
ಬೆಂಗಳೂರು(ಏ.23): ಹಸಿರು ಸಂರಕ್ಷಣೆಯ ಪ್ರಚಾರದ ಉದ್ದೇಶದಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಇಂದು ರಾಜಸ್ಥಾನ ರಾಯಲ್ಸ್ ಎದುರು ಹಸಿರು ಜೆರ್ಸಿ ತೊಟ್ಟು ಕಣಕ್ಕಿಳಿದಿದೆ. 16ನೇ ಆವೃತ್ತಿಯ ಐಪಿಎಲ್ ಟೂರ್ನಿಯ 32ನೇ ಪಂದ್ಯದಲ್ಲಿ ಆರ್‌ಸಿಬಿ ಹಾಗೂ ರಾಜಸ್ಥಾನ ರಾಯಲ್ಸ್ ಮುಖಾಮುಖಿಯಾಗಿದ್ದು, ಟಾಸ್ ಗೆದ್ದ ರಾಜಸ್ಥಾನ ರಾಯಲ್ಸ್ ಮೊದಲು ಬೌಲಿಂಗ್ ಮಾಡುವ ತೀರ್ಮಾನ ತೆಗೆದುಕೊಂಡಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ರಾಜಸ್ಥಾನ ರಾಯಲ್ಸ್ ತಂಡಗಳ ನಡುವಿನ ಹೈವೋಲ್ಟೇಜ್ ಪಂದ್ಯಕ್ಕೆ ಇಲ್ಲಿನ ಎಂ ಚಿನ್ನಸ್ವಾಮಿ ಸ್ಟೇಡಿಯಂ ಆತಿಥ್ಯವನ್ನು ವಹಿಸಿದೆ. ರಾಜಸ್ಥಾನ ರಾಯಲ್ಸ್ ತಂಡದಲ್ಲಿ ಯಾವುದೇ ಬದಲಾವಣೆ ಮಾಡಲಾಗಿದೆ. ಇನ್ನು ಇಂದಿನ ಪಂದ್ಯದಲ್ಲೂ ವಿರಾಟ್ ಕೊಹ್ಲಿಯೇ ಆರ್‌ಸಿಬಿ ತಂಡವನ್ನು ಮುನ್ನಡೆಸುತ್ತಿದ್ದಾರೆ. ಆರ್‌ಸಿಬಿ ತಂಡದಲ್ಲಿ ಒಂದು ಮಹತ್ವದ ಬದಲಾವಣೆ ಮಾಡಲಾಗಿದ್ದು, ವೇಯ್ನ್ ಪಾರ್ನೆಲ್ ಬದಲಿಗೆ ಡೇವಿಡ್ ವಿಲ್ಲಿ ತಂಡ ಕೂಡಿಕೊಂಡಿದ್ದಾರೆ.
ಇಂದಿನ ಪಂದ್ಯಕ್ಕೂ ಫೀಲ್ಡಿಂಗ್ ಮಾಡಲು ಫಾಫ್ ಡು ಪ್ಲೆಸಿಸ್ ಸಂಪೂರ್ಣ ಫಿಟ್ ಆಗದ ಹಿನ್ನೆಲೆಯಲ್ಲಿ ವಿರಾಟ್ ಕೊಹ್ಲಿ, ಆರ್‌ಸಿಬಿ ತಂಡವನ್ನು ಮುನ್ನಡೆಸುತ್ತಿದ್ದಾರೆ. ಆದರೆ ಇಂಪ್ಯಾಕ್ಟ್ ಆಟಗಾರನ ರೂಪದಲ್ಲಿ ಫಾಫ್ ಡು ಪ್ಲೆಸಿಸ್ ಅರಂಭಿಕನಾಗಿ ಕಣಕ್ಕಿಳಿಯಲಿದ್ದಾರೆ.
ಕ್ರಿಕೆಟ್ ಬದುಕಿನ ಕೊನೆ ಹಂತದಲ್ಲಿದ್ದೇನೆ: ನಿವೃತ್ತಿಯ ಸುಳಿವು ಕೊಟ್ರಾ ಧೋನಿ?
