ದು, ಕೊನೆಯ ಪಂದ್ಯವನ್ನು ಆಡಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪ್ಲೇ-ಆಫ್ ಹಂತಕ್ಕೆ ಪ್ರವೇಶಿಸುವ ವಿಶ್ವಾಸದೊಂದಿಗೆ ಗುಜರಾತ್ ಟೈಟಾನ್ಸ್ ವಿರುದ್ಧ ಕಣಕ್ಕಿಳಿಯಲಿದೆ. ಗುಜರಾತ್ ಈಗಾಗಲೇ ಅಗ್ರಸ್ಥಾನದಲ್ಲೇ ಉಳಿಯುವುದು ಖಚಿತವಾಗಿದ್ದು, ಇದು ಕೇವಲ ಪ್ರತಿಷ್ಠಿತ ಪಂದ್ಯವಷ್ಟೇ.
ಆರ್‌ಸಿಬಿಗೆ ಕಣಕ್ಕಿಳಿಯುವ ಮೊದಲೇ ಎಷ್ಟುಅಂತರದಲ್ಲಿ ಗೆಲ್ಲಬೇಕು ಅಥವಾ ಗೆದ್ದರಷ್ಟೇ ಸಾಕಾ? ಎನ್ನುವುದು ತಿಳಿಯಲಿದೆ. ದಿನದ ಮೊದಲ ಪಂದ್ಯದಲ್ಲಿ ಸನ್ರೈಸರ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ ಗೆದ್ದರೆ ಆರ್‌ಸಿಬಿ ಮೇಲೆ ಒತ್ತಡ ಬೀಳಲಿದೆ. ಒಂದು ವೇಳೆ ಮುಂಬೈ ಸೋತರೆ, ಆರ್‌ಸಿಬಿಗೆ ಲಾಭ ಹೆಚ್ಚು.
ವಿರಾಟ್ ಕೊಹ್ಲಿ ಹಾಗೂ ಫಾಫ್ ಡು ಪ್ಲೆಸಿ ಪ್ರಚಂಡ ಲಯದಲ್ಲಿದ್ದು, ಇವರಿಬ್ಬರ ಜೊತೆ ಗ್ಲೆನ್ ಮ್ಯಾಕ್ಸ್‌ವೆಲ್‌ರ ಆಟ ತಂಡದ ಪ್ಲೇ-ಆಫ್ ಭವಿಷ್ಯವನ್ನು ನಿರ್ಧರಿಸಲಿದೆ. ಮೊಹಮದ್ ಸಿರಾಜ್ ಬೌಲಿಂಗ್ ಪಡೆಯನ್ನು ಮುನ್ನಡೆಸಲಿದ್ದು, ನಿರ್ಣಾಯಕ ಪಾತ್ರ ವಹಿಸಬೇಕಿದೆ. ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ಎದುರು ಗೆಲುವು ಸಾಧಿಸಬೇಕಿದ್ದರೇ ಕೆಜಿಎಫ್(ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್-ಫಾಫ್ ಡು ಪ್ಲೆಸಿಸ್) ಜತೆಗೆ ಉಳಿದ ಆಟಗಾರರ ಜವಾಬ್ದಾರಿಯುತ ಆಟವಾಡಬೇಕಿದೆ.
IPL 2023: ಹೊರಬಿದ್ದ ಕೆಕೆಆರ್, 1 ರನ್ ಜಯದೊಂದಿಗೆ ಪ್ಲೇ ಆಫ್‌ಗೆ ಲಕ್ನೋ, ಚೆನ್ನೈ ಸ್ಥಾನವೂ ಖಚಿತ!
ಮತ್ತೊಂದೆಡೆ ಗುಜರಾತ್ ಪ್ಲೇ-ಆಫ್‌ಗೂ ಮುನ್ನ ತನ್ನ ಪ್ರಮುಖ ಆಟಗಾರರಿಗೆ ವಿಶ್ರಾಂತಿ ನೀಡಲು ಬಯಸಿದರೆ ಆರ್‌ಸಿಬಿಗೆ ಅನುಕೂಲವಾಗಬಹುದು. ಹಾರ್ದಿಕ್ ಪಾಂಡ್ಯ ನೇತೃತ್ವದ ಗುಜರಾತ್ ಟೈಟಾನ್ಸ್ ತಂಡವು ಯಾವೊಬ್ಬ ಆಟಗಾರನ ಮೇಲೂ ಅವಲಂಬಿತವಾಗಿಲ್ಲ. ಆರಂಭಿಕ ಬ್ಯಾಟರ್‌ಗಳಾದ ಗಿಲ್, ಸಾಹ ಜತೆಗೆ ಮಧ್ಯಮ ಕ್ರಮಾಂಕದಲ್ಲಿ ಡೇವಿಡ್ ಮಿಲ್ಲರ್, ಅಭಿನವ್ ಮನೋಹರ್, ವಿಜಯ್ ಶಂಕರ್ ಪರಿಸ್ಥಿತಿಗೆ ತಕ್ಕಂತೆ ಆಡುವ ಕಲೆ ಕರಗತ ಮಾಡಿಕೊಂಡಿದ್ದಾರೆ. ರಶೀದ್ ಖಾನ್ ಹಾಗೂ ರಾಹುಲ್ ತೆವಾಟಿಯಾ ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಅಬ್ಬರಿಸಲು ರೆಡಿಯಾಗಿದ್ದಾರೆ. ಇನ್ನು ಐರ್ಲೆಂಡ್ ಮೂಲದ ವೇಗಿ ಜೋಶ್ವಾ ಲಿಟ್ಲ್ ತಂಡ ಕೂಡಿಕೊಂಡಿದ್ದು, ಮೊಹಮ್ಮದ್ ಶಮಿ ಜತೆಗೂಡಿ ಮಾರಕ ದಾಳಿ ನಡೆಸಲು ಸಜ್ಜಾಗಿದ್ದಾರೆ
