
ಮುಂಬೈ(ಏ.16): ಸತತ 2 ಸೋಲುಗಳ ಬಳಿಕ ಕಳೆದ ಪಂದ್ಯದಲ್ಲಿ ಟೂರ್ನಿಯ ಮೊದಲ ಗೆಲುವು ಕಂಡಿರುವ 5 ಬಾರಿಯ ಐಪಿಎಲ್ ಚಾಂಪಿಯನ್ ಮುಂಬೈ ಇಂಡಿಯನ್ಸ್ ಜಯದ ಹಾದಿಯಲ್ಲೇ ಉಳಿಯುವ ಕಾತರದಲ್ಲಿದ್ದು, ಭಾನುವಾರ ಕೋಲ್ಕತಾ ವಿರುದ್ಧ ಸೆಣಸಾಡಲಿದೆ. ಸೂಪರ್ ಸಂಡೆಯ ಮೊದಲ ಪಂದ್ಯಕ್ಕೆ ಇಲ್ಲಿನ ವಾಂಖೇಡೆ ಮೈದಾನ ಆತಿಥ್ಯವನ್ನು ವಹಿಸಿದೆ.
ಒಂದು ಕಡೆ ಮುಂಬೈ ಇಂಡಿಯನ್ಸ್ ಪರ ಸೂರ್ಯಕುಮಾರ್ ಯಾದವ್ ಹಾಗೂ ಕೋಲ್ಕತಾ ನೈಟ್ ರೈಡರ್ಸ್ ಪರ ಆಂಡ್ರೆ ರಸೆಲ್ ತಮ್ಮ ತಮ್ಮ ತಂಡಗಳ ಪರ ನಿರೀಕ್ಷಿತ ರನ್ ಗಳಿಸಲು ವಿಫಲವಾಗುತ್ತಲೇ ಬಂದಿದ್ದಾರೆ. ಈ ಇಬ್ಬರು ಆಟಗಾರರನ್ನು ಉಭಯ ಫ್ರಾಂಚೈಸಿಗಳು ರೀಟೈನ್ ಮಾಡಿಕೊಂಡಿದ್ದರು. ಹೀಗಾಗಿಯೇ ಅವರ ಮೇಲೆ ತಂಡಗಳು ಸಾಕಷ್ಟು ನಿರೀಕ್ಷೆಯಿಟ್ಟಿತ್ತು. ಆರಂಭಿಕ ಪಂದ್ಯಗಳಲ್ಲಿ ವೈಫಲ್ಯ ಅನುಭವಿಸಿರುವ ಈ ಆಟಗಾರರು ಇಂದಾದರೂ ಲಯಕ್ಕೆ ಮರಳುತ್ತಾರಾ ಎನ್ನುವುದನ್ನು ಕಾದು ನೋಡಬೇಕಿದೆ.
ಮುಂಬೈ ಇಂಡಿಯನ್ಸ್ ತಂಡವು ಇಂದಿನ ಪಂದ್ಯದಲ್ಲಿ ಎರಡು ಬದಲಾವಣೆಗಳೊಂದಿಗೆ ಕಣಕ್ಕಿಳಿಯುವ ಸಾಧ್ಯತೆಯಿದೆ. ಆಲ್ರೌಂಡರ್ ಹೃತ್ತಿಕ್ ಶೋಕೀನ್ ಬದಲಿಗೆ ಕುಮಾರ್ ಕಾರ್ತಿಕೇಯ ಹಾಗೂ ರಿಲೇ ಮೆರಿಡಿತ್ ಬದಲಿಗೆ ಜೋಫ್ರಾ ಆರ್ಚರ್ ತಂಡ ಕೂಡಿಕೊಳ್ಳುವ ಸಾಧ್ಯತೆಯಿದೆ. ಮುಂಬೈ ಇಂಡಿಯನ್ಸ್ ತಂಡದ ಪರ ನಾಯಕ ರೋಹಿತ್ ಶರ್ಮಾ ಫಾರ್ಮ್‌ಗೆ ಮರಳಿರುವುದು ತಂಡದ ಆತ್ಮವಿಶ್ವಾಸ ಹೆಚ್ಚುವಂತೆ ಮಾಡಿದೆ. ಇದರ ಜತೆಗೆ ಇಶಾನ್ ಕಿಶನ್, ಕ್ಯಾಮರೋನ್ ಗ್ರೀನ್, ತಿಲಕ್ ವರ್ಮಾ ಹಾಗೂ ಟಿಮ್ ಡೇವಿಡ್ ಜವಾಬ್ದಾರಿಯುತ ಪ್ರದರ್ಶನ ತೋರಬೇಕಿದೆ. ಇನ್ನು ಬೌಲಿಂಗ್ ವಿಭಾಗದಲ್ಲಿ ಆರ್ಶದ್ ಖಾನ್, ಪೀಯೂಸ್ ಚಾವ್ಲಾ ಜತೆಗೆ ಜೋಫ್ರಾ ಆರ್ಚರ್ ಸಂಘಟಿತ ಪ್ರದರ್ಶನ ತೋರಬೇಕಿದೆ.