ಎರಡೂ ತಂಡಗಳಲ್ಲಿ ಬಲಿಷ್ಠ ಬ್ಯಾಟರ್‌ಗಳಿದ್ದು, ಬ್ಯಾಟರ್‌ಗಳ ಸ್ವರ್ಗ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮತ್ತೊಮ್ಮೆ ರನ್ ಹೊಳೆ ಹರಿಯುವ ನಿರೀಕ್ಷೆ ಇದೆ. ಒಂದು ಕಡೆ ವಿರಾಟ್ ಕೊಹ್ಲಿ, ಫಾಫ್ ಡು ಪ್ಲೆಸಿ, ಗ್ಲೆನ್ ಮ್ಯಾಕ್ಸ್‌ವೆಲ್ ಇದ್ದರೆ ಮತ್ತೊಂದು ಪಡೆ ಜೋಸ್ ಬಟ್ಲರ್, ಯಶಸ್ವಿ ಜೈಸ್ವಾಲ್, ಸಂಜು ಸ್ಯಾಮ್ಸನ್, ಶಿಮ್ರೊನ್ ಹೆಟ್ಮೇಯರ್‌ರಂತಹ ಘಟಾನುಘಟಿಗಳಿದ್ದರೆ. ಹೀಗಾಗಿ ಎರಡೂ ತಂಡಗಳ ಬೌಲರ್‌ಗಳು ಒತ್ತಡದಲ್ಲೇ ಕಣಕ್ಕಿಳಿಯಬೇಕಾಗಬಹುದು.
ಹಸಿರು ಜೆರ್ಸಿ ತೊಟ್ಟು ಕಣಕ್ಕಿಳಿದ ಆರ್‌ಸಿಬಿ
ಹಸಿರು ಸಂರಕ್ಷಣೆಯ ಪ್ರಚಾರಕ್ಕಾಗಿ ಕಳೆದ ಹಲವು ವರ್ಷಗಳಿಂದ ಆರ್‌ಸಿಬಿ ತಂಡ ಒಂದು ಪಂದ್ಯಕ್ಕೆ ಹಸಿರು ಜೆರ್ಸಿ ತೊಡುವ ಸಂಪ್ರದಾಯ ಪಾಲಿಸಿಕೊಂಡು ಬಂದಿದೆ. ರಾಜಸ್ಥಾನ ವಿರುದ್ಧ ಇಂದಿನ ಪಂದ್ಯದಲ್ಲಿ ಆರ್‌ಸಿಬಿ ಆಟಗಾರರು ಹಸಿರು ಜೆರ್ಸಿಯಲ್ಲಿ ಕಾಣಿಸಿಕೊಂಡಿದ್ದಾರೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ ವೇಳೆ ಸಂಗ್ರಹವಾಗುವ ಪ್ಲ್ಯಾಸ್ಟಿಕ್ ತ್ಯಾಜ್ಯವನ್ನು ಬಳಸಿ ಈ ಜೆರ್ಸಿಗಳನ್ನು ತಯಾರಿಸಲಾಗುತ್ತದೆ ಎನ್ನುವುದು ವಿಶೇಷ.
ತಂಡಗಳು ಹೀಗಿವೆ ನೋಡಿ
ಆರ್‌ಸಿಬಿ: ವಿರಾಟ್ ಕೊಹ್ಲಿ(ನಾಯಕ), ಫಾಫ್ ಡು ಪ್ಲೆಸಿಸ್, ಮಹಿಪಾಲ್ ಲೋಮ್ರಾರ್, ಗ್ಲೆನ್ ಮ್ಯಾಕ್ಸ್‌ವೆಲ್, ಸುಯಶ್ ಪ್ರಭುದೇಸಾಯಿ, ಶಾಬಾಜ್ ಅಹಮದ್, ದಿನೇಶ್ ಕಾರ್ತಿಕ್, ವನಿಂದು ಹಸರಂಗ, ಹರ್ಷಲ್ ಪಟೇಲ್, ಡೇವಿಡ್ ವಿಲ್ಲಿ, ಮೊಹಮ್ಮದ್ ಸಿರಾಜ್.
ರಾಜಸ್ಥಾನ: ಜೋಸ್ ಬಟ್ಲರ್, ಯಶಸ್ವಿ ಜೈಸ್ವಾಲ್, ಸಂಜು ಸ್ಯಾಮ್ಸನ್(ನಾಯಕ), ದೇವದತ್ ಪಡಿಕ್ಕಲ್, ಶಿಮ್ರೊನ್ ಹೆಟ್ಮೇಯರ್, ರಿಯಾನ್ ಪರಾಗ್, ರವಿಚಂದ್ರನ್ ಅಶ್ವಿನ್, ಆ್ಯಡಂ ಜಂಪಾ, ಟ್ರೆಂಟ್ ಬೌಲ್ಟ್, ಸಂದೀಪ್ ಶರ್ಮಾ, ಯುಜುವೇಂದ್ರ ಚಹಲ್.
ಪಂದ್ಯ ಆರಂಭ: ಮಧ್ಯಾಹ್ನ 3.30ಕ್ಕೆ
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೋ ಸಿನಿಮಾ
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.