ಒಟ್ಟು ಮುಖಾಮುಖಿ: 02
ಆರ್‌ಸಿಬಿ: 01
ಗುಜರಾತ್: 01
ಸಂಭವನೀಯ ಆಟಗಾರರ ಪಟ್ಟಿ
ಆರ್‌ಸಿಬಿ: ವಿರಾಟ್ ಕೊಹ್ಲಿ, ಫಾಫ್ ಡು ಪ್ಲೆಸಿಸ್(ನಾಯಕ), ಗ್ಲೆನ್ ಮ್ಯಾಕ್ಸ್‌ವೆಲ್, ಮಹಿಪಾಲ್ ಲೊಮ್ರೊರ್, ಮಿಚೆಲ್ ಬ್ರೇಸ್‌ವೆಲ್, ಅನೂಜ್ ರಾವತ್, ಶಾಬಾಜ್ ಅಹಮ್ಮದ್, ಹರ್ಷಲ್ ಪಟೇಲ್, ವೇಯ್ನ್ ಪಾರ್ನೆಲ್, ಕರ್ಣ್ ಶರ್ಮಾ, ಮೊಹಮ್ಮದ್ ಸಿರಾಜ್, ಸುಯಶ್ ಪ್ರಭುದೇಸಾಯಿ.
ಗುಜರಾತ್ ಟೈಟಾನ್ಸ್: ವೃದ್ದಿಮಾನ್ ಸಾಹ, ಶುಭ್‌ಮನ್ ಗಿಲ್, ಸಾಯಿ ಸುದರ್ಶನ್, ಹಾರ್ದಿಕ್ ಪಾಂಡ್ಯ(ನಾಯಕ), ಡೇವಿಡ್ ಮಿಲ್ಲರ್, ರಾಹುಲ್ ತೆವಾಟಿಯಾ, ಜೋಶ್ವಾ ಲಿಟ್ಲ್, ರಶೀದ್ ಖಾನ್, ನೂರ್ ಅಹಮ್ಮದ್, ಮೊಹಮ್ಮದ್ ಶಮಿ, ಮೋಹಿತ್ ಶರ್ಮಾ, ಯಶ್ ದಯಾಳ್.
ಪಂದ್ಯ: ಸಂಜೆ 7.30ರಿಂದ, ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್/ಜಿಯೋ ಸಿನಿಮಾ
ಪಿಚ್ ರಿಪೋರ್ಟ್
ಚಿನ್ನಸ್ವಾಮಿ ಕ್ರೀಡಾಂಗಣದ ಪಿಚ್ ಬ್ಯಾಟರ್ ಸ್ನೇಹಿಯಾಗಿದ್ದು, ಇಲ್ಲಿ ಈ ಆವೃತ್ತಿಯಲ್ಲಿ 5 ಬಾರಿ 200+ ಮೊತ್ತ ದಾಖಲಾಗಿದೆ. ಕಳೆದ 4 ಪಂದ್ಯಗಳಲ್ಲಿ ಮೊದಲು ಬ್ಯಾಟ್ ಮಾಡಿದ ತಂಡ ಗೆದ್ದಿದೆ. ಮಳೆ ಮುನ್ಸೂಚನೆ ಇರುವ ಕಾರಣ ಟಾಸ್ ಮತ್ತೊಮ್ಮೆ ಪ್ರಮುಖ ಪಾತ್ರ ವಹಿಸಬಹುದು.
ಪಂದ್ಯಕ್ಕೆ ಮಳೆ ಅಡ್ಡಿ?
ಶನಿವಾರ ಬೆಂಗಳೂರಲ್ಲಿ ಭಾರೀ ಮಳೆ ಸುರಿದ ಕಾರಣ ಎರಡೂ ತಂಡಗಳ ಅಭ್ಯಾಸಕ್ಕೆ ತೊಂದರೆಯಾಯಿತು. ಭಾನುವಾರ ಸಂಜೆ 7ರಿಂದ 10 ಗಂಟೆ ನಡುವೆ ಶೇ.60-80ರಷ್ಟು ಮಳೆ ಮುನ್ಸೂಚನೆ ಇದ್ದು ಪಂದ್ಯಕ್ಕೆ ಅಡ್ಡಿಯಾಗುವ ಸಾಧ್ಯತೆ ಇದೆ. ಒಂದು ವೇಳೆ ಸನ್ರೈಸರ್ಸ್ ವಿರುದ್ಧ ಮುಂಬೈ ಸೋತರೆ, ಮಳೆ ಬಂದು ಪಂದ್ಯ ರದ್ದಾದರೆ ಆರ್‌ಸಿಬಿಗೆ ಲಾಭ. ತಂಡ ನಿರಾಯಾಸವಾಗಿ ಪ್ಲೇ-ಆಫ್‌ಗೇರಲಿದೆ. ಮುಂಬೈ ಗೆದ್ದು, ಬೆಂಗಳೂರು ಪಂದ್ಯ ರದ್ದಾದರೆ ಆರ್‌ಸಿಬಿ ಹೊರಬೀಳಲಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.