ದಿನೇಶ್ ಕಾರ್ತಿಕ್ ಡಕೌಟ್, ರೋಹಿತ್ ಶರ್ಮಾ ದಾಖಲೆ ಮುರಿದ RCB ವಿಕೆಟ್ ಕೀಪರ್!
ಅತ್ತ ಕೆಕೆಆರ್, ಸನ್ರೈಸರ್ಸ್ ಹೈದರಾಬಾದ್ ವಿರುದ್ಧದ ಸೋಲಿನ ಆಘಾತದಿಂದ ಹೊರಬಂದು 3ನೇ ಜಯ ತನ್ನದಾಗಿಸಿಕೊಳ್ಳುವ ನಿರೀಕ್ಷೆಯಲ್ಲಿದೆ. ಕೋಲ್ಕತಾ ನೈಟ್ ರೈಡರ್ಸ್ ತಂಡದಲ್ಲಿ ಕೂಡಾ ಎರಡು ಪ್ರಮುಖ ಬದಲಾವಣೆಯಾಗುವ ಸಾಧ್ಯತೆಯಿದ್ದು, ರೆಹಮನುಲ್ಲಾ ಗುರ್ಬಾಜ್ ಬದಲಿಗೆ ಜೇಸನ್ ರಾಯ್ ಮತ್ತು ವೇಗಿ ಲಾಕಿ ಫರ್ಗ್ಯೂಸನ್ ಬದಲಿಗೆ ಟಿಮ್ ಸೌಥಿ ಕೆಕೆಆರ್ ತಂಡ ಕೂಡಿಕೊಳ್ಳುವ ಸಾಧ್ಯತೆಯಿದೆ.
ಕೋಲ್ಕತಾ ನೈಟ್ ರೈಡರ್ಸ್ ತಂಡವು ಬ್ಯಾಟಿಂಗ್‌ನಲ್ಲಿ ನಿತೀಶ್ ರಾಣಾ, ರಿಂಕು ಸಿಂಗ್ ಹಾಗೂ ವೆಂಕಟೇಶ್ ಅಯ್ಯರ್ ಅವರನ್ನು ಹೆಚ್ಚಾಗಿ ನೆಚ್ಚಿಕೊಂಡಿದೆ. ಇನ್ನು ಬೌಲಿಂಗ್ ವಿಭಾಗದಲ್ಲಿ ಸುನಿಲ್ ನರೈನ್, ವರುಣ್ ಚಕ್ರವರ್ತಿ ತಂಡದ ಟ್ರಂಪ್‌ಕಾರ್ಡ್ ಎನಿಸಿಕೊಂಡಿದ್ದಾರೆ.
ಒಟ್ಟು ಮುಖಾಮುಖಿ: 31
ಕೆಕೆಆರ್: 22
ಮುಂಬೈ: 09
ಸಂಭವನೀಯ ಆಟಗಾರರ ಪಟ್ಟಿ
ಕೆಕೆಆರ್: ಜೇಸನ್ ರಾಯ್, ಎನ್ ಜಗದೀಶನ್, ವೆಂಕಟೇಶ್ ಅಯ್ಯರ್, ನಿತೀಶ್ ರಾಣಾ(ನಾಯಕ), ರಿಂಕು ಸಿಂಗ್, ಆಂಡ್ರೆ ರಸೆಲ್/ ಡೇವಿಡ್ ವೀಸಾ, ಸುನಿಲ್ ನರೇನ್, ಶಾರ್ದೂಲ್ ಠಾಕೂರ್, ಉಮೇಶ್ ಯಾದವ್, ಲಾಕಿ ಫಗ್ರ್ಯೂಸನ್/ಟಿಮ್ ಸೌಥಿ, ವರುಣ್ ಚಕ್ರವರ್ತಿ.
ಮುಂಬೈ: ರೋಹಿತ್ ಶರ್ಮಾ(ನಾಯಕ), ಇಶಾನ್ ಕಿಶನ್, ಕ್ಯಾಮರೋನ್ ಗ್ರೀನ್, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಟಿಮ್ ಡೇವಿಡ್, ರಿಲೆ ಮೆರಿಡಿತ್/ಜೋಫ್ರಾ ಆರ್ಚರ್, ಹೃತ್ತಿಕ್ ಶೊಕೀನ್, ಜೇಸನ್ ಬೆಹ್ರನ್ಡ್ರಾಫ್, ಪೀಯೂಸ್ ಚಾವ್ಲಾ, ಅರ್ಶದ್ ಖಾನ್.
ಪಂದ್ಯ: ಮಧ್ಯಾಹ್ನ 3.30ಕ್ಕೆ
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೋ ಸಿನಿಮಾ
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.